ಗುರುವಾರ, ಮೇ 14, 2009

ನೀವು ಕೇಳಿದಿರಿ ೧.೨

*ಮಗನ ಕಳ್ಳ ಭೇಟಿಗೆ ಅಪ್ಪನ ಸಮರ್ಥನೆ .

-ಎಷ್ಟಾದರೂ ಅವರೇ ಹಾಗಿದ ಆಲದಮರ ಅಲ್ವೇ
(ಓತಿಕೆತಕ್ಕೆ ಬೇಲಿಗೂಟ ಸಾಕ್ಷಿ ಎಂದ್ರಂತೆ ಯಡ್ಡಿ ). Laughing out loud
+++++++

*ಪಾಸ್ವಾನ್ ಮನೆಯಲ್ಲಿ ಬೆಂಕಿ, 'ಡ್ರಾ'ಯಿಂಗ್ ರೂಂ ಭಸ್ಮ ವಂತೆ !

-ಇದಕ್ಕೆಲ್ಲ ಅವರ 'ವೈ'ರಿಂಗಿನ ಶಾರ್ಟ್ ಸರ್ಕೀಟ್ ಕಾರಣವಂತೆ .
+++++++++

*ಕಸಬ್ ಗೆ ಓದಲು ದಿನ ಪತ್ರಿಕೆ ಬದಲು ಕಥೆ ಪುಸ್ತಕವಂತೆ !

-ಅವನ ಕಥೆಯೇ ನಮಗೆ ಸಹಿಸಲಾರದ ವ್ಯಥೆ , ಮಧ್ಯೆ ಇನ್ನೊಂದು ಕಥೆ .
+++++++++

*ಕನ್ನಡದಲ್ಲಿ ಅತಿ ಹೆಚ್ಚು ಕಥೆ ಬರೆದವರಿಗೆ ಸನ್ಮಾನ ಮಾಡುವುದಾಗಿ ಘೋಷಿಸಿದ್ದಾರಂತೆ ವಾಟಾಳ್ !

-ಎಲ್ಲರದ್ದು ವರುಷಕ್ಕೊಂದು ಕಥೆಯಾದರೆ ನನ್ನದು ದಿನಕ್ಕೊಂದು ಕಥೆ ಹಾಗಾಗಿ ಆ ಸನ್ಮಾನ ನನಗೆ ಮಾಡಿ ಅಂದಿದ್ದಾರಂತೆ 'ಗೌಡ್ರು '.
++++++++

*ಕಮಿಷನ್ ಜಗಳ ಇಬ್ಬರ ಕೊಲೆ .

-ವಿಚಾರಣೆಗೆ ಜಂಟಿ ಕಮಿಷನ್ ನೇಮಕ .
+++++++++

*ಈ ಬಾರಿಯದು ತ್ರಿಶಂಕು ಸರ್ಕಾರವಂತೆ ?

-ಅಯ್ಯೋ ಅಷ್ಟು ಬೇಗ ನಮ್ಮ ಹೆಸರೆಲ್ಲ ಯಾಕೆ ಹೇಳಿದಿರಿ ಅನ್ನುತ್ತಿದ್ದಾರಂತೆ ಲಾಲು ,ಕಾರಟ್ ,ಪಾಸ್ವಾನ್ ,ಮಾಯಾ ,ಜಯ ..............! Laughing out loud
+++++++++++

*ಜಾತ್ಯಾತೀತರೆಲ್ಲ ಒಂದಾಗಿ 'ಕೈ ' ಬೀಸೋಣ ಅಂದ್ರಂತೆ ಪವಾರ್ !

-ಆವಾಗಲೇ 'ಆನೆ'ಬಲ ಬರೋದು ಅಂದ್ರಂತೆ ಮಾಯಾ .
+++++++++

*ಅಧಿಕಾರದ ಉರುಳುವ ಹೆದರಿಕೆಯಿಂದ ಹೋಮ ಹವನಕ್ಕೆ ಮೊರೆಹೋದ ಯಡ್ಡಿ .

-ಪಕ್ಕದಲ್ಲಿದ್ದ S'ಅಕ್ಕನನ್ನು ನೋಡಿ ದಂಪತಿಗಳಿಬ್ಬರು ಕುಳಿತುಕೊಳ್ಳಿ ಎಂದರಂತೆ ಪುರೋಹಿತರು .ಹಿ ಹೀ Laughing out loud :D
+++++++++++

ನೀವು ಕೇಳಿದಿರಿ - ೧. ೧

*ಸೋನಿಯಾ ,ಕುಮಾರಣ್ಣ ಕಳ್ಳ ಭೇಟಿ ಅಂತೆ !

-ಚಿಕ್ಕನ್ನಿದಿಂದಲೂ ಅವನಿಗೆ 'ಇಲಿ' ಜೊತೆ ಆಡೋದು ಅಂದ್ರೆ ಇಷ್ಟ ಅಂತಿದ್ರು ಗೌಡ್ರು . Laughing out loud
+++++++++++

*ಏನ್ ಗುರು ಖೇಣಿ ಆಪರೇಷನ್ ಕೊಳೆಗೇರಿ ಶುರು ಮಾಡಿಬಿಟ್ಟಿದ್ದಾರೆ .

-ಅವರಿಗೆ ಗೊತ್ತು ಕಮಲ ಅರಳೋದು ಅಲ್ಲೇ ಅಂತ .
+++++++++++

*ಮಹಾಸಂಗ್ರಾಮದ ಅಂತಿಮ ಲೆಕ್ಕಾಚಾರ ಶುರು .

-ಲೆಕ್ಕ ಏನೋ ಇರಬಹುದು ,'ಆಚಾರದ ' ಬಗ್ಗೆ ಮಾತಾಡೋದು ಸ್ವಲ್ಪ ಕಷ್ಟವೇ .
++++++++++

*ಆಡ್ವಾಣಿಯವರನ್ನು ಪ್ರಧಾನಿಯಾಗಿ ಒಪ್ಪಲು ಸಿದ್ಧವಿರುವ ಯಾವುದೇ ಪಕ್ಷಕ್ಕೆ ಎನ್ ಡಿ ಎ ಬಾಗಿಲು ಮುಕ್ತವಾಗಿದೆ ಅನ್ನುತಿದ್ದಾರಲ್ಲ ಇಲ್ಲೊಬ್ಬರು .

-ಹುಷಾರು ಗುರು ಇದು ಕಲಿಯುಗ ಕಳ್ಳಕಾಕರು ಜಾಸ್ತಿ ಇದ್ದಾರೆ . Laughing out loud
++++++++++

*ಇತ್ತೀಚಿಗೆ ಯಾಕೋ ಎಲ್ಲರೂ 'ಮುಕ್ತ', 'ಮುಕ್ತ' ಅಂದು ಬಡಿದುಕೊಳ್ಳುತ್ತಿದ್ದಾರೆ .

-ಎಲ್ಲಕ್ಕೂ ಚುನಾವಣಾ ಆಯೋಗದ 'ಮುಕ್ತ'ಚುನಾವಣೆಯೇ ಕಾರಣ . Laughing out loud
++++++++++++

*ಜಯಪ್ರದ ಹೋಟೆಲ್ ಮೇಲೆ ಆಯೋಗ ದಾಳಿ !(ಕಾಂಗ್ರೆಸ್ ಪಿತೂರಿ ಎಂದ ನಟಿ )

- ಹಿ ಹಿ ಹೀ ,ಬಿಡಿ ಈ ಪತ್ರಿಕೆಯವರು ತುಂಬಾ ತಮಾಷೆಮಾಡ್ತಾರೆ. Laughing out loud Laughing out loud
+++++++++++

* ಚತುರ್ಥ ರಂಗದಲ್ಲಿ ಭಿನ್ನಮತವಿಲ್ಲವಂತೆ !

-ಸಧ್ಯ 'ಮತವೆ 'ಇಲ್ಲದಿದ್ದರೆ ಸಾಕು ಬಿಡಿ ಅಂದ್ರಂತೆ ಮೇಡಂ . Laughing out loud
++++++++++++

ಮಂಗಳವಾರ, ಮೇ 12, 2009

ನೀವು ಕೇಳಿದಿರಿ

*ನನ್ನ ಕಿಡ್ನಿ ಹಾಳಾಗಿವೆ ಇನ್ನು ಮುಕ್ತ ಜೀವನ ನಡೆಸುವೆ ಅಂದಿದ್ದಾರೆ ಅಮರಸಿಂಗ್ !

-ಮುಕ್ತ ಅಂದ್ರೆ Full open ಅಂತನ ಗುರುವೇ ? Laughing out loud

+++++++++++++++
*ಶ್ರುತಿ ವಿರುದ್ದ ಚಕ್ರವರ್ತಿ ಹೆಂಡ್ತಿ ಸಿಡಿಮಿಡಿ ಅಂತೆ ?

-ಮಹೇಂದರ್ ಎಲ್ಲೋ ತಡಿ ತಡಿ ಅಂದಿರಬೇಕು .

++++++++
*ಮೋದಿ ಕೈ ಕುಲುಕಿದ್ದು ತಪ್ಪಾ! ಅನ್ನುತ್ತಿದ್ದಾರಂತೆ ನಿತೀಶ್ .

-ಕುಲುಕಿದ್ದು ಓಕೆ ,'ಕೈ ' ಯಾಕೆ ಅಂತ ಅನ್ನುತ್ತಿರಬಹುದೇ ಎಡರಂಗ .

+++++
*ವರುಣ್ ವಿರುದ್ದ ಮತ್ತೆ ಕೋರ್ಟಿಗೆ ಹೋಗ್ತಾರಂತೆ ಮಾಯಾ!

-ಇದೊಳ್ಳೆ ,"ದೇವರು ವರ ಕೊಟ್ರು ಪೂಜಾರಿ ಕೊಡಲೋಲ್ಲ " ಅನ್ನೋ ಹಾಗೈತಲ್ಲ ಗುರುವೇ .

+++++++++
*ನೈಟ್ ರೈಡರ್ಸ್ ತಂಡದಲ್ಲಿ ಮತ್ತೆ ಬಂಡಾಯವಂತೆ ?

-ಇರುವವರೆಲ್ಲರೂ 'ಬಂಡ'ರೇ ಅಂದ ಮೇಲೆ ಬಂಡಾಯವಲ್ಲದೆ ಆದಾಯವೆಲ್ಲಿಂದ ಬರುತ್ತೆ !

+++++++++++++

ಸೋಮವಾರ, ಮೇ 11, 2009

ಬದುಕು ಭಾವ ಮತ್ತು ನಾನು - ೬ ( ನಾ ಕಂಡ ಮೊದಲ ಸಾವು , ದುರ್ದೈವ್ಯ ನನ್ ಅಣ್ಣನದ್ದೇ )

ಅತ್ತಿಂದಿತ್ತ ಓಡಾಡುತಿದ್ದ ನೆಂಟರಿಸ್ಟರು , ಮಾತಿಗೊಮ್ಮೆ ಪಾಪು ಎನ್ನುತಿದ್ದ ಅಪ್ಪ , ಅಡಿಗೆಮನೆಕಡೆ ಹೋದಾಗಲೆಲ್ಲ ಏನು ಬೇಕು ಅಪ್ಪು ಎನ್ನುತಿದ್ದ ಅಮ್ಮ ,ಹೀಗೆ ಅಲ್ಲಿ ಬರಿ ಸಡಗರವೆ . ಹೋದ ತಿಂಗಳು ನಡೆದ ನಮ್ಮ ಮನೆಯ ಗೃಹ ಪ್ರವೇಶದ ಒಂದು ನೋಟ ಇದು ( ನವೀಕರಣಗೊಳಿಸಿದ್ದೆವು). ವಾರದ ಹಿಂದಷ್ಟೇ ದಾಂಪತ್ಯಕ್ಕೆ ಕಾಲಿಟ್ಟಿದ್ದ ಅಕ್ಕ , ಭಾವನ ಆಗಮನ ಎಲ್ಲರ ಮೊಗದಲ್ಲಿನ ಸಂತೋಷವನ್ನು ತುಸು ಹೆಚ್ಚುಗೊಳಿಸಿತ್ತು.ಆದರೆ ಈ ಸಂತಸದ ನಡುವೆ ಆ ಹೆತ್ತಕರಳುಗಳ ಯಾರಿಗೂ ಹೇಳಿಕೊಳ್ಳದ ತೊಳಲಾಟವನ್ನ ಯಾರು ಗಮನಿಸಿರಲಿಲ್ಲ ,ಆದರೆ ನಾನು ಗಮನಿಸಿದ್ದೆ .(ಎಷ್ಟಾದರೂ ನನ್ ಅಪ್ಪ ಅಮ್ಮ ಅಲ್ಲವೇ ).ಅದುವೇ ೪ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ನನ್ ಅಣ್ಣನ ನೆನಪು .

                     ಎಲ್ಲವೂ ಸರಿಯಾಗೇ ನಡೆಯುತ್ತಿತ್ತು , ನಾನಾಗಲೆ ನನ್ನ ಮೊದಲ ವರ್ಷದ ತಾಂತ್ರಿಕ ಶಿಕ್ಷಣದ ಪರೀಕ್ಷೆ ಮುಗಿಸಿದ್ದೆ (ಡಿಪ್ಲೋಮಾ ),ಶೃಂಗೇರಿಯಲ್ಲಿ ಸಾಮವೇದ ಪಾಠ ಕಲಿಯುತಿದ್ದ ಅಣ್ಣನ ೩ ನೇ ವರ್ಷದ ಅಂತಿಮ ಹಂತದಲ್ಲಿತ್ತು .ಇನ್ನೊಂದು ವಾರದಲ್ಲಿ ಅಣ್ಣನ ಪರೀಕ್ಷೆಯು ಇತ್ತು . ಅವನಿಗೆ ಪರೀಕ್ಷೆ ಮುಗಿದರೆ ನನಗೆ ಖುಷಿ . ಒಂದು ಅವ ಮನೆಗೆ ಬರುತ್ತಾನೆ ಎಂದು , ಇನ್ನೊಂದು ತುಂಬಾ ಲಗ್ಗೇಜ್ ಇರುತ್ತದ್ದರಿಂದ ಅವನನ್ನು ಕರೆದುಕೊಂಡು ಬರಲು ನಾನು ಅಲ್ಲಿಗೆ ಹೋಗಬೇಕಾಗುತ್ತಿತ್ತು . ನಾನೋ ಒಂದು ೪ ದಿನ ಮೊದಲೇ ಹೋಗಿ ಅಲ್ಲಿ ಜಾಂಡ ಉರುತಿದ್ದೆ.ಆರಾಮಾಗಿ ಇಡಿ ಮಠವೆ ನನ್ನದೇನೂ ಅನ್ನೋ ಭಾವದಲ್ಲಿ ಓಡಾಟ ನಂದು (ಪಾಠಶಾಲೆ ವಿದ್ಯಾರ್ಥಿ ಗಳಿಗೆ ಎಲ್ಲಿಯೂ no entry ಇರಲಿಲ್ಲ ).

                              ಚಿಕ್ಕದಿನಿಂದಲೂ ನಾನು, ಅಣ್ಣ ಹೊಡೆದಾಡಿ ಕೊಂಡೆ ಬೆಳೆದೋರು . ಅದ್ರು ನನಗೆ ಅಣ್ಣನ ಹಿಂದೆ ಇರ್ಬೇಕು , ಅವ ಎಲ್ಲಿ ಇದಾನೋ ನನ್ ಅಲ್ಲೇ , ಕೆಲವೊಂದು ಸಲ ಅದೇ ನನ್ನ ಮತ್ತು ಅವನ ಹೊಡೆದಾಟಕ್ಕೆ ಕಾರಣವಾಗುತ್ತಿತ್ತು .ಕೆಲವೊಂದು ನನ್ನ ಹಠಮಾರಿತನದಿಂದ ಅವನಿಗೆ ಅಪ್ಪನಿಂದ ಹೊಡೆತ ಬೀಳುತ್ತಿತ್ತು . ಚಿಕ್ಕವನದ್ದರಿಂದ ನಾನೇ ತಪ್ಪು ಮಾಡಿದ್ರು ಕೆಲವೊಮ್ಮೆ ಅವನಿಗೆ ಹೊಡ್ತ ಬಿಲ್ತಿತ್ತು . S S L C ಅದ ನಂತರ ಓದಿನಲ್ಲಿ ಅಷ್ಟೇನೂ ಜೋರರಾಗಿರದಿದ್ದ ಅಣ್ಣನನ್ನು ಮಂತ್ರ ಕಲಿಸೋಕ್ಕೆ ಕಲಿಸೋದು ಅಂತ ಅಪ್ಪ ನಿಶ್ಚಯಿಸಿದ್ದರು (ಮುಂದೆ ಓದಿಸುವ ಮನಸಿದ್ದರು ಆರ್ಥಿಕ ಸಂಕಷ್ಟವಿದ್ದ ಕಾರಣ ಅದನ್ನು ಕೈ ಬಿಟ್ಟಿದ್ದರು ). ಹೇಗಾದ್ರು ಆಗಲಿ ನನ್ ತರ ಮಕ್ಕಳು ಕಷ್ಟ ಬಿಲ್ಬಾರ್ದು ಅನ್ನೋದು ಅಪ್ಪನ ಅಭಿಲಾಷೆ ಆಗಿತ್ತು . ಆ ದೃಷ್ಟಿಅಲ್ಲಿ ಹೇಳುವದಾದರೆ ಅವರ ನಿರ್ಧಾರ ಸರಿಯಾಗೇ ಇತ್ತು .ನಾನಿನ್ನು ೮ ಮುಗಿಸಿ ೯ ಕ್ಕೆ ಕಾಲಿಟ್ಟಿದ್ದೆ .

                                                                           ನಮ್ಮ ಗೋತ್ರದ ಪ್ರಕಾರ ನಮ್ಮದು ಋಗ್ವೇದವಾದರೂ ಅಲ್ಲಿನ ಅಧ್ಯಕ್ಷರ ಅಭಿಲಾಷೆ ಅಂತೆ ಅಣ್ಣನನ್ನು ಸಾಮವೇದಕ್ಕೆ ಸೇರಿಸಿ ಬಂದ್ರು ಅಪ್ಪ . ನಾನು ೨ ವಾರಕ್ಕೊಮ್ಮೆ ಅಪ್ಪ , ಅಮ್ಮ ಮಾಡಿದ ತಿಂಡಿಗಳನೆಲ್ಲ ಹೇರಿಕೊಂಡು ಹೋಗಿ ಅಣ್ಣನಿಗೆ ಕೊಟ್ಟು ಬರುತಿದ್ದೆ . ಹೋದಾಗಲೆಲ್ಲ ಅಣ್ಣ ಕೊಡುತಿದ್ದ ಹತ್ತೋ ಇಪ್ಪತ್ತು ರೂಪಾಯಿಯೇ ನನಗೆ ೧೦೦೦ ಕ್ಕೆ ಸಮನಾಗಿತ್ತು ನನಗೆ .೨ ನೆ ವರ್ಷಕ್ಕೆ ಕಾಲಿಡುತ್ತಲೇ ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಭಾಗವಹಿಸುತಿದ್ದ ಅಣ್ಣನ ಕೈ ಅಲ್ಲಿ ಅಲ್ಪ ಸ್ವಲ್ಪ ಕಾಸು ಓಡಾಡುತಿತ್ತು.ನಾನು ಕೂಡ S S L C ಅಲ್ಲಿ ಅಷ್ಟೇನೂ ಹೇಳಿಕೊಳ್ಳುವುದಲ್ಲದಿದ್ದರು ಶೇಕಡಾ ೭೫ ರಸ್ಟು ಅಂಕ ಪಡೆದು ಪಾಸಾದೆ .ಮೊದಲೇ ಅಂದುಕೊಂಡಂತೆ ನಾನು ಡಿಪ್ಲೋಮಾ ಸೇರುವುದು ಅಂದು ನಿರ್ಧರಿಸಿದ್ದರು ಅಪ್ಪ .ಸರ್ಕಾರಿ ಸೀಟು ಭದ್ರಾವತಿ ಅಲ್ಲಿ ಸಿಕ್ಕಿತಾದ್ರು ಮನೆಯಲ್ಲಿ ಯಾರು ಇಲ್ಲ ಅಗುಂತೆ ಅಂತ ತೀರ್ಥಹಳ್ಳಿಯ ಖಾಸಗಿ ಕಾಲೇಜಿಗೆ ಸೇರಿಸಿದರು ಅಪ್ಪ .ಅಂದುಕೊಂಡಂತೆ ಪ್ರಥಮ ಸೆಮಿಸ್ಟರ್ ಅಲ್ಲಿ ಪ್ರಥಮ ದರ್ಜೆ ಅಲ್ಲೇ ಪಾಸಾದೆ ( S S L C ವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ್ದ ನನಗೆ ಅದೊಂದು ಸಾಧನೆಯೇ ಆಗಿತ್ತು ).

                                   ೨ ನೇ ಸೆಮಿಸ್ಟರ್ ಪರೀಕ್ಷೆ ಮುಗಿಸಿ ಮನೆಯಲ್ಲಿ ಕುಳಿತಿದ್ದ ನನಗೆ , ಪಕ್ಕದ ಮನೆಯವರ ಕೂಗು ಕೇಳಿತು .ಅಣ್ಣನ ಫೋನ್ ಬಂದಿದೆ ಅಂತ ಅಂದ್ರು ಅವರು ,ಅಲ್ಲಿಯೇ ಕುಳಿತಿದ್ದ ಅಪ್ಪ ಎದ್ದು ಮಾತಾಡಲು ಹೋದರು (ನಮ್ಮ ಮನೆಯಲ್ಲಿ ಆಗಿನ್ನೂ ಫೋನ್ ಇರ್ಲಿಲ್ಲ ).ಮನೆಗೆ ಬಂದ ಅಪ್ಪ ೩ ನೇ ವರ್ಷದ ಪರೀಕ್ಷೆಯಲ್ಲಿ ಅಣ್ಣ ಫೇಲ್ ಅದನೆಂದು , ಅಲ್ಲಿಂದ ಮೈಸೂರುಗೆ ಹೋಗಿ ವಾರ ಬಿಟ್ಟು ಮನೆಗೆ ಬರುವುದಾಗಿ ಹೇಳಿದನೆಂದು ಅಂದ್ರು .ಯಾವಾಗಲು ಮೂಗಿನಮೇಲೆ ಸಿಟ್ಟು ಇರುತಿದ್ದ ಅಪ್ಪ ಅಂದೇಕೋ ಶಾಂತಚಿತ್ತರಾಗಿದ್ದರು. ವಾರ ಬಿಟ್ಟು ಅಣ್ಣ ಮನೆಗೆ ಬಂದ , ಅಪ್ಪನೆನು ಅನ್ನಲಿಲ್ಲ .

                                                        ಒಂದು ರಾತ್ರಿ ಆಗಿದ್ದೆಲ್ಲ ಆಯಿತು ಮತ್ತೆ ಹೊಸದಾಗಿ ಋಗ್ವೇದವನ್ನು ಹರಿಹರಪುರ ಮಠದಲ್ಲಿ ಕಲಿ ಎಂದು , ನಾಳೆ ಬೆಳಿಗ್ಗೆ ಹೋಗಿ ವಿಚಾರಿಸಿಕೊಂಡು ಬರುತ್ತೇನೆ ಅಂದ್ರು ಅಣ್ಣನು ಹು ಎಂದ.ಮಾರನೆದಿನ ಅಂದೇ ಜೂನ್ ೩ , ೨೦೦೫ ಅಪ್ಪ ಬೇಗನೆ ಹರಿಹರಪುರಕ್ಕೆ ಹೋದ್ರು . ಅವರು ಅತ್ತ ಹೋದ ಮೇಲೆ ಸರಿಯಾಗಿ ಹೇಳದಿದ್ರು ತಾನು ಅಲ್ಲಿನ ರಾಜಕೀಯದಿಂದ ಬೇಸತ್ತು ಹೋಗಿದ್ದೇನೆ ಅಂತ ಸೂಕ್ಷ್ಮ ಮಾತುಗಳಲ್ಲಿ ಅಣ್ಣ ಅಂದಿದ್ದ . ೧೨.೧೫ ಕ್ಕೆ ಸರಿಯಾಗಿ ಅಪ್ಪ ಬಂದ್ರು , ಹಾಗೆ ಅಲ್ಲಿಂದ Application form ಕೂಡ ತಂದಿದ್ರು . ಮುಂದಿನ ಸೋಮವಾರ ಒಂದು ಸಣ್ಣ ಪರೀಕ್ಷೆ ಇರುವುದೆಂದು , ಫಾರಂ ಬರ್ತಿ ಮಾಡಲು ಅಣ್ಣನ ಕೈಗಿತ್ತರು. ಎಲ್ಲವನ್ನು ಬರ್ತಿಮಾಡಿ ಅಪ್ಪನ ಕೈಗೆ ವಾಪಸಿಟ್ಟ ಅಣ್ಣ .ನನ್ನದಿನ್ನು ಸ್ನಾನವಾಗಿರಲಿಲ್ಲ , ನಾನು ಎದ್ದು ಅತ್ತ ಹೊರಟೆ . ಏನಾಯಿತೋ ಗೊತ್ತಿಲ್ಲ ಜಗುಲಿಯಲ್ಲಿ ಕೂತಿದ್ದ ಅಪ್ಪ ಜೋರಾಗಿ ಅಣ್ಣನಿಗೆ ಬೈಯುವುದು ಕೇಳುತಿತ್ತು.ಅಣ್ಣ ಅಂಗಳದಲ್ಲಿದ್ದ .ಸ್ವಲ್ಪ ಹೊತ್ತಿನ ನಂತರ ನಾನು ಸ್ನಾನ ಮುಗಿಸಿ ಹೊರಬಂದೆ. ಅಣ್ಣನ ಕಣ್ಣನ್ಚಿನಲ್ಲಿ ನೀರು ಮೂಡಿತ್ತು .ಸ್ವಲ್ಪ ಮೌನವೇ ಇತ್ತು ಅಲ್ಲಿ , ಯಾರು ಮಾತಾಡುತ್ತಿರಲಿಲ್ಲ . ಘಂಟೆ ೧.೧೦ ಕ್ಕೆ ಅಮ್ಮ ಊಟ ಹಾಕಿದ್ರು ,ಎಲ್ಲರು ಒಟ್ಟಿಗೆ ಕೂತು ಊಟ ಮುಗಿಸಿದೆವು .

             ಊಟವಾದ ನಂತರ ಮಲಗುವುದು ಅಪ್ಪನ ಅಭ್ಯಾಸ .ನಾನೋ ಅಣ್ಣನ ಬಿಟ್ಟು ಇರುವವನೇ ಅಲ್ಲ .ಅಷ್ಟರಲ್ಲಿ ಎದುರುಗಡೆ ಇಂದ ಅಯ್ಯ ಎಂಬ ಕೂಗು ಕೇಳಿತು . ಮಲಗಿದ್ದ ಅಪ್ಪ ಎದ್ದು ಹೊರನೆಡೆದರು, ನಾನು ಕೂಡ ಯಾರು ಎಂಬ ಕುತೂಹಲದಿಂದ ಹಿಂದಗಡೆ ಅಣ್ಣನ ಒಟ್ಟಿಗೆ ಏನೋ ಮಾತಾಡುತ್ತ ಕುಳಿತವನು ಎದ್ದು ಹೋದೆ .ಅದೇ ನಾನು ಮಾಡಿದ ಬಹುಶಃ ನನ್ನ ಜೀವನದ ದೊಡ್ಡ ತಪ್ಪು .ಅಲ್ಲಿ ನೋಡಿದರೆ ಹುಲ್ಲು ಹಾಕುವವನು , ಅತ್ತ ಕಡೆ ಎಲ್ಲೋ ಹೊರಟಿದ್ದವನು ಹಾಗೆಯೇ ಅಪ್ಪನನ್ನು ಮಾತಾಡಿಸಿಕೊಂಡು ಹೋಗೋಣವೆಂದು ಕೂಗಿದ್ದ. ಹೀಗೆ ಅದು ಇದು ಮಾತಾಡಿ ಆತ ಹೊರಟ, ಅಪ್ಪ ಮತ್ತೆ ಮಲಗಿಕೊಂಡರು . ನಾನು ಅಣ್ಣನನ್ನು ಹುಡುಕಿಕೊಂಡು ಹಿಂದಗಡೆ ಬಂದೆ .

                                       ಅಲ್ಲಿರಲಿಲ್ಲ ಆತ.ಅಮ್ಮನನ್ನು ಕೇಳಿದೆ ಅಲ್ಲೇ ಟಾಯ್ಲೆಟ್ ಗೆ ಹೋಗಿರಬೇಕೆಂದು ಅಂದರು ಅಮ್ಮ (ನಮ್ಮನೆ ಟಾಯ್ಲೆಟ್ ರೂಂ ನ ಬಾಗಿಲು ಹಾಕಿದ ತಕ್ಷಣ ಬಡ್ ಎಂದು ಸದ್ದು ಮಾಡುತ್ತೆ ).ಆ ಸದ್ದು ಕೇಳಿಸಿಕೊಂಡು ಅಮ್ಮ ಹಾಗೆನ್ದಿದ್ದರು . ಅದು ಅಲ್ಲದೆ ಒಳಗಡೆ ನಲ್ಲಿ ಬಿಟ್ಟಿದ್ದು ,ನೀರು ಬೀಳುವ ಶಬ್ದ ಬೇರೆ ಕೇಳುತಿತ್ತು . ಆದರೆ ವಾಸ್ತವವೇ ಬೇರೆ ಆಗಿತ್ತು , ನಲ್ಲಿಯ ನೀರು ಬಿಟ್ಟು ಹೊರಗಡೆ ಇಂದ ಬಾಗಿಲು ಹಾಕಿ ಅದಕ್ಕೊಂದು ಮರದ ಪೀಸ್ ಅಡ್ಡ ಇಟ್ಟಿದ್ದ ಅಣ್ಣ . ಅವ ಒಳಗೆ ಇರಲಿಲ್ಲ .ನಾನು ಸ್ವಲ್ಪ ಹೊತ್ತು ನೋಡಿ ಆಮೇಲೆ ಅತ್ತ ಕಡೆ ಹೋಗಿ ನೋಡಿದಾಗ ಅವ ಅಲ್ಲಿರಲಿಲ್ಲ .ಎಲ್ಲಿಹೋದ ಎಂದು ಪಕ್ಕದ ಮನೆಗೆನಾದರು ಟಿವಿ ನೋಡಲು ಹೋದನೇನೋ ಎಂದು ಅಲ್ಲಿ ಹೋಗಿ ನೋಡಿದೆ ಅಲ್ಲೂ ಇಲ್ಲ .ಈಗ ನಿಜವಾಗಿ ನನಗೆ ಸ್ವಲ್ಪ ಗಾಬರಿಆಗಿತ್ತು .

                         ಅಮ್ಮನ ಬಳಿ ಬಂದು ಹೇಳಿದೆ , ಮಾಮೂಲಿನಂತೆ ಅಮ್ಮ ಒಂದೆರಡು ಬಾರಿ "ಉದಯ ,ಉದಯ "(ಇದು ಅವನ ಹೆಸರು ) ಎಂದು ಕರೆದರು . ಹೂ ಹೂ ಪ್ರತಿಕ್ರಿಯೆಯೇ ಇಲ್ಲ . ನನ್ನ ಮನೆ ಸುತ್ತ ತೋಟ ಇರುವುದರಿಂದ ಸಹಜವಾಗಿ ಪ್ಯಾರಲೇ ಹಣ್ಣು ಜಾಸ್ತಿ .ಅಣ್ಣನಿಗೆ ಅದೆಂದರೆ ತುಂಬಾ ಇಷ್ಟ .ಅದನೆಲ್ಲೋ ತಿನ್ನಲು ಹೋಗಿರಬೇಕು ಅಂದರು ಅಮ್ಮ . ಹಾಗಾದ್ರೆ ನಾನು ನೋಡಿಕೊಂಡು ಬರುತ್ತೇನೆ ಇರು ಎಂದು ಹೊರಟೆ , ಅದೇನು ಅನ್ನಿಸಿತೋ ನಾನು ಬರುತ್ತೇನೆ ಅಂದ್ರು ಅಮ್ಮ .ಇಬ್ಬರು ಮಾತಾಡುತ್ತ ಜಾಸ್ತಿ ಪ್ಯಾರಲೇ ಗಿಡವಿರುವತ್ತ ಹೊರೆಟೆವು .ಅಲ್ಲೇ ಒಂದು ಕಾಲುವೆ ಕೂಡ ಇದ್ದು ದೊಡ್ಡದಾದ ಗೋಳಿಮರ, ಒಂದು ಚಿಕ್ಕ ಕೆರೆ ಕೂಡ ಇದೆ .ನೋಡಲು ಸ್ವಲ್ಪ ಭಯಾನಕವಾಗೆ ಕಾಣುತ್ತೆ ಜಾಗ ಅದು .

                                  ನನ್ನ ಮನಸ್ಸು ಏನು ಯೋಚಿಸುತಿತ್ತೋ ಅದೇ ಆಗಿತ್ತು , ತಿಳಿದಾದ ಸೊಪ್ಪಿನ ಹಗ್ಗದಲ್ಲಿ ಅಣ್ಣನ ಕತ್ತು ನೇತಾಡುತ್ತಿತ್ತು.ಆ ಕ್ಷಣ ನಾನು ಕಿರುಚಿದ ಜೋರಿಗೆ ೧ ಕಿ ಮಿ ಸುತ್ತಲಿನಲ್ಲಿದ್ದ ಎಲ್ಲರು ಬಂದಿರಬಹುದು . ನಾನೆ ನಿಯಂತ್ರಣದಲ್ಲಿಲ್ಲ ಇನ್ನು ಅಮ್ಮನನ್ನು ಹೇಗೆ ಸುಧಾರಿಸಲಿ . ತಕ್ಷಣ ಓಡಿ ಹೋಗಿ ಅಣ್ಣನನ್ನು ಎತ್ತಿ ಹಿಡಿದುಕೊಂಡೆ.ಅಮ್ಮ ಕೂಡ ಓಡಿ ಬಂದರು , ಅಮ್ಮನಹತ್ತ್ರಿರ ಹಿಡಿದುಕೊಳ್ಳಲು ಹೇಳಿ ಕತ್ತಿನಿಂದ ಹಗ್ಗ ಬಿಚ್ಚಲು ಪ್ರಯತ್ನಿಸಿದೆ , ಹೂ ಹೂ ಆಗಲಿಲ್ಲ .ಅಷ್ಟರಲ್ಲಾಗಲೇ ನಾನು ಕೂಗಿದ ಜೋರಿಗೆ ಅಕ್ಕ ಪಕ್ಕದ ತೋಟದಲ್ಲಿ ಕೆಲಸ ಮಾಡುತಿದ್ದವರು, ಅಪ್ಪ ಎಲ್ಲರು ಬಂದಾಗಿತ್ತು .ಹಗ್ಗ ಬಿಚ್ಚಿ ಮನೆಗೆ ಎತ್ತಿಕೊಂಡು ಹೋದೆವು.

                     ಅದೇನೋ ಹೇಳಲು ಹಾತೊರೆಯುವನ್ತಿತ್ತು ಕಣ್ಣು .ಬಹುಶ ನಾನು ದುಡುಕಿದೆನೆಂದೋ ? ಅಥವಾ ಅಪ್ಪನನ್ನು ಆವಾಗ ಬೈದಿರಲ್ಲ ಈಗ ಹೇಗೆ ಎಂದೋ ? ಅಥವಾ ಅಪ್ಪ ಅಮ್ಮ ನನ್ನು ಚೆನ್ನಾಗಿ ನೋಡಿಕೋ ಎಂದೋ ? ಇಂದಿಗೂ ಅರಿಯಲಾಗಿಲ್ಲ ನನಗೆ .ಮತ್ತೊಂದೆರಡು ಕ್ಷಣ ಅಷ್ಟೇ ಇರುವುದೆಲ್ಲವ ಬಿಟ್ಟು , ಮುಕ್ತಿಯಡೆಗೆ ಹೊರಟಾಗಿತ್ತು ಆತ್ಮ . ಮೊದಲ ಬಾರಿಗೆ ಅಣ್ಣ ಎಂದು ಕರೆದಿದ್ದೆ , ಕೇಳಿಸಿಕೊಳ್ಳಲು ಅವನೇ ಇರಲಿಲ್ಲ ( ಅದುವರೆಗೂ ಹೆಸರು ಹಿಡಿದೆ ಕರೆಯುತಿದ್ದೆ ).

                  ಕೇವಲ ಒಂದು ೫ ಇಂಚು ಮಾತ್ರ ಮೇಲಿದ್ದ ನೆಲದಿಂದ ಅಷ್ಟೇ , ಅದಲ್ಲದೆ ೨ ನಿಮಿಷವೂ ಆಗಿರಲಿಲ್ಲ ಅಷ್ಟರೊಳಗೆ ನಾವಲ್ಲಿಗೆ ಹೋಗಿದ್ದೆವು .ವಿಧಿ ಮುಂದೆ ನಾವ್ಯಾರು ಅಲ್ಲವೇ ? ಬಯಸಿದ್ದನ್ನು ಪಡೆದುಕೊಳ್ಳುವ ಶಕ್ತಿ ಇರುವುದು ಅದ್ಕ್ಕೊಂದೆ .ಅದನ್ನ ಅದು ಪಡೆದುಕೊಂಡಿತ್ತು .ಹೊರಗೆ ಕಲ್ಲಂತೆ ಕಾಣುವ ಅಪ್ಪನ ನಿಜ ಮನಸಿನ ಅರಿವು ನನಗಾಗಿತ್ತು ಅಂದು , ಅದನ್ನೇ ಅರಿಯದೆ ಹೋದ ಆತ .

                          ನಿನ್ನೆ ಅಮ್ಮಂದಿರ ದಿನ , ಅದರ ಬಗ್ಗೆ ಗೊತ್ತೋ ಇಲ್ಲವೊ ನನ್ ಅಮ್ಮನಿಗೆ ,ಗೊತ್ತಿಲ್ಲದಿದ್ದುದ್ದೆ ಒಳಿತು ಬಿಡಿ.ಬರುವ ಜೂನ್ ೩ ಕ್ಕೆ ಆತ ನಮ್ಮಿಂದ ದೂರ ಸರಿದು ೫ ವರ್ಷವಾಗುತ್ತೆ, ಇನ್ನು ಮರೆಯಲಾಗುತ್ತಿಲ್ಲ . ಉಳಿದಿದೆ ಒಂದು ಪ್ರಶ್ನೆ ಕೇಳಲು ಅವನನ್ನು ಯಾಕೆ ಹೀಗೆ ಮಾಡಿದೆ ನೀನು ಎಂದು ?

"ನಂಬಿಕೆಯೇ ನಂಬಲೇ ನಾ ನಿನ್ನ "

ಬಸ್ ಬರೋ ಟೈಮ್ ಆಯಿತು ಏಳೋ ..ಅತ್ತ ಅಮ್ಮನ ಕೂಗು ಕೇಳಿದಾಕ್ಷಣ ...ಅಬ್ಬಾ ಎಷ್ಟು ಹೊತ್ತು ಮಲಗಿ ಬಿಟ್ಟೆ ಎಂದು ಬಿರ ಬಿರನೆ ಎದ್ದು ಟೈಮ್ ನೋಡಿದೆ ...ಆಗಲೇ ೪.೧೫ ಆಗಿತ್ತು .೫ ಕ್ಕೆ ಕೊನೆ ಬಸ್ ನಮ್ಮೂರಿಂದ ತೀರ್ಥಹಳ್ಳಿಗೆ (ಶಿವಮೊಗ್ಗದಿಂದ ರಾತ್ರಿ ೧೦ ಕ್ಕೆ ಹೊರಡುವುದಾದರು,ಬಸ್ ವ್ಯವಸ್ತೆ ಇಲ್ಲದ ಕಾರಣ ಮನೆಇಂದ ಬೇಗನೆ ಹೊರಡಬೇಕಾದ ಪರಿಸ್ಥಿತಿ ).ಇನ್ನು ಏನು ಪ್ಯಾಕ್ ಮಾಡ್ಕೊಂಡೆ ಇಲ್ವಲ್ಲೋ ಸೋಮಾರಿ ಎಂದು ಹುಸಿ ಕೋಪ ತೋರಿಸುತ್ತಲೇ ಅಮ್ಮನೇ ಎಲ್ಲ ನನ್ನ ಬ್ಯಾಗ್ಗೆ ತುಂಬುತ್ತಿದ್ದರು ....ನಾಡಿದ್ದು ಹೇಗೂ ಬರ್ತಾನಲ್ಲ ೧ ವಾರಕ್ಕೆ ಎಸ್ಟ್ ಬೇಕೋ ಅಸ್ಟು ಬಟ್ಟೆ ತುಂಬು ಸಾಕು , ಎದುರುಗಡೆ ಮನೆ ಕೆಲಸ ಮಾಡಿಸುತಿದ್ದ ಅಪ್ಪನ ಅಪ್ಪಣೆ ಅಮ್ಮನಿಗೆ(ಹಿಂದಿನ ದಿನವಸ್ಟೇ ಅಕ್ಕನ ಮದುವೆಮುಗಿಸಿಕೊಂಡು ಬಂದಿದ್ದರಿಂದ ಸ್ವಲ್ಪ ತಿಂಡಿಯೂ ಇತ್ತು ,ಅದನ್ನು ಅಮ್ಮ ತುಂಬುತ್ತಿದ್ದರು ) .
ಹಾಸಿಗೆ ಬಿಡಲು ಮನಸಿಲ್ಲದಿದ್ದರು ಸಮಯದ ಅರಿವಾಗಿ ಬೇಗನೆ ತಯಾರಿಯಾದೆ.ಅಪ್ಪ ಅಮ್ಮನ ಕಾಲಿಗೆ ನಮಸ್ಕರಿಸಿ ,ನನ್ನ ಯಮ ಗಾತ್ರದ ಬ್ಯಾಗ್ ಹೆಗಲ ಮೇಲೇರಿಸಿ ಹೊರಟೆ .ಪ್ರತಿ ಸಲಿ ಮನೆಗೆ ಬಂದಾಗಲು ಸ್ವಲ್ಪ ದೂರ ನನ್ನೊಟ್ಟಿಗೆ ಬರುವುದು ಅಮ್ಮನ ಅಬ್ಯಾಸ (ಮನೆಇಂದ ಬಸ್ ಸ್ಟಾಪ್ ಗೆ ೧ ಕಿ ಮಿ ಕಾಲ್ನಡಿಗೆ ).
ಹಳ್ಳಿ ಎಂದ ಮೇಲೆ ಕೇಳಬೇಕೆ ದಾರಿ ಯಲ್ಲಿ ಸಿಗುವ ಪ್ರತಿಯೋಬ್ಬರಿಂದಲೂ ಒಂದೇ ಪ್ರಶ್ನೆ ಹೊರಟಿರ ಅಪ್ಪು? (ಸಾಮಾನ್ಯವಾಗಿ ನಮ್ಮ ಕಡೆ ಎಲ್ಲ ಬ್ರಾಹ್ಮಣ ಹುಡುಗರಿಗೂ ಅಪ್ಪು ಎಂದೇ ಸಂಬೋದಿಸುತ್ತಾರೆ ) ಹ ಹ .ಎಂದು ಉತ್ತರಿಸುತ್ತಲೇ ಕೊನೆಗೂ ನನ್ನ ಎಂದಿನ ಚಾಳಿಅಂತೆ ಓಡಿಬಂದೆ ಬಸ್ ಹತ್ತಿದ್ದುಆಯಿತು .
ಕೊನೆ ಬಸ್ ಅದ್ದರಿಂದ ಸ್ವಲ್ಪ ರಶ್ ಇತ್ತು .ಅದ್ರು ಒಂದು ಸೀಟು ಗಿಟ್ಟಿಸುವಲ್ಲಿ ಸಪಲನಾದೆ.ಅಂತು ದಡ ಬಡ ದಡ ಬಡ ಸದ್ದು ಮಾಡುತ್ತ ಬಸ್ಸುತೀರ್ಥಹಳ್ಳಿ ತಲುಪಿತು .ಅಲ್ಲಿಂದ ಶಿವಮೊಗ್ಗ ಬಸ್ಸು ಹತ್ತಿ ಕುಳಿತೆ .
ತೀರ್ಥಹಳ್ಳಿ ,ಶಿವಮೊಗ್ಗ ದಾರಿ ಎಂದ ಮೇಲೆ ಕೇಳಬೇಕೆ .ದಾರಿ ಯುದ್ದಕ್ಕು ಹಳ್ಳ ,ಕಾಡು.ಆಲ್ ಅಲ್ಲಿ ರಸ್ತೆಯ ಜೊತೆ ಮಾತು ಆಡುತ್ತಾ ಹರಿವ ತುಂಗೆ ,ಗಜರಾಜನ ಬಿಡು ಸಕ್ರೆಬೈಲು ,ಪಕ್ಷಿಗಳ ತವರು ಮಂಡಗದ್ದೆ ,ಆಲ್ ಅಲ್ಲಿ ಸಿಗುವ ಅಡಿಕೆ ತೋಟ ,ಮನುಷ್ಯನ ಶಕ್ತಿ ಪ್ರದರ್ಶನದ ಪ್ರತೀಕ ಗಾಜನೂರು ಅಣೆಕಟ್ಟು ,ಹೊಸಹಳ್ಳಿ (ಸಂಸ್ಕ್ರತದ ತವರೂರಾದ ಮತ್ತುರಿನ ಅವಳಿ ಗ್ರಾಮ ).ಹೀಗೆ ಕಣ್ಣಿಗೆ ಹಬ್ಬ .
ಹಾಗೆಯೆ ದಿಗಂತ ದಲ್ಲಿ ಸೂರ್ಯ ತನ್ನ ಕೆಲಸ ಮುಗೀತು ಎಂಬ ಸಂತೋಷ ದೊಂದಿಗೆ ಮನೆಗೆ ಹೊರಡುವ ಅವಸರದಲ್ಲಿದ್ದ .
ಒಮ್ ಒಮ್ಮೆ ಅನ್ನಿಸಿದ್ದುಂಟು ಸೂರ್ಯನಿಗೂ ರಾತ್ರಿ ಪಾಳಿ ಇದ್ದಿದ್ದರೆ (ಎಂಥ ತರ್ಲೆ ಪ್ರಶ್ನೆ ಎಂದು ಸುಮ್ಮನಾಗುತ್ತಿದ್ದೆ ).
ದಡಕ್ ಎಂಬ ಬ್ರೇಕ್ನ ಸದ್ದು ಆಲೋಚನಾ ಲಹರಿಯಲ್ಲಿದ್ದ ನನ್ನನ್ನು ವಾಸ್ತವಕ್ಕೆ ತಂದು ನಿಲ್ಲಿಸಿತು ,ನಾನು ಶಿವಮೊಗ್ಗ ತಲುಪಿಆಗಿತ್ತು ,ಸಮಯ ಸರಿಯಾಗಿ ೮.೩೦ ...
೧೦.೩೦ ಕ್ಕೆ ಬಸ್ ಅಲ್ಲಿಯವರೆಗೆ ಏನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ,ಹೊಟ್ಟೆಯ ನೆನಪಾಗಿ ಅಲ್ಲಿಯೇ ಎದುರುಗಿದ್ದ ಉಡುಪಿ ಬ್ರಾಹ್ಮಣರ ಹೋಟೆಲ್ ಒಳ ಹೊಕ್ಕೆ .........
ಊಟ ಮುಗಿಸಿ ಬಸ್ ಸ್ಟ್ಯಾಂಡ್ ಒಳಗಡೆ ಬಂದೆ ಹಾಗೆಯೇ ಒಂದು ಸುತ್ತು ಹಾಕಿ ಅಲ್ಲೇ ಹಾಕಿದ್ದ ಬೆಂಚ್ ಮೇಲೆ ಕುಳಿತೆ .ಸ್ವಲ್ಪ ಸಮಯ ಕಳೆದಿರಬೇಕು ಯಾರೋ ಒಬ್ಬ ವ್ಯಕ್ತಿ ನನ್ನ ಪಕ್ಕ ಬಂದು ಕುಳಿತ (ವಯಸ್ಸು ಸುಮಾರು ೨೧ ರಿಂದ ೨೪ ಇರಬೇಕು ಅಸ್ಟೆ).ನಾನೋ ಈ ಲೋಕದ ಅರಿವೇ ಇಲ್ಲದಂತೆ ಯಾವೊದೋ ಸಿನಿಮಾ ಹಾಡು ಗುನುಗುತ್ತಿದ್ದೆ , ಆತನೇ ಬೆಂಗಳುರಿಗ ಎಂದ .ಹೌದು ಎಂದೇ .....ಮುಂದುವರೆಸಿ ಚಿಕ್ಕಮಗಳುರಿಗೆ ಇಲ್ಲಿಂದ ಎಷ್ಟು ದೂರ ಇರಬಹುದು ಎಂದ ,೧೦೦ ಕಿ ಮಿ ಇದೆ ಅನ್ಸುತ್ತೆ ಅಂದೇ .ಈಗ ನಾನೆ ನೀವು ಯಾವ ಕಡೆ ಅಂದೇ ,ಬೆಂಗಳೂರಿಗೆ ಹೋಗಬೇಕಿತ್ತು ಆದರೆ ಇರುವ ದುಡ್ಡೆಲ್ಲ ಕಳೆದುಕೊಂಡೆ ಅಂದ ,ಚಿಕ್ಕಮಗಳುರಿಗೆ ಹೋಗೋಣವೆಂದರು ದುಡ್ಡಿಲ್ಲ ಅಂದ .ಹೌದ ಎಂದು ಹಳೆ ಹಿಂದಿ ಹಾಡು (ज़िन्दगी के सफ़र में मिल जाते है ..............)ಗುನುಗುತ್ತ ಆತ ಹೇಳಿದಕ್ಕು ನನಗೂ ಸಂಭದವೇ ಇಲ್ಲವೇನೋ ಅನ್ನೋತರ ಕುಳಿತೆ .
ಎದುರಿಗೆ ಹಾಡು ಗುನುಗುತ್ತಿದ್ದರು ಮನಸಲ್ಲಿ ಯೋಚಿಸುತ್ತಿದ್ದೆ ,ನನ್ನ ಬಳಿ ಏನಾದ್ರು ಕೇಳಿದ್ರೆ ........ಕ್ಷಣ ಕಳೆದಿರಲಿಲ್ಲ ಆತ ಕೇಳಿಯೇ ಬಿಟ್ಟ ನಿಮ್ಮಿಂದ ಏನಾದ್ರು ಸಹಾಯ ಆಗುತ್ತ ?ಅಬ್ಬ ........ಒಮ್ಮೆ ನಕ್ಕು ಸುಮ್ಮನಾದೆ .ಮಧ್ಯಾನ್ದಿಂದ ಕೇಳ್ತಾ ಇದೀನಿ ಯಾರು "ನಮ್ಬ್ತಾನೆ " ಇಲ್ಲ .ಅವನ ದ್ವನಿ ಸಣ್ಣದಾಗಿತ್ತು ,ಕಣ್ಣಲ್ಲಿ ಗಂಗೆಯೇ ಹೊರಟಿದ್ದಳು .
ಕಾಸಿಗಿಂತ ನನಗೆ ಹೆಚ್ಚು ಕಾಡಿದ ಪದ "ನಂಬಿಕೆ ".......ಅ ಕ್ಷಣದಲ್ಲಿ ನನ್ ಅವನನ್ನ ನಂಬಿದ್ದೆ ! (ನಮ್ ಅಮ್ಮ ಬೈತಿರುತ್ತಾರೆ ನಿಂದು ಹೆಂಗರುಳು ಯಾರದ್ರು ಅಯ್ಯೋ ಅಂದ್ರೆ ಕೊಟ್ಬಿತೀಯ ,ಯಲ್ಲರೂ ನಿನ್ ತರ ಇರೋಲ್ಲ ನಾಳೆ ಯಾರು ಬೋರೋಲ್ಲ ತಿಳ್ಕೋ ).
ಕಿಸೆಗೆ ಕೈ ಹಾಕಿ ಅದರಲಿದ್ದ ೬೦ ರೂಪಾಯಿಗಳನ್ನೂ ಅವನಿಗೆ ನೀಡಿದೆ (೫೦ ರ ಒಂದು ನೋಟು + ೧೦ ರದ್ದು ಒಂದು ) ಆತ ಮರುದಿನ ಬೆಳಿಗ್ಗೆಯೇ ಅದನ್ನು ಹಿಂತಿರುಗಿಸುವುದಾಗಿ ಹೇಳಿ ನನ್ನ ಫೋನ್ ನಂಬರ್ ತೆಗೆದುಕೊಂಡದ್ದು ಅಲ್ಲದೆ ,ಆತನದ್ದು ನೀಡಿದ (ಅತನದ್ದೆ ಎನ್ನುವುದಕ್ಕೆ ಕಾತರಿ ನನ್ನೆದುರಲ್ಲೇ ಮಿಸ್ ಕಾಲ್ ಮಾಡಿದ್ದ ).ಅಸ್ಟರಲ್ಲಿ ಯಾವೋದು ಒಂದು ಬಸ್ ಬಂತು ತುಂಬಾ ದನ್ಯವಾದಗಳನ್ನು ತಿಳಿಸಿ ಅದನ್ನು ಹತ್ತಿದ .ಇತ್ತ ನಾನು ಬರಬೇಕಿದ್ದ ಬಸ್ ಕೂಡ ಹೊರಡುವ ಸೂಚನೆ ತೋರ್ಸ್ಥಇತ್ತು ..
ಬಸ್ ನಲ್ಲಿ ಕೂತನಂತರ ಯೋಚಿಸತೊಡಗಿದೆ ,"ನಂಬಿಕೆ" ಎಂಬುದು ಎಲ್ಲ ಸಂಭಂದಗಳ ತಳಹದಿಯಲ್ಲವೇ ?
ಅದು ಪ್ರೀತಿಯೇ ಆಗಿರಲಿ ,ಸ್ನೇಹವೇ ಆಗಿರಲಿ ಅಥವಾ ನೆಂಟಸ್ತನ .

ದಿನ ಕಳೆಯಿತು ,ವಾರವೂ ಆಯಿತು .ಅ ಕಡೆ ಇಂದ ಯಾವುದೇ ಕರೆ ಇಲ್ಲ .ದುಡ್ಡು ದೊಡ್ಡ ವಿಷೆಯವಲ್ಲ ನಾನಿಟ್ಟನಂಬಿಕೆ ಹುಸಿಯಯಿತಲ್ಲ ಅನ್ನೋ ಬೇಸರ .ಕೆಲವೊಮ್ಮೆ ಅನ್ನಿಸಿದ್ದುಂಟು ನಾನೆ ಕರೆ ಮಾಡಿ ಹಿಗ್ಗಾ ಮುಗ್ಗ ಬಾಯಿಗೆ ಬಂದಂತೆ ಬೈಯೋಣ ಅಂತ ,ಅದರೂಯಾಕೋ ಮನಸ್ಸು ಒಪ್ಪುತ್ತಿಲ್ಲ .
ಇದೆಲ್ಲ ನಡೆದ ಮೇಲೆ ಅನ್ನಿಸಿದೆ :
ವ್ಯಕ್ತಿಯನ್ನು ನಂಬಲು ಆತನ ಪರಿಚಯ ಅಗತ್ಯವೇ ?
ನಂಬಿಕೆಯೇ ಇಲ್ಲದ ಪ್ರೀತಿ ಪ್ರೀತಿಯೇ ?

ಅದರೂ ಕೆಲವೊಮ್ಮೆ ಈ ಹಾಡು ನೆನಪಾಗುತ್ತೆ "ನಂಬಿ ಕೆಟ್ಟವರಿಲ್ಲವೋ ,ನಂಬಿ ಕೆಟ್ಟವರಿಲ್ಲವೋ.

ಯಂತ್ರ ,ಮಂತ್ರ

ತಂತ್ರ ಮಂತ್ರ ಗಳಿಂದು ಅತಂತ್ರ
ನಮ್ಮುಂದಿರುವುದೇ ಯಂತ್ರ
ಹಿಂದೊಂದು ಕಾಲವಿತ್ತು ಬಳಸುತ್ತಿದ್ದರು ಮಂತ್ರ
ಹುಟ್ಟಿಸುವುದಕ್ಕು ಮತ್ತು ಸಾಯಿಸುವುದಕ್ಕು

ಬದಲಾಗಿದೆ ಕಾಲ
ಹುಟ್ಟು ಸಾವಿಗೆ ಯಂತ್ರ
ಬದುಕುವುದಕ್ಕೆ ಮಂತ್ರ 

ಪ್ರೀತಿ ನೀ ಒಂದು ಮಾಯೆಯೇ ಸರಿ .....!

ಪ್ರೀತಿ ಪ್ರೀತಿ ಪ್ರೀತಿ ................
ಅಬ್ಬಾ ಎಷ್ಟು ಚರ್ಚೆ .ಇದರ ಬಗ್ಗೆ ..

ನನ್ನ ದೃಷ್ಟಿಯಲ್ಲಿ ಹೇಳುವುದಾದರೆ ಮನುಕುಲದ ಹುಟ್ಟಿಗೆ ,ಪ್ರಕೃತಿಗೆ ಪ್ರಾಣಿಗಳ ಮೇಲೆ ಇದ್ದ ಆಪಾರ ಪ್ರೀತಿಯೇ ಕಾರಣ ......
ಎಷ್ಟೊಂದು ಅರ್ಥ ಈ ಪದಕ್ಕೆ ...ಸಾಗರದ ಅಳವನ್ನು ಹೇಗೆ ಅಳೆಯಲಾಗುವುದಿಲ್ಲವೋ ಹಾಗೆಯೇ ......ಪ್ರೀತಿ ಎಂಬ ಪದವನ್ನು ಅರ್ಥೈಸುವುದು ಅಸಾದ್ಯವೇ ಸರಿ .
ಹೇಗೆ ಯಾವುದೇ ಕಟ್ಟಡ ಕಟ್ಟುವಾಗ ತಳಹದಿ (ಬೇಸ್ ) ಎಸ್ಟು ಅವಶ್ಯವೋ ...ಹಾಗೆಯೇ ಪ್ರತಿಯೊಂದು ಸಂಭದದ ತಳಹದಿ ಪ್ರೀತಿ ಯಾಗಿದ್ದರೆ ,ಅದರಸ್ಟು ಅರ್ಥ ಪೂರ್ಣ ವಾದ ಸಂಭದ ಇನ್ನೊಂದುಇಲ್ಲ ಎನ್ನಬಹುದೇನೋ.?
ಪ್ರೀತಿ ಹೇಗೆ 2 ಮನಸ್ಸುಗಳ ನಡುವಿನ ಸೇತುವೆಯೋ ,,,ಹಾಗೆಯೇ ಆ ಸೇತುವೆಯ ಆಧಾರ ಸ್ಥಂಭ ನಂಬಿಕೆ ....
ಪ್ರಸಕ್ತ ಸಮಾಜದಲ್ಲಿ ಈ ನಂಬಿಕೆ ಎಂಬುದು ,ಹೆದರಿಕೆ ಎಂಬ ಪದದಡಿಯಲ್ಲಿ ಮುಚ್ಚಿ ಹೋಗಿದೆಯೇನೋ ಅನ್ನಿಸುತ್ತದೆ ..ಪ್ರತಿಯೊಬ್ಬ ವ್ಯಕ್ತಿಯನ್ನು ಭೇಟಿ ಆದ ಕೂಡಲೇ .ಮನಸ್ಸಿನ ಯಾವೋದು ಮೂಲೆಯಲ್ಲಿ ಏಳುವ ಮೊದಲ ಪ್ರಶ್ನೆ ...ನಂಬಲರ್ಹನೆ ?...
ಪರಿಸ್ತಿತಿ ಎಲ್ಲಿಗೆ ಹೋಗಿದೆ ಎಂದರೆ ನಂಬಿಕೆಯನ್ನೇ ನಂಬಲಾಗದಸ್ತ್ಟು ಕಳೆದು ಹೋಗಿದ್ದೇವೆ .
ಹಾಗಾದರೆ ಪ್ರೀತಿ ನಂಬಿಕೆ ಅಲ್ವಾ ?
ಪ್ರೀತಿ ಕೇವಲ ಆಕರ್ಷಣೆಯ ?
ಅಥವಾ ಪ್ರೀತಿ ಕೇವಲ ಮೋಹವ ?

ತಳಹದಿಯೇ ಇಲ್ಲದ ಪ್ರೀತಿ .........ಪ್ರೀತಿಯೇ?

"ಎಲ್ಲೋ ಹುಡುಕಿದೆ ಇಲ್ಲದ ಪ್ರೀತಿಯ ....................... ?

ಸಮಯದ ಸುಳಿಯಲ್ಲಿ ಸೂರ್ಯ

ಸಮಯದ ಮಹತ್ವಯೇನೆಮ್ಬುದೆಂದು
ನಿನ್ನ ನೋಡಿ ಕಲಿಯಬೇಕು ಜನ
ಅದೆಸ್ಟು ನಿಕರತೆ ನಿನ್ನಾ ಸಮಯದಲ್ಲಿ

ನಿನ್ ಕಣ್ ಬಿಟ್ಟರೆ ಬೆಳಗಿನ ಸಮಯ
ನಿನ್ ಕಣ್ ಮುಚ್ಚಿದರೆ ಕತ್ತಲಾ ಸಮಯ
ನಿನ್ ಅತ್ತರೆ ಮಧ್ಯಾನ್ನ
ನಿನ್ ವಿಶ್ರಾಂತಿಯಲ್ಲಿಗೆ ಹೊರಟರೆ ಮುಸ್ಸಂಜೆ

ಒಮ್ಮೆ ಯಾದರು ಅನಿಸಿಲ್ಲವೇ ನಿನಗೆ
ಮುರಿಯಬೇಕು ಈ ಸಮಯ ?
ಅನಿಸಿದೆ ನಿನಗೆ ,ಅದಕ್ಕೆ ಹೋದ
ಮಳೆಗಾಲದಲ್ಲಿ ಘಂಟೆ ೧೨.೦೦ ಅದ್ರು
ಕಣ್ಣು ತೆರೆದಿರಲಿಲ್ಲ ನೀನು ನಮ್ಮೂರಲ್ಲಿ ಅಲ್ಲವೇ ?

ದ್ವಂದ್ವವಿರುವುದೇ ಇಲ್ಲಿ
ನೀನು ಸಮಯವೋ ,ಸಮಯವೇ ಸೂರ್ಯನೋ ?

ಬದುಕೇ ದುಸ್ತರವಾದಾಗ ,ಬದುಕು ಬದುಕಬೇಕೆ ?

ಮನುಷ್ಯ ಕೆಲವೊಮ್ಮೆ ದೇವರು ಒಡ್ಡುವ ಪರೀಕ್ಷೆಯಲ್ಲಿ ಅನುತ್ತೀರ್ಣನಾದಾಗ ಹೇಳುವ ಒಂದೇ ಮಾತು ," ನೆಮ್ಮದಿಯಾಗಿ ಬದುಕಲು ಬಿಡುವುದಿಲ್ಲ ಈ ದೇವರು ".
ಆದರೆ ನಾನು ಹೇಳಹೊರಟಿರುವ ಈ ವಿಷಯದಲ್ಲಿ ಇದು ಸ್ವಲ್ಪ ಬದಲಾಗಿದೆ ,"ನೆಮ್ಮದಿಯಾಗಿ ಸಾಯಲು ಬಿಡುವುದಿಲ್ಲ ಈ ದೇವರು ".ಒಮ್ಮೆ ನಿಮಗನ್ನಿಸಬಹುದು ಹುಚ್ಚೇ ಈ ಹುಡುಗನಿಗೆ ,ಎಲ್ಲರೂಬದುಕಲು ಹಂಬಲಿಸುತ್ತಿರುವಾಗ ಈತ ಸಾವಿನ ಬಗ್ಗೆ ಯೋಚಿಸುತ್ತಿದ್ದನಲ್ಲ,ಬಹುಶ ಅವನೇ ಹೇಳಿದಂತೆ ದೇವರು ಕೊಟ್ಟ ಚಿಕ್ಕ ಪರೀಕ್ಷೆಗೆ ಹೆದರಿ ಸಾವಿನೆಡೆಗೆ ಹೊರಟಿರುವನೆ ....?

ಖಂಡಿತ ಇಲ್ಲ ,ಹಾಗೆಂದು ನೀವು ಯೋಚಿಸಿದ್ದೆ ಅದಲ್ಲಿ ನಿಮ್ಮ ಯೋಚನೆ ತಪ್ಪು .ಬದುಕಿನ ನೂರೆಂಟು ಮಜಲುಗಳಲ್ಲಿ ಕೆಲವನ್ನಾದರೂ ನೀವು ಅನುಭವಿಸಿದ್ದಿರಿ ಅಥವಾ ನೋಡಿದ್ದಿರಿ ಅಥವಾ ಕೇಳಿದ್ದಿರಿ ..ಹಾಗೆಯೆ ನಾನು ಕಂಡ ,ಸ್ವಲ್ಪ ಕೇಳಿದ ಬದುಕು ಎಂಬ ಹೊತ್ತಿಗೆಯ ಯಾವೋದು ಪುಟದ ಒಂದು ಪ್ಯಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ,ಹಾಗಂತ ನಾನು ಹೇಳುವುದೇ ಸರಿ ಎಂದಲ್ಲ,ಇದು ಕೇವಲ ವ್ಯಯಕ್ತಿಕ ಅಬಿಮಥ.

ಮನುಷ್ಯನ ಬದುಕೇ ಹಾಗೆ ,ಎರಡು ವಿರುದ್ಧ ಪದಗಳ ನಡುವಿನ ಗುಣಾಕಾರ ,ಆ ಪದಗಳೇ ಹುಟ್ಟು ಮತ್ತು ಸಾವು ,ಗುಣಿಸುವತಾ ಮಾತ್ರ ಆತ .ಇದರಲ್ಲಿ ಹುಟ್ಟು ಅಥವಾ ಜನನ ಎಂಬ ಪದ ಯಾವಾಗಲು ಹಿಥಕರವಾದದ್ದೇ ,ಎಲ್ಲೆಡೆ ಸಂಭ್ರಮ ಉಂಟು ಮಾಡುವ ಪದವದು .
ಸಾವಿನ ಮುಕಗಳು ಸಾವಿರಾರು ,ಪ್ರಮುಖವಾಗಿ ಬರುವುದಾದರೆ ೨ ನ್ನು ಪ್ರಸ್ಥಾಪಿಸಬಹುದು:
೧) ನೈಸರ್ಗಿಕ ಸಾವು
೨) ಸ್ವಯಂ ಶಿಕ್ಷೆ (ಆತ್ಮ ಹತ್ಯೆ )
ಇರುವ ದಂದ್ವ ಇಲ್ಲೇ ,
ವಿಚಾರಕ್ಕೆ ಬರುವ ಮುನ್ನ ನಿಮಗೊಂದು ಚಿಕ್ಕ ಕಥೆ (ನಿಜವಾದುದ್ದೆ ):
ಮೊನ್ನೆ ಊರಿಗೆ ಹೋದಾಗ ಹೀಗೆ ಪಕ್ಕದ ಮನೆಯವರಹತ್ತಿರ ಹರಟುತ್ತ ಕುಳಿತಿದ್ದೆ ,ಹೀಗೆ ಏನೋ ಮಾತಾಡುತ್ತ ಅವರೆಂದರು ನನ್ ತಂಗಿಯ ಅತ್ತೆಗೆ ಜೋರಾಗಿದೆ ಮಾರಾಯ ,ಮಲಗಿದಲ್ಲೇ ಎಲ್ಲ ,ಸ್ನಾನ ಮಾಡಿಸುವುದೇ ಬೇಡವೆಂದಿದ್ದಾರೆ ವೈದ್ಯರು ,ಅದೇನೋ ನೀರಿನ ಹಾಸಿಗೆ ಅಂತೆ ಅದರ ಮೇಲೆ ಮಲಗಿಸುವುದು ,ಮಾತನಾಡಲಾಗುತ್ತಿಲ್ಲ,ಅವರ ಯಾತನೆ ನರಕಕ್ಕಿಂತ ಹೀನಾಯವಾಗಿದೆ.ಅವರು ನೋಡಿದ್ರೆ ಸಾಯೋ ಇಂಜೆಕ್ಷನ್ ಕೊಡ್ಸಿ ಎಂದು ಅಳ್ತಾರಂತೆ ಅಂದ್ರು .
ತೆರೆದ ಮಾತಿಗೆ ನಾನೆಂದೆ ,ಮತ್ಯಾಕೆ ಹಿಂದೆ ಮುಂದೆ ನೋಡ್ಥಿರ ಕೊಡಿಸಲಿಕ್ಕೆ ಹೇಳಿ ,ಅದಕ್ಕೆ ಅವರೆಂದರು ನಾನು ಅದನ್ನೇ ಹೇಳಿದೆ ಮಾರಾಯ ,ಆದ್ರೆ ಹಾಗೆ ಮಾಡಿದ್ರೆ ಇವರಿಗೆಲ್ಲಿ ಪಾಪ ಸುತ್ತಿಕೊಳ್ಳುತ್ತೋ ಅನ್ನೋ ಭಯ ಇವರಿಗೆ ಅಂದ್ರು .

ಮೊದಲು ನನ್ನ ಅಭಿಪ್ರಾಯಕ್ಕೆ ಬರುತ್ತೇನೆ ,
ಆತ ಕರುಣಿಸಿದ ಜೀವ ಆತನೇ ತೆಗೆದುಕೊಳ್ಳಲಿ ಎನ್ನೋ ಭಾವ ನಮ್ಮದು ,ಒಪ್ಪೋಣ .
ಯೋಚಿಸಬೇಕಾದ ವಿಷಯಗಳೆಂದರೆ ಬದುಕು ಬದುಕಾಗಿರದೆ , ನರಕವಾದಕ ನಾವೇ ಅದನ್ನು ತ್ಯಜಿಸುವುದು ತಪ್ಪೇ (ಪ್ರಸಕ್ತ ಸನ್ನಿವೇಶದ ಬಗ್ಗೆ ಮಾತ್ರ ).
ಇಂಥ ಸಮಯದಲ್ಲಿ ಪಾಪ ಪುಣ್ಯದ ಬಗ್ಗೆ ಯೋಚಿಸುವುದು ಎಷ್ಟು ಸರಿ ?
ವ್ಯಕ್ತಿಯಾ ಕ್ರಿಯೆ ಇಂದ ಪಾಪ ಪುಣ್ಯ ನಿರ್ದರಿಸುವುದಾದರೆ , ಆ ಪಾಪ ಅವರೊಟ್ಟಿಗೆ ಹೋಗುವುದಿಲ್ಲವೇ .ಕ್ರಿಯೆ ನಮ್ಮದೇ ಆದರು
ಪ್ರಚೋದನೆ ಅವರದೇ ಅಲ್ಲವೇ ? ಅಂದ ಮೇಲೆ ಎಲ್ಲಿಯ ಪಾಪ , ಎಲ್ಲಿಯ ಪುಣ್ಯ .
ಇಂಥ ಸನ್ನಿವೇಶದಲ್ಲಿ ನಿಮ್ಮ ಅಭಿಪ್ರಾಯವೇನು ?
ಅಂದ ಹಾಗೆ ನೀವು ಇದನ್ನ ಯಾವ ವರ್ಗಕ್ಕೆ ಸೇರಿಸಲು ಇಚ್ಚಿಸುವಿರಿ ?

ಹೊಸತನ ತನ್ನಾತನವನ್ನ ಕಳೆದುಕೊಂಡಾಗ ,ಹೊಸತು ಹೊಸತಾಗಿರಲು ಹೇಗೆ ಸಾಧ್ಯ? ........

ನಾನಾಗ ೩ ನೇ ಕ್ಲಾಸ್ ನಲ್ಲಿ ಇದ್ದೆ ಅನ್ಸುತ್ತೆ .ನನಗಿನ್ನೂ ಕಣ್ಣುಕಟ್ಟಿದ ಹಾಗೆ ನೆನಪಿದೆ ಆ ಘಟನೆ .
ಅದುವೇ ನಮ್ಮ ಮನೆಗೆ ಮೊದಲ ದ್ವಿ ಚಕ್ರ ವಾಹನ ತಂದ ಸಮಯ .ನಮ್ಮ ಪ್ರದೇಶಕ್ಕೆ ಹೇಳಿ ಮಾಡಿಸಿದ ಬೈಕ್ ಅದು ,ಅದುವೇ
M ೮೦ (ಬಜಾಜ್ ಕಂಪೆನಿಯದ್ದು ).ನಮ್ಮಪ್ಪ ಅಡಿಕೆ ಕೊನೆ ಇಳಿಸುವವರಾದ್ದರಿಂದ ದೂರ ಪ್ರದೇಶಗಳಿಗೆ ಹೋಗ ಬೇಕಾಗಿ ಬರುತ್ತಿತ್ತು,ಹಾಗಾಗಿ ಬೈಕ್ ಕರಿದಿ ಯೋಜನೆ (ಇದನ್ನು ಇಲ್ಲಿ ಪ್ರಸ್ತಾಪಿಸಲು ಕಾರಣ ನಮ್ ಹಳ್ಳಿ ಕಡೆ ನಿಮಗೆ ಗೊತ್ತಿರುವಂತೆ ಅವಶ್ಯಕತೆ ಇದ್ದರೆ ಮಾತ್ರ ಬಳಕೆ ,ಅದು ಯಾರೇ ಆಗಿರಲಿ ಬಡವನೇ ಆಗಿರಬಹುದು ,ಶ್ರೀಮಂತನೆ ).
ಅಂದು ರವಿವಾರವಿರಬೇಕು ದೂರದ ಶಿವಮೊಗ್ಗದಿಂದ ಬೈಕ್ ತರಬೇಕಾದುದರಿಂದ ಹಿಂದಿನ ದಿನವೇ ಅಪ್ಪ ಅಲ್ಲಿಗೆ ಹೋಗಿಯಾಗಿತ್ತು (ಬೆಳಿಗ್ಗೆ ಬೇಗ ಹೊರಟರೆ ಬೇಗ ಮನೆ ಸೇರಬಹುದು ಎಂಬ ಮುಂದಾಲೋಚನೆ ,ಹೊಸತು ಬೇರೆ )....ನನಗೋ ರಾತ್ರಿ ಎಲ್ಲ ಅದರದ್ದೇ ಚಿಂತೆ ,ನಿಜ ಹೇಳಬೇಕಂದ್ರೆ ನಾನು ಕೂರಲು ಹೊರಟಿದ್ದ ನನ್ನ ಪಾಲಿನ ಮೊಟ್ಟಮೊದಲ ಐರವತ ( ನನ್ನ ಪಾಲಿಕೆ ಅಂದು ) ಅದಾಗಿತ್ತು.
ಬೆಳಿಗ್ಗೆ ೫.೩೦ ಕ್ಕೆ ಎದ್ದು ಕುಳಿತಿದ್ದೆ ........ಅಂತು ಬಂತು ನೋಡಿ ೮.೩೦ ಕ್ಕೆ ನನ್ನ ಕಲ್ಪನೆಯ ಐರವತ ,ಅದೇನು ಗಾಂಭಿರ್ಯ ,ಆ ಬಣ್ಣ ,ನವಿರಾದ ಅದರ ಮೆತ್ತನೆಯ ಸೀಟು ಮತ್ತೆ ಮತ್ತೆ ಮುಟ್ಟೋಣ ಎಂಬ ಹಂಬಲ .ಅಬ್ಬ ಅಬ್ಬಾ ಅಬ್ಬ ಸ್ವರ್ಗಕ್ಕೆ ಕಿಚ್ಚು ಹಚ್ಚಿದಷ್ಟು ಖುಷಿ .ಆದರೂ ಅದರಮೇಲೆ ನನ್ನ ಸವಾರಿಯಗಾಲು ಪೂರ್ತಿ ಒಂದು ದಿನ ಕಾದಿದ್ದೆ .
ಏನಿದು ಶೀರ್ಷಿಕೆಗೂ ಇದಕ್ಕೂ ಎತ್ತಣ ಸಂಬಂದ ಎಂದು ಯೋಚಿಸುತ್ತಿರುವಿರ ,ಇಲ್ಲಿಯವರೆಗೆ ಹೇಳಿದ್ದು ಶೀರ್ಷಿಕೆಗೆ ಒಂದು ಮುನ್ನುಡಿ ಅಷ್ಟೇ .
ಮನುಷ್ಯ (ಮುಖ್ಯವಾಗಿ ಪಟ್ಟಣ ವಾಸಿಗಳು ) ಯಾಂತ್ರಿಕ ಬದುಕಿಗೆ ತನ್ನನ್ನು ತಾನು ತೊಡಗಿಸಿಕೊಂಡಂತೆ , ಅಭಿರುಚಿ ಎನ್ನುವ ಪದವನ್ನೇ ಮರೆತಿದ್ದಾನೇನೋ ಎಂದಿನಿಸುತ್ತದೆ . ಇಲ್ಲಿ ಯಾವುದು ಹೊಸತಲ್ಲ ,ಎಲ್ಲ ಹಳೆತೆ .ಹೊಸ ಬಾವ ವಷ್ಟೇ . ಆದರೆ ಆ ಹೊಸ ಭಾವವನ್ನೇ ಅರಿಯದಷ್ಟು ಹಳಬರಾಗಿದ್ದೇವೆ ನಾವು ಅಲ್ಲವೇ ?
ನೀವೇ ಒಮ್ಮೆ ಯೋಚಿಸಿ ನಿಮ್ಮ ಮನೆಗೆ ಯಾವುದಾದರು ಹೊಸ ವಸ್ತು ಬಂದಾಗ ,ಅದರ ಬರುವನ್ನು ಎಷ್ಟು ಅನುಭವಿಸುತ್ತಿರಿ ನೀವು .ಕ್ಯ್ಷಣ ,ಘಂಟೆ ,ದಿನ ,ವಾರ .....ಮುಗಿಯಿತು ಅಲ್ಲವೇ ? ಕಾರಣವಿಷ್ಟೇ ನಿಮ್ಮ ಮನೆಯದುದರ ಮುಂದೆ ಅಕ್ಕ ಪಕ್ಕದ ಮನೆಯವರದ್ದೋ ಅಥವಾ ಯಾವೋದ ಶಾಪಿಂಗ್ ಮಾಲ್ ಅಲ್ಲಿ ಕಂಡ ಅದೇ ತರಹದ ಬೇರೆ ಕಂಪನಿಯದ್ದೋ ತುಂಬಾ ಚೆನ್ನಾಗಿ ಕಂಡು ಬಿಟ್ಟಿರುತ್ತೆ ನಿಮಗೆ . ನಿಮ್ಮಲ್ಲೇ ಇಲ್ಲದ ಹೊಸತನ ಇನ್ನೆಲ್ಲಿ ಕಂಡಿತೂ ಆ ವಸ್ತುವಿನಲ್ಲಿ ?
ಆದರೆ ನಮ್ಮಲ್ಲಿ ಹಾಗಲ್ಲ ,ಒಮ್ಮೆ ತಂದ ಮೇಲೆ ಮುಗೀತು ,ಅದು ಬದುಕಿನ ಭಾಗವಾಗಿ ಬಿಡುತ್ತೆ .ಮನೆಯ ಸದಸ್ಯರಂತೆಯೇ . ಕಾರಣವಿಷ್ಟೇ ಅಲ್ಲಿದೆ ಹೊಸತನ ,ವಸ್ತುವಿನಲ್ಲಿ ಮತ್ತು ನೋಡುವವರಲ್ಲಿ .

ಸದಾ ಬದಲಾವಣೆಯನ್ನೇ ಬಯಸುವ ಮನುಷ್ಯ ,ಇರುವುದರಲ್ಲೇ ಯಾಕೆ ಹೊಸತನವನ್ನು ಕಂಡುಕೊಳ್ಳುವುದಿಲ್ಲ.
ಬದಲಾವಣೆ ಇರಬೇಕು ನಿಜ ,ಆದರೆ ಬದುಕೇ ಬದಲಾಗಬಾರದು ಅಲ್ಲವೇ ?
ಒಮ್ಮೆ ಎಲ್ಲ ಮರೆತು ಹೋಚಿಸಿ ನೋಡಿ ,ನಿಮ್ಮಲಿದೆಯೇ ಆ ಹೊಸತನ ?
ಹೊಸ ವಸ್ತು ,ಹೊಸ ಜಾಗ ನೋಡಿ ಸುಖ ದಲ್ಲಿದ್ದೇನೆ ಎಂದು ಬದುಕುವವನು ಮೂರ್ಖ !
ಇರುವುವದರಲ್ಲೇ ಹೊಸತನ್ನು ಕಂಡು ಕೊಂಡು ಬದುಕುವವನೆ ನಿಜವಾದ ಸುಖವಂತ .

ಬದುಕು ,ಭಾವ ಮತ್ತು ನಾನು

ಪಟ್ ಪಿಟ್ ಟುಳುಮ್......................ಸದ್ದು ಮಾಡುತ್ತ ಆಗ ತಾನೇ ನಿಂತ ಮಳೆಯ ಹನಿಗಳು ಸೂರಿನಿಂದ ಕೆಳಗೆ ಅಂಗಳದಲ್ಲಿ ನಿಂತ ನೀರಿನ ಮೇಲೆ ಬೀಳುತ್ತಿತ್ತು .ಡುಂ ಡುಡುಂ ಎಂದು ಸದ್ದು ಮಾಡುತ್ತಿದ್ದ ಗುಡುಗು ,ಅದಕ್ಕೆ ತಾಳ ಬದ್ದವಾಗಿ ಬಂದು ಹೋಗುತಿದ್ದ ಮಿಂಚು ತಮ್ಮ ಆಟ ಇನ್ನು ಮುಗಿದಿಲ್ಲ ಎಂಬ ಸೂಚನೆ ಆಗಲೇ ಕೊಡುತ್ತಿದ್ದವು .
ಜಗಲಿಯ ಮೇಲೆ ಕೂತು ಅಮ್ಮ ಸುಟ್ಟು ಕೊಟ್ಟ ಹಲಸಿನ ಹಪ್ಪಳ ಒಂದು ಕೈ ಅಲ್ಲಿ ,ಬಿಸಿ ಬಿಸಿ ಹೊಗೆ ಆಡುತ್ತಿರುವ ಕಾಫಿ ಇನ್ನೊಂದು ಕೈಲಿ , ತಿನ್ನುತ್ತಾ ಆ ಮಳೆಯ ಮುಂದಿನ ಆಟದ ನಿರೀಕ್ಷೆಯಲ್ಲಿ ಕುಳಿತಿರುವವನಂತೆ ಆಗಸದಲ್ಲೇ ನೋಡುತ್ತಾ ಕುಳಿತಿದ್ದೆ .
ಡಂ ಡಮಾರ್ ಎಂಬ ಭಯಂಕರ ಗುಡುಗಿನ ಸದ್ದು ಒಮ್ಮೆ ಮೈ ನಡುಕಿಸಿತ್ತಾದರು , ಮಾಮೂಲ್ ಅದ್ದರಿಂದ ಅಸ್ಟೇನು ಭಯವಾಗಲಿಲ್ಲ .ಸುಮ್ಮನೆ ಕುಳಿತಿದ್ದೇನಲ್ಲ ಹೊಟ್ಟೆ ಉರಿ ಈ ಯೋಚನೆ ಗಳಿಗೆ ತಕ್ಷಣ ಆವರಿಸಿಕೊಂಡು ಬಿಡುತ್ತವೆ . ಮಳೆ ನಿಂತಾಗ ಕೂಗುವ ಕೆಲವು ಹುಳ ಹಪ್ಪಟೆ ಗಳು ಟ್ರೂ ಟ್ರೂ ಪ್ರೂ ಕ್ರೂ .........ಹೀಗೆ ಕಾಗುಣಿತವೆ ಗೊತ್ತಿಲ್ಲದಂತೆ ಕಿರುಚಾಡುತ್ತಿದ್ದವು.ಇವೆಲ್ಲವೂ ಒಮ್ಮೆ ಒಟ್ಟಾಗಿ ನನ್ನನ್ನು ನಿದಾನವಾಗಿ ಗತದೆಡೆಗೆ ಕೊಂಡೈಯಲು ತಯಾರಾದಂತೆ ಭಾಸವಾಗುತಿತ್ತು . ನಾನೋ ಮೊದಲೇ ಭಾವುಕ ,ಅಂದ ಮೇಲೆ ಕೇಳಬೇಕೆ?
ಹೊರಳಿತು ನನ್ನಾ ಯೋಚನೆ ಬಾಲ್ಯದೆಡೆಗೆ , ಹೇಗಿತ್ತು ನಾ ಕಂಡ ಆ ನನ್ನ ಬಾಲ್ಯದ ದಿನಗಳು ಈಗ ಹೇಗಾಗಿದೆ .
೩ ಕಾಲಗಳಿಗೆ ತಕ್ಕಂತೆ ನನ್ನಾ ಬದುಕು ಕೂಡ ಬದಲಾಗುತ್ತಾ ಸಾಗುತಿತ್ತು .ಅಬ್ಬಾ ಅದೆಷ್ಟು ಆಟ ,ಮೋಜು ಮಸ್ತಿ ಮಾಡಿದ್ದೆನಾಗ . ಹೇಳತೀರದು ನನ್ನಾ ಸಂಭ್ರಮವನ್ನ . ಬದುಕು ಎಂದು ವೇಳಾಪಟ್ಟಿಯಾಗಿರಲಿಲ್ಲ .ಸ್ವಚ್ಚಂದವಾದ ಆಗಸದಲ್ಲಿ ಇರುವ ಹಕ್ಕಿಯಂತೆ ಎಲ್ಲಿ ಬೇಕಾದರು ಹಾರಾಡು , ಗೂಡು ಸೇರುವುದು ಮರೆಯದಿದ್ದರೆ ಸೈ.
ನನಗಿನ್ನೂ ನೆನಪಿದೆ ಆ ಬಾಲ್ಯದ ತುಂಟಾಟಗಳು , ಪಕ್ಕದಲ್ಲಿರುವವನ ಬಳಪ ಕದಿಯುವುದು ,ಅವನತ್ತಾಗ ಹಿರಿ ಹಿಗ್ಗುವುದು .ಸ್ವಲ್ಪ ತರಗತಿಯಲ್ಲಿ ಯಲ್ಲರಿಗಿಂತ ಚುರುಕಾಗಿದ್ದರಿಂದ ನಾನೆ ಕ್ಲಾಸ್ ಲೀಡರ್ ಆಗಿದ್ದೆ ,ಅಬ್ಬಾ ಎಷ್ಟು ಪಕ್ಷಪಾತಿ ಆಗಿದ್ದೆ ನಾನಾಗ , ನನಗೆ ಯಾರು ಆಗುವುದಿಲ್ಲವೋ ಅವರ ಹೆಸರೇ ಹಲಗೆಯ ಮೇಲೆ ಬರೆಯುತ್ತಿದ್ದೆ (ಅದು ಜಾಸ್ತಿ ಇಂಟು ಹಾಕಿ )ನೆನೆಸಿ ಕೊಂಡರೆ ನಗು ಬರುತ್ತದೊಮ್ಮೆ .
ಸಂಜೆ ಯಾದರೆ ಸಾಕು ಅಕ್ಕ ಅಣ್ಣನ ಜೊತೆ ಕೂತು ಬಾಯಿ ಪಾಠ ಮಾಡಲೇ ಬೇಕು ,ಮಗ್ಗಿ ,ನಕ್ಷತ್ರಗಳ ಹೆಸರು ,ಕಾಗುಣಿತ ,ವಾರಗಳು ,ತಿಥಿ .ಹೀಗೆ ಇನ್ನು ಏನೇನೋ .......ನಾನೋ ತುಂಟ .ಅದು ಅಲ್ಲದೆ ಚಿಕ್ಕವನಾದ್ದರಿಂದ ಸ್ವಲ್ಪ ಸಲುಗೆ ಬೇರೆ . ಆದರೂ ನಮ್ಮ ಅಪ್ಪನ ಒಂದು ಕಣ್ಣು ಸದಾ ನನ್ನಾ ಮೇಲೆಯೇ .
ಅಂದಿನ ಆಟಗಳು ಒಂದೇ ಎರಡೇ , ಕುಂಟಾ ಪಿಲ್ಲಿ ,ಚಿನ್ನಿ ದಾಂಡು,ಲಗೋರಿ , ಹಿಡಿಯೋ ಆಟ , ಚಪ್ಪೆ ಆಟ , ಕಟ್ಟೆ ಆಟ , ಕಬ್ಬಡಿ , ಕಂಬದ ಆಟ , ಮರ ಕೋತಿ .ಹೀಗೆ ಹತ್ತು ಹಲವು ...ಜೊತೆಗೆ ಕ್ರಿಕೆಟ್ ವೀಕ್ಷಣೆ (ಆಡಲು ಸೇರಿಸಿಕೊಳ್ಳುತ್ತಿರಲಿಲ್ಲ ,ಚಿಕ್ಕವ ಎಂಬ ಕಾರಣಕ್ಕೆ ).
ಮಳೆಗಾಳದಲ್ಲೋ ಸ್ಕೂಲಿಗೆ ಚಕ್ಕರ್ ಹೊಕೊದೆ ಮಜಾ ಕೊಡೊ ಸಂಗತಿ ,ಕಾಲು ನೋವು ,ತಲೆ ನೋವು ,ಜ್ವರ ಹೀಗೆ ದಿನಕ್ಕೊಂದು ಸುಳ್ಳು ,ಇನ್ನು ಮಜಾವಾದ ವಿಷಯ ಅಂದ್ರೆ ನಮ್ಮ ಮನೆ ಇಂದ ಸ್ಕೂಲಿಗೆ ಹೋಗೋ ದಾರಿಲಿ ಒಂದು ಕಾಲುವೆ ಇದೆ ,ಮಳೆ ಬಂತೆದರೆ ಸಾಕು ,ಮಾಸ್ತರ ಮುಂದೆ ಹಾಜರ್ ,ಸರ್ ಹಳ್ಳ ಬರುತ್ತೆ ರಜ ಕೊಡಿ .ಈಗ ಕೆಲವೊಮ್ಮೆ ಬಸ್ ಇಳಿದು ಮನೆಗೆ ಹೋಗುವಾಗ ಅನ್ನಿಸುತ್ತೆ ಎಷ್ಟು ಚೆಂದ ಆ ಬಾಲ್ಯ .

ಒಮ್ಮೊಮ್ಮೆ ಅನ್ನಿಸುತ್ತೆ ನಾನ್ಯಾಕೆ ಇಲ್ಲ ಆಗಿನ ಹಾಗೆ, ಮಳೆಗಾಲದಲ್ಲಿ ಆನೇಕಲ್ಲು ಬಿದ್ದ ತಕ್ಷಣ ಹೆಕ್ಕಲು ಓಡಿ ಹೋಗುತಿದ್ದ ಆ ಕಾಲುಗಳಿಗೆ ಇಂದೇಕೆ ಮುಜುಗರ ಯಾರದ್ರು ನೋಡಿಯರೆಂಬ , ಕಲ್ಲು ಕಂಡ ತಕ್ಷಣ ಎತ್ತಿ ಯಾವೋದು ಮರದತ್ತ ಎಸಯುತಿದ್ದ ಕೈಗಳೇಕೆ ಸುಮ್ಮನಾಗಿವೆ ?
ವ್ಯಕ್ತಿ ಬೆಳೆದ ತಕ್ಷಣ ,ಬಾಲ್ಯವನ್ನು ಮರೆತು ಬಿಡಬೇಕು ಎಂಬ ಕಾನೂನು ಏನಾದರು ಇದೆಯೇ ?
ಇಲ್ಲವೆಂದರೆ , ಮತ್ಯಾಕೆ ನಾವು ಬಾಲ್ಯವನ್ನು ಪನರ್ವರ್ತಿಸಲು ಹಿಂಜರಿಯುತ್ತೇವೆ?

ಇದೆಲ್ಲವನ್ನು ಗಮನಿಸಿದಾಗ ಅರಿಯುತ್ತೇವೆ ................ಬದಲಾಗಿದೆ .
ಅದು ಬಾವವೋ ,ನಾನೋ ಅಥವಾ ಬದುಕೋ ? ತಿಳಿಯದಾಗಿದೆ ?

ಬದುಕು , ಭಾವ ಮತ್ತು ನಾನು -೨

ಯೋಚನೆಗಳಲ್ಲೇ ಮಗ್ಧನಾಗಿದ್ದ ನನಗೆ ಅಂಬಾ ಎಂಬ ಗೌರಿಯ ಕೂಗು ಕೊಟ್ಟಿಗೆಯಿಂದ ಬಂದೊಡನೆ ,ವಾಸ್ತವಕ್ಕೆ ಬಂದೆ .ಕೈಯಲ್ಲಿದ್ದ ತಟ್ಟೆ ಹಿಡಿದು ಇನ್ನೇನಾದರೂ ಉಳಿದಿದೆಯೇ ಎಂದು ನಿಧಾನವಾಗಿ ಅಡುಗೆ ಮನೆಯತ್ತ ಹೊರಟೆ . ಹಾಲು ಕರೆಯಲು ತಯಾರಾಗುತಿದ್ದ ಅಮ್ಮ ನನ್ನ ನೋಡಿದೊಡನೆಯೇ ತನಗಿಟ್ಟುಕೊಂಡಿದ್ದ ೨ ಹಪ್ಪಳದಲ್ಲಿ ನಂಗೊಂದು ಎತ್ತಿ ಕೊಟ್ಟರು .(ಅಮ್ಮನ ಮನಸೇ ಹಾಗೆ ಅಲ್ಲವೇ , ನಮ್ಮ ಮೌನವನ್ನೇ ಅರ್ಥಮಾಡಿಕೊಂಡುಬಿಡುತ್ತದೆ),ನಾನೋ ಎಣ್ಣೆ ತಿಂಡಿ ಎಂದರೆ ಸಾಕು ,ನನ್ನೊಳಗಿನ ಬಕಾಸುರ ಎಚ್ಚೆತ್ತುಕೊಳ್ಳುತ್ತಾನೆ.
ತಲೆಗೆ ಸ್ವಲ್ಪ ಕೊಬ್ಬರಿ ಎಣ್ಣೆ ಹಾಕಿಕೋ ಎಂದು ಅಲ್ಲೇ ಬೇಲಿ ಕಟ್ಟಲು ಹೊರಟಿದ್ದ ಅಪ್ಪ ಹೇಳಿದರು , ಅಬ್ಬ ಶುರುವಾಯಿತು ನೋಡಿ , ಇಷ್ಟೊತ್ತು ಶಾಂತಿಯ ಪ್ರತೀಕವಾಗಿದ್ದ ನಮ್ಮ ಅಮ್ಮ , ಕಾಳಿಯ ಅವತಾರ ಎತ್ತಿ ಬಿಟ್ಟಿದ್ದರು . ಅದೇನೋ ಸ್ಟೈಲ್ ಅಂತೆ ಇಷ್ಟುದ್ದ ಕೂದಲು , ಯಾರ ಅದ್ರು ನೋಡ್ರೆ ಏನ್ ಅನ್ಕೊಳಲ್ಲ , ಪಕ್ಕದ ಮನೆ ಪುಟ್ಟಿ ನೋಡು ವಾರ ವಾರ ಕೂದಲು ಕಟ್ ಮಡ್ಸ್ತಾರೆ,ಒಂದು ಭಯ ಇಲ್ಲ ......................................................?
ನಮ್ ಅಮ್ಮನ ವಾದಕ್ಕೆ ಮಣಿದು ಮಾರನೆದಿನ ಕೂದಲು ಕಟ್ ಮಾಡಿಸುವುದಾಗಿ ಒಪ್ಪಿಕೊಂಡ ಮೇಲಷ್ಟೇ ಕೈಯಲಿದ್ದ ಅರ್ಧ ಹಪ್ಪಳ ಬಾಯಿಗೆ ಹೋಗಿದ್ದು .ರಾತ್ರಿಯಾಗ ತೊಡಗಿತ್ತು .ಸುಯ್ ಸುಯ್ ಶಬ್ದ ಮಾಡುತಿದ್ದ ಗಾಳಿ ಪ್ರಕೃತಿಗೆ ಜೋಗುಳ ಹಾಡುತ್ತಿದೆಯೇನೋ ಎಂಬ ಭಾಸ , ಬುರ್ಎಂದು ದಾರಾಕಾರವಾಗಿ ಸುರಿಯುತ್ತಿರುವ ಮಳೆ ,ಎಷ್ಟು ಕಂಬಳಿ ಹೊದ್ದರೂ ಸಾಲದೆಂಬಂತೆ ಮಾಡುತ್ತಿದೆ .ಇಷ್ಟು ಸಾಕಲ್ಲವೇ ಈ ಭಾವುಕನಿಗೆ ಗತಕ್ಕೆ ಸಾಗಲು .
ಯಾರೋ ಹೇಳಿದ ನೆನಪು ಸೋಲೇ ಗೆಲುವಿನ ಸೋಪಾನ . ನನ್ನ ಪ್ರೌಡಶಿಕ್ಷಣದ ಮೊದಲ ದಿನವೇ ನನಗಾನುಭುವ ಆಗುತ್ತದೆ ಎಂದು ನನ್ ಅಂದುಕೊಂಡಿರಲಿಲ್ಲ .೭ ನೇತರಗತಿಯವರೆಗೂ ರಾಜನಾಗಿ ಮೆರೆದಿದ್ದ ನನಗೆ , ಅದೇ ಹುಮ್ಮಸ್ಸು ೮ ನೇ ತರಗತಿಯಲ್ಲೂ ಮುಂದುವರಿಸುವಾಸೆಯಿಂದ , ಬೇಸಿಗೆ ರಜೆಯನ್ನು ತುಂಬಾ ಕಷ್ಟವಾಗೆ ಕಳೆದೆ .ಬಂತು ನೋಡಿ ಆ ದಿನ , ಬೆಳಿಗ್ಗೆ ೬ ಕ್ಕೆ ಎದ್ದು ಅಭ್ಯಂಜನ ಮಾಡಿ ,ಬಿಸಿ ಬಿಸಿ ಕಾಫಿ ಹೀರಿ ಅಮ್ಮ ಕೊಟ್ಟ ನಿರ್ ದೋಸೆ ತಿಂದು ರೆಡಿ ಆಗಿ ಕುಳಿತಿದ್ದೆ .ಶಾಲೆ ಶುರುವಾಗೋದು ೯.೩೦ ಕ್ಕಾದರು ೫ ಕಿ ಮಿ ನಡೆಯಬೇಕಾದ್ದರಿಂದ ೧.೩೦ ತಾಸು ಮೊದಲೇ ಹೊರಡಬೇಕಿತ್ತು (ನಾನು ಬೇರೆ ಹೊಸಬ ,ಸಮಯ ಸ್ವಲ್ಪ ಜಾಸ್ತಿಯೇ ಬೇಕಾಗುತ್ತಿತ್ತು,ಬಸ್ಸಿನಲ್ಲಿ ಹೋಗುವಷ್ಟು ಸ್ಥಿತಿವಂತರಾಗಿರಲಿಲ್ಲ ಆಗ ).
ನಡಿಗೆ ಎಂದ ಮೇಲೆ ಗುಂಪು ಇದ್ದೆ ಇರುತ್ತೆ .ನಮ್ಮದು ಹಾಗೆ ,ನಮ್ಮ ಮನೆಯಿಂದ ಶುರು .ಆ ಗುಂಪಿಗೆ ನನ್ನ ಅಣ್ಣನೇ ನಾಯಕ ,ಹಿಂಬಾಲಕರು ನಾವು . ಮೊದಲು ಶುರುವಾಗೋದು ಅಡಿಕೆ ತೋಟ ನಂತರ ಸ್ವಲ್ಪ ದೂರ ಗುಡ್ಡ , ಗುಡ್ಡ ಹತ್ತಿ ಸ್ವಲ್ಪ ದೂರ ಹೋದರೆ ಒಂದು ಊರು ಸಿಗುತ್ತೆ ,ಅಲ್ಲಿ ಮತ್ತೊಂದು ತಂಡ ನಮ್ಮನ್ನು ಕೂಡಿಕೊಳ್ಳುತಿತ್ತು (ನೆನಪಿರಲಿ ಆದಿಪತಿ ನನ್ನ ಅಣ್ಣನೇ ).ನಂತರ ಶುರುವಾಗೋದೇ ಗದ್ದೆ ,ಮಧ್ಯೆ ಒಂದು ಹಳ್ಳ .ಮಳೆಗಾಲವಾದ್ದರಿಂದ ಮೊದಲು ನನ್ನ ಅಣ್ಣ ಹಾಗೂ ಇರುವವರಲ್ಲೇ ಸ್ವಲ್ಪ ದೊಡ್ಡವನು ಹಳ್ಳದ ಮಧ್ಯಕ್ಕೆ ಹೋಗಿ ನಿಧಾನವಾಗಿ ಒಬ್ಬಬ್ಬರನ್ನೇ ಆಚೆ ದಡಕ್ಕೆ ಸೇರಿಸುತ್ತಿದ್ದರು (ಅಲ್ಲಿ ಹುಡುಗ ,ಹುಡುಗಿ ಎಂಬ ಬೇಧ ಇರಲಿಲ್ಲ ) ,ನನಗೋ ನದಿಯನ್ನೇ ದಾಟಿದಷ್ಟು ಖುಶಿ .ಅಲ್ಲಿಂದ ಮುಂದೆ ಸ್ವಲ್ಪ ದೂರ ಕಾಡು ,ನಾನು ಯಾವಾಗಲು ಮಧ್ಯದಲ್ಲೇ ಇರುತಿದ್ದೆ(ಸ್ವಲ್ಪ ಪುಕ್ಕಲ ಅದಕ್ಕೆ ) .
ಆಮೇಲೆ ಸಿಗುವುದೇ ಅಲ್ಲೊಂದು ,ಇಲ್ಲೊಂದು ಮನೆಗಳು ,ಕೊನಯದಾಗಿ ಡಾಂಬರು ರಸ್ತೆ .ಈಗ ಶುರುವಾಗುತ್ತಿತ್ತು ನಮ್ಮ ನಾಯಕನ ಪಾಲಿಸಿಗಳು ,ರಸ್ತೆ ಬದಿಯಲ್ಲೇ ಹೋಗಬೇಕು ,ಒಬ್ಬರ ಹಿಂದೆ ಒಬ್ಬರು ,ಓಡುವಹಾಗಿಲ್ಲ ,ತಪ್ಪಿದರೆ ದಂಡಿಸುವ ಅಧಿಕಾರವಿತ್ತು .
ಶಿಸ್ತಿನ ಸಿಪಾಯಿಯಂತೆ ತಲುಪಿದ್ದೆ ಮೊದಲ ದಿನ ಹೈ ಸ್ಕೂಲಿಗೆ ,ಮೊದಲು ಪ್ರಾಥನೆ ,ಅನಂತರ ದಿನಪತ್ರಿಕೆಯ ಮುಖ್ಯ ಅಂಶ ಗಳನ್ನೂ ಓದುತಿದ್ದರು ,ನಂತರ ತರಗತಿಗಳಿಗೆ ಪ್ರವೇಶ .ಮೊದಲ ಬೆಂಚ್ ಅಲ್ಲೇ ಕುಳಿತಿದ್ದೆ .ಅಧ್ಯಾಪಕರು ಬಂದು ಎಲ್ಲರ ಹೆಸರು ,ಊರು ,ಹಿಂದಿನ ತರಗತಿಯಲ್ಲಿ ತೆಗೆದ ಅಂಕದ ವಿವರ ಕೇಳಿ , ಎಲ್ಲರನ್ನು ನಿಲ್ಲಿಸಿ ಎತ್ತರದ ಪ್ರಕಾರ ಕೂರಿಸುತ್ತಾ ,ನನ್ನನ್ನು ಕೊನೆ ಬೆಂಚ್ಗೆ ವರ್ಗಾಯಿಸಿದ್ದರು .
ಹೀಗೆ ಪ್ರತಿಯೊಂದು ವಿಷಯದ ಅಧ್ಯಾಪಕರು ಬಂದು ಅವರ ಪರಿಚಯ ಮತ್ತು ನಮ್ಮ ಪರಿಚಯ ಮಾಡಿಕೊಂಡು ಹೋಗುತ್ತಿದ್ದರು .ಸಂಜೆ ಮನೆಗೆ ಮರಳುವಾಗ ಬೆಳಿಗ್ಗೆ ಇದ್ದ ಯಾವ ಕಾನೂನು ಇಲ್ಲ .ಮೈನ್ ರೋಡ್ ನಿಂದ ಗದ್ದೆಯವರೆಗೂ ಓಡಿಕೊಂಡೆ ಬರುತಿದ್ದೆವು .ಗದ್ದೆಗೆ ಬಂದ ಮೇಲೆ ಶುರುವಾಗುತ್ತಿತ್ತು ನಮ್ಮ ಆಟ ,ನಿರ್ ಹಾರಿಸುವುದು,ಓಟದ ಸ್ಪರ್ದೆ .....ಹೀಗೆ ಸರಿಯಾಗಿ ಸಂಜೆಗೆ ಮನೆ ತಲುಪುತಿದ್ದೆ .ಮೊದಲ ದಿನವಾದ್ದರಿಂದ ಅಮ್ಮ ನನ್ನ ಬರುವಿಕೆಗೆ ಕಾಯುತಿದ್ದರು . ಹೀಗೆ ನಾಳೆ ಅದೇ ದಾರಿಯಲ್ಲಿ ನಡೆದು ಕೊಂಡು ಹೋಗೋಣ ಎಂದು ಯೋಚಿಸುತ್ತಾ ಗಾಢವಾದ ನಿದ್ರೆಗೆ ಯಾವಾಗ ಶರಣಾದೇನೋ ನನಗೆ ತಿಳಿದಿರಲಿಲ್ಲ .......
(ಮುಂದುವರಿಯುತ್ತದೆ )

ನನ್ನೀ ವಿರಹ

ನಿನ್ನೆ ಮೊನ್ನೆಯವರೆಗೂ
ನಿನ್ನಲ್ಲೇ ನಾನು ಎನ್ನುತಿದ್ದ
ನೀನು ಇಂದೇಕೆ ಹೀಗಾಗಿರುವೆ ,
ನೀನು ಅಲ್ಲೇ , ನಾನು ಇಲ್ಲೇ
ಅನ್ನುತ್ತಿರುವೆಯಲ್ಲ

ರಿಂಗಾದೊಡನೆ ನನ್ನದೇ
ಕರೆ ಏನೋ ಎಂದು
ಸ್ವೀಕರಿಸುತಿದ್ದ ಆ ನಿನ್ನ ಮೊಬೈಲ್
ಕರೆ ಮಾಡಿದೊಡನೆಯೇ ಸ್ವೀಕರಿಸುತ್ತಿಲ್ಲ
ಎಂಬ ಹೇಳಿಕೆ ಕೊಡುತ್ತಿಹುದಲ್ಲ

ವಾರಕ್ಕೊಂದು ನೆವ ಹೇಳಿ
ನನ್ನಲ್ಲಿಗೆ ಬರುತಿದ್ದ ನೀನು
ತಿಂಗಳಾದರೂ ನೆರಳು
ತೋರಿಸುತ್ತಿಲ್ಲವಲ್ಲ ನನ್ನೆಡೆಗೆ .

ಇಂದೇಕೆ ಬೇಡವಾಗಿದೆ ನಿನಗೆ
ನನ್ನಾ ಮತ್ತು ಬರಿಸುವ
ಬಿಸಿ ಉಸಿರು ,ಲೋಕವನ್ನೇ
ಮರೆಸುವ ಬಿಗಿ ಬಾಹುಬಂಧನ ,
ನಕ್ಕು ನಲಿಸುವ ತುಂಟ
ಮಾತುಗಳು !

ಸ್ವಲ್ಪ ಸ್ವಲ್ಪ ಅರಿತಿರುವೇನು ನಾನೀಗ
ನೆನಪಾಗುತಿದೆ ಯಾರೋ ಯೋಗಿ ಹೇಳಿದ
ಮಾತುಗಳು "ಮೀನಿನ ಹೆಜ್ಜೆ ,ಹೆಣ್ಣಿನ
ಮನಸ್ಸು ಅರಿಯುವುದು ಅಸಾಧ್ಯ "
ಇಂತಿ ನಿನ್ನಾ ಇನಿಯ ಈ ವಿನಯ 

ಚಪ್ಪಲಿ (ಪಾದುಕೆ ) ಏನು ನಿನ್ನ ಮಹಿಮೆ ?

ಇಂದು ನಮ್ಮೂರಿನಲ್ಲಿ ಚುನಾವಣೆ , ಕಾರಣಾಂತರಗಳಿಂದ ನನಗೆ ಹೋಗಲಾಗಿಲ್ಲ , ಅದರ ಬಗ್ಗೆಯೇ ಯೋಚಿಸುತ್ತಾ ಕುಳಿತಿದ್ದಾಗ ಒಂದು ವಿಷಯ ತಲೆಯಲ್ಲಿ ಬಂತು ಅದನ್ನೇ ನಿಮ್ಮಲ್ಲಿ ಹಂಚಿಕೊಂಡಿದ್ದೇನೆ .ಈ ಬಾರಿ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಪಡೆದದ್ದು ಯಾರು ಹೇಳಿ ನೋಡೋಣ , ರಾಜಕೀಯ ಪಕ್ಷಗಳೇ ? ನಾಯಕರೇ ? ಅಥವಾ ಇನ್ನ್ಯಾವುದೋ ಸಂಘ ಸಂಸ್ಥೆಯೇ ? ಖಂಡಿತ ಅಲ್ಲ , ಅದು ನಮ್ಮಾ ಚಪ್ಪಲಿ (ಪಾದುಕೆ ).ಹೌದು ವಿಪರ್ಯಸವೇ ಆದರೂ ನಿಜ ಸಂಗತಿ .ಆದರೂ ಮೆಚ್ಚಲೇ ಬೇಕು ಇದನ್ನ ,ಯಾವುದೇ ಪಕ್ಷ , ಮಾಧ್ಯಮದ ಸಹಾಯವಿಲ್ಲದೆ ಸ್ವತ್ಯಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದುಬಿಟ್ಟಿದೆ .ಈ ಬಾರಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು ಚಪ್ಪಲಿ ಎಸೆದಿರುವ ಸನ್ನಿವೇಶಗಳು .ಮಾಮೂಲಿನಂತೆ ನಮಗೆ ವಿದೇಶಿ ಮೋಹ ಅಲ್ಲವೋ ,ಅದಕ್ಕೆ ಇಲ್ಲೂ ಕೂಡ ನಮ್ಮ ಕಥಾ ನಾಯಕ ಮೊದಲು ಹುಟ್ಟಿಕೊಂಡಿದ್ದು ಅಲ್ಲೇ . ಅದು ಅಂತಿಂಥ ದಾಳಿಯಲ್ಲ , ಅಮೆರಿಕೆಯ ಮಾಜಿ ಅಧ್ಯಕ್ಷನ ಮೇಲೆ .ಸ್ವಲ್ಪದರಲ್ಲೇ ಗುರಿ ತಪ್ಪಿತು ಅಷ್ಟೇ .ಈಗ ನಮ್ಮಲಿಗೆ ಬರೋಣ ಮೊದಲ ದಾಳಿ ನಮ್ಮ ಗೃಹ ಸಚಿವರ ಮೇಲೆ , ನಂತರ ಅಡ್ವಾಣಿಯವರ ಮೇಲೆ ........ಕೊನೆಗೆ ನಮ್ಮ ಮುಖ್ಯಮಂತ್ರಿ .ಈಗ ಯಾರು ಯಾರ ಮೇಲೆ ಎಸೆದರು ? ಯಾಕೆ ? ನಮಗೆ ಬೇಡವಾದ ವಿಷಯ .ಮೇಲಿನ ಎಲ್ಲ ಸನ್ನಿವೇಶದಲ್ಲೂ ಒಂದೋ ಆ ವ್ಯಕ್ತಿಯನ್ನು ಖಂಡಿಸಲೋ ಅಥವಾ ಅವನ ಪಕ್ಷವನ್ನ ಖಂಡಿಸಲೋ ಪಾದುಕೆಯ ಬಳಕೆಯಾಗಿದೆ . ಗಮನಿಸಬೇಕಾದ ಅಂಶ ಎಲ್ಲ ಸಂದರ್ಭದಲ್ಲೂ ಪಾದುಕೆಯನ್ನೇ ಯಾಕೆ ಬಳಸಿದ್ದಾರೆ ಎಂದು . ಹಾಗಾದರೆ ಪಾದುಕೆ ಕೆಡುಕು ಉಂಟು ಮಾಡುವಂಥದ್ದೆ,ಅಪಶಕುನದ ಪ್ರತೀಕವೇ .ಹೌದು ಎಂಬುದು ನಿಮ್ಮ ಉತ್ತರವಾದರೆ ನನ್ನದೊಂದಿಷ್ಟು ಪ್ರಶ್ನೆಗಳಿವೆ .ಪಾದುಕೆ ಕೆಡುಕು ಉಂಟು ಮಾಡುವಂಥದ್ದು ಎಂದ ಮೇಲೆ , ದೇವರ ಪಾದುಕೆಗಳನ್ನೇಕೆ ಪೂಜಿಸಬೇಕು ಅಥವಾ ಯಾವುದೊ ಮಠದ ಗುರುವಿನ ಪಾದುಕೆಗಳಿಗೆಕೆ ಅಡ್ಡ ಬೀಳಬೇಕು ? ನಾವಾಗಿ ನಾವೇ ಕೆಟ್ಟದ್ದನ್ನು ಬಯಸಿದಂತಾಗುವುದಿಲ್ಲವೇ?ಅಪಶಕುನದ ಪ್ರತೀಕವೆಂದ ಮೇಲೆ ಅಷ್ಟು ಮೊತ್ತ ವೆಚ್ಚ ಮಾಡಿ ಗಾಂಧೀಜಿಯ ಪಾದುಕೆಗಳನ್ನು ನಮ್ಮಲಿಗೆ ತರುವ ಅವಶ್ಯಕತೆ ಇತ್ತೇ ?(ವಿಜಯ್ ಮಲ್ಯ ತಂದದ್ದು ನೆನಪಿರಬಹುದು ನಿಮಗೆ ).ಇಲ್ಲವೆಂದರೆ ಪಾದುಕೆ ಎಲ್ಲೋ ಒಂದು ಕಡೆ ನಮ್ಮ ಸಂಸ್ಕೃತಿಯ ಭಾಗವೆನ್ನುತ್ತಿರ ?ಸೂಚನೆ :ಇಲ್ಲಿ ಯಾರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶ ನನ್ನದಲ್ಲ , ನನಗನ್ನಿಸಿದ್ದನ್ನ ಬರೆದಿದ್ದೇನೆ ಅಷ್ಟೇ .

ಬದುಕು ಭಾವ ಮತ್ತು ನಾನು - ೪ ( ನನ್ನ ಮೊದಲ ಕುಪ್ಪಳ್ಳಿ ಪಯಣ )

ಬೇಗ ಹೊರಡೋ ಬಿಸಿಲು ಜಾಸ್ತಿಯಾದ ಮೇಲೆ ಅಷ್ಟು ದೂರ ನಡಿಯೋಕೆ ಸುಸ್ತಾಗುತ್ತೆ ,ಬಚ್ಚಲು ಮನೆಯಲ್ಲಿ ನನ್ನ ಗಾಯನವನ್ನು ಪ್ರದರ್ಶಿಸುತಿದ್ದ ನನಗೆ ಅತ್ತ ಕಡೆ ಇಂದ ಅಮ್ಮನ ಕೂಗು ಕೇಳಿಬಂತು .ಹೇರಂಭಾಪುರ ಎಂಬಲ್ಲಿ ಒಂದು ಊಟದ ಮನೆ ಇತ್ತು , ಅಮ್ಮ ಹಿಂದಿನ ದಿನವಷ್ಟೇ ಹೊಗಿಬಂದಿದ್ದರಿಂದ ಈಗ ಸರತಿ ನನ್ನದಾಗಿತ್ತು . ಬೇಗ ಬೇಗ ಸಂಧ್ಯಾವಂದನೆ , ಪೂಜೆ ಮುಗಿಸಿ ಹೊರಡಲು ಅಣಿಯಾದೆ . ನಮ್ಮ ಮನೆ ಇಂದ ೫ ಕಿ ಮಿ ಅಷ್ಟೇ .ಒಳದಾರಿ ಯಾಗಿದ್ದರಿಂದ ಇಷ್ಟು ಅಂತರ , ಮುಖ್ಯ ಮಾರ್ಗವಾಗೆ ಹೋಗುವುದಾದರೆ ೧೦ ಕಿ ಮಿ ಆಗುತ್ತೆ .ಸಾಮಾನ್ಯವಾಗಿ ಬೇಸಿಗೆಯಲ್ಲಿ ನಮ್ಮ ಕಡೆ ದಿನಕ್ಕೊಂದು ಊಟದ ಮನೆ ಇದ್ದೆ ಇರುತ್ತೆ .ಹೋಗಲೇಬೇಕು ಜನಬಳಕೆ ಇರಬೇಕಲ್ಲ ಅದಕ್ಕೆ . ಬಿಳಿ ಪಂಚೆ ,ಶರ್ಟ್ ಹಾಗೆಯೇ ದಪ್ಪ ಕೆಮ್ಪಂಚು ಇರುವ ಶಲ್ಯ ಧರಿಸಿ ಹೊರಟೆ . ಈ ಹೇರಂಭಾಪುರದ ಬಗ್ಗೆ ನಿಮಗೆ ಹೇಳಲೇ ಬೇಕು . ಇಲ್ಲಿರುವ ದೇವಸ್ತಾನದ ಹೆಸರು ಜಲದುರ್ಗಂಬ ಎಂದು .ವಿಶೇಷ ಏನಪ್ಪಾ ಅಂದ್ರೆ ಇಲ್ಲಿ ವರ್ಷದ ಎಲ್ಲಾ ಕಾಲದಲ್ಲೂ ಅಮ್ಮನವರು ಇರುವ ಗರ್ಭಗುಡಿ ಯಲ್ಲಿ ಸದಾ ನೀರು( ಜಲ ಏಳುತ್ತದೆ ) ಇದ್ದೆ ಇರುತ್ತೆ . ಕುಪ್ಪಳ್ಳಿ ಗೆ ನೀವು ಬೇಟಿ ಕೊಡುವುದಾದರೆ ಇಲ್ಲಿಗೂ ಒಮ್ಮೆ ಹೋಗಿ ಬನ್ನಿ .ಹೇರಂಭಾಪುರದ ಗುಡ್ಡದ ಮೇಲೆ ಬಂದು ನಿತ್ತಾಗ ನನಗೆ ನೆನಪಾಗಿದ್ದೆ ನನ್ನ ಮೊದಲ ಕುಪ್ಪಳ್ಳಿ ಪಯಣ .ಆಗ ನಾನಿನ್ನು ೯ ನೇ ತರಗತಿಯಲ್ಲಿದ್ದೆ , ನಮಗೆ ತೀರಾ ಹತ್ತಿರವಿದ್ದರೂ ಒಮ್ಮೆಯೂ ನೋಡಿರಲಿಲ್ಲ ನಾನು ಕುಪ್ಪಳ್ಳಿಯನ್ನು .ಅದು ಒಂದು ಕಾರಣವಾದರೆ ಇನ್ನೊಂದು ಕಾರಣ ,ಹಿಂದಿನ ವರ್ಷವಿಡಿ ಬಾಯಿ ಪಾಠ ಮಾಡಿದ್ದ " ಓ ನನ್ನ ಚೇತನ ಆಗು ನೀ ಅನಿಕೇತನ " ಪದ್ಯ .ಈ ಪದ್ಯ ವನ್ನು ನಾವು (ಅಂದರೆ ೮ ನೇ ತರಗತಿಯವರು ) ಎಲ್ಲರು ಸೇರಿ ೧೦ ನೇ ತರಗತಿಯವರಿಗೆ ಬಿಳ್ಕೊಡುಗೆ ಕೊಡುವಾಗ ಹಾಡಿದ್ದೆವು , ಇಲ್ಲಿ ನಮ್ಮ ಕನ್ನಡ ಶಿಕ್ಷಕರನ್ನು ನಾನು ನೆನಪಿಸಿಕೊಳ್ಳಲೇಬೇಕು . ಸತತ ಒಂದು ತಿಂಗಳು ಈ ಹಾಡನ್ನು ರಾಗ ಪೂರ್ಣವಾಗಿ ಹಾಡಲು ಅಭ್ಯಾಸ ಮಾಡಿಸಿದ್ದರು ಅವರು ( ನಿಮಗಿದೋ ಒಂದನೇ ಸಾರ್ ).ಅಂತು ಕಾಲ ಕೂಡಿ ಬಂತು , ಒಂದು ಶನಿವಾರ ನಾವು ೮ ಮಂದಿ ಕೂಡಿ ಹೋಗುವುದು ಎಂದು ನಿರ್ಧರಿಸಿದೆವು .ನಮ್ಮಲಿ ೪ ರ ಬಳಿ ಸೈಕಲ್ ಇತ್ತು (ನನ್ನ ಬಳಿಯೇ ಇರಲಿಲ್ಲ , ಹಾಗೆಯೇ ನನಗೆ ಇಬ್ಬರನ್ನು ಕೂಡಿಸಿಕೊಂಡು ಹೊಡಿಯೋಕೆ ಕೂಡ ಬರುತ್ತಿರಲಿಲ್ಲ ).ಅದರಲ್ಲಿ ೩ ವರಿಗೆ ಸೈಕಲ್ ಹೊಡೆಯಲು ಬರುತ್ತಿರಲಿಲ್ಲ (ಹೆಸರು ನೆನಪಿದೆ ಅದಕ್ಕೆ ಬರೆದುಬಿಡುತ್ತೇನೆ : ಇನ್ಜಿತ್ , ಕೀರ್ತಿ , ಸುಮಂತ್ , ಸಂದೇಶ ,ಸಂತೋಷ ,ಸುನೀಲ, ಮಂಜುನಾಥ ).ಆ ಶನಿವಾರ ಮುಖ್ಯಶಿಕ್ಷಕರಲ್ಲಿ ಮನವಿಮಾಡಿಕೊಂಡು ಸ್ವಲ್ಪ ಬೇಗೆನೆ ಹೊರೆಟೆವು .ಒಂದು ಅರ್ಧ ಕಿ ಮಿ ಇಳಿಜಾರ್ ಆದರೆ ಇನ್ನೊಂದು ಕಿ ಮಿ ಉಬ್ಬು . ಹೀಗೆ ಏನೋ ಹರಟುತ್ತ , ಕುಣಿಯುತ್ತ ಹೋಗುತ್ತಿದ್ದೆವು . ಒಟ್ಟು ೧೦ ಕಿ ಮಿ ಕ್ರಮಿಸಬೇಕಿತ್ತು . ಅರ್ಧ ದಾರಿಗೆ ಬಂದಾಗ ಸಿಗುವುದೇ ಈ ಹೇರಂಭಾಪುರ.ಅಲ್ಲಿಂದ ಸುಮಾರು ೨ ಕಿ ಮಿ ಗಳಷ್ಟು ದೂರ ಕಿರಿದಾದ , ತುಂಬಾ ತಿರುವುಗಳಿರುವ ಇಳಿಜಾರು . ಎಲ್ಲರು ಸೈಕಲ್ ನಿಲ್ಲಿಸಿ , ಎಚ್ಚರಿಕೆಯಿಂದ ಬರುವಂತೆ ಹೇಳಿ ನಾನು ಹಾಗು ಇನ್ನೊಬ್ಬ ಮುಂದೆ ಹೊರೆಟೆವು . ಬೇರೆಯವರಿಗೆ ಬುದ್ದಿ ಮಾತು ಹೇಳಿದ ನಾವು , ಅದನ್ನೇ ಉಲ್ಲಂಘಿಸಿ ಹೋಗುತ್ತಿದ್ದೆವು . ೨ ಕಿ ಮಿ ಬಂದು ಸೈಕಲ್ ನಿಲ್ಲಿಸಿ ಉಳಿದವರ ಬರುವಿಕೆಗಾಗಿ ಕಾಯುತಿದ್ದೆವು .೧ , ೨ , ಉಹು ಬರಲೇ ಇಲ್ಲ ೩ ನೇ ಯದು . ಕಾದು ಕಾದು ಹಿಂತುರುಗಿ ಹೋಗಿ ನೋಡಿದರೆ ಅಲ್ಲಾಗಲೇ ಆಗಿತ್ತು ಅಪಘಾತ . ಬ್ರೇಕ್ ಫೈಲುರ್ ಆಗಿದ್ದರಿಂದ ಅವನು ಸೈಕಲ್ ಅನ್ನು ಅಲ್ಲೇ ಇದ್ದ ಪಕ್ಕದ ದರೆಗೆ ತೆಗೆದುಕೊಂಡು ಹೋಗಿ ಗುದ್ದಿದ್ದ . ಕಾಲು ಮುರಿದಿತ್ತು , ಹಿಂದಗಡೆ ಕುಳಿತವನಿಗೆ ಏನು ಆಗಿರಲಿಲ್ಲ . ಅದೃಷ್ಟ ಚೆನ್ನಾಗಿ ಇತ್ತು ಇನ್ ಒಂದು ಪರ್ಲಂಗ ಮುಂದೆ ಬಂದಿದ್ದಾರೆ ೩೦ ಅಡಿ ಧರೆ ಇಂದ ಬಿದ್ದು ಇಬ್ಬರು ಪರಶಿವನ ಪಾದಸೇರಿಬಿಡುತ್ತಿದ್ದರು .ಅಷ್ಟರಾಗಲೇ ಇನ್ನೊಬ್ಬನ ಕೂಗಿಗೆ ಕೆಳಗಡೆ ಕೆಲಸ ಮಾಡುತಿದ್ದ ತೋಟದವರು ಬಂದು ಅವನನ್ನು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ತೆ ಮಾಡಿ ಆಗಿತ್ತು .ಆದರೆ ನಮ್ಮಲ್ಲಿ ಒಬ್ಬ ಅವರೊಟ್ಟಿಗೆ ಹೋಗಬೇಕಿತ್ತು , ನಾಯಕನಾಗಿ ಆ ಕ್ಷಣ ನಾನೇ ಹೋಗಬೇಕಿತ್ತು ಆದರೆ ನಾ ಅದನ್ನ ಮಾಡಲಿಲ್ಲ ಎಂಬ ಕೊರಗು ಈಗಲೂ ಇದೆ ನನಗೆ . ಅವನ ಜೊತೆ ಇನ್ನೊಬ್ಬನನ್ನು ಕಳಿಸಿ ನಾವ್ ೬ ಮಂದಿ ಸ್ವಲ್ಪ ಹೊತ್ತು ಅಲ್ಲೇ ಯೋಚಿಸುತ್ತಾ ಕುಳಿತವು , ಮುಂದೇನು ಮಾಡುವುದೆಂದು ?ವಾಪಸ್ ಹೋದರೆ ಇಷ್ಟು ಹೊತ್ತಿಗಾಗಲೇ ಶಾಲೆ ಈರುವ ಊರಲ್ಲಿ ಇಲ್ಲ ಸುದ್ದಿ ಆಗಿ ಬಿಟ್ಟಿರುತ್ತೆ , ಕಂಡಕಂಡವರಿಗೆಲ್ಲ ಉತ್ತರಿಸಬೇಕು ? ಶಾಲೆಯಲ್ಲಿ ಹೆಡ್ ಮಾಸ್ತರ ಕೋಪಕ್ಕೆ ಗುರಿಯಾಗಬೇಕು ( ಮುಖ್ಯವಾಗಿ ನಾನು ). ಆ ಕ್ಷಣಕ್ಕೆ ನನ್ನ ಕ್ರಿಮಿನಲ್ ತಲೆ ಕೆಲಸ ಮಾಡಿಟ್ಟು , ಕಾವಲಿ ಕಾಯಿದಾಗ ತುಪ್ಪ ಸುರಿಯುವುದು ಬೇಡ, ಮುಂದುವರಿಸೋಣ ನಮ್ಮ ಪಯಣ ಅಂದೇ . ಎಲ್ಲರಿಂದ ತೀವ್ರ ಆಕ್ಷೇಪ ಬಂದರು ಎಲ್ಲರಿಗು ಸಮಾದಾನ ಮಾಡಿ ಹೊರಡಿಸಿಕೊಂಡು ಹೊರಟೆ .ಈಗ ಮತ್ತೊಂದು ಸಮಸ್ಯೆ ನನಗೂ ಮತ್ತು ಇನ್ನೊಬ್ಬ , ಇಬ್ಬರಿಗೂ ಡಬ್ಬಲ್ ಹೊಡೆಯಲು ಬರುತ್ತಿರಲಿಲ್ಲ , ಕೊನೆಗೂ ಹೇಗೋ ಧೈರ್ಯಮಾಡಿ ಆ ಕೆಲಸ ನಾನೇ ವಹಿಸಿಕೊಂಡೆ .ಅಂತು ಇಂತೂ ಬಂದಿತ್ತು ಕುಪ್ಪಳ್ಳಿ , ಆ ೨ ಘಂಟೆ ನಾವು ಎಲ್ಲವನ್ನು ಮರೆತು ಕುಪ್ಪಳ್ಳಿ ಯನ್ನು ಮನಸಾರೆ ಅನುಭವಿಸಿದ್ದೆವು .ಎಲ್ಲ ನನ್ನದುಕೊಂಡಂತೆ ಆಗಿತ್ತು , ನಾವು ಮನೆಗಳಿಗೆ ಹೋಗುವಾಗ ರಾತ್ರಿ ಆಗಿತ್ತು . ಮರುದಿನ ಶಾಲೆಯಲ್ಲಿ ಸ್ವಲ್ಪ ಬೈಗುಳ ಬೈಸಿಕೊಂಡರು ಅಷ್ಟೇನೂ ಬೇಜಾರಾಗಲಿಲ್ಲ . ಕಹಿ ಘಟನೆ ನಡೆಯಬಾರದಿತ್ತು ಏನು ಮಾಡುವುದು ಎಲ್ಲವು ಮುಗಿದು ಹೋಗಿತ್ತು .ಮತ್ತೆ ಆ ಸ್ನೇಹಿತನ ಮನೆಗೆ ಎಲ್ಲರು ಹೋಗಿ ಅವನ ಯೋಗಕ್ಷೇಮ ವಿಚಾರಿಸಿಕೊಂಡು ಬಂದೆವು .ಮತ್ತೊಂದು ತಿಂಗಳಲ್ಲಿ ಅವ ಸರಿಯಾಗಿದ್ದ .ಹೀಗಿತ್ತು ನನ್ನ ಕುಪ್ಪಳ್ಳಿ ಪಯಣ .ಹೀಗೆ ಹಳೆಯದನ್ನು ಯೋಚಿಸುತ್ತಾ ನಾನು ದೇವಸ್ಥಾನದ ಹತ್ತಿರ ಬಂದಾಗಿತ್ತು , ಬಾಳೆಲೆ ನನ್ನೇ ನೋಡುತ್ತಿತ್ತು . ಹಃ ಹಿ ಹೀ Laughing out loud

ಬದುಕು , ಭಾವ ಮತ್ತು ನಾನು - ೩

"ಸಂಪ್ರತಿ ವಾರ್ತಃ ಶುಯನ್ತಃ , ಪ್ರವಚಕಃ ಬಲದೇವಾನಂದ ಸಾಗರಃ" , ರೇಡಿಯೋದಲ್ಲಿ ಬರುತಿದ್ದ ಸಂಸ್ಕೃತ ವಾರ್ತೆಯ ಮೊದಲ ಸಾಲು ಕಿವಿಗೆ ಬೀಳುತಿದ್ದಂತೆ ,ನನಗೆ ಸಮಯದ ಅರಿವು ಮೂಡಿಸಿ ಎದ್ದೇಳಲು ಪ್ರೇರಿಪುಸುತಿತ್ತು.ಹೊರಗಡೆ ಜಡಿ ಮಳೆ ಜಿನುಗುತ್ತಿತ್ತು .ಅದಾಗಲೇ ಸಮಯ ೭.೦೦ ಘಂಟೆ ಆಗಿತ್ತು , ಕ್ಷೌರ ಮಾಡಿಸಲು ಬೇರೆ ಹೋಗಬೇಕಾದ್ದರಿಂದ ಲಗುಬಗನೆ ಎದ್ದು ಬಚ್ಚಲು ಮನೆ ಕಡೆ ಹೋಗಿ ಮುಕ ತೊಳೆದುಕೊಂಡು ಬಂದು ಒಂದು ಭರ್ಜರಿ ಲೋಟ ಕಾಫಿ ಹಿರಿ ಹೊರಡಲನುವಾದೆ .
ಹಿಂದಿನ ದಿನ ಯೋಚಿಸಿದಂತೆ ನಡಿಗೆ ಪ್ರಾರಂಭವಾಯ್ತು .ತೋಟ ದಾಟಿ ಗುಡ್ಡಕ್ಕೆ ಬಂದೋನೆ ಮೊದಲು ಕಾಲು ನೋಡಿ ಕೊಂಡೆ , ಅಗೋ ನೋಡಿ ನನ್ನ ಊಹೆ ಸರಿಯಾಗೇ ಇತ್ತು .ದೊಡ್ಡ ೨ ಇಂಬಳಗಳು ನನ್ನ ಬಿಸಿ ರಕ್ತ ಕುಡಿಯಲು ಯಲ್ಲಾ ತಯಾರಿ ನಡೆಸಿದ್ದವು ,ರಬ್ಬರ್ನಂಥ ಅವನ್ನು ಕಿತ್ತೊಸೆದು ಮುಂದೆ ಸಾಗ ತೊಡಗಿದೆ .ಜೇಬಿನಲ್ಲಿದ್ದ ಹೆಡ್ ಫೋನ್ ತೆಗೆದು ನನ್ನ ಮೊಬೈಲ್ ಗೆ ಚುಚ್ಚಿ ತೆಳು ಸಂಗೀತ ಹಾಕಿಕೊಂಡೆ (ಭಾವುಕನಿಗೆ ಇಷ್ಟು ಸಾಕು ).
ಅಂದು ಕ್ಲಾಸ್ ಲೀಡರ್ ಆರಿಸುವ ದಿನ , ೭ ನೇ ತರಗತಿಯವರೆಗೂ ನಾನೆ ಕ್ಲಾಸ್ ಲೀಡರ್ ಆಗಿದ್ದರಿಂದ ಸಹಜವಾಗಿ ಅದೇ ಹುರುಪಿನಲ್ಲಿ ನಾನು ಸ್ಪರ್ಧಿಸಿದೆ . ಮತದಾನದ ಮೂಲಕ ಆಯ್ಕೆ .ನಾವು ಒಟ್ಟು 4 ಮಂದಿ ಇದ್ದೆವು ಸ್ಪರ್ಧಾಕಣದಲ್ಲಿ ,೮೦ ಜನ ವಿದ್ಯಾರ್ಥಿಗಳ ಓಟಿನ ಮೇಲೆ ಲೀಡರ್ ನ ಆಯ್ಕೆ .ನಿಜ ಹೇಳಬೇಕಂದ್ರೆ ನನಗೆ ಅಲ್ಲಿ ಪರಿಚಯವಿದ್ದವರು ೫ ಮಂದಿ ಮಾತ್ರ .
ಶುರುವಾಯಿತು ಲೆಕ್ಕಾಚಾರ , ಹು ಹೂ ೫೦ ಅದರೂ ಒಂದೇ ಒಂದು ಓಟು ಬಿದ್ದಿರಲಿಲ್ಲ .ಕೊನೆ ಅಲ್ಲಿ ೧ ಓಟು ಬಿದ್ದಿತ್ತು ,ಅದು ನನ್ನದೇ .ನಿಜವಾಗಿ ಎಲ್ಲರ ಮುಂದೆ ಜೋರಾಗಿ ಅತ್ತು ಬಿಟ್ಟಿದ್ದೆ .ಅವಮಾನವಾಗಿತ್ತು ನಿಜ , ತೀರಿಸಿಕೊಳ್ಳುವ ಬಗೆ ಒಂದೇ ಒಂದು ,ಆದುವೇ ಎಲ್ಲರಿಗಿಂತ ಚೆನ್ನಾಗಿ ಓದಬೇಕಿತ್ತು .(ಇನ್ನೊಂದು ರಹಸ್ಯ ಇದೆ ,ನಿಮಗೆ ಮಾತ್ರ ಹೇಳ್ತಿನಿ .ಹುಡುಗಿಯರ ಸ್ನೇಹ ಸಂಪಾದಿಸಿಕೊಳ್ಳಬೇಕಿತ್ತು ನಾನು ಮಾಡಿದ್ದೂ ಅದೇ ).
ನಂತರ ಸತತ ೨ ವರ್ಷ ನಾನೇ ಕ್ಲಾಸ್ ಲೀಡರ್ . ಕಾರಣ ನನ್ನ ೨ ನೇ ತಂತ್ರ (ಉಪಯೋಗಿಸಲು ಕಾರಣವಿಷ್ಟೇ ,ನಾವಿದದ್ದು ೧೪ ಮಂದಿ ಹುಡುಗರು ,೩೫ ಮಂದಿ ಹುಡುಗಿಯರು ).ಇನ್ನೊಂದು ಮಜವಾದ ವಿಷಯ ನಾನು ಹಿಂದಿ ಕಲಿತದ್ದು .
೫ ನೇ ತರಗತಿಯಿಂದಲೂ ಹಿಂದಿ ಇದ್ದರು ಕೂಡ ಶಿಕ್ಷಕರ ಕೊರತೆಯಿಂದ ಪರೀಕ್ಷೆ ಇರಲಿಲ್ಲ .ಆದರೆ ೭ ನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಅದ್ದರಿಂದ ಕಡ್ಡಾಯವಾಗಿ ಬರೆಯಲೆಬೇಕಿತ್ತು , ನಮಗೋ ಒಂದು ಅಕ್ಷರ ಕೂಡ ಬರಿಯೋಕೆ ಬರುತ್ತಿದ್ದಿಲ್ಲ ಇನ್ನು ಹೇಗೆ ಉತ್ತರ ಬರೆದೆವು . ಅದಕ್ಕೆ ಅಲ್ಲಿದ್ದ ಶಿಕ್ಷಕರು ನೀಡಿದ ಸಲಹೆ ಅಂದ್ರೆ , ಇರುವ ಪ್ರಶ್ನೆಗಳನ್ನೇ ತಿರುಗಿಸಿ ಬರೆಯಿರಿ ಎಂದು .
ನಾನು ಕಷ್ಟ ಪಟ್ಟು ಬರೆದುದಕ್ಕೆ ಬಂದದ್ದು ೫೫ (೧೦೦ ಕ್ಕೆ ೧೦೦ ತೆಗೆದಷ್ಟೇ ಸಂತೋಷ ಆಗಿತ್ತು , ಹಾಗೆಯೇ ಹಿಂದಿ ಕಲಿತೆನೆಂಬ ಭ್ರಮೆ ಕೂಡ ಮೂಡಿತ್ತು ).ಕ್ಲಾಸ್ ಲೀಡರ್ ನಾನೆ ಆದರೂ ಕೂಡ ಎಲ್ಲರಿಗಿಂತ ಹೆಚ್ಚಾಗಿ ಗಲಾಟೆ ಮಾಡುತಿದದ್ದು ನಾನೇ . ಇದಕ್ಕೆ ಸರಿಯಾಗಿ ನಮ್ಮ ಹಿಂದಿ ಸರ್ ಸ್ವಲ್ಪ ನಂಗೆ ಸಪೋರ್ಟ್ .ಎಲ್ಲ ಸರಿಯಾಗಿ ನಡಯೂತ್ತಿರುವಾಗಲೇ ನಡೆದದ್ದು ಆ ಅಪಘಾತ ,
ಕುಪ್ಪಳ್ಳಿ ಟೂರ್ . ಜೀವನದಲ್ಲಿ ಮರೆಯಲಾಗದ ಘಟನೆಗಳಲೋಂದಾಗಿ ಬಿಡ್ತು .
.............................ಮುಂದುವರಿಯುತ್ತದೆ

(ಮರ್ಕಟ )ನನ್ನೀ ಮನಸ್ಸು

ತಣ್ಣನೆಯ ತಿಳಿ ಗಾಳಿ ಬೀಸುತ್ತಿತ್ತು , ಆಗಸದಲ್ಲಿ ಸೂರ್ಯ ನಿಧಾನವಾಗಿ ತನ್ನ ಮನೆಯತ್ತ ಹೆಜ್ಜೆಹಾಕತೊಡಗಿದ್ದ ,ಅವನಿಗೂ ಪಾಪ ಕತ್ತಲಾಗಿರಬೇಕು ಕೆಂಪು ಬಣ್ಣದ ಟಾರ್ಚ್ ಹಿಡಿದಿದ್ದ ಅನ್ನಿಸುತ್ತೆ ಅದಕ್ಕೇನೋ ಹೋಗೋ ದಾರಿಯಲೆಲ್ಲ ಕೆಮ್ಪನ್ನೇ ಚೆಲ್ಲಿದ ಹಾಗಿತ್ತು . ಬದುಕು ಯಾರಿಗಾದರು ಸರಿ , ಅದು ಮಾನವನೇ ಇರಬಹುದು ಅಥವಾ ಪ್ರಾಣಿ ಪಕ್ಷಿಗಳು , ಬದುಕು ಬದುಕೇ ಅಲ್ಲವೇ ? ಇದನ್ನರಿತೋ ಏನೋ ಚಿಲಿ ಪಿಲಿ ಗುಟ್ಟುತ್ತ ತಮ್ಮದೇ ಭಾಷೆಯಲ್ಲಿ ಏನನ್ನೋ ಹೇಳಿಕೊಳ್ಳುತ್ತಾ ತನಗಾಗಿ ಕಾದಿರಬಹುದಾದ ಮನೆಯವರನ್ನು ನೋಡಲು ಸುಂಯ್ ಎಂದು ಅತ್ಯೋಸಹದಲ್ಲಿ ಮನೆ ಕಡೆ ಹೊರಟಿದ್ದವು ಆ ಹಕ್ಕಿಗಳು .ಹಾಗೆ ಅದನ್ನೇ ವೀಕ್ಷಿಸುತ್ತಾ ಕುಳಿತಿದ್ದ ನನಗೆ ಮನಸಿನ ಯಾವುದೊ ಮೂಲೆಯಲ್ಲಿ ಒಂದು ತರ ತಳಮಳ , ಏನೋ ಕಳೆದು ಕೊಂಡಿಹೆನೇನೋ ಅನ್ನೋ ಭಾವ .
ಅವಾಗಲೇ ಅನಿಸಿದ್ದು ಹೊರಗಡೆ ಅದೆಷ್ಟೇ ಕ್ರೂರ ಮನಸಿರಲಿ (ಹಾಗೆಂದು ನನ್ನದು ಕ್ರೂರ ಅಂತ ಅಲ್ಲ ),ಮನುಷ್ಯನ ಒಳ ಮನಸ್ಸು ಎಂಬುದು ಯಾವಾಗಲು ಮೃದುವಾದದ್ದೇ.ಈ ಮನಸ್ಸೇ ಹಾಗೆ ಕಂಡಿದ್ದೆಲ್ಲವನ್ನು ಬೇಕು ಎನ್ನುವ , ಇಷ್ಟವಾಗಿದ್ದನ್ನ ಬೇಗ ಹಚ್ಚಿಕೊಳ್ಳುವ , ದೊರೆಯದಇದ್ದಾಗ ಅಷ್ಟೇ ಬೇಗ ದ್ವೇಷಿಸುವ ಮನುಷ್ಯ ಪ್ರಾಣಿಯ ಒಂದು ದುರ್ಬಲ ಕೊಂಡಿ . ಅದಕ್ಕೆ ಹೇಳಿದ್ದು (ಕವಿಯ ಹೆಸರು ನೆನಪಿಲ್ಲ ಕ್ಷಮಿಸಿ ) ಯಾರೋ "ಹುಚ್ಚು ಕೊಡಿ ಮನಸ್ಸು ಅದು ೧೬ ರ ವಯಸ್ಸು ". ನನ್ನ ಪ್ರಕಾರ ಅದಕ್ಕೇನು ವಯಸ್ಸಿನ ಮಿತಿ ಇಲ್ಲ ಅನಿಸುತ್ತೆ .
ಅದೆಷ್ಟು ಬೇಗ ಹಚ್ಚಿಕೊಂಡು ಬಿಡುತ್ತದೆ ನನ್ನೀ ಮನಸ್ಸು ಅಪರಿಚತರನ್ನು ಮಾತಿಲ್ಲ , ಮುಕ ಪರಿಚಯವಿಲ್ಲ , ಕೇವಲ ಪದಗಳು , ಅದು ಆಗೊಂದು ಈಗೊಂದು ಎನ್ನುವ ಹಾಗೆ .ಅಷ್ಟು ಸಾಕೆ ಈ ಸಂಭಂದಕ್ಕೆ ಬುನಾದಿ . ಒಂದತು ಸತ್ಯ ಮಾತಿನಲ್ಲಿ ಬಣ್ಣಿಸಲಾಗದ ಈ ಮನಸಿನ ಭಾವನೆಗಳನ್ನು ಪದಗಳಿಗಿಂತ ಬೇರೊಂದು ಮಾಧ್ಯಮದಲ್ಲಿ ಅಷ್ಟು ಪರಿಣಾಮಕಾರಿಯಾಗಿ ಬಣ್ಣಿಸಲಾಸಾದ್ಯ .ಒಮೊಮ್ಮೆ ಅನ್ನಿಸುತ್ತೆ ನಾನೇಕೆ ಇಷ್ಟು ಅತಿಯಾದ ಭಾವುಕನಗುತ್ತೇನೆ, ನನ್ನ ಮನಸಿನ ತೋಳಲಾಟಗಳನ್ನೂ ಬೇರೆಯವರ ಪ್ರತಿಕ್ರಿಯೆ ಮೇಲೆ ಯಾಕೆ ನಿರ್ಧರಿಸಲು ಹೊರಡುತ್ತೇನೆ ?
ಇನ್ನೊಂದು ಮಾತು ಮನುಷ್ಯ ಯಾವುದರಲ್ಲಿ ಪ್ರಬಲ ಅಂದುಕೊಳ್ಳುತ್ತನೋ ,ಅದುವೇ ಅವನ ದೌರ್ಬಲ್ಯ ಕೂಡ ಆಗಿರುತ್ತೆ .ನಾನೇ ನೋಡಿ, ನನ್ನನ್ನು ನಾನು ತುಂಬಾ ಭಾವುಕ ಅಂದುಕೊಳ್ಳುತ್ತೇನೆ , ಕೆಲವೊಮ್ಮೆ ಆ ಭಾವನೆಗಳೇ ಇಲ್ಲದ ನೋವಿಗೆ ಕಾರಣವಾಗಿಬಿಡುತ್ತೆ .
ಹೀಗೆ ಬದುಕೇ ಭಾವವೆಂದು ಕುಳಿತವನಿಗೆ , ಮನಸಿಗೆ ಬಂದ ಭಾವನೆ ಗಳನ್ನೂ ಇಲ್ಲಿ ಗೀಚಿದ್ದೇನೆ ,ಇದರಿಂದ ನಿಮ್ಮ ಭಾವನೆಗಳಿಗೆ ಬೇಸರವಾಗಿದ್ದರೆ ಕ್ಷಮೆಯಿರಲಿ .
ಇಂತಿ ನಿಮ್ಮ ವಿನಯ

ಕುಪ್ಪಳ್ಳಿ ಸುತ್ತ - ಮುತ್ತ

ತುಂಬಾ ಜನ ಕುಪ್ಪಳ್ಳಿ ನೋಡಿಲಿಕ್ಕೊಸ್ಕರ ತುಂಬಾ ಕಡೆ ಇಂದ ಬರುತ್ತೀರಿ, ಕೇವಲ ಅದೊಂದೇ ನೋಡಿ ಮರಳುವ ಬದಲು ಅಲ್ಲೇ ಸುತ್ತ ಮುತ್ತ ಇರುವ ಕೆಲವು ಪ್ರದೇಶಗಳನ್ನು ಪರಿಚಯಿಸಲು ಈ ಲೇಕನ .
೧) ಅಷ್ಟು ದೂರ ಬದಿರುತ್ತಿರ ಅಂದ ಮೇಲೆ ಮೊದಲು ನಮ್ಮ ಮನೆಗೆ ಬನ್ನಿ ದಾರಿ ನನ್ನ ಪ್ರೊಫೈಲ್ ಫೋಟೋ ದಲ್ಲಿದೆ Laughing out loud
(ನಾನು ಊರಿನಲ್ಲಿದ್ದರೆ ಖಂಡಿತವಾಗಿ ನಿಮ್ಮ ನೆರವಿಗೆ ಬರುತ್ತೇನೆ ).
೨) ಕುಪ್ಪಳ್ಳಿ - ಇದರ ಬಗ್ಗೆ ನಾನೇನು ಹೆಚ್ಚು ವಿವರಿಸಬೇಕಾಗಿಲ್ಲ ಅನ್ನಿಸುತ್ತೆ .
ಬೆಂಗಳುರಿಂದ ಬರುವವರಾದರೆ ರಾತ್ರಿ ೧೦.೩೦ ಕ್ಕೆ ನೇರವಾದ ರಾಜಹಂಸ ಬಸ್ಸಿದೆ .
ಇನ್ನು ಬೀದರ್ , ಗುಲ್ಬರ್ಗ ಕಡೆ ಇಂದ ಬರುವವರಾದರೆ ಶಿವಮೊಗ್ಗ ಕ್ಕೆ ಮೊದಲು ಬಂದು ಅಲ್ಲಿಂದ ತೀರ್ಥಹಳ್ಳಿ . ಅಲ್ಲಿಂದ ಕೊಪ್ಪ ಬಸ್ ಹತ್ತಿದರೆ ನಿಮಗೆ ಮಾರ್ಗ ಮಧ್ಯದಲ್ಲಿ ಕುಪ್ಪಳ್ಳಿ ಸಿಗುತ್ತದೆ .
ಇನ್ನು ಮಂಗಳೂರು , ಕುಂದಾಪುರ ಆ ಕಡೆ ಇಂದ ಬರುವವರಿಗೆ ತೀರ್ಥಹಳ್ಳಿಗೆ ನೇರವಾಗಿ ಬಸ್ ಸೌಲಭ್ಯವಿದೆ .
ತೀರ್ಥಹಳ್ಳಿ ಯಲ್ಲಿ ಉಳಿದುಕೊಳ್ಳಲು ಎಲ್ಲ ವ್ಯವಸ್ತೆ ಇದೆ .
೩)ಇನ್ನು ಹೇರಾಂಭಾಪುರ , ನಿಮಗೆ ಸ್ವಲ್ಪ ತ್ರಾಸ ಆಗಬಹುದು . ಕಾರಣವಿಷ್ಟೇ ನೇರವಾಗಿ ಇಲ್ಲಿಗೆ ಬಸ್ ಇಲ್ಲ .ನೀವು ನಮ್ಮ ಮನೆ ಕಡೆ ಅಂದರೆ ಕುಪ್ಪಳ್ಳಿ ಮತ್ತು ತೀರ್ಥಹಳ್ಳಿ ಮಧ್ಯೆ ದೇವಂಗಿ ಅಂತ ಒಂದು ಊರು ಸಿಗುತ್ತೆ ಅಲ್ಲಿ ಇಳಿದುಕೊಂಡು ಕಟ್ಟೆಹಕ್ಕಲು ಎಂಬ ಗ್ರಾಮಕ್ಕೆ ಬರಬೇಕು (ಘಂಟೆಗೊಂದು ಬಸ್ ). ಅಲ್ಲಿಂದ ೫ ಕಿ ಮಿ (ಇಷ್ಟವಿದ್ದರೆ ನಡೆಯಬಹುದು , ಇಲ್ಲದಿದ್ದರೆ ಆಟೋನೆ ಗತಿ ).
ಇಲ್ಲಿಯ ವಿಶೇಷ ಅಂದ್ರೆ ಇಲ್ಲಿರುವ ಅಮ್ಮನವರು (ಜಲದುರ್ಗಂಬ ) ತೋಟದ ಸಮೀಪವಿದ್ದು (ಉದ್ಭವ ಮೂರ್ತಿ )ಇಲ್ಲಿ ಸದಾ
ಕಾಲ ಗರ್ಭಗುಡಿ ಯಲ್ಲಿ ನೀರು ಇದ್ದೆ ಇರುತ್ತದೆ (ಜಲ ಬರುತ್ತದೆ ).
೩)ಕಟ್ಟೆಹಕ್ಕಲು ಅಲ್ಲಿಂದ ಮುಂದೆ ಹೋದರೆ ನಿಮಗೆ ಸಿಗುವುದೇ ಮೃಗವಧೆ .
ಹೆಸರೇ ಹೇಳುವಂತೆ ಇಲ್ಲಿ ಮೃಗ ವಧೆ ಆಗಿದೆ .ಅದಕ್ಕೊಂದು ಕಥೆ "ರಾಮಾಯಣದಲ್ಲಿ ಸೀತೆಯು ಬೇಕೆನುವ ಮಾಯಾ ಜಿಂಕೆ ಯನ್ನು ಶ್ರೀ ರಾಮ ಬೆನ್ನಟ್ಟಿಕೊಂಡು ಹೋಗಿ ಕೊಂಡಿದ್ದು ಇಲ್ಲೇ ಅನ್ನುತ್ತದೆ ಪುರಾಣ ".
೪)ಈಗ ಮತ್ತೆ ವಾಪಸ್ ತೀರ್ಥಹಳ್ಳಿಗೆ (ನಮ್ಮೂರಿಂದ ತೀರ್ಥಹಳ್ಳಿಗೆ ಹೋಗಲು ೨ ಮಾರ್ಗಗಳಿವೆ , ಈಗ ನಾವು ಹೊರಟಿರುವುದು ೨ ನೆ ಮಾರ್ಗ ದಲ್ಲಿ ).ದಾರಿಯಲ್ಲಿ ನಿಮಗೆ ತುಂಗಾ ನದಿಯ ದರ್ಶನವಾಗುತ್ತದೆ , ಅದರ ದಡದಲ್ಲಿ ಇರುವುದೇ ಚಿಬ್ಬಲಗುಡ್ಡೆ .
ಇಲ್ಲಿ ಗಣಪತಿ ದೇವಸ್ಥಾನವಿದೆ .ಇಲ್ಲಿ ಕೂಡ ಶೃಂಗೇರಿಯಲ್ಲಿರುವಂತೆ . ಇಲ್ಲಿರುವ ಮೀನುಗಳಿಗೆ ಅಕ್ಕಿ ಹಾಕಿದರೆ ಮೈ ಮೇಲೆ ಏಳುವ ಚಿಬ್ಬು ಹೋಗುತ್ತದೆ ಎಂಬ ನಂಬಿಕೆ ಇದೆ . ಇನ್ನೊಂದು ಅಂದ್ರೆ ಇಲ್ಲಿರುವ ಒಂದು ದೊಡ್ಡ ಮೀನಿಗೆ ಮೂಗುತಿ ಸುರಿದಿದ್ದಾರೆ ಎಂದು ಕೂಡ ಹೇಳುತ್ತಾರೆ .
೫)ಮುಂದೆ ಹೋದರೆ ಸಿಗುವುದೇ ಮೇಳಿಗೆ - ಇಲ್ಲಿ ನಿಮಗೆ ಪುರಾತನವಾದ ಒಂದು ಜೈನರ ದೇವಾಲಯ ಸಿಗುತ್ತದೆ .
೬) ಕೊನೆಯಲ್ಲಿ ತೀರ್ಥಹಳ್ಳಿ - ಇಲ್ಲಿ ನಿಮಗೆ ಗೊತ್ತಿರುವಂತೆ ಪುರಾತನ ಸೇತುವೆ , ರಾಮ ದೇವಾಲಯ .
ವಿಶೇಷವೆಂದರೆ ರಾವಣನು ಶಿವನ ಆತ್ಮ ಲಿಂಗ ತರುವಾಗ ಗಣಪತಿ ಕೈ ಅಲ್ಲಿ ಸಿಕ್ಕಿ ಅದು ನೆಲಕ್ಕೆ ಅಂಟಿಕೊಂಡು , ಅದನ್ನು ಕೀಳುವ ಪ್ರಯತ್ನದಲ್ಲಿ ಅದಕ್ಕೆ ಬಲವಾಗಿ ಹೊಡೆದಾಗ ಅದರ ಒಂದು ಚೂರು ಇಲ್ಲಿ ಬಂದು ಬಿತ್ತೆಂದು ಹೇಳುತ್ತಾರೆ .
ಹಾಗೆಯೇ ಪರಶುರಾಮ ತನ್ನ ತಾಯಿಯ ಶಿರ ತುಂಡರಿಸಿದ ಕೊಡಲಿಯನ್ನು ಯಲ್ಲಿ ತೊಳೆದರು ಅದರಲ್ಲಿನ ರಕ್ತದ ಕಲೆ ಹೋಗದಿದ್ದಾಗ ಇಲ್ಲಿ ಬಂದು ತೊಳೆದನೆಂದು ಅದು ಹೋಯಿತೆಂದು ಪುರಾಣ ಹೇಳುತ್ತದೆ .ಅದಕ್ಕಾಗೆ ಇಲ್ಲಿ ಹೊಳೆ ಮಧ್ಯೆ ರಾಮನ ಕೊಂಡ ಇದೆ . ಪ್ರತಿ ದಶಂಬರ ದಲ್ಲಿ ಇಲ್ಲಿ ಜಾತ್ರೆ ನಡೆಯುತ್ತೆ (ಎಳ್ಳು ಅಮಾವ್ಯಸೆ).ಕೊನೆ ದಿನ ತೆಪ್ಪೋಸ್ಸವ ನಡಿಯುತ್ತೆ 

ಬದುಕು ಭಾವ ಮತ್ತು ನಾನು - ೫ ( ನನ್ನ ಮೊದಲ ಪ್ರೀತಿ (ಪ್ಯಾರ್ ,ಮೊಹಬ್ಬತ್ ) ಹಾಗೂ ಅದು ಮುರಿದು ಬಿದ್ದಿದ್ದು )

ಊರಿಗೆ ಹೋದಾಗಲೆಲ್ಲ ತೀರ್ಥಹಳ್ಳಿಯ ರಸ್ತೆಗಳಲ್ಲಿ ಒಂದು ಸುತ್ತು ಹೋಗಿಬರುವುದು ನನ್ನ ಅಭ್ಯಾಸ .ಈ ಸಲ ಸ್ವಲ್ಪ ಕೆಲಸ ಇದ್ದಿದ್ದರಿಂದ ಬೆಳಿಗ್ಗೆ ಬೇಗನೆ ಹೊರಡಲನುವಾದೆ . ೮.೩೦ ಕ್ಕೆ ಬಸ್ , ನಮ್ಮ ಕಡೆ ಸಾಮಾನ್ಯವಾಗಿ ೭.೩೦ ರಿಂದ ೯.೩೦ ರ ವರೆಗೆ ಬರುವ ಎಲ್ಲ ಬಸ್ಸುಗಳಿಗೆ ಕಾಲೇಜ್ ಬಸ್ ಎಂದೇ ನಾಮಕರಣ (ವಿಶೇಷ ಅಂದ್ರೆ ಆ ಸಮಯದಲ್ಲಿ ಬರೋದು ೩ ಬಸ್ ಮಾತ್ರ ).
ಮುಂಚೆ ನಾನು ಈ ಬಸ್ಸಲ್ಲೇ ಕಾಲೇಜಿಗೆ ಹೋಗುತ್ತಿದಿದ್ದು .ನಮಗೆ ಬಸ್ ಏಷ್ಟು ರಶ್ ಆಗುತ್ತೋ ಅಸ್ಟು ಖುಷಿ ಆವಾಗ(ಗೊತ್ತಲ್ಲ ನಿಮಗೆ ಯಾಕೆಂದು ).ಈಗ ಮಾತ್ರ ಸ್ವಲ್ಪ ರಗಳೆ , ಕಾರಣವಿಷ್ಟೇ ಹೇಗೆ ಕಾಲ ಬದಲಾಯಿತೋ ಹಾಗೆ ನನ್ನ ಎತ್ತರ , ಅದಕ್ಕೂ ನಮ್ಮ ಕಡೆ ಬುಸ್ಗು ಸರಿ ಹೊಂದುವುದೇ ಇಲ್ಲ . ಅದಕ್ಕೆ ನಾನು ಈಗ ಫುಟ್ ಬೋರ್ಡ್ ಬಿಟ್ಟು ಮೇಲೆ ಹೋಗಲ್ಲ (ನನಗೆ ತಲೆ ತಗ್ಗಿಸೋಕ್ಕೆ ಆಗಲ್ಲ , ಬಸ್ಸು ತಲೆ ಎತ್ತೋಕೆ ಬಿಡಲ್ಲ ).ಹಾಗೆ ಸಮಯವಾಯಿತು ನಮ್ಮ ಐರಾವಾತನ ಅಗಾಮನವು ಆಯ್ತು.ಚೀಟಿ ತೆಗೆದುಕೊಂಡು ಹಾಗೆಯೇ ಏನೋ ಯೋಚಿಸುತ್ತಾ ನಿಂತಿದ್ದೆ ಪಿಸು ಪಿಸು ಕಿಸಿ ಕಿಸಿ ಹ ಹುಹು ಸದ್ದು ಕೇಳಿಬಂತು (ಈ ತರಹದ ಸದ್ದು ನಮ್ಮ ಕಿವಿಗೆ ಬಹಳ ಬೇಗ ಬೀಳುತ್ತೆ), ಸ್ವಲ್ಪ ಕತ್ತೆತ್ತಿ ನೋಡಿದೆ ಮಧ್ಯದ ಸಿಟಿನಲ್ಲಿ ಕುಳಿತಿದ್ದ ಹುಡುಗ ಹುಡುಗಿ ಅದೇನೋ ಹೇಳಿಕೊಂಡು ಕಿಸಿ ಕಿಸಿ ನಗುತ್ತಿದ್ದರು . ಮನಸಲ್ಲೇ ನಾನು ನಕ್ಕೆ (ಬಡ್ಡಿ ಮಗನೆ ನೀನು ಮಾಡಿದ್ದಿ ಇಂತದ್ದು ಬೇಕಾದಷ್ಟು ಅಂದಿತೇನೋ ಒಳ ಮನಸ್ಸು ).ನೋಡುವುದರೊಳಗೆ ಗೊತ್ತಾಗಿ ಹೋಗಿತ್ತು ಪ್ರೇಮಿ(ಪರಸ್ಪರ ಆಕರ್ಷಿತರು ಅಸ್ಟೆ) ಎಂದು .ಹೀಗೆ ನೋಡುತ್ತಾ ನಿಂತವನಿಗೆ ಮನಸಿಗೆ ಬಂದಿದ್ದು ನನ್ನ ಮೊದಲ ಪ್ರೀತಿ (ಆಕರ್ಷಣೆ ).
೭ ನೇ ತರಗತಿಯವರೆಗೂ ಸ್ವಲ್ಪ ಜಾಸ್ತಿ( ಹೆಚ್ಚುಅನ್ನಬಹುದೇನೋ ) ಶಿಸ್ತಿನಿಂದಲೇ ಬೆಳೆದ ನನಗೆ ,೮ ನೇ ತರಗತಿಗೆ ಬರುತಿದ್ದಂತೆ ಹುಡುಗಿರ ಬಗ್ಗೆ ಸ್ವಲ್ಪ ಜಾಸ್ತಿಯೇ ಆಕರ್ಷಣೆ ಇತ್ತು ಎಂದರೆ ತಪ್ಪಗಾಲಾರದು .ನನ್ನ ಹಿಂದಿನ ಲೇಕನದಲ್ಲಿ ಹೇಳಿರುವಂತೆ ಶಾಲೆಯ ಶುರುವಾತಿನಲ್ಲೇ ನಾನು ಕಂಡು ಕೊಂಡ ಸತ್ಯ ಹುಡುಗಿಯರ ಸ್ನೇಹವಿಲ್ಲದಿದ್ದರೆ ನನ್ನ ಆಧಿಪತ್ಯ ಕಷ್ಟ ಅಂತ ( ಏತಕ್ಕೆ , ಏನು ಇಲ್ಲ ನನ್ನ ಹಿಂದಿನ (೩) ಅಲ್ಲಿದೆ ).
೯ ನೇ ತರಗತಿಗೆ ಬರುವಸ್ಟರಲ್ಲಿ ಇದ್ದ ಎಲ್ಲ ೪೫ ಮಂದಿ ಹುಡುಗಿಯರ ಹೆಸರು , ಮುಕಪರಿಚಯ ,ಸ್ವಭಾವ ಎಲ್ಲ ಅರೆದು ಕುಡಿದು ಬಿಟ್ಟಿದ್ದೆ ಅಂತಲೇ ಹೇಳಬಹುದು . ಕ್ಲಾಸಿನಲ್ಲಿ ಯಾವಾಗಲು ೨ ನೇ ಯವನಾಗೆ ಬರುತಿದುದ್ದು ಅದಕ್ಕೆ ಒಂದು ಮುಖ್ಯ ಕಾರಣ ವೆಂದರೆ ತಪ್ಪಾಗಲಾರದು . ನಾವಿದದ್ದು ಕೇವಲ ೧೫ ಮಂದಿ ಹುಡುಗರು ಮಾತ್ರ .ಮೊದಳಿಗಳಾಗಿ ಇದದ್ದು ನನ್ನ ಈ ಕಥಾ ನಾಯಕಿ.ಸ್ವಲ್ಪ ಬಿರುಸಿನ ಸ್ಪರ್ಧೆಯೇ ಇತ್ತು ನನ್ನಾ ಮತ್ತು ಅವಳ ನಡುವೆ .ನಿಜವಾಗಿ ಹೇಳುತ್ತೇನೆ ತುಂಬಾ ಒಳ್ಳೆ ಹುಡುಗಿ ,ಆದರೆ ನಿಮಗೆ ಗೊತ್ತಲವೋ ಹುಡುಗಿಯರಿಗೆ ಇನ್ನೊಬ್ಬ ಹುಡುಗಿ ಮುಂದೆ ಬರುತ್ತಿದ್ದಲೆಂದರೆ ಸ್ವಲ್ಪ ಹೊಟ್ಟೆಉರಿ. ಅದೇ ನಂಗೆ ಪ್ಲಸ್ ಪಾಯಿಂಟ್ , ಈ ಕಾರಣಕ್ಕೆ ಸ್ವಲ್ಪ ಹುಡುಗಿಯರು ನೋಟ್ಸ್ , ಅದು ಇದು ಅಂತ ನನ್ನೇ ಕೇಳ್ತಾ ಇದ್ದರು .ಅದು ಅಲ್ದೆ ಕ್ಲಾಸ್ ಲೀಡರ್ ಬೇರೆ ನಾನು .ಅವಾಗಿನ್ನು ಹುಟ್ಟಿರಲಿಲ್ಲ ನನ್ನೀ ಪ್ರೇಮ , ಕೇವಲ ಎಲ್ಲರೂ ಗುರುತಿಸಬೇಕು ಅನ್ನೋದು ಅಸ್ಟೆ ನನ್ನಾ ಧ್ಯೇಯ ಆಗಿತ್ತು .
ಅದು ಶುರುವಾದದ್ದೆ ೧೦ ನೇ ತರಗತಿಯ ಪ್ರಾರಂಬಿಕ ದಿನಗಳಲ್ಲಿ , ೯ ನೇ ತರಗತಿಯ ಯಾರೋ ಇಬ್ಬರು ಪ್ರೀತಿಸುತ್ತಿದ್ದಾರೆ ಅಂತ ಶಾಲೆಯಲೆಲ್ಲ ಗುಲ್ಲು ,ಅಲೆಲೆ ನಾನು ೧೦ ನೇ ಕ್ಲಾಸ್ಗೆ ಬಂದ್ರು ಏನು ಮಾಡೆಯಿಲ್ಲವಲ್ಲ ಅಂತ ಬೇಸರ ನನಗೆ , ಅವಗ್ಲೆ ನೋಡಿ ಚಿಂತಿಸಿದ್ದು ಈ ಪ್ರೀತಿಬಗ್ಗೆ .ಆಯ್ಕೆ ಅದೇ ನಮ್ಮ ಕ್ಲಾಸಿನ ಬುದ್ದಿವಂತೆ . ನೋಡಲು ಅಸ್ಟೇನು ಸುಂದರವತಿಯಲ್ಲ (ಬಿಡಿ ಅಷ್ಟಕ್ಕೂ ನಾನೇನು ಸುರಸುಂದರಾಂಗ ಆಗಿರಲಿಲ್ಲ ) ಆದರೂ ಅವಗೆಲ್ಲ ರೂಪಕ್ಕಿಂತ ಹೆಚ್ಚಾಗಿ ಸ್ಟೇಟಸ್ ಮೈನ್ಟೈನ್ ಮಾಡೋದು ಮುಖ್ಯ ಆಗಿತ್ತು . ಆದರೆ ಯಾರ ಬಳಿಯಲ್ಲೂ ಹೇಳಿಕೊಂಡಿರಲಿಲ್ಲ .ಇದು ಒಂತರ ಒನ್ ವೆ , ಪ್ರೀತಿ ಮಾಡ್ತಾ ಇದ್ದದ್ದು ನಾನೊಬ್ಬನೇ ಅವಳಲ್ಲ . ಅಂದಿನಿಂದ ಅವಳೊಂದಿಗೆ ಮಾತಾಡೋಕೆ ಒಂತರ ನಾಚಿಕೆ , ಯಾರಾದ್ರೂ ಅವಳ ಬಗ್ಗೆ ಏನಾದ್ರೂ ಅಂದ್ರೆ ಎಲ್ಲಿಲದ ಕೋಪ ಬಂದು ಬಿಡ್ತಿತ್ತು (ತೋರಿಸಿಕೊಳ್ಳುವಹಾಗಿಲ್ಲ). ಮೊದಲ ಸ್ಪರ್ಶ ಒಮ್ಮೆ ನೋಟ್ಸ್ ಕೊಡುವಾಗ ಕಿರುಬೆರಳು ತಾಗಿದ ನೆನಪು (ಅವತ್ತು ರಾತ್ರಿ ಒಂದೋ ,೨ ಘಂಟೆ ನಿದ್ದೆ ಮಾಡಿದ್ದೆ ಅಸ್ಟೆ ).
ಎಲ್ಲ ಸರಿಯಾಗಿ ನಡೀತಾ ಇತ್ತು , ಇನ್ನೇನು ಪ್ರೇಮ ನಿವೇದನೆ ಮಾಡಿಕೊಳ್ಳಬೇಕು ಅನ್ನೋಅಷ್ಟರಲ್ಲಿ ಬಂತು ನೋಡಿ ಅದೇನೋ ಪ್ರೊಗ್ರಾಮ್ ಹೆಸರು ಪ್ರತಿಭಾ ಕಾರಂಜಿ . ಅದಕ್ಕೋಸ್ಕರ ನಾವೆಲ್ಲ ಅಲ್ಲೇ ೧೦ ಕಿ ಮಿ ದೂರ ಇರೋ ಇನ್ನೊಂದು ಶಾಲೆಗೆ ಹೋಗಿದ್ವಿ , ಯಲ್ಲ ಚೆನ್ನಾಗಿಯೇ ಆಗಿತ್ತು ನಾನು ಎಲ್ಲರೊಡನೆ ಬೆರೆತು ಫುಲ್ ಖುಷಿ ಆಗಿದ್ದೆ (ಎಲ್ಲರೊಡನೆ ಅಂದರೆ ೯ ನೇ ತರಗತಿಯ ಹುಡುಗಿಯರು ಹಿ ಹೀ ), ಅದೇ ಆಗಿದ್ದು ತಪ್ಪು ನೋಡಿ .ಮರುದಿನ ಶಾಲೆಗೆ ಬಂದಾಗ ನನಗೆ ಆಘಾತ ಕಾದಿತ್ತು .ಇನ್ನು ಮೇಲೆ ಅವಳು ನನ್ನೊಟ್ಟಿಗೆ ಮಾತಾನಾಡುವುದಿಲ್ಲಂತೆ ಅಂತ ಅವಳ ಗೆಳತಿಯರಿಂದ ತಿಳಿಯಿತು . ಕಾರಣ ಮಾತ್ರ ಹೇಳಲಿಲ್ಲ , ನಾನು ಸ್ವಾಭಿಮಾನಿಯೇ .ನಾನು ಕೂಡ ಅವಳೊಂದಿಗೆ ಮಾತು ಬಿಟ್ಟೆ . ಸ್ವಲ್ಪ ದಿನಗಳ ನಂತರ ಕಾರಣ ತಿಳಿಯಿತು . ನಾನು ೯ ನೇ ತರಗತಿಯವರ ಜೊತೆ ಸೇರಿ ಇವಳನ್ನು ಕಡೆಗಣಿಸಿದ್ದೆನಂತೆ. ನಗ ಬೇಕೋ ಅಳ ಬೇಕೋ ನೀವೇ ಹೇಳಿ ? ಹುಚ್ಚು ಹುಡುಗಿ .
ಒಂದಂತು ಅರ್ಥ ಆಗಿತ್ತು , ಅವಳಿಗೂ ನನ್ನ ಮೇಲೆ ಮನಸಿದೆ ಎಂದು . ಆಮೇಲೆ ಹಾಗೆ ನಾನು, ಅವಳು ನನ್ನ ಬಗ್ಗೆ ಏನಾದ್ರು ಅಂದ್ಲ ಅಂತ ಬೇರೆಯವರ ಬಳಿ ತಿಳಿದುಕೊಳ್ಳೋದು , ಅವಳು ಕೂಡ .ಆದರೆ ನಮ್ಮಿಬ್ಬರ ಸ್ವಾಭಿಮಾನ ಪರಸ್ಪರ ಮಾತಾಡ್ಲಿಕ್ಕೆ ಅವಕಾಶ ಮಾಡಿ ಕೊಡ್ಲೇ ಇಲ್ಲ . ೧೦ ನೇ ತರಗತಿಯ ಪಬ್ಲಿಕ್ ಪರೀಕ್ಷೆ ಕೂಡ ಹತ್ತಿರ ಬಂತು , ಹಾಗೆಯೇ ನನ್ನೊಳಗೆ ಮೂಡಿದ್ದ ಪ್ರೀತಿಯ ಭಾವನೆಗಳು ಕೂಡ ದೂರ ಹೋದವು .
ಆಮೇಲೆ ನಮ್ಮಿಬ್ಬರ ಬೇಟಿ ಆಗಿದ್ದು ಬರೋಬ್ಬರಿ ೨ ವರ್ಷ ಗಳ ನಂತರ. ಆಗ ಚೆನ್ನಾಗಿಯೇ ಮಾತಾಡಿದ್ವಿ , ನಂಗು ಭವಿಷ್ಯದ ಚಿಂತೆ ಅವಳಿಗೂ ಅದೇ . ಅಂದ ಮೇಲೆ ಈ ಪ್ರೀತಿಯಲ್ಲಿ ಬರಬೇಕು ನಮ್ಮಿಬ್ಬರ ಮಧ್ಯೆ .ಹೀಗೆ ಯೋಚನಾಲಹರಿಯಲ್ಲಿದ್ದ ನನಗೆ ತೀರ್ಥಹಳ್ಳಿ ಎಂಬ ಕಂಡಕ್ಟರನ ಕೂಗು ವಾಸ್ತವವನ್ನು ನೆನಪಿಸಿತು . ಮತ್ತೆ ಆ ಜೋಡಿಯ ಕಡೆ ನೋಡಿದೆ ,ಎಲ್ಲ ಅದೇ ಒಂದೇ ಒಂದು ಬದಲಾವಣೆ ಅವನ ಕೈ ಅವಳ ಹೆಗಲ ಮೇಲಿತ್ತು.ಒಳಗೊಳಗೇ ನಸು ನಗುತ್ತ ಮುಂದೆ ಸಾಗಿದೆ .

"ಸವಿ ಸವಿ ನೆನಪು ಸಾವಿರ ನೆನಪು
ಸಾವಿರ ಕಾಲಕು ಅಚ್ಚಳಿಯದ
ನೆನಪು ".

ನಿಲ್ಲದ ಪಯಣ

ನಿಲ್ಲದ ಪಯಣ
ಮರ ಮಟ್ಟು ಪೊದೆ ಒಳಗೆ ಹಸಿರ ಹಾಸಿನ ಮೇಲೆ ಮೂಡುತಿದೆ ಕಣ್ಣೀರ್ ಎಂಬ ನೀರ ಹನಿಗಳು