ಮಂಗಳವಾರ, ಜುಲೈ 28, 2009

"ಆಪರೇಷನ್ ಬೆಡ್ ಬಕ್ಸ್"

ನನಗೂ ನೋಡಿ ನೋಡಿ ರೋಸಿ ಹೋಗಿತ್ತು.ಹೀಗೆ ಮುಂದುವರೆದರೆ ಸತ್ತಮೇಲೆ ನನ್ನ ಜೀವವನ್ನು ಪೋಸ್ಟ್ಮಾಟಂ ಮಾಡೋದು ಕಷ್ಟ ಅಂತ ಅನ್ಕೊಂಡು ಇವಕ್ಕೊಂದು ಗತಿ ಕಾಣಿಸಲೇ ಬೇಕು ಅಂತ ಮನಸಿನಲ್ಲೇ ನಿಶ್ಚಯಿಸದೆ.ಆದರೆ ಅದು ಅಷ್ಟು ಸುಲಭದ ಮಾತಾಗಿರಲಿಲ್ಲ.ನೇರ ಯುದ್ದಕ್ಕೆ ಬರುವವರನ್ನಾದರೆ ಹೇಗೋ ಎದುರಿಸಬಹುದು,ಆದರಿವು ಗೆರಿಲ್ಲಾ ಮಾದರಿಯ ದಾಳಿ ಮಾಡುತಿದ್ದವು.ಯಾವಾಗ? ಎಲ್ಲಿಂದ? ಹೇಗೆ? ಬಂದು ಕಡಿಯುತಿದ್ದವೋ ಹೇಳೋದು ಕಷ್ಟ ಆಗಿತ್ತು.ಈಗ ನಾನು ಮೊದಲು ಈ ಗೆರಿಲ್ಲಾ ಯುದ್ದ ತಂತ್ರಗಳನೆಲ್ಲ ಅರಿಯಬೇಕಿತ್ತು.ಅದಕ್ಕೂ ಮೊದಲು ಈ ಕಾರ್ಯಚರೆಣೆಗೆ ಒಂದು ಹೆಸರನ್ನು ಬೇರೆ ಸುಚಿಸಬೇಕಿತ್ತು.ಅಂದರೆ ಆಪರೇಷನ್ ತ್ರಿಶುಲ್ , ಆಪರೇಷನ್ ಅದು ಇದು ಅಥವಾ ಆ ಬಿರುಗಾಳಿ ಈದು ಅಂತ ಎಲ್ಲ ಹೆಸರಿಡುತ್ತಾರಲ್ಲ ಹಾಗೆ.ಹೆಸರಿಲ್ಲದೆ ನಾನು ಯುದ್ದ ಮಾಡಿ ಗೆದ್ದು ನಾಳೆ ಏನು ಮಾಡಿದೆ ಅಂತ ಯಾರಾದ್ರೂ ಕೇಳಿ ಅದಕ್ಕೆ ನಾನು ಮಧ್ಯರಾತ್ರಿ ಹಾಸಿಗೆ ಅಲ್ಲಿ ತಿಗಣೆ ಕೊಂದೆ ಅಂದ್ರೆ ಅಪಾರ್ಥ ಮಾಡಿಕೊಂಡುಬಿಡುತ್ತಾರೆ.ಅಂತು ೨ ದಿನದ ಸತತ ಯೋಚನೆ ನಂತರ ಒಂದು ಹೆಸರು ಹೊಳೆಯಿತು, ಅದುವೇ "ಆಪರೇಷನ್ ಬೆಡ್ ಬಕ್ಸ್" (ಹೇಗಿದೆ?).

ಒಂದು ಈಗಲೇ ಸ್ಪಷ್ಟ ಪಡಿಸುತ್ತೇನೆ ನಾನು ಏಕಾಏಕಿ ಯುದ್ಧ ಘೋಷಣೆ ಮಾಡಿರಲಿಲ್ಲ.ಮತ್ತೆ ನೀವು ಹಾಗೆ ಎಂದುಕೊಂಡು ವಿಶ್ವಸಂಸ್ಥೆ ಮುಖಾಂತರ ನಮ್ಮ ಮೇಲೆ ಒತ್ತಡ ಹೇರಬಾರದು.ನಾನು ಈ ಹೊಸ ರೂಂಗೆ ಬಂದು ಸೇರಿದ ದಿನದಿಂದಲೇ ಇವು ತಮ್ಮ ಕಾರ್ಯಾಚರಣೆ ಆರಂಭಿಸಿದ್ದವು.ಹೊಸ ರೂಂ ಆದ್ಧರಿಂದ ನನಗೂ ಅದರ ಅಷ್ಟು ಅನುಭವವಾಗಿರಲಿಲ್ಲ.ಬರುಬರುತ್ತಾ ನನಗೆ ಈ ಬೆಡ್ ಬಾಕ್ಸ್ (ತಿಗಣೆ)ಗಳ ಬಗ್ಗೆ ಅರಿವುನ್ಟಾಗಿದ್ದು. ಹಾಗಂತ ನಾನು ಅವುಗಳ ಮೇಲೆ ಏಕಾಏಕಿ ದಾಳಿ ಮಾಡಲಿಲ್ಲ,ನನ್ನಲ್ಲೂ ಕರುಣೆ ಇದೆ. so ದಿನಕ್ಕೆ ೨-೩ ಬಂದು ಅವಕ್ಕೆ ಬೇಕಾದಷ್ಟು ರಕ್ತ ಕುಡಿದುಕೊಂಡು ಹೋಗಲಿ ಎಂದು ಸುಮ್ಮನಿದ್ದೆ.ಪಾಪ ಅವು ಬದುಕಬೇಕಲ್ಲ.ಆದರೆ ಇವು ಒಂದಗಳು ಕಂಡಾಕ್ಷಣ ತನ್ನ ಪೂರ್ತಿ ಪರಿವಾರವನ್ನೆಲ್ಲ ಕರೆಯುವ ಕಾಗೆಯ ತರ ತನ್ನ ಪೂರ್ತಿ ಪರಿವಾರವೆನೆಲ್ಲ ಕರೆದುಕೊಂಡು ಬರುವುದೇ.ನೀವೇ ಹೇಳಿ ನನ್ನದೇನು Blood bank ಏ ಇವು ಬಂದಾಕ್ಷಣ ಎತ್ತಿ ಕೊಡೋಕೆ.ಆದರೂ ನಾನು ತಾಳ್ಮೆ ಕಳೆದುಕೊಳ್ಳದೆ ಅವುಗಳನ್ನು ನಿಯಂತ್ರಿಸುವ ಉಪಾಯ ಮಾಡುತಿದ್ದಾಗಲೇ ನನ್ನ ಮಿತ್ರರೊಬ್ಬರು ಹೇಳಿದರು ಅವನ್ನು ಹಿಡಿದು ನೀರಿಗೆ ಹಾಕು ನಿಧಾನವಾಗಿ ಕಡಿಮೆ ಆಗುತ್ತವೆ ಎಂದು.ಅವರು ಹೇಳಿದಂತೆ ಮಾಡಿದೆ ಒಂದೆರಡು ದಿನ ಚೆನ್ನಾಗೆ ಇತ್ತು.ಹತ್ತಿರದಲ್ಲೇ ಬಸವನಗುಡಿ ಈಜುಕೊಳ ಇರುವುದರಿಂದಲೋ ಏನೋ ೪ನೇ ದಿನದ ಹೊತ್ತಿಗೆ ಎಲ್ಲ ತಿಗಣೆಗಳು ಈಜಲು ಶುರು ಮಾಡಿಬಿಡುವುದೇ.ನನಗನ್ನಿಸುತ್ತೆ ಅವುಗಳ ಇರಾಕ್ ಇಂದಲೇ ಬಂದು ಇಲ್ಲಿ ನೆಲೆಸಿರಬೇಕು ಇಲ್ಲದಿದ್ದರೆ ಅಷ್ಟು ಕಡಿಮೆ ಅವಧಿಯಲ್ಲಿ ದಾಳಿಗೆ ಪ್ರತಿ ದಾಲೆ ಹೂಡಲು ಬೇರೆ ಯಾರಿಂದಲೂ ಸಾಧ್ಯವಿರಲಿಲ್ಲ. ಇದನ್ನು ಪುಷ್ಟಿಕರಿಸುವಂತೆ ಅವು ಶುರು ಮಾಡಿದ್ದೆ ಗೆರಿಲ್ಲಾ ಮಾದರಿಯ ಯುದ್ದ. ಮಲಗುವ ಮುಂಚೆ ಇಡಿ ತಡಿ ಹುಡುಕಿದರೂ ಒಂದು ಸಿಗುತ್ತಿರಲಿಲ್ಲ ಆದರೆ ಮಧ್ಯರಾತ್ರಿ ಹೊತ್ತಿಗೆ ಅದೆಲ್ಲಿಂದ ಬಂದು ಬಿಡುವುತಿದ್ದವೋ ತಿಳಿಯದು.ತಕ್ಷಣ ಎದ್ದು ಲೈಟ್ ಹಾಕಿದರೆ ಮತ್ತೆ ಮಂಗಮಾಯ.ಇಷ್ಟೆಲ್ಲಾ ಅದ ಮೇಲೆ ನಾನು ಯುದ್ಧ ಘೋಷಿಸಿದ್ದು.

ಇದೆಂತ ಕಠಿಣ ಶಿಕ್ಷೆ ದೊರೆತರು ಪರವಾಗಿಲ್ಲ ಅವುಗಳ ಸಜೀವ ದಹನ ಮಾಡೇ ತೀರುತ್ತೇನೆ ಎಂದು.ಹಾಗೆ ಮಾಡಬೇಕೆಂದರೆ ಮೊದಲು ನಾನು ಅವುಗಳ ಮೇಲೆ ಒಂದು ಕಣ್ಣು ಇಡಬೇಕಾಗಿತ್ತು.ಅಂತು ಸರಿಯಾಗಿ ೧ -೧.೩೦ ರ ಸುಮಾರಿಗೆ ಅವು ನನ್ನ ಹಾಸಿಗೆಯ ಬಳಿ ಬರುತ್ತವೆ ಅನ್ನೋದನ್ನ ತಿಳಿದುಕೊಂಡೆ. ಅಂದರೆ ಅಂದಾಜು ೧೨.೪೫ ಕ್ಕೆ ಸರಿಯಾಗಿ ನಾನು ಎದ್ದು ಕಾರ್ಯೋನ್ಮುಖವಾಗ ಬೇಕು.ಹಾಗಂತ ಅಲಾರಂ ಇಡುವಹಾಗಿರಲಿಲ್ಲ.ಅಂತು ೫ ದಿನದ ಪ್ರಯತ್ನದ ನಂತರ ಕೆಟ್ಟ ಕನಸು ಬಿದ್ದಾಕ್ಷಣ ಸಡನ್ ಆಗಿ ಏಳೋ ಹೀರೋಯಿನ್ ತರ ಸರಿಯಾದ ಸಮಯಕ್ಕೆ ಏಳೋ ನನ್ನ ಪ್ರಯತ್ನ ಸಫಲವಾಯಿತು.ಆಯುಧ ಅಂತ ಅಂಗಡಿಗೆ ಹೋಗಿ ೧೨ ರುಪಾಯಿಯ ದೊಡ್ಡ ಮೊಂಬತ್ತಿ ಮತ್ತು ೧ ಬೆಂಕಿ ಪೊಟ್ಟಣ ತಂದಿರಿಸಿದೆ.

ಪಕ್ಕದಲ್ಲೇ ಇರುವ ಜೋತಿಷ್ಯಾಲಯಕ್ಕೆ ಹೋಗಿ ಸದ್ಯಕ್ಕೆ ಯಾವುದೇ ಕಂಟಕವಿಲ್ಲವೆಂದು ಖಾತ್ರಿ ಪಡಿಸಿಕೊಂಡು,ಹಾಗೆ ಒಂದು ಒಳ್ಳೆ ದಿನವನ್ನು ಗೊತ್ತು ಮಾಡಿಕೊಂಡು ಬಂದೆ. ಅವಮಾಸ್ಯೆ ರಾತ್ರಿ ಬೇರೆ ಸಂಪೂರ್ಣ ಕತ್ತಲು ನಾನಂದು ಕೊಡಿದ್ದಕಿಂತ ೧೦ ನಿಮಿಷ ಮೊದಲೇ ಎಚ್ಚರವಾಯಿತು. ಪಕ್ಕದ ಬಿದಿಯಲ್ಲೆಲ್ಲೋ ಗೀಳು ಇಡುತಿದ್ದ ನಾಯಿ ನಮ್ಮ ಈ ಸಮರಕ್ಕೆ ಕಹಳೆ ಉದಿ start ಅನ್ನೋ ಸಿಗ್ನಲ್ ಬೇರೆ ಕೊಡ್ತು.ಉಳಿದಿರುವ ಸಮಯ ಅವುಗಳ ಚಲನಾ ವೇಗ ಎಲ್ಲವನ್ನು ಲೆಕ್ಕ ಹಾಕಿ ಅವಿನ್ನು ಗೋಡೆಯಿಂದ ಕೆಳಗೆ ಇಳಿಯುತ್ತಿರಬೇಕೆಂದು ನಿರ್ಧರಿಸಿ ಪಕ್ಕದಲ್ಲೇ ಇಟ್ಟಿದ್ದ ಮೊಂಬತ್ತಿ ಮತ್ತು ಕಡ್ಡಿ ಪಟ್ಟಣ ಅಲ್ಲೇ ಇದ್ಯ ಅಂತ ಖಚಿತಪಡಿಸಿಕೊಂಡೆ. ಸರಿಯಾದ ಸಮಯಕ್ಕೆ ಟ್ಯೂಬ್ ಲೈಟ್ ಹಾಕಿ , ಮೊಂಬತ್ತಿ ಹಚ್ಚಿಕೊಂಡು ಸಿಕ್ಕ ಸಿಕ್ಕ ತಿಗಣೆಗಳೆಲ್ಲವನ್ನು ಹಾಗೆ ಸಜೀವ ದಹನ ಮಾಡಿ ನಂತರ ಬೆಡ್ನ ಬಕ್ಸಿ ಅದರ ಹಿಂದೆ ಅಡಗಿದ್ದ ಎಲ್ಲವನ್ನು ಕ್ಷಣ ಮಾತ್ರದಲ್ಲಿ ಸಂಹರಿಸಿದೆ. ರೂಂ ತುಂಬಾ ಸ್ಮಶಾನ ಮೌನ.ಆ ಸ್ಮಶಾನದಲ್ಲೇ ಮಲಗಿ ಬೆಳಿಗ್ಗೆ ಎದ್ದಾಗಲೇ ಗೊತ್ತಾಗಿದ್ದು ತಿಗಣೆ ಸಂಹರಿಸುವ ಬರದಲ್ಲೇ ಬೆಡ್ ನ ಒಂದು ಭಾಗವನ್ನು ಸುಟ್ಟುಹಾಕಿದ್ದೆ ಅಂದು.ಅದಾದಮೇಲೆ ಸಧ್ಯಕ್ಕೆ ಅವುಗಳ ಕಾಟವಿಲ್ಲ.ಆದರೆ ಹೇಳೋದು ಕಷ್ಟ ಈಗಾಗಲೇ ಸದ್ಧಾಂ ನೊಣವಾಗಿ ಬಂದು ಹೋಗಿದ್ದಾನೆ ಅನ್ನೋ ಸುದ್ದಿ ಇದೆ , ಇನ್ನೆಂದು ತಿಗಣೆಯಾಗಿ ಬರುತ್ತಾನೋ ತಿಳಿಯದು.

ಇಂತಿ

ವಿನಯ

ಸೋಮವಾರ, ಜುಲೈ 27, 2009

ಜೇನುಗಳು ಇವು ಸಿಹಿಯ ನೀಡುವ ಜೇನುಗಳು

ನಿನ್ನೆ ತೇಜಸ್ವಿಯವರ ಕರ್ವಾಲೋ ಓದುತ್ತ ಕುಳಿತಿದ್ದೆ.ಅವರ ಮುಖ್ಯ ಉದ್ದೇಶ ಹಾರುವ ಓತಿಯ ಬಗ್ಗೆ ತಿಳಿಸಿಕೊಡುವುದಾಗಿದ್ದರು ಅದರ ಮಧ್ಯೆ ಎಲ್ಲೂ ಅದು ತಪ್ಪದಂತೆ ಜೇನಿನ ಬಗ್ಗೆ ಅವರು ಮಾಹಿತಿ ನೀಡಿರುವ ರೀತಿ ನಿಜಕ್ಕೂ ಅದ್ಬುತವಾಗಿದೆ.ಏನೇನು ಹೇಳಬೇಕೋ ಅದನ್ನ ಅವರು ಉತ್ತಮವಾಗೆ ವಿವರಿಸಿದ್ದರು ಕೂಡ ಅದೊಂಚುರು ಬಿಟ್ಟರೆನೋ , ಇದೊಂದಿಷ್ಟು ಹೇಳಬಹುದಿತ್ತೇನೋ ಅನ್ನೋ ತುಡಿತ ನನಗಾಗುತಿತ್ತು.ಅವರು ಹೇಳಿರುವ ಪರಿಸರದಲ್ಲೇ ನಾನು ಹುಟ್ಟಿ ಬೆಳೆದಿರುವುದರಿಂದ ಬಹುಶಃ ಇದು ಸಹಜ ಅನ್ನಿಸುತ್ತೆ. ಈ ಜೇನುಗಳ ಬಗ್ಗೆ ಮಾತಡೋದಾದರೆ ನಾನು ಆ ವಿಷಯದಲ್ಲಿ ಸ್ವಲ್ಪ ತಿಳಿವಳಿಕೆಯುಳ್ಳವನು ಅಂದುಕೊಳ್ಳುತ್ತೇನೆ.

ಚಿಕ್ಕವನಾಗಿದ್ದಾಗ ಶೌಚಾಲಯಕ್ಕೆ ಹೊರ ಹೋಗುತ್ತಿದ್ದಾಗ, ಶಾಲೆಯಲ್ಲಿ ಮೂತ್ರ ವಿಸರ್ಜನೆಗೆಂದು ಅಲ್ಲೇ ಪಕ್ಕದಲ್ಲಿದ್ದ ಅಕೆಶಿಯ ಪ್ಲಾಂಟ್ ಗೆ ಹೋಗುತ್ತಿದ್ದಾಗ ಅಥವಾ ಅಮ್ಮನೊಂದಿಗೆ ಕಟ್ಟಿಗೆಗೆ ಅಂತ ಕಾಡಿನ ಒಳಗೆ ಹೋದಾಗ ಎಲ್ಲೇ ಆದರೂ ಈ ಕೀಟಗಳ , ಪಕ್ಷಿಗಳ ಬಗ್ಗೆ ನನ್ನ ಒಳಗೊಂಡು ವಿಚಿತ್ರ ಆಸಕ್ತಿ ಬರುತಿತ್ತು.ಈಗಿನವರ ಹೇಳಿಕೊಳ್ಳೋ ತರ ವೈಜ್ಞಾನಿಕ ವೀಕ್ಷಣೆ ಅಲ್ಲದಿದ್ದರೂ ಸಹಜವಾದ ಕುತೂಹಲ ಇದ್ದೆ ಇರುತಿತ್ತು.ಅದಕ್ಕೆಂದೇ ಏನೋ ನಮ್ಮನೆ ಎದುರುಗಡೆಯ ಮರದಲ್ಲಿ ಇದ್ದ ಕಾಗೆ ಮರಿಗಳು ಕೆಳಗೆ ಬಿದ್ದಾಗ ಅದನ್ನ ಸಾಕೋಣ ಅಂತ ಹಿಡಿಯಹೋಗಿ ತಾಯಿ ಕಾಗೆ ಹೊಡೆಯಲು ಬಂದು ಸ್ವಲ್ಪದರಲ್ಲೇ ತಪ್ಪಿಸಿಕೊಂಡು ಆಮೇಲೆ ಅಪ್ಪನ ಹತ್ತಿರ ಪೆಟ್ಟು ತಿಂದಿದ್ದೆ. ನನ್ನ ಮತ್ತು ನನ್ ಅಮ್ಮನ ಮುದ್ದಿನ ಸಂಗಾತಿ ಎಂದರೆ ಬೆಕ್ಕು.ಅದೊಂದು ದಿನ ಹೀಗೆ ಬೇಟೆಯಾಡುತ್ತ ಗಿಳಿಯನ್ನೇ ಹಿಡಿದು ಬಿಟ್ಟಿತ್ತು.ಅರೆ ಪ್ರಜ್ಞಾವಸ್ತೆಯಲ್ಲಿ ಇದ್ದ ಅದನ್ನು ತಂದು ಏನೇ ಮಾಡಿದರು ಅದನ್ನ ನಮ್ಮಿಂದ ಉಳಿಸಿಕೊಳ್ಳಲಾಗಿರಲಿಲ್ಲ. ನಮ್ಮನೆ ಪಕ್ಕದಲ್ಲಿರುವ ದೈತ್ಯಾಕಾರದ 'ಬೆಳಲೆ' ಮರ ಈಗಲೂ ಅದೆಷ್ಟೋ ಗಿಳಿ, ಮರಕುಟುಕ....ಇತ್ಯಾದಿ ಪಕ್ಷಿಗಳ ಆಶ್ರಯ ತಾಣವಾಗಿದ್ದರೆ , ನನಗೆ ನನ್ನ ಕುತೂಹಲ ಅಡಗಿಸುವ ಪ್ರಯೋಗಶಾಲೆ.

ಇನ್ನು ಜೇನಿನ ಬಗ್ಗೆಯ ನನ್ನ ವಿಶೇಷ ಆಸಕ್ತಿಗೆ ನನ್ನ ಅಪ್ಪನೇ ಕಾರಣ ಎಂದರೆ ತಪ್ಪಾಗಲಾರದು. ಸಾಮಾನ್ಯವಾಗಿ ಮಲೆನಾಡ ಮನೆಗಳಲ್ಲಿ ಜೇನು ಸಾಕಣೆ ಒಂದು ಹವ್ಯಾಸ.ನಾನು ಚಿಕ್ಕವನಿದ್ದಾಗಿಂದ ನಮ್ಮ ಮನೆಯಲ್ಲಿ ಜೇನು ಪೆಟ್ಟಿಗೆ ಇದೆ.ಕಳೆದ ಒಂದೆರಡು ವರ್ಷದಿಂದ ಅಪ್ಪ ಅವುಗಳನ್ನು ಸಾಕುವ ಆಸಕ್ತಿ ತೊರೆದಿದ್ದಾರೆ.ಹಾಗಾಗಿ ಖಾಲಿ ಪೆಟ್ಟಿಗೆ ಇನ್ನು ಕಾಯುತ್ತ ಇದೆ.ಆದರೂ ನಮ್ಮ ಪಕ್ಕದ ಮನೇಲಿ ಇನ್ನು ಇದೆ.ನಾ ಹೋದಾಗೆಲ್ಲಾ ಒಂದು ಸಿಹಿ ಮುತ್ತು ಕೂಡ ಕೊಡುತ್ತಿರುತ್ತವೆ.
ಕರ್ವಾಲೋದಲ್ಲಿ ಬರೋ ಮಂದಣ್ಣನ ತರಾನೆ ನನ್ನ ಅಪ್ಪನ ಸ್ನೇಹಿತರೊಬ್ಬರಿದ್ದಾರೆ.ಅವರು ಅದರಲ್ಲಿ ಎಷ್ಟು ಪಳಗಿದ್ದಾರೆಂದರೆ ಕೇವಲ ಒಂದು ಹುಳುವಿನ ಜಾಡು ಹಿಡಿದು ಅದರ ನೆಲೆಯನ್ನೇ ಕಂಡುಹಿಡಿಯಬಲ್ಲರು.ಅವರು ಯಾವುದೇ ರೀತಿಯ ಆಧುನಿಕ ಉಪಕರಣಗಳನ್ನಾಗಲಿ ಅಥವಾ ಸಂಶೋಧನಾ ಗ್ರಂಥಗಳನ್ನೂ ಬಳಸಿದವರಲ್ಲ.

ನನಗೆ ನೆನಪಿರುವಂತೆ ನಾನು ಮೊತ್ತ ಮೊದಲ ಬಾರಿಗೆ ಜೇನು ಕಚ್ಚಿಸಿಕೊಂಡಿದ್ದು ೪ ಅಥವೋ ೫ ನೆ ವರುಷದವನಿದ್ದಾಗ.ಖಾಲಿ ಆಗಿದ್ದ ಪೆಟ್ಟಿಗೆಗೆ ಅಪ್ಪ ಮತ್ತು ಅವರ ಸ್ನೇಹಿತರು ಹೋಗಿ ಜೇನು ಕೂರಿಸಿಕೊಂಡು ಬಂದಿದ್ದರು.ಹಾಗೆ ಕೇವಲ ಮರಿ ಇರುವ ಹಲ್ಲೆ(ಜೇನುಗಳು ಕಟ್ಟುವ ಮೇಣದಿಂದ ತಯಾರಿಸಿದ ಆಕಾರಗಳು) ಮಾತ್ರ ಪೆಟ್ಟಿಗೆ ಒಳಗಿಟ್ಟು, ಉಳಿದ ತುಪ್ಪವಿರುವ ಒಂದು ಹಾಳೆಯಲ್ಲಿ (ಅಡಿಕೆ ಹಾಳೆ) ಹಾಕಿ ಅಂಗಳಕ್ಕೆ ತಂದಿಟ್ಟಿದ್ದರು.ನಾನು ಅದನ್ನ ತಿನ್ನುವ ಉತ್ಸಾಹದಲ್ಲಿ ಒಂದು ಸಣ್ಣ ಹಲ್ಲೆ ಎತ್ತಿಕೊಂಡು ಹಾಗೆ ಬಾಯಿಒಳಗೆ ಹಾಕಿಕೊಂಡು ಬಿಟ್ಟೆ.ಮೊದಲೇ ತಮ್ಮ ಸ್ವಸ್ಥಾನ ಹಾಳಾಗಿ ಹೋಗಿದ್ದ ಕೋಪ ಬೇರೆ , ಈಗ ಯಾರೋ ಬಂದು ತಾವು ಮಾಡಿದ ತುಪ್ಪ ಬೇರೆ ತಿನ್ನುತಿದ್ದಾರೆ ಅನ್ನಿಸಿತೋ ಏನೋ ಆ ಹಳೆ ಒಳಗೆ ಗುಯ್ ಗುಡುತ್ತ ಇದ್ದ ೨ ಜೇನ್ನೊಣಗಳು ನನ್ನ ಮೇಲೆ ಹಠಾತ್ ದಾಳಿ ಮಾಡಿ ಎರೆಡು ಕೆನ್ನೆಗಳನ್ನು ಒಂದಿಂಚು ಉದಿಸಿದ್ದವು.ಇನ್ನು ಈ ಜೇನಿನ ಸಹವಾಸವೇ ಬೇಡ ಅನ್ನಿಸಿದ್ದರೂ ಅದರ ತುಪ್ಪ ತಿಂದ ಮೇಲೆ ಅವು ಕಚ್ಚಿದ್ದೆಲ್ಲವು ಮರೆತು ಹೋಗಿತ್ತು.

ಹಾಗೆ ಶುರುವಾದ ಜೇನಿನೊಡಗಿನ ನನ್ನ ಸಂಬಂಧ ಕೆಲಸ ಅಂತ ಇಲ್ಲಿಗೆ ಬಂದು ಸೇರಿದ ಮೇಲೆ ನಿಂತೇ ಹೋಗಿದೆ ಅಂತಾನೆ ಹೇಳಬಹುದು.ಹಾಗಂತ ನಾನೇನು ಜೇನಿನ ಬಗ್ಗೆ ಪೂರ್ತಿ ಅರಿತ ಪಂಡಿತನಲ್ಲ. ಅವು ನನ್ನ ಮಟ್ಟಿಗೆ ನನ್ನ ಉತ್ತಮ ಗೆಳೆಯರು ಎಂದಷ್ಟೇ ಹೇಳಬಲ್ಲೆ. ಆಟಕ್ಕೆ ಆಟಿಕೆ ಇಲ್ಲದಿದ್ದಾಗ ಆ ಪೆಟ್ಟಿಗೆಯ ಬಳಿ ಕುಳಿತು ಗಂಡು ಜೇನುಗಳ ಜೊತೆ ಆಟವಾಡಿ ಕೊನೆಗೆ ಅವನ್ನು ಕೊಂದುಬಿಡುತಿದ್ದೆ. ಬೆಳಿಗ್ಗೆ ಬೇಗ ಎದ್ದು ಅವುಗಳ ಪೆಟ್ಟಿಗೆ ಬಳಿ ಕುಳಿತು ಅವು ತರುವ ಮಕರಂಧದ ಸುವಾಸನೆ ಸವಿಯುತಿದ್ದೆ.ಚಿಕ್ಕಪ್ಪನ ಜೊತೆ ಸೇರಿ ಜೇನು ಕೀಳಲು ಹೋಗಿ ಕಚ್ಚಿಸಿಕೊಳ್ಳಬಾರದ ಜಾಗದಲ್ಲಿ ಇಂಬಳದಿಂದ ಕಚ್ಚಿಸಿಕೊಂಡು ೨ ದಿನ ಮಲಗಿದ್ದೆ.ಅಪ್ಪನ ಸ್ನೇಹಿತರೊಡನೆ ರಾತ್ರಿ ಗಾಢ ಕಾಡಿನೊಳಗೆ ಹೋಗಿ ಅವರು ಪೆಟ್ಟಿಗೆಗೆ ಜೇನು ತುಂಬುವುದನ್ನು ಮೊದಲ ದಿನ ಶಾಲೆಗೆ ಬಂದ ವಿಧ್ಯಾರ್ಥಿಯಂತೆ ಕೂತು ನೋಡಿದ್ದೇನೆ. ನನಗೆ ಅವುಗಳ ಬಗೆಗಿನ ಭಯ ಹೋಗಲು ಅವರು ಒಂಥರಾ ಕಾರಣ ಅನ್ನಬಹುದು. ಕೆಲವೊಮ್ಮೆ ಪೂರ್ತಿ ಜೇನು ತುಂಬಿರುವ ಬಟ್ಟೆ ನನ್ನ ಕೈಯಲ್ಲಿ ಕೊಟ್ಟು ಅವರ ಪಾಡಿಗೆ ಅವರು ಪೆಟ್ಟಿಗೆಯಲ್ಲಿನ ಆಯತಾಕಾರದ ಫ್ರೇಮ್ ಗಳಿಗೆ ಮರಿಗಳಿರುವ ಹಲ್ಲೆ ಕಟ್ಟುತ್ತ ಕೂತು ಬಿಡುತಿದ್ದರು.

ಜೇನು ಪ್ರಪಂಚ ನಿಜಕ್ಕೂ ಅಚ್ಚರಿಗಳ ಸರಮಾಲೆಯನ್ನೇ ನಿಮ್ಮ ಮುಂದೆ ತೆರೆದಿಡುತ್ತದೆ. ಮುಖ್ಯವಾಗಿ ಸಾಕುವ ಜೇನುಗಳಲ್ಲಿ ನಾವು ಕಾಣುವುದು ಎರೆಡು ರೀತಿ (ನಾನು ನನ್ನ ಅನುಭವದ್ದನ್ನು ಹೇಳುತಿದ್ದೇನೆ). ೧ ) ಬಿಳಿ ತುಡಿ ೨)ಕಪ್ಪು ತುಡಿ. ಹೆಜ್ಜೆನನ್ನು ಕೇವಲ ತುಪ್ಪಕ್ಕಾಗಿ ಕಿಳುತ್ತಾರೆಯೇ ಹೊರತು ಪೆಟ್ಟಿಗೆ ಒಳಗೆ ಅವನ್ನು ಕುರಿಸೋಲ್ಲ. ಬಿಳಿ ತುಡಿ ಒಳ್ಳೆ ತುಪ್ಪ ಮಾಡುತ್ತವೆ ಅಂತ ನಾನು ಕೇಳಿದ ನೆನಪು ಆದರೆ ಕರ್ವಾಲೋ ದಲ್ಲಿ ಅದಕ್ಕೆ ತದ್ವಿರುದ್ಧ ಹೇಳಿಕೆ ಇದೆ.ಹಾಗಾಗಿ ಈ ವಿಷಯದಲ್ಲಿ ನಾನು ಈ ಬಾರಿ ಊರಿಗೆ ಹೋದಾಗ ಖಾತ್ರಿ ಮಾಡಿಕೊಳ್ಳಬೇಕಿದೆ. ಹಾಗೆ ಅಲ್ಲಿರುವ ಒಂದು ವಾಕ್ಯದಂತೆ ಜೇನುಗಳು ರಾತ್ರಿ ಸಂಚರಿಸುತ್ತವೆ ಅಂತ ಇದೆ.ನನಗೆ ತಿಳಿದ ಮಟ್ಟಿಗೆ ಅವು ನಿಶಾಚಾರಿಗಳಲ್ಲ, ಹಾಗಾಗಿ ಅದು ಕೇವಲ ಕಲ್ಪನೆ ಅನ್ನಿಸುತ್ತೆ. ರಾಶಿ ರಾಶಿ ಯಾಗಿರುವ ಜೇನುಗಳು ಅವಲ್ಲೇ ಒಂದಾದ "ರಾಣಿ ಜೇನು" ಹೇಳಿದಂತೆ ಕೇಳಿಕೊಂಡು ಹೇಗಿರುತ್ತವೆ ಅನ್ನೋದು ಒಂದು ವಿಸ್ಮಯ.

ಸಾಮಾನ್ಯವಾಗಿ ಇವು ಮರದ ಪೊಟರೆಯಲ್ಲೋ ಅಥವಾ ಯಾವುದಾದರು ಗೆದ್ದಲಿನ ಹುತ್ತದಲ್ಲೋ ಸೇರಿಕೊಂಡು ಬಿಡುತ್ತವೆ. ಇನ್ನೊಂದು ಗಮನಿಸಬೇಕಾದ ಅಂಶ ಅಂದ್ರೆ ಅವು ಸೇರಿಕೊಂಡಿರುವ ಪೊಟರೆ ಅಥವಾ ಹುತ್ತದ ಹೊರ ತೆರಳುವ ಬಾಗಿಲು ನೇರವಾಗಿ ಅವುಗಳನ್ನು ಹೂವು ಗಳಿರುವ ಕಡೆ ಕೊಂಡೈಯುವಂತೆ ಇರುತ್ತೆ. ಇರುತ್ತೆ ಅನ್ನೋಕಿಂತ ಆ ತರದ ಸ್ಥಳ ನೋಡಿ ಅಲ್ಲಿ ಅವು ವಾಸವಾಗಿರುತ್ತವೆ. ಗೆದ್ದಲಿನ ಗೂಡಿನಲ್ಲಿ ಇರುವ ಜೇನನ್ನು ಕೂಡಿಸುವುದು ಸುಲಭ. ಮರದ ಪೊಟರೆಯಲ್ಲಿದ್ದರೆ ಸಮಸ್ಯೆಗಳ ಸರಮಾಲೆ ಬರುವುದು.ಸಾಮಾನ್ಯವಾಗಿ ಜೇನು ಕೂಡಿಸುವಾಗ ಸುತ್ತ ಮುತ್ತ ಶಾಖ ಉಂಟುವಾಗುವಂತೆ ಮಾಡಿ , ಮೊದಲು ಅವುಗಳ ಹಲ್ಲೆಗಳನ್ನೂ ಕಿತ್ತು ತುಪ್ಪ ಇರುವುದು ಮತ್ತು ಮರಿಗಳು ಇರುವುದು ಎರೆಡನ್ನು ಬೇರ್ಪಡಿಸುತ್ತಾರೆ. ನಂತರ ಮರಿಗಳಿರುವ ಹಲ್ಲೆಗಳನ್ನು ಪೆಟ್ಟಿಗೆಯೊಳಗಿನ ಫ್ರೇಮ್ ನ ಗಾತ್ರಕ್ಕೆ ಕತ್ತರಿಸಿ ಬಾಳೆಪಟೇ ಹಗ್ಗದಿಂದ ಆ ಫ್ರೇಮ್ ನೊಂದಿಗೆ ಕಟ್ಟಿ ಇಡುತ್ತಾರೆ. ಪೆಟ್ಟಿಗೆಯ ಸಿದ್ಧತೆ ನಡೆದ ಮೇಲೆ ಹುಳುಗಳನ್ನು ಅದರ ಒಳಗೆ ಬಿಡೋದು, ಅಪ್ಪನ ಸ್ನೇಹಿತರು ಕೈಗೆ ಒಂದು ಬಟ್ಟೆ ಕಟ್ಟಿಕೊಂಡು ಒಳ್ಳೆ ರೇಷ್ಮೆ ಹುಳು ತುಂಬೋ ತರ ಅದನ್ನ ತುಮ್ಬುತಿದ್ದರು. ಅವು ಕಚ್ಚಿ ಕಚ್ಚಿ ಅವರಲ್ಲಿ ಅದೆಂತ ಪ್ರತಿರೋಧಕ ಶಕ್ತಿ ಬೆಳೆದಿದೆ ಎಂದರೆ ಇರುವೆ ಕಚ್ಚಿದರೆ ತುರಿಸಿಕೊಳ್ಳುತ್ತಾರೆ ಜೇನು ಕಚ್ಚಿದರೆ ಏನು ಆಗೇ ಇಲ್ಲ ಅನ್ನೋ ತರ ಇರುತ್ತಾರೆ.ನಂಗು ಕಚ್ಚಿಸಿಕೊಂಡು ಅಭ್ಯಾಸವಾಗಿತ್ತಾದ್ದರಿಂದ ಉದಿಕೊಳ್ಳುತ್ತಿರಲಿಲ್ಲ ಅನ್ನೋದು ಬಿಟ್ರೆ ತುರಿಕೆ ಅಂತು ಆಗ್ತಿತ್ತು.

ಜೇನು ಕಚ್ಚೋದು ನಮಗೆ ಕೇವಲ ಪ್ರತಿರೋಧ ಅಂತ ಕಂಡರೂ , ಅದು ಅವುಗಳ ಜೀವನ್ಮರಣದ ವಿಷಯ.ನಿಮಗೆ ತಿಳಿದಿದೆಯೋ ಇಲ್ಲವೊ ಗೊತ್ತಿಲ್ಲ ಒಮ್ಮೆ ಕಚ್ಚಿದ ಜೇನು ಮತ್ತೆ ಬದುಕಿ ಉಳಿಯಲ್ಲ. ಕಾರಣ ಅವು ಕಚ್ಚುವ ಭಾಗ ಅದರ ದೇಹಕ್ಕೆ ಅಂಟಿಕೊಂಡಿರುತ್ತದೆ. ಒಮ್ಮೆ ಅದು ಕಚ್ಚಿ ಅದನ್ನ ಹೊರ ತೆಗೆಯೋಕೆ ಪ್ರಯತ್ನಿಸುವಾಗ ಆ ಭಾಗ ನಮ್ಮ ದೇಹದಲ್ಲೇ ಉಳಿದು ಅದರ ಸಾವು ಸಂಭವಿಸುತ್ತದೆ(ಇದರ ಬಗ್ಗೆ ಇನ್ನು ಹೆಚ್ಚು ತಿಳಿದವರು ವಿವರಿಸಬಹುದು). ಅದು ಕಚ್ಚಿದಾಗ ನಮಗೆ ಹೆಚ್ಚು ನೋವು ಉಂಟಾಗುವುದಿಲ್ಲ , ಅದು ಆ ಮುಳ್ಳನ್ನು ಹೊರ ಎಳೆಯಲು ಪ್ರಯತ್ನ ಪಡುತ್ತಲ್ಲ ಅವಾಗಲೇ ನಮಗೆ ನೋವಿನ ಅನುಭವವಾಗೋದು. ಈಗ ಹೇಳಿ ಜೇನು ಕಡಿದರೆ ನಿಜವಾದ ನೋವಾಗೋದು ಯಾರಿಗೆ. ಇನ್ನೊಂದು ಜೇನು ತಾವೇ ತಾವಾಗಿ ಬಂದು ಯಾರನ್ನು ಕಡಿಯೋಲ್ಲ.ಅದಕ್ಕೆ ಕೋಪಗೊಳ್ಳಲು ಪ್ರಚೋದನೆ ದೊರಕಿರಬೇಕು ಅಷ್ಟೇ.ಕೆಲವೊಮ್ಮೆ ಅವುಗಳ ಗೂಡಿನ ಮೇಲೆ ಹಲ್ಲೆ ಮಾಡುವ ಇರುವೆ , ಹಾವು ಗಳಿಗೆ ಪ್ರತಿರೋದಿಸಹೋಗಿ ಎದುರುಗಡೆ ಬಂದವರನೆಲ್ಲ ಕಡಿದು ಬಿಡುತ್ತವೆ.

ಒಮ್ಮೆ ಪೆಟ್ಟಿಗೆ ಒಳಗೆ ಕೂಡಿಸಿದ ಹಾಗೆ ಕೆಲಸ ಮಾಡಲು ಶುರುಮಾಡುವುದಿಲ್ಲ. ಕೆಲ ಕಾಲ ಅಲ್ಲಿನ ವಾತಾವರಣದ ಸಮೀಕ್ಷೆ ನಡೆಸಿ ಏನು ಅಪಾಯ ಇಲ್ಲ ಅಂತ ಅರಿತುಕೊಂಡ ಮೇಲೆ ಅವು ಕೆಲಸ ಶುರು ಮಾಡಿಕೊಳ್ಳೋದು.ಮೊದಲ ಕೆಲಸ ಅಂದರೆ ಒಳಗಿರುವ ಹಲ್ಲೆಗಳನ್ನು ಫ್ರೇಮ್ ನೊಂದಿಗೆ ಜೋಡಿಸೋದು. ನೀವು ಯೋಚಿಸಬಹುದು ಅದಾಗಲೇ ನಾವೇ ಅವಕ್ಕೆ ಬಾಳೆ ಹಗ್ಗ ಕಟ್ಟಿದ್ದೆವೆಲ್ಲ ಎಂದು , ಅಲ್ಲೋ ಇರೋದು ನೋಡಿ ಜೇನು ಗಳು ಬಹಳ ಸ್ವಾವಲಂಬಿಗಳು. ನೀವು ಏನೇ ಮಾಡಿಟ್ಟರು ಅವು ಅದನ್ನ ಉಪಯೋಗಿಸದೆ ಕಟ್ಟಿರುವ ಬಾಳೆ ಪಟೇ ಹಗ್ಗಗಳನ್ನು ಕತ್ತರಿಸಿ ಪೆಟ್ಟಿಗೆ ಇಂದ ಹೊರಗೆ ತಂದು ಹಾಕಿ ಬಿಡುತ್ತವೆ. ಆಮೇಲೆ ಶುರುವಾಗೋದೇ ಮಕರಂಧ ಬೇಟೆ.

ಪೆಟ್ಟಿಗೆಯಲ್ಲಿರುವ ರಾಣಿ ಜೇನಿಗೆ ಕೇವಲ ಆಡಳಿತದ ಕೆಲಸ ಮಾತ್ರ.ಅದು ಹಾರಿ ಹೋಗದಂತೆ ಪೆಟ್ಟಿಗೆಯ ಒಂದು ಕಡೆ ಗೇಟ್ ಹಾಕಿರುತ್ತೇವೆ.ರಾಣಿ ಜೇನು ಎಲ್ಲವಕ್ಕಿಂತ ಸ್ವಲ್ಪ ದೊಡ್ಡ ಇರೋದ್ರಿಂದ ಆ ಗೇಟ್ ಇಂದ ಅದಕ್ಕೆ ಹೊರೋಗೆ ಬರೋಕ್ಕೆ ಆಗೋಲ್ಲ. ಇನ್ನು ಪೆಟ್ಟಿಗೆಯಲ್ಲೇ ಇರುವ ಗಂಡು ಹುಳುಗಳು ಕೇವಲ ಸಂತಾನೋತ್ಪತ್ತಿಗಾಗಿ ಮಾತ್ರ ಬಳಕೆ ಆಗುತ್ತವೆ. ಕೆಲವೊಮ್ಮೆ ಅವುಗಳ ಸಂಖ್ಯೆ ಜಾಸ್ತಿ ಆದಾಗ ಹೆಣ್ಣು ಹುಳುಗಳೇ ಅವನ್ನು ಕೊಂದು ಹೊರ ತಂದು ಹಾಕುತ್ತವೆ. ಗಂಡು ಹುಳುಗಳ ಹಿಂಬಾಗ ಕಪ್ಪಾಗಿರುತ್ತದೆ ಮತ್ತು ಅವು ಕಚ್ಚುವುದಿಲ್ಲ. ಕೆಲವೊಮ್ಮೆ ಒಳಗಿರುವ ಹುಳು ಗಳ ಸಂಖ್ಯೆ ಜಾಸ್ತಿ ಆದಾಗ ಅವಲ್ಲೇ ಇನ್ನೊಂದು ಹೊಸ 'ರಾಣಿ ' ಯನ್ನು ಆರಿಸಿಕೊಂಡು, ಸ್ವಲ್ಪ ಪ್ರಮಾಣದ ಹುಳುಗಳು ಬೇರೆ ಹೋಗುವುದು ಉಂಟು.ಇದು ಒಳಗೆ ಇರುವ ಒಟ್ಟು ಸ್ಥಳವಾಕಾಶ ಮತ್ತು ಅವುಗಳ ಒಟ್ಟು ಸಂಖ್ಯೆಯಾ ಮೇಲೆ ಅವಲಂಬಿತವಾಗಿರುತ್ತದೆ.

ಹಾಗಂತ ಪೆಟ್ಟಿಗೆಯೊಳಗಿನ ಜೇನುಗಳ ಜೀವನವೇಣು ಸುಖ ಜೀವನವಲ್ಲ. ತರ ತರಹದ ಇರುವೆಗಳು ಇವುಗಳ ಮೇಲೆ ಆಕ್ರಮಣ ಮಾಡುತ್ತಲೇ ಇರುತ್ತವೆ. ಹಾವಿನ ವಿಷ ಗಾಳಿ ಇಂದ ಕೂಡ ಕೆಲವೊಮ್ಮೆ ಇಡೀ ಪೆಟ್ಟಿಗೆಯೇ ಸ್ಮಶಾನವಾಗುವುದು ಉಂಟು.ಒಮ್ಮೆ ಯಂತು ಯಾವುದೇ ಕಾರಣವಿಲ್ಲದೆ ಜೇನುಗಳು ಪೆಟ್ಟಿಗೆಯಲ್ಲಿ ಸಾಯ ತೊಡಗಿದವು.ಇದನ್ನ ನೋಡಿ ಅವನ್ನು ಮತ್ತೆ ಉಳಿಸಿಕೊಳ್ಳುವ ಮನಸ್ಸಾಗದೆ ಅಪ್ಪ ಪೆಟ್ಟಿಗೆಯ ಮುಚ್ಚಳವನ್ನೇ ತೆಗೆದರೂ ಅವುಗಳಿಂದ ಹಾರಲಾಗುತ್ತಿರಲಿಲ್ಲ. ಕೊನೆಗೆ ಅವು ಅಲ್ಲೇ ಸತ್ತು ಹೋಗಿದ್ದು.ನನಗಂತೂ ಅದನ್ನು ನೋಡಲಾಗಿರಲಿಲ್ಲ.ಆಮೇಲೆ ಪೆಟ್ಟಿಗೆ ಸ್ವಚ್ಛ ಮಾಡುವಾಗಲೇ ಗೊತ್ತಾಗಿದ್ದು ಅದರೊಳಗೆ ಕಟ್ಟೆ ಇರುವೆ ಜಾತಿಯ ಇರುವೆ ಸೇರಿಕೊಂಡು ಇವನ್ನು ದ್ವಂಸ ಗೊಳಿಸಿದ್ದವು ಅಂತ.ಹೀಗೆ ಸಿಹಿ ನೀಡುವ ಪ್ರಾಣಿಗೂ ಕಷ್ಟಗಳ ಸರಮಾಲೆ ಇರುತ್ತೆ ಅನ್ನೋದನ್ನ ನಾವು ಅರ್ಥ ಮಾಡಿಕೊಳ್ಳಬೇಕು.

ಇಂತಿ

ವಿನಯ

ನಿಲ್ಲದ ಪಯಣ

ನಿಲ್ಲದ ಪಯಣ
ಮರ ಮಟ್ಟು ಪೊದೆ ಒಳಗೆ ಹಸಿರ ಹಾಸಿನ ಮೇಲೆ ಮೂಡುತಿದೆ ಕಣ್ಣೀರ್ ಎಂಬ ನೀರ ಹನಿಗಳು