ಶುಕ್ರವಾರ, ಅಕ್ಟೋಬರ್ 16, 2009

ನನ್ನವಳಿಗೆ... ಜೇನ ಹನಿಗಳು.. (ಪ್ರೀತಿಯ ಅಪ್ಪಿ(ಪ್ಪು)ಗೆ )ನೀ ಬೇಕೀಗ


ಚಿಗುರೆಲೆಯ ತುತ್ತ ತುದಿಗೆ
ಬಂದು ನಿಂತು..
ಈಗೋ ಆಗೋ
ಭುವಿಯ ಸ್ಪರ್ಶಕ್ಕೆ ಕಾದಿರುವ
ನೀರ ಹನಿಯಂತೆ
ನನ್ನೆದೆಯ ನೋವೆಲ್ಲ
ಕಣ್ಣೀರ ರೂಪ ತಾಳಿ
ಕಣ್ರೆಪ್ಪೆಯನ್ನೆಲ್ಲ ತೋಯ್ದು
ನಿನ್ನೆದೆಯ ಮೇಲೊರಗಿ
ಅದರಾಳಕ್ಕೆ ಇಳಿಯಬೇಕೆಂಬ
ಹೆಬ್ಬಯಕೆಯಲಿ
ಕಾಯುತ್ತಿರುವುದೀಗ


ನನ್ನ ಪ್ರೀತಿ


ನೀರ್ಗಡಲ ಅಲೆಯ ನೀರ್ಗುಳ್ಳೆಯಂತೆ
ಎನ್ನ ಪ್ರೀತಿ
ಪಟಪಟನೆ ಪುಟಪುಟನೇ ಪುಟಿದು,
ಪಟಪಟನೆ ಒಡೆದು
ನಿತ್ಯ ನಿರಂತರ ಚಿಮ್ಮುತ್ತಲೇ ಇರುವುದು

ನನ್ನೆದೆಯ ಚಿಪ್ಪಿನಲ್ಲಿ
ಮರಳ ಕಣವಾಗಿ ನುಸುಳಿ
ನನಗೇ ಅರಿವಾಗದಂತೆ
ಮುತ್ತಾಗಿ ಬೆಳೆದಿರುವೆ
ನೀನಿಂದು

ಸಾಗರದೊಳು ಮುಳುಗುತಿದೆ
ಎಂದೆನಿಸುವ ಸೂರ್ಯನಂತೆ
ನನ್ನ ಪ್ರೀತಿ
ಮುಳುಗಿದೆ ಎಂದೆನಿಸಿದರೂ
ಮುಳುಗದ,
ಮರೆಯಾದಂತೆನಿಸಿದರೂ
ಮರೆಯಾಗದಂತ
ಮತ್ತೆ ಮತ್ತೆ
ಉದಯಿಸುವ ಅನುರಾಗವಿದು

ಮನಸು

ನಿನ್ನ ಸನಿಹ ಬಯಸಿದೆ ಮನಸು
ಪ್ರೀತಿ ತುಂಬಿದ ಆ ಅಪ್ಪುಗೆಯಲಿ
ಮುಳುಗಬೇಕೆನಿಸಿದೆ.
ಮನದಾಳದ ತೊಳಲಾಟಗಳನ್ನೆಲ್ಲಾ
ನಿನ್ನಲ್ಲಿ ತೋಡಿಕೊಳ್ಳಬೇಕಿದೆ.
ನಿನ್ನ ಸನಿಹವಿಲ್ಲದ
ಸಮಯವ ನೆನೆದಾಗಲೆಲ್ಲಾ ಮನಸು
ಮರ ಮರ ಮರುಗತೊಡಗಿದೆ

ಕಾಡ ಬೇಡ ಗೆಳತಿ

ನಿನ್ನ ಪ್ರೀತಿಯ ಕಡಲಲ್ಲಿ
ಮಿಂದೆದ್ದಿರುವ ನನಗೆ
ಬೇರೆಲ್ಲ ಪ್ರೀತಿಯು
ರುಚಿಸದಂತಾಗಿದೆ ಇಂದು,

ನೋಡ ಹೊರಟ
ಬಿಂಬಗಳೆಲ್ಲದರೆದುರು
ನಿನ್ನದೇ ಪ್ರತಿಬಿಂಬವು
ತೋಯುತಿಹುದಿಂದು

ಕಂಡ ಪ್ರತಿ ಬೆಳಕಲ್ಲೂ
ನಿನ್ನದೇ ನಗುವಿನ ಕಾಂತಿಯು
ಕಾಣುತಿಹುದಿಂದು

ಪ್ರತಿ ಹೆಜ್ಜೆಯ ಸದ್ದಿನಲ್ಲೂ
ನಿನ್ನದೇ ಕಾಲ್ಗೆಜ್ಜೆಯ ಸದ್ದು
ಹುಡುಕುತ್ತಿಹೆನಿಂದು

ನನ್ನ ಪಾಡು

ಅವಳ ಪ್ರೀತಿಯಲಿ ತೋಯ್ದು
ಮುಂಜಾವಿನ ಮಂಜಿನಂತಾಗಿದೆ
ನನ್ನೀ ಕಣ್ಣೀರು
ಅತ್ತ ನೀರಾಗಿಯೂ ಹರಿಯದೆ
ಇತ್ತ ಆವಿಯಗಿಯೂ ಆರದೆ
ಪಸರಿಸುತ್ತಿರುವುದು ಈ ಕಂಗಳಿಗೆ

ಬಾ..

ನನ್ನಲ್ಲೇ ಒಂದಾಗು ಬಾ
ನನ್ನ ಮನಸಿನಗಲದಲ್ಲಿ
ನಿನ್ನ ಕನಸುಗಳ ಚಪ್ಪರವ ಹಾಕು ಬಾ


ನನ್ನ ಕೃಷಿ

ಬರಡಾದ ನನ್ನೀ ಮನಕೆ
ಬಿತ್ತಿದೆ ನೀ ಮಮತೆಯ ಬೀಜವ;
ಪ್ರೀತಿಯ ವರ್ಷಧಾರೆಯ ಎರೆದು
ಪೋಷಿಸಿದೆ ನಾ ಅದ;
ಇಂದೆಕೋ ಕಾಡತೊಡಗಿದೆ ಕಳವಳ
ಹೃದಯದ ಅಂತರಾಳದಲ್ಲಿ;
ನಾ ಬೆಳೆಸಿದ ಪೈರು
ಕಳವಾದಂತೆ;
ನನ್ನೆಲ್ಲ ಪ್ರೇಮವ ಬೇರು ಸಮೇತ
ಕಿತ್ತೊಯ್ದಂತೆ;

ಎಲ್ಲಿರುವೆ??

ಕೊರಗುತ್ತಿಹುದು ಎನ್ನ ಮನ
ನಿನ್ನ ಸವಿ ನುಡಿಯ
ಸವಿ ಇಲ್ಲದೆ,
ಬೇಕಾಗಿದೆ ಇಂದು ಎನಗೆ
ನಿನ್ನ ಸವಿಮುತ್ತುಗಳ ಸುರಿಮಳೆ.
ನಿನ್ನ ಸವಿಮುತ್ತಿನಲಿ ಮಿಂದು
ಪೋಣಿಸಿದಷ್ಟೂ ಮುಗಿಯದ
ಮುತ್ತಿನ ಹಾರವಾಗಿದೆ
ಎನ್ನ ಮನವಿಂದು

ಕಣ್-ಮಣ್-ಹನಿಒತ್ತಡದ ಕಟ್ಟೆ ಒಡೆದು
ಮೋಡಗಳಿಂದಾಚೆ ಹೊರಹೊಮ್ಮಿ
ಭೂ ತಾಯಿಯನ್ನೊಮ್ಮೆ ಚುಂಬಿಸಿ
ಅವಳ ಹೃದಯದಂತರಾಳಕ್ಕೆ ಇಳಿದು
ತನ್ನೆಲ್ಲ ದುಃಖವನ್ನು ಅಲ್ಲಿ ಬಚ್ಚಿಟ್ಟು
ತುಸು ತುಸುವಾಗಿ ಅಂತರ್ಜಲದ ರೂಪದಲ್ಲಿ
ಹೊರಬರುತ್ತಿರುವ ಮಳೆನೀರಿನ ಹಾಗೆ ಆಗಿದೆ
ನನ್ನೀ ಕಣ್ಣೀರು..
ಎಲ್ಲರೆದುರು ಅಳಲಾಗದೆ,
ಇನಿಯನೆದೆಗೊರಗಿ
ಅವನಲ್ಲಿರುವ ನನ್ನೆಡೆಗಿನ ಪ್ರೀತಿಯಲಿ ಒಂದಾಗಿ
ಮಧುರ ಆನಂದ ಬಾಷ್ಪವಾಗಿ
ಇಳಿಯಬೇಕೆಂಬ ಆಸೆ

ಮರಳಿ ಬನ್ನಿ ಸುಮಧುರ ನೆನಪುಗಳೇ..ಮರಳಿ ಬನ್ನಿ ಸುಮಧುರ ನೆನಪುಗಳೇ
ಮರೆಯಲಾಗದ ಪ್ರೀತಿಯ ಬುತ್ತಿ ಹೊತ್ತು

ಮೌನವೇ ಮಾತಾಗಿ
ಎದೆ ಬಡಿತವೇ ಮನದ ತುಡಿತವಾಗಿ
ಉಸಿರೇ ಸ್ಪರ್ಶ ಸುಖವ
ನೀಡಿದಂತ ದಿನಗಳನು ಹೊತ್ತು

ಬಲಿತ ರೆಕ್ಕೆಯ ಬಳಸಿ ಗರಿಗೆದರಿ ಹಾರಾಡಿ
ಮರಳಿ ಗೂಡಿನೆಡೆಗೆ ಹೊರಟಾಗ
ಮೂಡಿದ ವಿರಹದ ನೆನಪ ಹೊತ್ತು

ತುಂತುರು ಮಳೆಯಲಿ ಮಿಂದು
ಹಸಿರು ಹಾಸಿನ ಮೇಲೆ ಬಿದ್ದೆದ್ದು ಹೊರಳಾಡಿದ
ಮಧುರ ಸ್ಪರ್ಶದ ನೆನಪ ಹೊತ್ತು

ಮರಳಿ ಬನ್ನಿ ಸುಮಧುರ ನೆನಪುಗಳೇ
ಮರೆಯಲಾಗದ ಪ್ರೀತಿಯ ಬುತ್ತಿ ಹೊತ್ತು

ನನ್ನವಳಾ.....


ಮೂಡಿದೆ ಬೆವರ ಹನಿಗಳು
ಅವಳ ಹಣೆಯ ಮೇಲೆ
ಆಗತಾನೇ ಪೋಣಿಸಿಟ್ಟ ಮುತ್ತಿನ ಹನಿಗಳಂತೆ
ಹನಿಹನಿಯಾಗಿ

ಸೆಟೆದು ನಿಂತಿದೆ ರೋಮಗಳು ಸಾಲು ಮರದಂತೆ
ನನ್ನ ಸ್ಪರ್ಶದ ಪುಳಕಕ್ಕೆ

ಗುಡುಗ ಕೂಡ ಗುಡುಗಿಸ ಹೊರಟ ಹಾಗಿದೆ
ಅವಳ ಎದೆಯ ಬಡಿತವಿಂದು

ಬಿರುಗಾಳಿ ಕೂಡ ಬೆದರಿ ಸ್ತಬ್ಧವಾಗಿದೆ
ಅವಳ ಉಸಿರಾಟದ ವೇಗಕ್ಕೆ

ವಿರಹವಲ್ಲದೇ ಮತ್ತೇನಿದು
ವಿರಹಿಸಿದವನಿಗೇ ಗೊತ್ತು
ಇದರ ಸವಿ ಏನೆಂದು....

ನಿಲ್ಲದ ಪಯಣ

ನಿಲ್ಲದ ಪಯಣ
ಮರ ಮಟ್ಟು ಪೊದೆ ಒಳಗೆ ಹಸಿರ ಹಾಸಿನ ಮೇಲೆ ಮೂಡುತಿದೆ ಕಣ್ಣೀರ್ ಎಂಬ ನೀರ ಹನಿಗಳು