ಶನಿವಾರ, ಜುಲೈ 25, 2009

ಇನ್ನು ಸ್ವಲ್ಪ ಬಾಕಿ ಇದೆ

ಮತ್ತೆ ಹೊಡೆದಾಡಿ ಕೊಂಡಿದ್ದಾರೆ ಅಂದ್ರೆ matter ಸಕತ್ ಸೀರಿಯಸ್ ಆಗೇ ಇರಬೇಕು ಅಂದುಕೊಂಡು ಅದೇನು ತಿಳಿದುಕೊಳ್ಳೋಣ ಅಂತ ಅಮ್ಮನಿಗೆ ಫೋನಾಯಿಸಿದೆ. ಆದರೆ without ಆಕ್ಷನ್ ಅದನ್ನ explain ಮಾಡೋದು ಕಷ್ಟ ಅಂತ ಮತ್ತೊಮ್ಮೆ ಊರಿಗೆ ಬಂದಾಗ ಹೇಳ್ತೇನೆ ಅಂದ್ರು ಅಮ್ಮ ,ನನಗೆ ಯಾಕೋ ಸಮಾಧಾನವೇ ಆಗಲಿಲ್ಲ highlights ತರ ಸ್ವಲ್ಪನಾದ್ರೂ ಹೇಳು ಅಂತ ಹೇಳಿದೆ. ಬಡ್ಡಿಮಗನೆ ಇದೆ ಇಂಟರೆಸ್ಟ್ ಓದೋದರಲ್ಲಿ ಇದ್ದಿದ್ದರೆ ಪೇಪರ್ ಅಲ್ಲಿ ಫೋಟೋನಾದ್ರೂ ಬರ್ತಿತ್ತು ಅಂತ ಗೊಣಗಿಕೊಂಡರು (ಪೇಪರ್ ಅಲ್ಲಿ ಫೋಟೋ ಬರದೋ ಒಂದು ಸಕತ್ matter ಅದರ ಬಗ್ಗೆ ಮುಂದೆ ಬರಿತೆ). ನಮ್ಮ ಅಮ್ಮನ ಒಂದೇ ಒಂದು ಪ್ರಾಬ್ಲಮ್ ಅಂದ್ರೆ e-story ಹೇಳ್ತಾ ಕೂತರೆ ಅವರ ಸ್ವರ ಭೀಮಸೇನ ಜೋಷಿ ಅವರ ಹಾಡಿನಂತೆ ನಿಧಾನವಾಗಿ ತಾರಕಕ್ಕೆ ಏರಿ ಬಿಡುತ್ತೆ. ಒಮ್ಮೆ ಪಕ್ಕದ ಕೇರಿಯ ಕರಿಯ ಅವನ ಹೆಂಡತಿಗೆ ನಮ್ಮ ಮನೆ ಪಕ್ಕದ ತೋಟದಲ್ಲೇ ದನಕ್ಕೆ ಬಡಿಯೋ style ಅಲ್ಲಿ ಸರಿಯಾಗಿ ಬಡಿದು ಬಿಟ್ಟನಂತೆ. ಅಲ್ಲೇ ಹೊಂಬಾಳೆ ಹೆಕ್ತ ಇದ್ದ ಅಮ್ಮ ಅದನ್ನ ನೋಡಿ ಬಿಟ್ಟಿದ್ದಾರೆ,ಅದೇ ನೋಡಿ ಎಡವಟ್ಟಾಗಿದ್ದು.ಮನೆಗೆ ಬಂದೋರೆ ತಮ್ಮ ತಂಗಿಗೆ ಮಿಸ್ ಕಾಲ್ ಮಾಡಿ ಅವಳು ಕಾಲ್ ಮಾಡಿದ ಕೂಡಲೇ ಹಳೆ ಹಿಂದಿ ಫಿಲಂ ಅಲ್ಲಿ over acting ಮಾಡ್ತಾರಲ್ಲ ಆ ಸ್ಟೈಲ್ ಅಲ್ಲಿ with music ( like ಅಯ್ಯೋ , ಬೇಡ್ರಿ , ಹ್ಮಂ ಬೆನ್ನು .....etc) ಅವಳಿಗೆ ಫುಲ್ explain ಮಾಡುತ್ತಿರಬೇಕಾದರೆ ಪಕ್ಕದ ಮನೆ ಚಂದ್ರಯ್ಯ ಅಪ್ಪನೇ ಅಮ್ಮನಿಗೆ ಹೊಡೀತಾ ಇದಾರೆ ಅಂತ ತಿಳ್ಕೊಂಡು , ಹೊಡೆದಾಟ ತಪ್ಪಿಸೋಕೆ ಬಂದಿದ್ರಂತೆ.ಆಮೇಲೆ ಅವರಿಗೆ ಗೊತ್ತಾಗಿದ್ದು ಇದು ಅಮ್ಮನ ಏಕಪಾತ್ರಾಭಿನಯ ಅಂತ.

ಈಗ ಮುಖ್ಯ ವಿಷಯಕ್ಕೆ ಬರೋಣ , ನಮ್ಮೂರಿನ ಕೆಲ ಹೆಂಗಸರು ಹೇಗೆ ಅಂದ್ರೆ ತೇಜಸ್ವಿಯವರ 'ಕಿರಗೂರಿನ ಗಯ್ಯಾಳಿಗಳು' ಕಥೆಗಳಲ್ಲಿ ಬರುವ ದಾನಮ್ಮನನ್ನು ಕೂಡ ಇವರ ಮುಂದೆ ಹಾಗೆ ನಿವಾಳಿಸಿ ಬಿಸಾಡಿಬಿಡಬೇಕು ಅಷ್ಟು powerful.ಮಾತಿನಲ್ಲೂ ,ಹಾಗೆ ಕೆಲಸದಲ್ಲೂ.ಇನ್ನು ಈ ಸ್ಟೋರಿಯಾ ಮುಖ್ಯ ಪಾತ್ರ ಯಶೋಧ ಸಾಕ್ಷಾತ್ ದುರ್ಗಿ. ಜಗಳಕ್ಕೆ ಇಳಿದಲೆಂದಳೆ ಸಂಸ್ಕೃತ ಹಾಗೆ ಲೀಲಾಜಾಲವಾಗಿ ಅವಳ ಬಾಯಿಂದ ಬಂದು ಬಿಡುತ್ತದೆ.ಹಾಗಂತ ಕೆಲಸದಲ್ಲಿ ಏನು ಕಮ್ಮಿ ಇರಲಿಲ್ಲ.ಕೆಲ ಗಂಡಸರು ಎರಲಾಗದಂತ ಮರ ಏರಿ ಸೊಪ್ಪು ಕಡಿದುಕೊಂಡು ಬರುತ್ತಿದ್ದಳು. ಒಮ್ಮೆ ಹೀಗೆ ಅವಳು ಹೊನ್ನೇ ಮರ ಹತ್ತಿ ಸೊಪ್ಪು ಕಡಿತಿರಬೇಕಾದರೆ ಅಲ್ಲೇ ಪಕ್ಕದಲ್ಲಿ ಹೋಗುತಿದ್ದ ಗೆಂಡೆ ರಾಮ ಸುಮ್ಮನೆ ಇರಲಾಗದೆ ಮರದ ಕೆಳಗೆ ಬಂದು ಹಲ್ಲು ಕಿರಿಯುತ್ತಾ ಏನ್ರಿ ಸೊಪ್ಪು ಕಡಿತಾ ಇದ್ದೀರಾ ಅಂತ ಕೇಳೋದೇ.ಇವಳಿಗೋ ಮೊದಲೇ ಚಿಗುಳಿ ಬೇರೆ ಕಡಿತಿತ್ತು ಅದು ಅಲ್ದೆ ಮರದ ಮೇಲೆ ಇದ್ದಳು ಎಲ್ಲಿತ್ತೋ ಕೋಪ 'ಬೆವೆರ್ಸಿ ನನ್ ಮಗನೆ ಏನ್ ಮರದ ಅಡಿ ನಿಂತು ಹಲ್ಲು ಕಿರಿತಿದ್ದಿ , ನಿನ್ ಹೆಂಡ್ರಿಗೆನ್ ಬತ್ತಿ ಹೊಗ್ಯದ' ಅನ್ನಬೇಕೆ. ಬೋರ್ ವೆಲ್ ಕಟ್ಟೆ ಇಂದ ಹಿಡಿದು ಕಾಡಿಗೆ ಸೊಪ್ಪು ತರೋಕೆ ಹೋದಾಗಲೂ ಯಾರು ಅವಳ ಬಗ್ಗೆ ಮಾತಾಡಬಾರದು ಅಂತ ಹವಾ maintain ಮಾಡಿದ್ಲು ಅವಳು.

ಒಂದರ್ಥದಲ್ಲಿ ಊರಿನ ಎಲ್ಲರಿಗೂ ವಿಲನ್ ಆಗಿದ್ದಳು ನನ್ನ ಕಥೆಯ ಹೀರೋಯಿನ್ ಈ ಯಶೋಧ.ಇನ್ನು ಅವಳ ಗಂಡ ಮಂಜ ಇಟ್ಟಿಗೆ ಗುಡಿನಿಂದ ಬರೋ ಹೋಗೆ ತರ ಅವ ಎಚ್ಚರವಿದ್ದಾಗಲೆಲ್ಲ ಕೈ ಅಲ್ಲಿ ಇರುತ್ತಿದ್ದ ನಂ.೩ ಮುಂಡು ಬಿಡಿ ಇಂದ ಪುಸ್ ಪುಸ್ ಅಂತ ಹೋಗೆ ಬಿಡುತ್ತಲೇ ಇರುತಿದ್ದ. ಮಧ್ಯೆ ಮಧ್ಯೆ ಪೌರಾಣಿಕ ಸಿನಿಮಾದಲ್ಲಿ ಕ್ಯಾಬರೆ ಡಾನ್ಸ್ ಹಾಕಿದ ಹಾಗೆ ಉಸ್ ಉಸ್ಸ್ ಅಂತ ಕೆಮ್ಮು ಬೇರೆ.ಇನ್ನು ಇದ್ದ ೨ ಹೆಣ್ಣು ಮಕ್ಕಳು.ಅಮ್ಮನ ಪಡಿಯಚ್ಚು.ಥು ಅಂದರೆ ಥು ಥು ಅಂದರೆ ಥು ಥು ಅನ್ನೋ ಹಾಗೆ. ಮನೆಯೇ ಮೊದಲ ಪಾಠಶಾಲೆ ಅನ್ನೋ ಹಾಗೆ ಅಮ್ಮ ಹೇಳುತ್ತಿದ್ದ ಒಂದು ಪದ ಬಿಡದೆ ಅಷ್ಟನ್ನು ಕಂಠಪಾಠ ಮಾಡಿದ್ದವು. ತಾವು ಏನು ಕಡಿಮೆ ಇಲ್ಲ ಅಂತ ತೋರಿಸೋಕೆ ಏನೋ ಪಟ್ಟಣಕ್ಕೆ ಹೋಗಿ ಅಮ್ಮನ dictionary ಅಲ್ಲಿ ಇಲ್ಲದ ಒಂದಿಷ್ಟು ಹೊಸ ಪದ ಬೇರೆ ಕಲಿತಿದ್ದವು.

ಹೀಗೆ ಇದ್ದರೇ ಆಗೋಲ್ಲ ಅಂದುಕೊಂಡ ಊರಿನ ಹೆಂಗಸರೆಲ್ಲ ಸೇರಿ ಅವಳಿಗೆ ತಕ್ಕ ಶಾಸ್ತಿ ಮಾಡಬೇಕು ಅಂತ ಯೋಚಿಸುತ್ತಿರುವಾಗಲೇ ಸಿಕ್ಕಿತು ನೋಡಿ ಕಾರಣ.ಏನಪ್ಪಾ ಅಂದರೆ, ಅವಳ ಮನೆಯ ಪಕ್ಕದಲ್ಲಿರುವ ಮನೆಯ ಸವಿತಾ ಅನ್ನೋ ಹುಡುಗಿಗೆ ಮದುವೆ ನಿಶ್ಚಯವಾಗಿತ್ತು.ಆದರೆ ಯಶೋಧೆಯ ದೊಡ್ಡ ಮಗಳಿಗೆ ಅವಳನ್ನ ಕಂಡರೆ ಆಗೋಲ್ಲ.ಹಾಗಾದರೂ ಮಾಡಿ ಮದುವೆ ನಿಲ್ಲಿಸಬೇಕೆಂದು ಬೇಕೆಂದು ಯೋಚಿಸುತ್ತಿರ ಬೇಕಾದರೆ ಅವಳ ಕಣ್ಣಿಗೆ ಹೊಳೆದದ್ದು ಅವರ ಮನೆ ಎದುರಿಗಿದ್ದ ನಮ್ಮೂರಿನ ಪ್ರಾಥ'ಮಿಕ' ಶಾಲೆ.ತಮ್ಮೆಲ್ಲ criminal ತಲೆ ಉಪಯೋಗಿಸಿ ಅಂತು ಫೈನಲ್ decision ಮಾಡಿ ಶಾಲೆಯ ಗೋಡೆಯ ಮೇಲೆ ಅವಳ ಬಗ್ಗೆ ಇಲ್ಲ ಸಲ್ಲದ್ದನ್ನು ಬರೆಯೋದು ಅಂತ ಯೋಚಿಸಿ ಹಾಗೆ ಮಾಡಿದ್ದಾರೆ.

ಮರುದಿನ ಬೆಳಿಗ್ಗೆ ಇದನ್ನ ನೋಡಿದ ಸವಿತಾ ಗಾಳಿ ಮಾತು ಚಿತ್ರದ ಲಕ್ಷ್ಮಿ ಸ್ಟೈಲ್ ಅಲ್ಲಿ ಅಲ್ಲೇ ಹತ್ತಿರವಿರುವ ಕೆರೆ ಹಾರೋದಕ್ಕೆ ಹೋಗಿದ್ದಾಳೆ. ಇದನ್ನ ನೋಡಿದ ನಮ್ಮೂರ ಈರ ಅನಂತ್ ನಾಗ್ ಸ್ಟೈಲ್ ಅಲ್ಲಿ ಕೆರೆಗೆ ಹಾರಿ,ರಾಜ್ ಕುಮಾರ್ ಕೆಸರಿಗೆ ಬಿದ್ದ ಸರಿತಾಳನ್ನು ಎತ್ತಿಕೊಂಡು ಬರೋ ರೀತಿ ದಡಕ್ಕೆ ಎತ್ತಿಕೊಂಡು ಬಂದು ಹಾಕಿ ರವಿಚಂದ್ರನ್ ಸ್ಟೈಲ್ ಅಲ್ಲಿ look ಕೊಟ್ಟು , ಅಂಬರೀಶ್ ಸ್ಟೈಲ್ ಅಲ್ಲಿ ಬುದ್ದಿವಾದ ಹೇಳಿ ಮನೆಗೆ ಕರೆದುಕೊಂಡು ಬಂದಿದಾನೆ. ಬೆಕ್ಕಿಗೆ ಘಂಟೆ ಕಟ್ಟಿದವರು ಯಾರು? ಅನ್ನೋ ಹಾಗೆ ಅದನ್ನ ಬರೆದವರು ಯಾರು ಅಂತ ಊರಿನವರಿಗೆ ಅದರದ್ದೇ ಚಿಂತೆ. ನಮ್ಮ ಹೀರೋಯಿನ್ ಮೇಲೆ ಅನುಮಾನ ಇತ್ತಾದರೂ ಪ್ರೂಫ್ ಇಲ್ಲದ ಕಾರಣ ಏನು ಮಾಡುವ ಹಾಗೆ ಇರಲಿಲ್ಲ. ಅದು ಅಲ್ಲಿಗೆ ನಿಂತಿದ್ದರೆ ಎಲ್ಲರು ಸುಮ್ಮನಾಗುತಿದ್ದರೋ ಏನೋ , ಇಸ್ಕುಲ ಗೋಡೆ ಮೇಲೆ ಬರೆಯೋದು ೩-೪ ದಿನ ಸತತವಾಗಿ ನಡೆಯಿತು. ಈಗ ನೋಡಿ ಸರಾಬು ಕುಡಿದು ಊರಿನ ಮೊರಿಯನೆಲ್ಲ ಲೆಕ್ಕ ಹಾಕುತಿದ್ದ ನಮ್ಮೂರಿನ detectives ಎಲ್ಲ ಎಚ್ಚರಗೊಂಡಿದ್ದು. ಅಂತು ಇಂತೂ ೨ ರಾತ್ರಿ ಕಾವಲು ಕಾಯಿದ್ರು ಮುಂಡೆ ಮಕ್ಳು ಕಡಿದು ಗುಡ್ಡೆ ಹಾಕಿದ್ದು ಏನು ಇಲ್ಲ.ಇನ್ನು ಸುಮ್ಮನೆ ಈ ಗಂಡ್ ಸೂಳೆ ಮಕ್ಳನ್ನ ನಂಬಿಕೊಂಡರೆ ನಾಯಿ ಉಚ್ಚೇನೆ ಗತಿ ಅಂತ ಹೆಂಗಸರೇ ಎಲ್ಲ ಸೇರಿ ತಮ್ಮ ಕಡೆಯಿಂದಾನೆ ಯುದ್ಧ ಘೋಷಿಸಿಯೇ ಬಿಟ್ಟರು. e - detective ನನ್ ಮಕ್ಕಳು ಮತ್ತೆ ರತ್ನಕ್ಕನ ಹೆಂಡದಂಗಡಿ ಸೇರಿದವು.

ಅಂದು ಅಮಾವಾಸೆಯಾ ಬೆಳಿಗ್ಗೆ ಊರ ಜನ ಎಲ್ಲ ಇರುವ ಒಂದೇ ಬೋರ್ ವೆಲ್ ಇಂದ ಬರುವ ಕಂದು ಮಿಶ್ರಿತ ನೀರನ್ನೇ ಹಿಡಿದುಕೊಂಡು ಹೋಗಿ ಪವಿತ್ರ ಗಂಗೆಯಲ್ಲೇ ಸ್ನಾನ ಮಾಡುವಂತೆ ಜಳಕ ಮುಗಿಸಿ,ಯುದ್ದಕ್ಕೆ ಹೊರಟು ನಿಂತಿರುವುದರಿಂದ ಅಲ್ಲೇ ಆಗಬಹುದಾದ ಕೊಳೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಲೇ ಕಟ್ಟಿಗೆ ರಾಶಿಗೆ ನೇತು ಹಾಕಿದ್ದ ವಾರದ ಹಿಂದೆ ಒಗೆದ ಮಣ್ಣು ಬಟ್ಟೆಯನ್ನು ಮುತ್ತು ರತ್ನಗಳಂತೆ ಹೇರಿಕೊಂಡು ಉಬ್ಬಣಿ ಗುಡ್ಡದ ಬಳಿ ಎಲ್ಲ ಒಟ್ಟು ಗೂಡಿದರು.ಈಗ ಮೊದಲು ಯಾರು attack ಮಾಡಬೇಕು ಹೇಗೆ ಅನ್ನೋದರ ದೀರ್ಘ ಚರ್ಚೆ ಮಾಡಿ ಗುಂಪಿನಲ್ಲೇ ಸ್ವಲ್ಪ ಮಜುಬುತಾಗಿದ್ದ ಸುಜಾತಳನ್ನು ಗುಂಪಿನ ನಾಯಕಿಯನ್ನಾಗಿ ಮಾಡಿ ಶತ್ರು ಪಾಳಿಯತ್ತ ಹೆಜ್ಜೆ ಹಾಕತೊಡಗಿದರು.ತಾವು ಸುಮ್ಮನಿದ್ದರೆ ಇಲ್ಲೂ ಆಗೋಲ್ಲ ಅಂದು ಕೊಂಡ ಕೆಲ ಗಂಡಸರು ಸುಜಾತಳ ಗಂಡ ಭಾಸ್ಕರನ ಮುಂದಾಳತ್ವದಲ್ಲಿ ಇವರೊಡನೆ ಹೆಜ್ಜೆ ಹಾಕಿದರು. ಇದು ಒಂಥರಾ ಮದಕರಿಯ ಸೈನ್ಯದ ಮೇಲೆ ದಾಳಿ ಮಾಡಲು ಹೊರಟ ಹೈದರಾಲಿಯ ಸೈನ್ಯದಂತೆ ಕಾಣುತಿತ್ತು ಇದು.

ಇದಾವುದರ ಅರಿವು ಇಲ್ಲದಂತೆ ಹೊರ ಬಂದ ಯೋಶಧೆಗೆ ಒಮ್ಮೆ shock ಆದರೂ ಗಂಡು ಮೆಟ್ಟಿದ ನಾಡು sorry sorry ಹೆಣ್ಣು ಹುಟ್ಟಿದ ನಾಡು ಅಂತ ತೋರಿಸಬೇಕು ಅಂದು ಕೊಂಡು ಪುಟ್ಟಿ ಅಂತ ಒಂದು ದೀರ್ಘ ಕೂಗು ಹಾಕಿದಳು.ಕ್ಷಣ ಮಾತ್ರದಲ್ಲಿ ಅವಳ ಸಕಲ ಸೈನ್ಯವು ಮನೆಮುಂದೆ ಬಂದಾಗಿತ್ತು.ಇರುವ ಕ್ಷಣ ಮಾತ್ರ ಸಮಯದಲ್ಲೇ ಹೇಗೆ ಅವರನ್ನ ಎದುರಿಸಬೇಕು ಅಂತ ತನ್ನ ಮಕ್ಕಳಿಗೆ ವಿವರಿಸಿದಳು. ಜೈ ಸುಜಾತ ಅನ್ನೋ ಉದ್ಗೋಷದೊಂದಿಗೆ ಶತ್ರು ಪಾಳೆಯವರು ಇವರ ಮನೆ ಎದುರಿಗೆ ಬಂದು ಜಮಾಸಿಯೇ ಬಿಟ್ಟರು. ಅಲ್ಲಿ ಮಾತಿಗೆ ಬೆಲೆ ಇಲ್ಲ ತಿಳಿದಿದ್ದರೂ ಪ್ರಾಸ್ತಾವಿಕವಾಗಿ ಏನಾದರು ಹೇಳಲೇಬೇಕು ಅನ್ನೋ ಕಾರಣದಿಂದ ಭಭ್ರುವಾಹನ film ಸ್ಟೈಲ್ ಅಲ್ಲಿ ಎರೆಡು ಕಡೆಯವರು ಅವರ ವ್ಯಕ್ತಿತ್ವವನ್ನೇ ಪದಗಳಿಂದ ಬೈದಾಡಿಕೊಂಡರು.

ಬೈದಾಟ ಎಲ್ಲ ಆದ ಮೇಲೆ ಮಹಾಭಾರತದಲ್ಲಿ ಶತ್ರು ಪಾಳೆಯದ ಮೇಲೆ ನುಗ್ಗಿ ಎಲ್ಲರನ್ನು ಕಕ್ಕಾಬಿಕ್ಕಿ ಗೊಳಿಸೋ ಅಭಿಮನ್ಯುವಿನ ಹಾಗೆ ಯಶೋಧೆಯ ಸಣ್ಣ ಮಗಳು ಊರಿನವರ ಮೇಲೆ ಹಠಾತ್ ದಾಳಿ ಮಾಡಿ ಎಲ್ಲರನ್ನು ಒಮ್ಮೆ ವಿಚಲಿತ ಗೊಳಿಸಿ ಅವಳದೇ ಚೂಡಿದಾರ್ನ ವೇಲ್ ಕಾಲಿಗೆ ಸಿಕ್ಕಿ ಜಲ್ಲಿ ಕಲ್ಲಿನ ರಸ್ತೆಯ ಮೇಲೆ ಬಿದ್ದು ಅಮ್ಮ ಎಂಬ ಚಿತ್ಕಾರ ಮಾಡಿದಾಗ ಅವಳ ಬಾಯಿಂದ ಬಂದ ರಕ್ತದ ಹನಿಗಳು ನೆಲಕ್ಕೆ ಬೀಳಲು ಯುದ್ದಕ್ಕೆ ಅಧಿಕೃತ ಮುದ್ರೆ ಒತ್ತಿದ ಹಾಗೆ ಆಯಿತು.ಆಮೇಲೆ ನಡೆದಿದ್ದೆಲ್ಲ ಇತಿಹಾಸ. ಯಶೋಧೆ ಮತ್ತು ಅವಳ ಇನ್ನೊಬ್ಬ ಮಗಳು ಕೈ ಅಲ್ಲಿ ಹಿಡಿದಿದ್ದ ಹಿಡಿ ಇಂದ ಸಾಕಷ್ಟು ಜನರಿಗೆ ಗಾಯ ಮಾಡಿ ಕೊನೆಗು ಗುಂಪಿನ ನಾಯಕಿ ಸುಜಾತ ಯಶೋಧಳನ್ನು WWF ಸ್ಟೈಲ್ ಅಲ್ಲಿ ಮೇಲೆ ಎತ್ತಿ ನೆಲಕ್ಕೆ ಬಿಸಾಕಿದ ಹೊಡೆತಕ್ಕೆ ಅವಳು 'ಹಾದರಗಿತ್ತಿ ತೆಗೆದ್ಯೆಯಲ್ಲೇ ನನ್ನ ಸೊಂಟ'(ನೋವಿನಲ್ಲೂ ಶೌರತ್ವ ಅಂದ್ರೆ ಇದ್ ಅಲ್ಲದೆ ಮತ್ತಿನ್ನೇನು ಅಲ್ವಾ?) ಅನ್ನೋ ಮಾತ್ನೊಂದಿಗೆ ಈ ಗಲಾಟೆ ಒಂದು ಹಂತಕ್ಕೆ ಮುಗಿದ ಹಾಗೆ ಆಯಿತು(ನೆನಪಿರಲಿ ಪೂರ್ತಿ ಮುಗಿದಿಲ್ಲ). ಮೊನ್ನೆಯ ಗಲಾಟೆಗೆ ಇದು ಕೇವಲ ಪಿಠಿಕೆ ಅಷ್ಟೇ , ಮುಂದಿನ ಲೇಕನದಲ್ಲಿ ಅದನ್ನ ವಿವರಿಸುತ್ತೇನೆ.

ಇಂತಿ

ವಿನಯ

ಶುಕ್ರವಾರ, ಜುಲೈ 24, 2009

ಬಿಸಿ ಬಿಸಿ ಮೀನು ತಿನ್ನಬೇಕೆ

ಇನ್ನು ಬಾಕಿ ಇದೆ

ನಾನು ಮನೆಗೆ ಫೋನಾಯಿಸಿದಾಗಲೆಲ್ಲ ಊರಿನ ವರದಿ ಎಲ್ಲ ಒಪ್ಪಿಸದಿಲ್ಲದಿದ್ದರೆ ಉಪ್ಪಿನಕಾಯಿ ಇಲ್ಲದ ಊಟ ಮಾಡಿದ ಆಗುತ್ತೆ ನನಮ್ಮನಿಗೆ.ಅವಳು ಎಲ್ಲ ಹೇಳಿ ಮುಗಿಸಿದ ಮೇಲೆ ನಾನು ನನ್ನ ಭಯಂಕರ ತಲೆ ಉಪಯೋಗಿಸಿ ಕೆಲವು ಬಿಟ್ಟಿ ಸಲಹೆ ಬೇರೆ ಕೊಡುತ್ತೀನಿ.ನನಗೂ ಅಷ್ಟೇ ಫೋನ್ ಮಾಡಿದಾಗಲೆಲ್ಲ ಅವಳು ಏನು ಹೊಸ ವಿಷಯ ಹೇಳಿಲ್ಲ ಅಂದ್ರೆ ತಿಗಣೆ ಕಡಿಯದ ರಾತ್ರಿಯ ಹಾಗೆ ಅನ್ಸುತ್ತೆ.ಮೊನ್ನೆ ಹೀಗೆ ಹೇಗಿದ್ದರೂ ಊರಿಗೆ ಹೋಗೋನಿದ್ದೆ ,ಹಾಗೆ ಒಮ್ಮೆ ಫೋನ್ ಮಾಡಿ ಬರುವ ದಿನ ಯಾವತ್ತು ಅಂತ ಹೇಳೋಣ ಅಂತ ಫೋನ್ ಮಾಡಿದೆ.ಆ ಕಡೆ ಇಂದ ಅಮ್ಮನೇ ಇನ್ನೇನು ಕೊನೆ ರಿಂಗ್ ಆಗುತ್ತೆ ಅನ್ನೋವಷ್ಟರಲ್ಲಿ ಪಿ ಟಿ ಉಷಾ ವೇಗದಲ್ಲಿ ಓಡಿಬಂದು ರೀಸಿವ್ ಮಾಡಿ ಹಲೋ ಅಂದ್ರು.ನಾನು ಕಣೆ ಅಂದೇ ಅಷ್ಟೇ , ಮಾತಿಗಾದರೂ ಹೇಗಿದ್ದಿ ಅನ್ನೋ ಬೇಕೋ ಬೇಡೋ ಎ ಆ ಪವಿತ್ರ ಮೊನ್ನೆ ಯಶೋಧನ ಕತ್ತಿ ಹಿಡ್ಕೊಂಡು ಕಡಿಯಲಿಕ್ಕೆ ಹೋಗಿದ್ಲಂತೆ ಅಂದ್ರು.ಮನಸಿನಲ್ಲಿ ನೀನು ಹೋಗಿ ಕೊಡಲಿ ಕೊಡಬೇಕಿತ್ತು ಅಂದುಕೊಂಡ್ರು ಸುಮ್ಮನಾಗಿ ಹೌದ ನಾಡಿದ್ದು ಬರ್ತಿನಲ್ಲ ಅವಾಗ ಮಾತಾಡೋಣ ಅಂದುಬಿಟ್ಟೆ.ಬರುತ್ತಿದ್ದೇನೆ ಅಂತ ಕೇಳಿದ ತಕ್ಷಣ ಆ ವಿಷಯ ಅಲ್ಲಿಗೆ ಕೈ ಬಿಟ್ಟರು ಅಮ್ಮ.ಬಂದ ಮೇಲೆ ನಟನೆ ಮೂಲಕ ವಿವರಿಸೋಣ ಅಂದೋ ಅಥವಾ ಮಗ ಬರುತಿದ್ದಾನಲ್ಲ ಅನ್ನೋ ಖುಷಿ ಇನ್ದಲೋ ಆ ಕ್ಷಣಕ್ಕೆ ಹೊಳೆಯಲಿಲ್ಲ.

ಮನೆಗೆ ಹೋದ ಮೇಲೆ ಅದು ಇದು ಮಾತು , ತಿನ್ನೋದು ಅಂತ ಈ ವಿಷಯ ಮರೆತೇ ಹೋಗಿತ್ತು ನನಗೆ.ಅಮ್ಮನಿಗೂ ಅಷ್ಟೇ ಬೇರೆಯಲ್ಲ ನೆನಪಿದ್ದರು ಇದು ಅದು ಹೇಗೆ ಮರೆತು ಹೋಗಿತ್ತೋ ನಾ ಕಾಣೆ.ಮಧ್ಯಾನ ೧೧.೦೦ ರ ಸಮಯ ಜಡಿ ಮಳೆ ,ಅಪ್ಪ ಪೇಟೆಗೆ ಹೋಗಿದ್ರು.ನಾನು ಇರೋಬರೋ ಗೇರು ಬೀಜ,ಹಲಸಿನ ಬೀಜ ಒಟ್ಟಾಕಿಕೊಂಡು ಸುಡುತ ಕುಳಿತಿದ್ದೆ. ಆ ಕಡೆ ಒಂದು ಧ್ವನಿ ಗೀತಮ್ಮ ಅಂತ ಕೇಳಿಬಂತು ,ನೋಡಿದ್ರೆ ಪಕ್ಕದ ಮನೆ ಕೆಲಸ ಮಾಡುವ ನಾಗರತ್ನ.ಅವರ ಮನೆಯಲ್ಲಿ ಎಲ್ಲ ಎಲ್ಲೋ ಊಟದ ಮನೆಗೆ ಹೋಗಿದಾರೆ ಅಂತ ನೀರು ಕುಡಿಯೋಕೆ ಇಲ್ಲಿಗೆ ಬಂದಿದ್ದಳು.ಅವಳನ್ನ ನೋಡಿದ್ದೇ ತಡ ಅದೇನೋ ನೆನಪಾಯಿತೋ ಅಮ್ಮನಿಗೆ ದೊಡ್ಡ ಧ್ವನಿಯಲ್ಲಿ ಎ ನಿನಗೆ ಹೇಳಲೇ ಇಲ್ಲ ನೋಡು ಅಂತ ಒಮ್ಮೆ ಮನೆಯೇ ಮುಳುಗಿ ಹೋಯಿತು ಅನ್ನೋ ಧ್ವನಿ ಅಲ್ಲಿ ಹೇಳಿದರು.ಅವರ ಆ ಕೂಗು ನನ್ನನ್ನು ಒಮ್ಮೆ ಕುಮ್ಹುಟಿ ಬಿಳುವಂತೆ ಮಾಡಿದ್ರೆ , ಓಲೆ ಒಳಗಿದ್ದ ಗೇರು ಬೀಜ ದೀಪಾವಳಿಯ ಗರ್ನಲ್ ತರ ಡಬ್ ಅನ್ನೋ ಶಬ್ದ ಮಾಡಿ ಹಾರ್ಟ್ ಅಟ್ಯಾಕ್ ಅದೋನ ಮುಂದೆ ಬಾಂಬ್ ಸಿಡಿಸಿದ ಹಾಗಾಯಿತು.
ಅಂತು ಈ ಹಠಾತ್ ದಾಳಿಯಿಂದ ಸುಧಾರಿಸಿಕೊಂಡು ಒಂದು ಗುಟುಕು ಕಾಫಿ ಹಿರಿ ಕೂತೆ. ನೋಡಿ ಶುರುವಾಯಿತು 'her'story. ಅಮ್ಮ ಒಬ್ಬಳೇ ಆಗಿದ್ರೆ ಆಮೇಲೆ ಹೇಳೇ ಅಂತ ಸುಮ್ಮನಾಗ ಬಹುದಿತ್ತು , ಈಗ ಹಾಗಲ್ಲ ಪ್ರತ್ಯಕ್ಷದರ್ಶಿ ನಾಗರತ್ನ ಬೇರೆ ಇದಾಳೆ. ದುಶ್ಯಾಸನ ರಕ್ತ ತರದ ಹೊರತು ಜಡೆ ಕಟ್ಟಲ್ಲ ಅನ್ನೋ ದ್ರೌಪತಿ ಶಪಥದ ಹಾಗೆ ಕೈ ಅಲ್ಲಿ ಇದ್ದ ಪಾತ್ರೆ ಅಲ್ಲೇ ಬದಿಗೆ ಇಟ್ಟು ಪೂರ್ತಿ ಕತೆ ಮುಗಿಯದ ಹೊರತು ತಾನು ಎಳೋಲ್ಲ ಅಂತ ಅಮ್ಮ ನಿಶ್ಚಿಸಿದ ಹಾಗಿತ್ತು.ಸಭೆ ಸಮಾರಂಭಗಳಲ್ಲಿ ಮಾಡೋ ಸ್ವಾಗತ ಭಾಷಣದಂತೆ ಮೊದಲು ಅಮ್ಮನೇ ಶುರು ಹಚ್ಚಿಕೊಂಡ್ರು. ಅದೇ ಮಂಜನ ಹೆಂಡ್ತಿ ಯಶೋಧ ಗೊತ್ತಲ್ಲ ನಿನಗೆ ಅವಳಿಗೂ ಕಿಟ್ಟನ ಹೆಂಡ್ತಿ ಪವಿತ್ರಗೂ ಮೊನ್ನೆ ಭಟ್ರ ದರ್ಕಸ್ಸಿನಲ್ಲಿ ಮಾರಮಾರಿಯಂತೆ ಕಣೋ.ಪವಿತ್ರ ಅಂತು ಯಶೋಧನ ಕಡಿಯಲಿಕ್ಕೆ ಹೊಗ್ಲಿದಂತೆ ಅಂತ ಹೇಳಿ over to ನಾಗರತ್ನ ಅನ್ನೋ ತರ ತಮ್ಮ ಪ್ರಾಸ್ತಾವಿಕ ಭಾಷಣ ಮುಗಿಸಿ ಅವಳ ಕಡೆ ನೋಡಿದ್ರು.

ದೇಶಕ್ಕೆ ಸ್ವಂತಂತ್ರ ತಂದುಕೊಡೋಕೆ ಹೊರತು ನಿಂತ ಯೋಧರಂತೆ ಶುರುವಾಯಿತು ಅವಳ ಮಾತು. ಈ ಹಡಬೆ ಮುಂಡೆಯೋಕೆ ಬೇರೆ ಕೆಲಸ ಇಲ್ಲ ಕಣ್ರೀ ಮಾಣಿ,ದಿನ ಇವರದ್ದು ಇದ್ದಿದ್ದೇ. ಯಪ್ಪಾ ಏನು start ಇದು , ಪಟ್ಟಣಕ್ಕೆ ಬಂದ ಮೇಲೆ ಸ್ವಲ್ಪ ತಿಳಿದವರು ಅಂದ್ರೆ ಅದೇ ನಾಗರೀಕರು ಅನ್ನೋವವರ ಜೊತೆ ಸೇರಿ ಇಂತ ಪದವೆಲ್ಲ ಹಾಗೆ ಬಳಸಬಾರದು ಅಂತ ತಿಳಿದಿದ್ದೆ.ಈಗ ಇವಳು ಅದೇ ಪದವನ್ನು ಹೇಳಿದ್ದರಿಂದ ಅದರ ಬಗ್ಗೆ ಒಂದು lecture ಕೊಡೋಣ ಅಂತ ಮನಸಾದರು ಅದರಿಂದ ಪ್ರಯೋಜನವಿಲ್ಲ ಅಂತ ತಿಳಿದು ಸುಮ್ಮನಾದೆ.ಅದು ಅಲ್ದೆ ಇದಕ್ಕಿಂತ ಉತ್ತಮ ಶ್ರೇಣಿಯ ಪದಗಳು ನನ್ನ ಬಾಯಲ್ಲಿ ನೀರು ಕುಡಿದದಷ್ಟು ಸಲೀಸಾಗಿ ಬರುತ್ತಿದಿದ್ದು ಈಗ ಕಡಿಮೆ ಆಗಿದ್ದು ನೋಡಿ ಎಲ್ಲಿ ಅಜ್ಞಾನಿ ಆಗ್ತಾ ಇದ್ದಿನೋ ಅಂತ ಭಯ ಬೇರೆ ಆಯಿತು. ನನ್ನೀ ಕ್ಷಣದ ಯೋಚನೆಯನ್ನ ಬೇಧಿಸಿ ಅವಳೇ ಮುಂದುವರೆಸಿ ಹೇಳಿದಳು ಅಲ್ಲ ಮಾಣಿ ನೀವೇ ಹೇಳಿ ಇವರಿಗೆ ಭಟ್ರು ಮನೆ ಕೆಲಸಕ್ಕೆ ಬಂದಾಗ ಮುಚ್ಕೊಂಡು ಅವರು ಹೇಳಿದ್ದು ಮಾಡೋದು ಬಿಟ್ಟು ಬೇರೆ ಉಸಾಬರಿ ಯಾಕೆ. ನಾನೇನು ಹೇಳಲಿ ಮುಚ್ಕೊಂಡು ಇರಿ ಅಂತಾನ ? ಹು ಹು ಅಂತ ತಲೆಯಾಡಿಸಿದೆ,ಇಲ್ಲದಿದ್ದರೆ ಅವಳಿಗೆ ಮಾತು ಮುಂದುವರೆಸೋಕೆ mood ಇರೋಲ್ಲ.

ದರ್ಕಸ್ ಅಲ್ಲಿ ಕಾಫಿ ಚಿಗುರು ಚಿವುಟಕ್ಕೆ ಹೇಳಿ ಪೇಟೆ ಕಡೆ ಹೋದ್ರು. ಇವೆಡಕ್ಕೆ ಬೆಳಗಿಂದ ಅದೆಲ್ಲಿ ಕಡಿತಾ ಇತ್ತೋ ಗೊತ್ತಿಲ್ಲ ಸುಮ್ಮನೆ ಚಿಗುರು ಚಿವುಟುತ ಇದ್ದೋರು ನಿಂದ ಏನೇ,ನಿಂದ ಏನೇ ಶುರು ಹಚ್ಚಿಕೊಳ್ಳಬೇಕೆ. ನಾವದ್ರು ಏನ್ ಮಾಡೋಕೆ ಆಗುತ್ತೆ.ಮಧ್ಯೆ ಬಾಯಿ ಹಾಕಿದ್ರೆ ದಾರಿಯಲ್ಲಿ ಹೋಗ್ತಾ ಇರೋ ಹಾವನ್ನು ಮೈ ಮೇಲೆ ಹಾಕಿಕೊಂಡ ಹಾಗೆ ಆಗುತ್ತೆ ಅಂತ ತನ್ನ ಅಸಹಾಯಕತೆಯನ್ನು ತೋಡಿಕೊಂಡಳು. ನಾನು ಇಲ್ಲೇ ಇದೀನಿ ಅಂತ ತೋರಿಸೋಕೆ ಮಧ್ಯ ಅಮ್ಮ ಬಾಯಿ ಹಾಕಿ ಅವತ್ತು ಅಪ್ಪ ಮನೇಲೆ ಇದ್ರೂ ಕಣ ಅಂದ್ರು. ಅವಳೇ ಮುಂದುವರೆಯುತ್ತಾ ಅವರ dictionary ಪದಗಳನ್ನು ಬಿಚ್ಚಿಡ ತೊಡಗಿದಳು.ಶುರುವಾಯಿತು ನೋಡಿ ಬೈಗುಳ ,ಹಡ್ ಬಿಟಿ ರಂಡೆ ನಿನ್ನ ತರ ನಿನ್ ತರ ಕಂಡೋರ್ ಹತ್ರ ಎಲ್ಲ ನಾನು ಹಲ್ ಕಿರಿತ ಇರೋಲ್ಲ , ನಾ ಕಂಡಿಲ್ವಾ (ಏನು ?) ನಿನ್ನ ಮಗಳನ್ನ ಬೆಳಿಗ್ಗೆ ಪ್ಯಾಟಿಗೆ ಹೋಗಿ ರಾತ್ರಿ ಬರ್ತಾಳ ಅದೇನು ಕಸರತ್ ನಡ್ಸ್ತಾಲೋ ಆ ಶುರ್ಪಣಕಿ , ಚಿನಾಲಿ , ಯಾರಿಗೆ ಹುಟ್ಟಿದ್ದೋ ಏನೋ' (ಅಬ್ಬ), ಇಷ್ಟು ಹೇಳಿದ ಮೇಲೆ ಅವಳು ಸುಮ್ಮನೆ ಇರ್ತಾಳ 'ಸಾಕು ಸುಮ್ಮ ನೀರೆ ಏನು ಎಲ್ಲ ಕಂಡೋರ್ ತರ ಹೇಳಬೇಡ (ಎಲ್ಲ ಅಂದ್ರೆ ?) ನನಗೇನು ಗೊತ್ತಿಲ್ಲ ಅಂತ ಅನ್ಕೊಂಡಿದ್ದಿಯ,ರಾತ್ರಿ ಅದ್ಯಾರ್ ಜೊತೆ ಬಿದ್ಕೊತ್ಯೋ , ಗಂಡ ಅನ್ಸ್ಕೊಂಡ ಬೇರೆ ಬೇರೆ ನಾಮರ್ದ ..........' (ಯಪ್ಪಾ) ಈ ಕಡೆಯವಳಿಗೆ ಇನ್ನು ಸುಮ್ಮನಿರಲಾಗದೆ ಕೈ ಅಲ್ಲಿ ಇದ್ದ ಕತ್ತಿನೆ ಹಿಡ್ಕೊಂಡು ಏನೇ ಅಂದಿ ಯಾರು ಸೂಳೆ ಅಂತ ಕಡಿಯಲು ಮುನ್ನುಗ್ಗಿಯೇ ಬಿಟ್ಟಳು. ಅಷ್ಟರಲ್ಲಿ ವಜ್ರಮನಿಯನ್ನು ಕೊಲ್ಲಲು ಹೊರಟ ವಿಷ್ಣುವರ್ಧನ್ಗೆ slow motion ಅಲ್ಲಿ ಓಡಿ ಬಂದು ಬೇಡ ಅನ್ನೋ ಲೀಲಾವತಿ ತರ ಇವರೆಲ್ಲ entry ಆಗಿ ಆಗಬಹುದಾಗಿದ್ದ ಅನಾಹುತ ತಪ್ಪಿಸಿದ್ದಾರೆ. ಇಷ್ಟು ಹೇಳಿ ಮುಗಿಸೋದ್ರೋಳಗಾಗಿ ಎದುರಿಗಿದ್ದ ಒಂದು ಚೊಂಬು ನೀರು , ಒಂದು ದೊಡ್ಡ ಬೆಲ್ಲದ ಉಂಡೆ ಅವಳ ಹೊಟ್ಟೆ ಸೇರಾಗಿತ್ತು. ಪುಸ್ತಕ ಬರೆದ ಮೇಲೆ ಅದರ ಬಗ್ಗೆ ವಿಮರ್ಶೆ ಮಾಡಲು ವಿಮರ್ಶಕರಿಗೆ ಕೊಡುವಂತೆ ಅವಳದೆಲ್ಲ ಒದರಿ ಆದ ಮೇಲೆ ನಿಮ್ಮ ಅಭಿಪ್ರಾಯವೇನು ಅನ್ನೋ style ಅಲ್ಲಿ ಅಮ್ಮನ ಕಡೆ ನೋಡಿದಳು.

ತನ್ನೆಲ್ಲ ಬುದ್ಧಿ ಬಳಸಿ ಒಳ್ಳೆ ವಿಚಾರವಾದಿಗಳ ತರ ದೀರ್ಘ ಉಸಿರು ಎಳೆದುಕೊಂಡು ಎದ್ರುರಿಗೆ ಕುತೊಳೆ ಅಪರಾಧಿ ಅನ್ನೋ ಸ್ಟೈಲ್ ಅಲ್ಲಿ ನಾಲ್ಕು ಬುದ್ಧಿ ಮಾತು ಹೇಳಿ , ನಿಮ್ಮ ತೀರ್ಮಾನವೇನು ಅಂತ ನ್ಯಾಯಧಿಷರನ್ನು ನೋಡೋ ತರ ನನ್ನ ಕಡೆ ನೋಡಿದಳು ಅಮ್ಮ.ನಾನು ಬಾರಿ ತಿಳಿದವನಂತೆ ನಾಲ್ಕು ಅವರಿಗೆ ಅರ್ಥ ಆಗದ ದೊಡ್ಡ ದೊಡ್ಡ ನಾಲ್ಕು ಪದ ಉದುರಿಸಿದೆ.ಪದ ದೊಡ್ಡದಿದ್ದ ಏನೋ ಮಾಣಿ ಏನೋ ಭಾರಿ ಒಳ್ಳೆ ಮತ್ತೆ ಹೇಳಿದ್ರು ಅಂತ ಅವರು ಹು ಗುಟ್ಟಿದರು. ವಾಪಸ್ ಬಂದ ಮೇಲೆ ಮತ್ತೆ ಊರಿಗೆ ಫೋನ್ ಮಾಡಿದ್ದಾಗ ಅಮ್ಮ ಹೇಳ್ತಾ ಇದ್ದರೂ , ಆ ಜಗಳ ಅಲ್ಲಿಗೆ ನಿಲ್ಲದೆ ನೀರು ತಗೊಂಡು ಹೋಗಲು ಬಂದ ಯಶೋಧ್ಲ ಮಗಳಿಗೆ ಪವಿತ್ರ ಬಾಂಡ್ ಸ್ಟೈಲ್ ಅಲ್ಲಿ ಹಿಗ್ಗ ಮುಗ್ಗ ಹೇರಿದ್ದಾಳೆ ಅಂತ. ಹಾಗೆ ಮುಂದಿನ ಬಾರಿ ಊರಿಗೆ ಬಂದಾಗ ವಿವರಿಸುವುದಾಗಿಯು

ನೀವು ಆಫೀಸ್ ಅಲ್ಲಿ ಏನು ಮಾಡ್ತಿರ ?

ಬುಧವಾರ, ಜುಲೈ 22, 2009

@# ಎಡುವಿದ ತಿರುವಿನ ಎಡವು ಭಾಗ - ೧ $#

ಪಟ್ ,ಪಟ್ ,ಪಳ್, ಆಗತಾನೆ ನಿಂತ ಮಳೆಯಿಂದಾಗಿ ಮರದೆಲೆಯ ತುದಿಯಿಂದ ಒಂದೊಂದೇ ಹನಿಯಾಗಿ ಕೆಳಗೆ ನಿಂತ ನೀರಿನ ಮೇಲೆ ಬೀಳುತಿದ್ದ ಆ ಹನಿಗಳು ಈ ಶಬ್ದವನ್ನು ಉಂಟುಮಾಡಿದ್ದವು.ರಾತ್ರಿ ಇಡೀ ಸುರಿದ ಮಳೆ ಊರ ಜನರಲ್ಲಿ ಚಳಿಯ ಬಿತ್ತಿ ಘಂಟೆ ೬.೦೦ ಆದರೂ ಯಾರು ಹೊರ ಬರದ ಹಾಗೆ ಮಾಡಿತ್ತು.ನಿಮಗೆ ಇಲ್ಲದ ಅವಸರ ನಮಗೇಕೆ ಅಂತಲೋ ಏನೋ ಕೋಳಿಗಳು ಕೂಡ ತುಟಿಕ್ ,ಪಿಟಿಕ್ ಅನ್ನದೆ ಸುಮ್ಮನೆ ಗುರು ಗುರು ಗುಟ್ಟುತ್ತ ತಮ್ಮ ಪಾಡಿಗೆ ತಾವು ಇದ್ದವು.ಮೋಡರಾಜನ ಮುನಿಸಿಗೆ ಸಿಲುಕಿದ್ದ ಸೂರ್ಯದೇವ ಕೂಡ ಮನೆಯಿಂದ ಹೊರಡಲಾಗದೆ ಮಂದ ಬೆಳಕನ್ನು ಮಾತ್ರ ಹರಡಲು ತಯಾರಿ ನಡೆಸುತಿದ್ದ. ಇವೆಲ್ಲದರ ನಡುವೆ ಒಂದು ಜೀವ ಮಾತ್ರ ತನಗೂ ಇಲ್ಲಿ ನಡೆಯುತ್ತಿರುವುದಕ್ಕು ಸಂಬಂಧವೇ ಇಲ್ಲವೇನೋ ಎನ್ನುವ ಹಾಗೆ ಭಾರವಾದ ಹೆಜ್ಜೆಗಳನ್ನು ಹಾಕುತ್ತಿತ್ತು.ಮೈ ಮೇಲೆ ಹೊದಿದ್ದ ಕಂಬಳಿ ಹೊರಗಿನ ಚಳಿಯನ್ನು ಕಡಿಮೆ ಮಾಡಿತ್ತಾದರೂ , ಒಳಗಡೆಯ ಕುದಿತದ ಕಾವು ಇದು ಬೇಕಿತ್ತೆ ಅನ್ನೋ ಹಾಗೆ ಹಂಗಿಸುವಂತ್ತಿತ್ತು.ನಿಂತ ನೀರಾಗಬಾರದು ಅನ್ನೋ ತಿಳಿದವರ ಮಾತಿಂದ ಪ್ರೇರೆಪಿತವಾಗಿಯೋ ಅಥವಾ ತಾನೇ ಹೇಳುವಂತ ಬದುಕು ಒಂದು ಓಟ ಅನ್ನೋ ಮಾತಿನಿಂದಾಗಿಯೋ ಆ ನಡಿಗೆ ಅನ್ನೋದು ಸಧ್ಯಕ್ಕೆ ನಿಲ್ಲುವಹಾಗೆ ಇರಲಿಲ್ಲ.ಇಷ್ಟೊತ್ತು ಸಾಕು ಈ ಜೀವ ಎಂದು ತುಂಗೆಯ ಮಡಿಲು ಸೇರ ಹೊರಟಿದ್ದ ಜೀವಕ್ಕೆ ,ಕಾಲಿಗೆ ಸಿಕ್ಕಿ ತನ್ನನ್ನು ಮುಕ್ಕರಿಸಿ ಬೀಳುವಂತೆ ಮಾಡಿದ ಗೋಳಿಮರದ ಬೇರು ನೋಡಿದ ಮೇಲೆಯೇ ವಾಸ್ತವದ ಅರಿವಾದದ್ದು.ಹಾಗೆ ನೋಡುತ್ತಾ ತಾನು ಬದುಕು ಎಂಬ ನಡಿಗೆಯಲ್ಲಿ ಎಡವುತ್ತಿರುವುದು ಇದು ಮೊದಲಲ್ಲ ಅಂತ ಅನ್ನಿಸಿತು.ಅದೇನು ಹೊಳೆಯಿತೋ , ಮನಸಿನಲ್ಲಿ ಅದೇನು ನಿರ್ಧರಿಸಿದರೋ ತಿಳಿಯದು ಅಲ್ಲಿಂದ ತಿರುಗಿ ಹಾಗೆ ಮನೆ ಕಡೆ ಬಂದುಬಿಟ್ಟರು ನಾರಾಯಣರಾಯರು.
ಬೆಳಗಾಗೆದ್ದು ಎಲ್ಲಿ ಹೋದರು ಅಂತ ಕಮಲಮ್ಮ ರಾಯರ ಬರುವಿಕೆಗೆ ಕಾಯುತ್ತ ಇದ್ದರು.ಬೆಳಗಿನ ಆ ಮಂಜು ತುಂಬಿದ ದಾರಿಯಿಂದ ಬರುತಿದ್ದ ರಾಯರನ್ನು ನೋಡಿ ಸಾಕ್ಷಾತ್ ಇಂದ್ರನೇ ಬರುವಹಾಗೆ ಕಾಣಿಸಿತು ಅವರಿಗೆ. ಮದುವೆ ಅಂತ ಆದಮೇಲೆ ಗಂಡನೇ ಅಲ್ಲವೇ ಇಂದ್ರ ಚಂದ್ರ ಎಲ್ಲ. ಎದುರಿಗೆ ಬಂದ ರಾಯರ ಕಂಬಳಿ ಇಸ್ದುಕೊಂಡು ಜಗಳಲಿಯ ಮೇಲಿಟ್ಟರು ಕಮಲಮ್ಮ.ಕಾಲು ತೊಳೆಯಲು ನೀರು ಕೊಡಲು ಬಾಗಿದ ಕಮಲಮ್ಮನಿಗೆ ಕಂಡಿದ್ದು ರಾಯರ ಮಂಡಿಯಿಂದ ಬಳ ಬಳ ಅಂತ ಇಳಿಯುತಿದ್ದ ರಕ್ತದ ಹನಿಗಳು.ಇನ್ರಿ ಇದು ಎಲ್ಲಿ ಬಿದ್ರಿ ಅಂದರು ಕಮಲಮ್ಮ.ಅಲ್ಲಿಯವರೆಗೂ ಊರ ಜಾತ್ರೆಯಲಿ ಬರೋ ಅಮ್ಮನವರ ಹಾಗೆ ಮಾಡಿದ್ದಲೆನ್ನವನ್ನು ನೋಡಿಯು ನೋಡದಂತೆ ತನ್ನದೇ ಲೋಕದಲ್ಲಿದ್ದ ರಾಯರ ಕಮಲಮ್ಮನ ಮಾತು ಕೇಳಿ ಒಂದು ಕ್ಷಣ ಏನು ಹೇಳಲಾಗದೆ ಸ್ವಲ್ಪ ಸುಧಾರಿಸಿ ಕೊಂಡು ಏನಿಲ್ಲ ಕಣೆ ತೋಟದ ಬದಿಗೆ ಹೋಗಿದ್ದೆ ಕಪ್ ( ಸಾಲುಗಳನ್ನು ಬೇರ್ಪಡಿಸಲು ಮಾಡಿರುವ ಸ್ವಲ್ಪ ಆಳದ ಚಾನೆಲ್) ದಾಟೋವಾಗ ಜಾರಿ ಬಿದ್ದೆ ಅಂದ್ರು.ಕಾಲು ತೊಳೆದು ಕೊಂಡು ಬನ್ನಿ ಅರಿಸಿನ ಹಚ್ಚುತ್ತಿನಿ ಅಂತ ಇವರ ಉತ್ತರಕ್ಕೂ ಕಾಯದೆ ಒಳಗೆ ಹೋದರು ಕಮಲಮ್ಮ. ನನಗೇನಾಗಿದೆ ಅಂತ ಯೋಚಿಸುತ್ತಾ ಅಲ್ಲೇ ಜಗಲಿಯ ಮೇಲೆ ಕೂರ ಹೊರಟವರನ್ನು ಏನ್ರಿ ಬಂದ್ರ ಅನ್ನೋ ಕಮಲಮ್ಮನ ಮಾತು ಒಳಹೊಗುವಂತೆ ಮಾಡಿತು.
ರಾಯರದ್ದು ಮಲೆನಾಡ ಮಡಿಲಿನ ತೀರ್ಥಹಳ್ಳಿ ತಾಲೂಕಿನ ಬೆಣ್ಣೆಬೈಲು ಅನ್ನೋ ಹಳ್ಳಿ.ಮಳೆಗಾಲದಲ್ಲಿ ಉಂಟಾಗುವ ಮಂಜು ಅಲ್ಲಿನ ಮರಗಿಡಗಳನೆಲ್ಲ ಆವರಿಸಿ ಅವು ಬೆಣ್ಣೆಯ ಮುದ್ದೆಗಳಂತೆ ಗೋಚರಿಸುವುದರಿಂದ ಆ ಊರಿಗೆ ಬೆಣ್ಣೆಬೈಲು ಅಂತ ಹೆಸರು ಬಂದಿತ್ತು.ಇನ್ನು ಪೌರಾಣಿಕವಾಗಿ ಹೋದರೆ ಅದಕ್ಕೆ ಬೇರೆ ಕಥೆ ಇತ್ತು.ಬೆಣ್ಣೆ ಕಳ್ಳ ಕೃಷ್ಣನಿಂದ ತಪ್ಪಿಸಿಕೊಳ್ಳಲು ಆಗಿನ ಜನರು ತಾವು ಸಂಗ್ರಹಿಸಿದ ಬೆಣ್ಣೆಗಳನ್ನೂ ಇಲ್ಲಿ ತಂದು ಬಚ್ಚಿಡುತ್ತಿದ್ದರೆಂದು ಕಾಲಕ್ರಮೇಣ ಆ ಬೆಣ್ಣೆ ರಾಶಿಗಳೇ ಈಗಿರುವ ಬೆಟ್ಟಗಳೆಂದು ಜನರ ನಂಬಿಕೆಯಾಗಿತ್ತು. ತಂದೆ ಶ್ರೀನಿವಾಸರಾಯರು , ಬಹಳ ಶಿಸ್ತಿನ ಮನುಷ್ಯ.ಅದೇ ಕಾರಣಕ್ಕೆ ಊರಿನಲ್ಲಿ ಏನೇ ತ್ಯಾಕೆ ತಕರಾರು ಆದರೂ ಇವರೇ ಹೋಗಿ ನ್ಯಾಯ ತೀರ್ಮಾನ ಮಾಡುತಿದ್ದಿದ್ದು.ಅವ್ರಿಗೆ ೩ ಜನ ಮಕ್ಕಳು ಮೊದನೆಯವ ಹರಿರಾಯ,ಎರಡನೆಯವಳು ಹರಿಣಾಕ್ಷಿ ಮತ್ತು ಕೊನೆಯವನು ನಾರಾಯಣರಾಯ. ಮೊದನೆಯವನಿಗೆ ೯ ವರ್ಷವಿರುವಾಗಲೇ ಬಂದ ಭಾರೀ ಪ್ರವಾಹಕ್ಕೆ ಸಿಕ್ಕಿ ತುಂಗೆಯ ಓಡಲು ಸೇರಿಬಿಟ್ಟಿದ್ದ.ಆಗಿನ್ನೂ ನಾರಾಯಣರಾಯರಿಗೆ ೩ ವರ್ಷ ಅಷ್ಟೇ.ಜಮೀನಿಗೇನು ಕೊರತೆ ಇರಲಿಲ್ಲ. ೧ ಎಕರೆ ಕಂಪದ ಗದ್ದೆ , ೨ ಎಕರೆ ಮಕ್ಕಿ , ೫ ಎಕರೆ ಹಳೆ ಮರದ ತೋಟ , ದರ್ಕಸ್ ಅಲ್ಲಿ ಹೊಸದಾಗಿ ಹಾಕಿದ್ದ ೨ ಎಕರೆ ಸಸಿತೋಟ ಇತ್ತು. ಇನ್ನು ಮನೆ ಸುತ್ತ ಮುತ್ತ ಒಂದು ೨೦ ಗುಂಟೆ ಜಾಗ ತರಕಾರಿ , ಹೂವು-ಹಣ್ಣು ಬೆಳೆಯೋಕೆ ಮೀಸಲಾಗಿತ್ತು.
ನಾರಾಯಣರಾಯರಿಗೆ ೨೦ ಆಗೋವಷ್ಟರಲ್ಲೇ ಶ್ರೀನಿವಾಸರಾಯರು ಅವರನ್ನ ಅಗಲಿ ಆಗಿತ್ತು.ಇವರ ಅದೃಷ್ಟಕ್ಕೆ ತೀರಿಕೊಳ್ಳೋ ೬ ತಿಂಗಳ ಹಿಂದೆ ಅಷ್ಟೇ ನಗರದ ಸುಬ್ಬಾರಾಯರ ಮಗನೊಂದಿಗೆ ಹರಿಣಾಕ್ಷಿಯಾ ವಿವಾಹ ನಡೆಸಿದ್ದರು.ಈಗ ಮನೆ ಜವಾಬ್ದಾರಿಯಲ್ಲ ಇವರ ಮೇಲೆ ಬಿತ್ತು. ಅದು ಇದು ಅಂತ ಎಲ್ಲವನ್ನು ತಿಳಿದುಕೊಳ್ಳೋವಷ್ಟರಲ್ಲಿ ೧ ವರುಷ ಕಳದೆ ಹೋಗಿತ್ತು.ಇನ್ನೆಷ್ಟು ದಿನ ಒಬ್ಬನೇ ಇರೋದು ಅಂತ ಹೇಳಿ ಅಕ್ಕನೆ ಮುಂದೆ ನಿಂತು ಚಿಕ್ಕಮಗಳೂರಿನ ಬಾಳೆಹೊಳೆಯ ಗೋವಿಂದಭಟ್ಟರ ಹಿರಿಯ ಮಗಳಾದ ಕಮಲೇಯೊಂದಿಗೆ ಇವರ ವಿವಾಹ ನಡೆಸಿಯೇ ಬಿಟ್ಟಳು. ವಯಸ್ಸು ಹದಿನೇಳು ಇನ್ನೇನು ಅರಳಲೋ ಬೇಡವೋ ಅಂತ ಹಾತೊರೆಯುತ್ತಿರುವ ಮೊಗ್ಗಿನತ್ತಿದ್ದಳು ಕಮಲೇ. ನೋಡಿದರೆ ಹಾಗೆ ನೋಡುತ್ತಾ ಇರಬೇಕು ಅನ್ನೋವಂತ ಅಂದ ಅವಳದು. ಅವಳ ಮೇಲಿನ ವ್ಯಾಮೋಹ ಎಷ್ಟು ಬೆಳದಿತ್ತೆಂದರೆ ಮದುವೆಯಾದ ದಿನ ಪ್ರಸ್ತ ಇಂದು ಬೇಡ ನಾಳೆ ಇಟ್ಟುಕೊಳ್ಳಿ ಅಂದ ಪುರೋಹಿತನಿಗೆ 'ಮುಂಡೆ ಮಗ, ನನ್ನ ಹೆಂಡತಿಯ ಜೊತೆ ನಾ ಮಲಗಲು ಈ ಬೇರ್ವೆಸಿನೇನು ಕೇಳೋದು' ಅಂತ ಎಲ್ಲರ ಎದುರಿಗಲ್ಲದಿದ್ದರು ಅಕ್ಕನೊಂದಿಗೆ ಹೇಳಿದ್ದರು.ಆಮೇಲೆ ಮದುವೆಯಾದ ಹೊಸತು ಬೇರೆ ಹೆಂಡತಿಯೊಂದಿಗೆ ಊರೆಲ್ಲ ಸುತ್ತಿ ,ಆ ನೆಂಟರು , ಅವಳ ಕಡೆಯವರು ಅಂತ ತಿರುಗಾಟ ಮುಗಿಸೋ ಹೊತ್ತಿಗೆ ೬ ತಿಂಗಳುಗಳೇ ಕಳೆದು ಹೋಗಿತ್ತು.ಈ ಆರುತಿಂಗಳ ಅಂತರದಲ್ಲಿ ಅವರ ವಂಶದ ಕುಡಿಯು ಕೂಡ ಕಮಲಮ್ಮನವರ ಹೊಟ್ಟೆಯಲ್ಲಿ ಚಿಗುರಿಯಾಗಿತ್ತು. ಸುಖಗಳ ಮೇಲೆ ಸುಖ ಬರುತ್ತಿದೆಯಂದರೆ ಮುಂದೆ ದೊಡ್ಡ ಆಪತ್ತೆ ಬರಲಿದೆ ಅನ್ನೋ ಮಾತು ರಾಯರ ಸ್ಪ್ರುತಿಪಟಲದಿಂದ ಮರೆಯಾದಂತಿತ್ತು.ಅದನ್ನ ನೆನಪಿಸಲೋ ಏನೋ ಎಂಬಂತೆ ಬಂದಿತ್ತು ಪಟ್ಟಣದಿಂದ ಬಂದ ಆ ಕಾಗದ.

ಮುಂದುವರೆಯುವುದು .........

ಇಂತಿ
ವಿನಯ

ಸೋಮವಾರ, ಜುಲೈ 20, 2009

ನನ್ನ ಭಾವನೆಗಳ ಸುತ್ತ: ಕನ್ನಡ ನಾಡಿನ ಹಕ್ಕಿಗಳಿಗೆ ಪ್ರಮಾಣೀಕೃತ ಕನ್ನಡ ಹೆಸರುಗಳು

ನನ್ನ ಭಾವನೆಗಳ ಸುತ್ತ: ಕನ್ನಡ ನಾಡಿನ ಹಕ್ಕಿಗಳಿಗೆ ಪ್ರಮಾಣೀಕೃತ ಕನ್ನಡ ಹೆಸರುಗಳು

%$ ಮಳೆ $#

ಮಲೆನಾಡ ಮಡಿಲಲ್ಲಿ
ಮಲ್ಲಿಗೆಯ ಕಂಪಿನಲಿ
ಮನ ಬಿಚ್ಚಿ ನಿಂತಿರುವ
ಮರಗಿಡಗಳ ನಡುವೆ
ಹನಿ ಹನಿಯಾಗಿ
ಹಾಲ ಹೊಳೆಯಂತೆ
ಸುರಿಯುತಿಹುದು ಮಳೆ

ಬಿಸಿಲ ಬೇಗೆಯಲಿ
ಬೆಂದಿರುವ ಭೂತಾಯಿಗೆ
ಸಿಹಿ ನೀರ ಸಿಂಚನವಿಟ್ಟು
ಅವಳ ಉದರವ ಹೊಕ್ಕು
ಭುವಿಯ ಪದರವ
ಹಸಿರಾಗಿಸಿದೆ ಮಳೆ

ಪ್ರಾಣಿ ಪಕ್ಷಿಗಳ
ನರ ನಾಡಿಯೊಳಗೆ ಬೆರೆತು
ಜೀವ ಸಂಕುಲದ
ಜೀವವ ಚಿಗುರಾಗಿಸಿದೆ
ಈ ಮಳೆ

ಕಿರುಬೆರಳ ತುದಿಗೊಂದು
ಮುತ್ತಿಟ್ಟು
ಬರಲಿರುವ ನನ್ನ ನಲ್ಲೆಯ
ಸ್ಪರ್ಶವ ನೆನೆಯುವಂತೆ
ಮಾಡಿದೆ ಈ ಮಳೆ

ಇಂತಿ
ವಿನಯ

ಬದುಕಿದು ಬೆಚ್ಚಗಿನ ಹಾಸಿಗೆಯಲ್ಲ

ಮೂರಂತಸ್ತಿನ ಆ ಕಟ್ಟಡದ ಕೊನೆಯ ಮೂಲೆಯಲ್ಲಿ ಕುಳಿತು ಮುಳುಗುತಿದ್ದ ಆ ಸೂರ್ಯನನ್ನೇ ನೋಡುತ್ತಾ ತನ್ನ ಬದುಕು ಹೀಗೆ ಎಂದು ಮುಳುಗುವುದೋ ಎಂದು ಮನಸಿನಲ್ಲೇ ಗುನುಗಿಕೊಂಡ. ಮನೆಯಿಂದ ಹೊರಡುವಾಗ ಅಪ್ಪ ಹೇಳಿದ ಆ ಮಾತುಗಳು ಹಾಗೆ ಮನಸನ್ನು ಚುಚ್ಚಿ, ಎದೆಯಾಳದಲೆಲ್ಲೋ ಒಂದು ಭೀಕರ ಗಾಯ ಮಾಡಿದ ಹಾಗೆ ಆಗಿತ್ತು ಅವನಿಗೆ.ಎಷ್ಟು ಬೇಡ ಬೇಡ ಅಂದುಕೊಂಡರು ಅಂದೇ ವಾಕ್ಯ ಮತ್ತೆ ಮತ್ತೆ ಕಿವಿಯಲ್ಲಿ ಗುಯ್ ಗುಟ್ಟುತ್ತಿತ್ತು , "ಇನ್ನು ನನ್ನಿಂದ ಆಗುವುದಿಲ್ಲ,ಇದು ಮುಗಿದ ಮೇಲೆ ವಾಪಸ್ ಬಂದು ಬಿಡು" ಎಂದು ಹೇಳಿ ತಂದೆಯವರು ಕೈಗಿಟ್ತಿದ್ದ ೧೫೦೦ ರೂಪಾಯಿಗಳು.ಏನೆಂದು ಕೊಂಡಿದ್ದಾರೆ ಇವರು ನನ್ನನ್ನು ಮಜಾ ಮಾಡಲು ಹೋಗುತಿದ್ದಾನೆ ಎಂದೇ? ಅಥವಾ ಇವನ ಕೈ ಅಲ್ಲಿ ಏನು ಆಗುವುದಿಲ್ಲವೆಂದು? ಅಥವಾ ನೀನು ನನಗೆ ತಕ್ಕ ಮಗನಾಗಲಿಲ್ಲವೆಂದೆ?.ಕೇಳಿಬಿಟ್ಟರೆ? ಕ್ಷಣಕ್ಕೆ ಬಂದಿದ್ದ ಆ ಯೋಚನೆ ಅಮ್ಮನ ಸೇರಗಿನಂಚಿನಲ್ಲಿ ಅಡಗಿದ್ದ ಬಿಳಲೋ ಬೇಡವೋ ಅಂದು ಕಾಯುವನ್ತಿದ್ದ ಕಣ್ಣೀರು ಕಣ್ಣೆದರಿಗೆ ಬಂದು , ಬಂದಷ್ಟೇ ವೇಗದಲ್ಲಿ ಆ ಆಲೋಚನೆ ಮನಸಿನಿಂದ ಮಾಯವಾಯಿತು.

ಹೆಸರು ಆರ್ಯ, ಸಣಕಲು ದೇಹ.ಚಿಕ್ಕಂದಿನಿಂದಲೂ ಅಮ್ಮನ ಮುದ್ದಿನಿಂದ ಬೆಳೆದ ಹುಡುಗ.ಅಪ್ಪನದು ಸ್ವಲ್ಪ ಗಂಭೀರ ಸ್ವಭಾವ ,ಅಮ್ಮನೂ ಕೂಡ ಅಪ್ಪನೊಂದಿಗೆ ಮಾತಾಡಲು ಹೆದರುತಿದ್ದರು.ಸ್ವಲ್ಪ ತಪ್ಪಾದರೂ ಹೊಡೆದ ಬಿಡುವಂತ ಅಪ್ಪನ ಸ್ವಭಾವ ಸಹಜವಾಗಿ ಭಯ ಅನ್ನೋದನ್ನ ಅವನಲ್ಲಿ ಸ್ವಲ್ಪ ಜಾಸ್ತಿಯೇ ಬೆರಸಿತ್ತು.ಅಪ್ಪನ ಆಜ್ಞೆ ಇಲ್ಲದೆ ಒಂದು ಕಡ್ಡಿಯೂ ಅಲ್ಲಾಡುತ್ತಿರಲಿಲ್ಲ.ಕೋಪಕ್ಕೆ ಸಮಾನಾರ್ಥಕ ಪದ ಅಪ್ಪ ಎಂದು ಬರೆದರು ಆಶ್ಚರ್ಯ ಪಡಬೇಕಾಗಿರಲಿಲ್ಲ. ಇನ್ನು ಅಣ್ಣ,ಅಮ್ಮನಿಗೆ ಇಬ್ಬರು ಒಂದೇ.ಕದ್ದು ಮುಚ್ಚಿ ಏನೇ ತಂದರೂ ಇಬ್ಬರಿಗೂ ಸಮಪಾಲು.ಅಪ್ಪನಿಗೆ ಇವನನ್ನು ಕಂಡರೆ ಸ್ವಲ್ಪ ಇಷ್ಟ ಅಂತ ಮುಂದೆ ನೆಂಟರಿಷ್ಟರು ಇವನ ಮುಂದೆ ಆಡಿಕೊಂಡಿದ್ದು ಕೇಳಿದ್ದ.ಪೂರ ಬಡವರು ಅಲ್ಲ ಇತ್ತ ಶ್ರೀಮಂತರು ಅಲ್ಲ ಅನ್ನೋ ಪರಿಸ್ಥಿತಿ ಮನೆಯಲ್ಲಿ , ಪೈಸೆ ಪೈಸೆಗು ಬೆಲೆ ಇತ್ತು ಅಲ್ಲಿ. ಸ್ವಂತ ಜಮೀನು ಅಂತ ಏನು ಇರಲಿಲ್ಲ. ಅಪ್ಪನ ಎರೆಡು ರಟ್ಟೆಗಳೇ ಉಳಿದ ೫ ಹೊಟ್ಟೆಯನ್ನು ತುಂಬಿಸಬೇಕಿತ್ತು(ಅಜ್ಜ , ಅಜ್ಜಿ ಸೇರಿಸಿ).ಕುಟುಂಬದಲ್ಲಿ ಹಿರಿಕನಲ್ಲದಿದ್ದರೂ ಕೂಡ ತನ್ನ ೧೪ನೇ ವಯಸ್ಸಿಗೆ ಇಡೀ ಮನೆಯ ಜವಾಬ್ದಾರಿ ಹೊತ್ತು ಒಬ್ಬಳು ಅಕ್ಕ ,ಒಬ್ಬಳು ತಂಗಿ,ಅಣ್ಣ ಎಲ್ಲರ ಮದುವೆ ಮಾಡಿಸಿ ಉಳಿದ ತಮ್ಮಂದಿರ ವಿಧ್ಯಾಭ್ಯಾಸಮಾಡಿಸಿ ತಾನು ಮದುವೆ ಆಗಿ ಸಂಸಾರ ಅನ್ನೋದು ಶುರು ಮಾಡೋವಷ್ಟರಲ್ಲಿ ಸಾಕು ಸಾಕಾಗಿದ್ದರು ಅಪ್ಪ.ಅಣ್ಣ ಬೇರೆ ಮನೆ ಮಾಡಿಕೊಂಡು ಪರ ಊರು ಸೇರಿದ್ದ , ಇನ್ನು ಉಳಿದ ಇಬ್ಬರು ತಮ್ಮಂದಿರಲ್ಲಿ ಒಬ್ಬ ಯಕ್ಷಗಾನವನ್ನೇ ತನ್ನ ಬದುಕಾಗಿಸಿಕೊಂಡಿದ್ದ ,ಇನ್ನೊಬ್ಬ ಏನೋ ಮದುವೆ ಏನು ಹೇಳಿ ಪಟ್ಟಣ ಸೇರಿಕೊಂಡಿದ್ದ(ವರುಷಕ್ಕೊಮ್ಮೆ ಊರಿಗೆ ಬಂದು ಹೋಗುತಿದ್ದ).ಈಗ ಅಪ್ಪನಿಗೆ ಉಳಿದಿದ್ದು ಅವರ ಸಂಸಾರ ಮತ್ತು ಅಜ್ಜ , ಅಜ್ಜಿ. ಇನ್ನೇನು ತನ್ನ ಬದುಕು ನೋಡಿಕೊಂಡರಾಯಿತು ಅನ್ನೋವಷ್ಟರಲ್ಲಿ ಬಂದೆರಗಿತ್ತು ಕೊನೆ ತಮ್ಮನ ಆತ್ಮಹತ್ಯೆ.ಇನ್ನೇನು ಎಲ್ಲ ಸರಿಯಾಯಿತು ಅನ್ನೋವಷ್ಟರಲ್ಲಿ ಬಂದಿತ್ತು ನೋಡಿ ಮತ್ತೊಂದು ಆಘಾತ ಅದೇ ಮತ್ತೊಬ್ಬ ತಮ್ಮ ಪಟ್ಟಣದಿಂದ ಯಾರೋ ಪರ ಜಾತಿಯವಳನ್ನು ಕರೆದ್ಕೊಂಡು ಬಂದಿದ್ದು , ಅವರನ್ನು ಮನೆಗೆ ಸೇರಿಸೋಲ್ಲ ಅಂತ ಅಪ್ಪನ ಹಠಕ್ಕೆ ಅಷ್ಟು ದಿನ ಒಟ್ಟಿಗಿದ್ದ ಅಜ್ಜ , ಅಜ್ಜಿ ಇವರ ಮನಸನ್ನೇ ಅರಿಯದೆ ಅವನೊಂದಿಗೆ ಬೇರೆ ಹೊರಟಿದ್ದು. ಹೆಜ್ಜೋಗೊಂದರಂತೆ ಏಟು ತಿನ್ನುವ ಎತ್ತಾದರು ಬೇಕು , ಅದಕ್ಕಿಂತ ಕಡೆಯಾಯಿತು ಅನ್ನೋವಷ್ಟು ಹೊಡೆತಗಳು ಅವರನ್ನು ಒಂಥರಾ ಕಲ್ಲಾಗಿಸಿದ್ದವು.

ಇವೆಲ್ಲವನ್ನು ನೋಡಿಯು ,ನೋಡದಂತೆ ,ಕೆಲವೊಂದು ತಿಳಿಯದಂತೆ ಬೆಳೆದ ಹುಡುಗ ಈತ.ಅಣ್ಣನೊಡನೆ ಜಗಳವಾಡುತ್ತಾ ,ದುಡಿದು ಬಂದ ಅಪ್ಪ ಅಜ್ಜಿಯ ಬಳಿ ಇವನ ಚೇಷ್ಟೆ ಕೇಳಿ ಕೈಗೆ ಸಿಕ್ಕಿದ್ದರಲ್ಲಿ ಬಾರಿಸಿ ಆಮೇಲೆ ಅವರೇ ಉಪಚರಿಸುವ ಹಲವಾರು ಸಂದರ್ಭ ನೋಡುತ್ತಾ ,೧೦ ನೇ ತರಗತಿಯವರೆಗೂ ನೆಡೆದು ಕೊಂಡೆಹೋಗಿ ಶಿಕ್ಷಣ ಕಲಿಯುತ್ತ , ಅಪ್ಪ ಬೇರೆ ಕಡೆ ಹೋದಾಗ ಪಕ್ಕದ ಮನೆಗೆ ಹೋಗಿ ಟಿವಿ ನೋಡುತ್ತಾ ಇದ್ದಾಗ ಅವತ್ತೇ ಇವನ ಗ್ರಹಚಾರಕ್ಕೆ ಅವರು ಬೇಗ ಬಂದು ಓದುವುದು ಬಿಟ್ಟು ಅವರಿವರ ಮನೆಗೆ ಹೋಗುತ್ತಿಯ ಅಂತ ಮತ್ತೆ ಹೊಡೆದಾಗ,ಅಮ್ಮ ತನ್ನ ಬಳಿ ಇದ್ದ ಪುಡಿಗಾಸಿನಲ್ಲಿ ಊರಿನಲ್ಲಿದ್ದ ಒಂದೇ ಒಂದು ಅಂಗಡಿಯಿಂದ ಅಪ್ಪನಿಗೆ ತಿಳಿಯದ ಹಾಗೆ ತಿಂಡಿ ತಂದು ಕೊಟ್ಟಾಗ ಮತ್ತದೇ ಗ್ರಹಚಾರ ಇವನನ್ನು ವಕ್ಕರಿಸಿ ಅಪ್ಪನಿಗೆ ಅದು ತಿಳಿದು ಅಮ್ಮನನ್ನು ಸೇರಿಸಿ ಮತ್ತೆ ಹೊಡೆದಾಗ, ಹೀಗೆ ಹೊಡೆತ ಅನ್ನೋದು ಅವನ ಬದುಕಿನ ಒಂದು ಭಾಗವಾಗಿಬಿಟ್ಟಿತ್ತು.ಅಲ್ಲಿ ಅವನಿಗೆ ಸ್ವಂತ ನಿಲುವು ಅನ್ನೋ ಪದದ ಅರ್ಥವೇ ಗೊತ್ತಿರಲಿಲ್ಲ.ಆಟಕ್ಕೆ ಹೋಗಬೇಕಾದರೂ ಅಪ್ಪನ ಅಪ್ಪಣೆ ಆಗಬೇಕು, ಅದು ಇಷ್ಟು ಹೊತ್ತಿಂದ ಇಷ್ಟು ಹೊತ್ತಿನ ತನಕ ಅಂತ ಮಾತ್ರ.ಹೆಚ್ಚಾದಲ್ಲಿ ಕಾರಣ ಕೇಳದೆ ಮತ್ತದೇ ಬದುಕಿನ ಹೊಡೆತ.ಎಲ್ಲ ಒಂದು ರೀತಿಯ ಟೈಮ್ ಟೇಬಲ್ ಇದ್ದ ಹಾಗೆ , ಬೆಳಿಗ್ಗೆ ೬ ಕ್ಕೆ ಏಳಬೇಕು ನಂತರ ಹಲ್ಲುಜ್ಜಿ ಕಾಫಿ ಆಮೇಲೆ ಒಳಗೆಲ್ಲ ಒರೆಸು ನಂತರ ಬೇಸಿಗೆಯಾಗಿದ್ದರೆ ಗಿಡಗಳಿಗೆಲ್ಲ ನೀರು ಹಾಕಬೇಕು ಆಮೇಲೆ ಸ್ನಾನ ಪೂಜೆ ತಿಂಡಿ ಮಾಡಿ ೫ ಕಿ ಮಿ ದೂರದ ಶಾಲೆಗೆ ಓಡು , ಇದಿಷ್ಟು ಬೆಳಗಿನದ್ದಾದರೆ ಸಂಜೆ ಬಂದ ತಕ್ಷಣ ಕೈ ಕಾಲು ತೊಳೆದು ಬಾಯಿ ಪಾಠ ಮಾಡಿ ಆಮೇಲೆ ಸ್ವಲ್ಪ ಓದು , ಊಟ, ಮಲಗು ಇಷ್ಟೇ. ರಾತ್ರಿ ಇರುವ ಕಪ್ಪು -ಬಿಳುಪಿನ ಟಿವಿಯಲ್ಲಿ ವಾರ್ತೆ , ಆಮೇಲೆ ಬರುವ ಎರೆಡು ಧಾರವಾಹಿ ಅಷ್ಟೇ , ೮ ಕ್ಕೆ ಅದು ಸ್ತಬ್ಧ.ಆಟ ಅನ್ನೋದು ಕೇವಲ ಭಾನುವಾರಕ್ಕೆ ಮಾತ್ರ ಸೀಮಿತ ಅಂದು ಸಂಜೆ ೫ ರಿಂದ ೬.೩೦ ರವರೆಗೆ. ಭಾನುವಾರ ೪ ಕ್ಕೆ ಬರುವ ೧೦ -೧೫ ವರ್ಷ ಹಳೆಯದ ಸಿನಿಮಾವೇ ಇವನಿಗೆ ಅತಿ ದೊಡ್ಡ ಮನೋರಂಜನೆ.ಇನ್ನು ಚಿತ್ರಮಂದಿರ ಹಾಗಿರುತ್ತದೆ , ಹೀಗಿರುತ್ತದೆ ಅಂತ ಕೇಳಿದ್ದು ಬಿಟ್ಟರೆ ನೋಡುವ ಭಾಗ್ಯ ಬಂದಿರಲಿಲ್ಲ.

ಒಂಥರಾ ಬಡತನ ಅನ್ನೋದು ಇತ್ತಾದರೂ ಯಾವತ್ತು ಇವನಿಗೆ ಮಾತ್ರ ಹಾಗೆ ಅನಿಸಿದ್ದಿಲ್ಲ.ಆ ಬಡತನವನ್ನೇ ಬಣ್ಣದ ಲೋಕ ಅಂತ ತಿಳಿದು ಬೆಳಿದಿದ್ದ ಹುಡುಗ ಈತ.ಬೇರೆಲ್ಲರಿಗಿಂತ ಸ್ವಲ್ಪ ಭಿನ್ನ ಆಲೋಚನೆ ಇವನದ್ದು.ಕೆಲವೊಮ್ಮೆ ಅಪ್ಪನ ಮೇಲೆ ಕೋಪ ಬಂದರೂ ಹೇಳಿಕೊಳ್ಳಕ್ಕೆ ಯಾರು ಇಲ್ಲ.ಅಣ್ಣನದ್ದು ಅದೇ ಪರಿಸ್ಥಿತಿ,ಇನ್ನು ಅಮ್ಮನ ಹತ್ತಿರ ಅಪ್ಪನ ಬಗ್ಗೆ ದೂರಿದರೆ ಅವಳ ದೃಷ್ಟಿಯಲ್ಲಿ ಅದಕ್ಕಿಂತ ದೊಡ್ಡ ಅಪರಾಧವಿಲ್ಲ ಅನ್ನೋ ಹಾಗಾಗಿಬಿಡುತ್ತೆ.ಹಾಗೆಂದು ಅಪ್ಪ ಕೆಟ್ಟವರಲ್ಲ , ಆ ಬಡತನ ಅನ್ನೋದು ಮಕ್ಕಳ ಮೇಲೆ ಬೀಳದಿರಲಿ, ಬೇಕು ಅನ್ನುವ ಆಕರ್ಷಣೆ ಹಠವಾಗದಿರಲಿ ಅನ್ನೋ ಅನಿಸಿಕೆ ಇರಬಹುದು ಅವರದ್ದು.ಕೆಲವೊಮ್ಮೆ ಸರಿ ಎನಿಸಿದರೂ ಆ ವಯಸ್ಸಿಗೆ ಅದು ತಪ್ಪಾಗೆ ಕಾಣುತಿತ್ತು.ಅಪ್ಪನೆದುರಿಗೆ ಇವ ಮಾತಾಡುವುದೇ ಅಪರೂಪ.ಮಾತಾಡುತಿದ್ದರು ಅವರೇ ಏನಾದರು ಹೇಳಬೇಕು ,ಇವನಿಂದ ಹು , ಹುಹು ಅನ್ನೋ ಎರಡೇ ಪದಗಳು ಹೊರಬರುತಿದ್ದವು ಅಷ್ಟೇ.ಇನ್ನು ಮೆಟ್ರಿಕ್ ಮುಗಿಸಿ ಕಾಲೇಜು ಅಂತ ಸೇರಿದ ಮೇಲೆ ಇವನಿಗೆ ಹೊರ ಜಗತ್ತಿನ ಪರಿಚಯ ಸ್ವಲ್ಪ ಮಟ್ಟಿಗೆ ಆಗಿದ್ದು.ಆಂಗ್ಲ ಭಾಷೆ ಬೇರೆ , ಅದು ಇವನಿಗೆ ವಿಷವನ್ನು ಬಂಗಾರದ ಲೋಟದಲ್ಲಿ ಕೊಟ್ಟ ಹಾಗಾಗಿತ್ತು. ಕಲಿಯಲೇಬೇಕು,ಅಪ್ಪ ಸೇರಿಸುವ ಮೊದಲೇ ಹೇಳಿದ್ದರು ನೋಡು ನನ್ನ ಹತ್ತಿರ ಜಾಸ್ತಿ ಓದಿಸೋಕೆ ಆಗೋಲ್ಲ ಹೇಗೆ ಸಾಲನೋ ಸೋಲನೋ ಮಾಡಿ ಈ ತಾಂತ್ರಿಕ ಶಿಕ್ಷಣಕ್ಕೆ ಸೇರಿಸುತಿದ್ದೇನೆ,ನಿನ್ನ ಕಾಲ ಮೇಲೆ ನೀನು ನಿಂತ ಮೇಲೆ ಮುಂದೆ ಓದುವುದಾದರೆ ಓದು.ಅಲ್ಲಿಗೆ ಇವನಿಗೆ ಗೊತ್ತಾಗಿ ಹೋಗಿತ್ತು ಇವು ನನ್ನ ವಿದ್ಯಾರ್ಥಿ ಜೀವನದ ಕೊನೆ ೩ ವರ್ಷಗಳೆಂದು.ಹಾಗಂತ ಶೋಕಿಗೆ ಅಲ್ಲಿ ಅವಕಾಶವಿರಲಿಲ್ಲ.ಅಪ್ಪ ಸರಿಯಾಗಿ ಅಂದಿನ ಬಸ್ ಚಾರ್ಜ್ ಮಾಡ್ತಾ ಕೊಡುತಿದ್ದರು.ಇಸ್ತ್ರಿ ಇಲ್ಲದ ಕಳೆದ ಗೌರಿ ಹಬ್ಬಕ್ಕೆ ಹೊಲಿಸಿದ್ದ ೨ ಅಂಗಿ,ಸ್ವಲ್ಪ ಗಿಡ್ಡ ಇರುವ ೨ ಪ್ಯಾಂಟ್. ಕಾಲೇಜು ಅಂದ ಮೇಲೆ ಕೇಳಬೇಕೆ.ಇವ ಬೈಕ್ ಅಲ್ಲಿ ಬರುವವರ ಮೊದಲು ಕಂಡದ್ದು ಅಲ್ಲೇ, ಅವರನ್ನು ನೋಡಿದ ತಕ್ಷಣ ಏನೋ ಒಂಥರಾ ತಡಬಡಿಕೆ ಮನಕೆ.ಅದೆಷ್ಟು ಜನ ನಕ್ಕರೋ ಇವನ ವೇಷ ನೋಡಿ ,ಇವನಿಗೆ ಅದರ ಪರಿವಿಲ್ಲ ,ಇದ್ದರೂ ಪ್ರಯೋಜನವಿಲ್ಲ.

ಇನ್ನೇನು ಮೊದಲ ವರ್ಷ ಮುಗಿಯಿತು ಅನ್ನೋವಷ್ಟರಲ್ಲಿ ಬಂದೆರಗಿತ್ತು ಅಣ್ಣನ ಹಠಾತ್ ಸಾವು. ಈಗಂತೂ ಅಪ್ಪ ಅತ್ತ ದ್ರವವು ಅಲ್ಲದ ಇತ್ತ ಘನವು ಅಲ್ಲದ ಕಾಸಿದ ಕಬ್ಬಿಣದ ಹಾಗೆ ಆಗಿ ಹೋಗಿದ್ದರು.ಅಮ್ಮ ನನ್ನಂತೂ ಕೇಳೋದೇ ಬೇಡ.ಎಲ್ಲ ಮುಗಿದು ಒಂದು ಹಂತಕ್ಕೆ ಬಂತು ಅನ್ನೋವಷ್ಟರಲ್ಲಿ ಇವನ ಕಾಲೇಜ್ ಮತ್ತೆ ಶುರುವಾಗಿತ್ತು. ಆದರೆ ಈಗ ಪರಿಸ್ಥಿತಿ ಸ್ವಲ್ಪ ಬದಲಾಗಿತ್ತು.ಅಪ್ಪ ಮೊದಲಿನ ಸಿಟ್ಟು ತೋರುತ್ತಿರಲಿಲ್ಲ,ಹಾಗೆ ಆ ಶಿಸ್ತು ಕೂಡ.ಎಲ್ಲಿ ಇವ ಕೂಡ ನಮ್ಮಿಂದ ದುರವಾಗುತ್ತಾನೋ ಅನ್ನೋ ಭಯದಿಂದಲೋ ಅಥವಾ ನನ್ನ ಈ ಶಿಸ್ತೆ ಅವನ ಸಾವಿಗೆ ಕಾರಣವಾಗಿರಬಹುದೆಂಬ ಶಂಕೆ ಇನ್ದಲೋ. ಅದೇನೇ ಇರಲಿ ಇವನಿಗೆ ಮಾತ್ರ ಅವರ ಮನಸಿನ ಸಂಪೂರ್ಣ ಚಿತ್ರಣ ದೊರಕಿತ್ತು ಹಾಗೆಯೇ ಅವರ ಈ ಸ್ವಲ್ಪ ತುಸು ಜಾಸ್ತಿ ಕಾಳಜಿಯನ್ನು ನಾನೆಲ್ಲಿ ದುರುಪಯೋಗ ಮಾಡಿಕೊಳ್ಳುತ್ತೇನೆ ಅನ್ನೋ ಭಯ ಕೂಡ.

ಕಾಲ ಚಕ್ರ ಗತಿಸಿದ ಹಾಗೆ ಇವನ ತಾಂತ್ರಿಕ ಶಿಕ್ಷಣ ಕೂಡ ಮುಗಿಯಿತು.ಮತ್ತೊಂದು ಸಮಸ್ಯೆ ಶುರುವಾಗಿದ್ದೆ ಈಗ,ಅದೇ ಕೆಲಸ.ಎಲ್ಲೇ ಏನಾದರು ಸಣ್ಣ ಕೆಲಸ ಹುಡುಕಿಕೋ ಅಂತ ಅಪ್ಪ ಹೇಳಿದರೆ , ಆಗೋದೇ ಇಲ್ಲ ನಾನು ಪಟ್ಟಣಕ್ಕೆ ಹೋಗಿಯೇ ಸಿದ್ದ ಅಂತ ಇವನು.ಅಲ್ಲಿ ಇರುವುದೆಲ್ಲಿ ,ಹೊಸ ಜಾಗ , ಹೊಸ ಜನ ಅನ್ನೋ ಭಯ ಅವ್ರಿಗೆ.ಅಕ್ಕ ಇದ್ದಳಲ್ಲ ಅವಳ ಮನೇಲಿ ಇರುತ್ತೇನೆ ಅನ್ನೋ ಉತ್ತರ (ಅತ್ತೆ ಮಗಳು ಅಕ್ಕ ಅಂತ ಕರೆದು ಆಭ್ಯಾಸ ಇವನಿಗೆ).ಎಷ್ಟಾದ್ರೂ ಸಂಬಂಧಿಕರ ಮನೆ ಬೇಡ ಅಂತಿದ್ದ ಅಪ್ಪ ಕೊನೆಗೆ ಇವನ ಒತ್ತಾಯಕ್ಕೆ ಮಣಿದು ಅವಳಿಗೆ ಫೋನ್ ಹಾಯಿಸಿ ಹೀಗೆ ಹೀಗೆ ಕೆಲಸ ಸಿಕ್ಕಿ ಒಂದು ೩-೪ ತಿಂಗಳಿಗೆ ಬೇರೆ ಹೋಗುತ್ತಾನೆ ಅಂತ ಹೇಳಿದ್ದು ಆಯಿತು ಆ ಕಡೆ ಇಂದ ಓಕೆ ಅಂದಿದ್ದು ಆಯಿತು.ಬಾವಿಯ ಕಪ್ಪೆ ಸಮುದ್ರಕ್ಕೆ ಹೋದ ಹಾಗೆ ಆಗಿತ್ತು ಇವನ ಕತೆ.ಅದೃಷ್ಟಕ್ಕೆ ಹೋದ ೨ ನೇ ದಿನವೇ ಇವನಿಗೆ ಕೆಲಸ ದೊರೆಯಿತು ,೯೦೦೦ ಸಂಬಳ.ಕೇಳಬೇಕೆ ಮತ್ತೆ , ಜೀವಮಾನದಲ್ಲಿ ನೋಡಿರದ ಮೊತ್ತ (ಒಟ್ಟಿಗೆ).ಆದರೆ ಕೆಲಸಕ್ಕೆ ಸೇರಿ ೨ ತಿಂಗಳಿಗೆ ಇವನಿಗೆ ಕೆಲಸ ಹಳಸಿತು.ತಾನು ಅದನ್ನು ಬಿಟ್ಟು ಬೇರೆ ಕೋರ್ಸ್ ಮಾಡುವುದಾಗಿ ಮನೆಯಲ್ಲಿ ತಿಳಿಸಿದ.ಬೇಡ ಅಥವಾ ಮಾಡು ಅವರು ಏನೇ ಹೇಳಿದರೂ ಅವನು ಅದನ್ನು ಮಾಡುವವನೇ ಇದ್ದ.ಅದಾದ ಮೇಲೆ ತನಗೆ ಒಳ್ಳೆಯ ಕೆಲಸ ದೊರೆಯುವುದು ಅಂತ ಬೇರೆ ಹೇಳಿದ.ವಿಧಿ ಇಲ್ಲದೆ ಹು ಎಂದರು ಅಪ್ಪ.ಒಂದೆರಡು ಬಾರಿ ಆ ಹಬ್ಬ ಈ ಹಬ್ಬ ಅಂತ ಮನೆಗೆ ಬಂದ , ಬಂದಾಗಲೆಲ್ಲಾ ಅಷ್ಟು ಇಷ್ಟು ಹಣ ಕೊಟ್ಟು ಕಳಿಸುತಿದ್ದರು ಅಪ್ಪ.

ಆದರೆ ಇವ ಎಣಿಸಿದ್ದು ಒಂದಾದರೆ ಆ ವಿಧಿಯೇ ಬೇರೆ ರೀತಿ ಎಣೆಸಿತ್ತು.ಕೋರ್ಸ್ ಮುಗಿದು ೨ ತಿಂಗಳಾದರೂ ಕೆಲಸವಿಲ್ಲ.ಎಷ್ಟು ದಿನ ಅಂತ ಬೇರೆಯವರ ಮನೆಯಲ್ಲಿ ಇರೋದು ಸಾಧ್ಯ , ಆದರೆ ಬೇರೆ ಹೋಗೋದಾದ್ರೂ ಹೇಗೆ. ಏನೋ ಇದೆ ಎಂದು ಒಮ್ಮೆ ಬಂದು ಹೋಗು ಅಂತ ಮನೆಯಿಂದ ಬುಲಾವ್ ಬೇರೆ ಬಂತು.ಅದು ಏನು ಅಂತ ಇವನಿಗೆ ಚೆನ್ನಾಗಿ ಗೊತ್ತಿತ್ತು. ಅವಾಗಲೇ ಏನು ಹೇಳದಿದ್ದರೂ ಅಪ್ಪನ ಮೌನವೇ ಇವನಿಗೆ ಮುಂಚಿನ ಹುಣಸೆ ಬರಲಿನ ಏಟಿಗಿಂತ ಬಿರುಸಾಗಿತ್ತು. ಇನ್ನು ಅಮ್ಮ ಅವರೇನು ಹೇಳಿಯಾರು ,ಹೊರಗೆ ನಕ್ಕು ಒಳಗೆ ಅಳುತಿದ್ದ ಜೀವ ಅದು.ಹೊರಡುವವರೆಗೂ ಸುಮ್ಮನಿದ್ದು ಹೊರಟು ನಿಂತಾಗ ಕೈ ಅಲ್ಲಿ ದುಡ್ಡಿಟ್ಟು ಅಪ್ಪ ಹೇಳಿದ ಮೇಲಿನ ಮಾತುಗಳು ಅವನ ಕಿವಿಯಲ್ಲಿ ಇನ್ನು ಹಾಗೆ ಪ್ರತಿದ್ವನಿಸುತಿತ್ತು. ಹಾಗೆ ಸೂರ್ಯ ತನ್ನ ಕೊನೆ ಕಿರಣವನ್ನು ಮಾತ್ರ ತುರುತ್ತಾ ಇವನಿಗೆ ದಾರಿ ತೋರಿಸಿದ ಹಾಗೆ ಇತ್ತು.ಮನಸಿನಲ್ಲೇ ಒಂದು ಸಂಕಲ್ಪ ಮಾಡಿ ತಾನು ಬದಲಾಗಬೇಕು ಅನ್ನೋದರ ಸ್ಪಷ್ಟ ಚಿತ್ರಣ ಮೂಡಿಸಿಕೊಂಡ. ಅಲ್ಲಿಂದ ಎದ್ದು ಕೆಳಗಡೆಗೆ ಹೆಜ್ಜೆ ಹಾಕತೊಡಗಿದ, ಹಾಗೆಯೇ ಆ ಕೊನೆ ಕಿರಣವು ಕೂಡ ನಿಧಾನವಾಗಿ ಮಾಯವಾಗುತ್ತಾ ಹೋಯಿತು.

ಇಂತಿ

ವಿನಯ

ಭಾನುವಾರ, ಜುಲೈ 19, 2009

ಕನ್ನಡ ನಾಡಿನ ಹಕ್ಕಿಗಳಿಗೆ ಪ್ರಮಾಣೀಕೃತ ಕನ್ನಡ ಹೆಸರುಗಳು

ವಿಶ್ವದಲ್ಲಿ ವೈಜ್ಞಾನಿಕ ಬೆಳವಣಿಗೆ ಮುನ್ನಡೆದಂತೆ ಆಯಾ ಕ್ಷೇತ್ರದಲ್ಲಿ ಎಲ್ಲರಿಗೂ ಅರ್ಥವಾಗಬಲ್ಲ ಪಾರಿಭಾಷಿಕ ಶಬ್ದಗಳ ಉಪಯುಕ್ತತೆ, ಅವಶ್ಯಕತೆ ಮತ್ತು ಅನಿವಾರ್ಯತೆಯನ್ನು ನಾವೆಲ್ಲಾ ಇಂದು ಕಾಣುತಿದ್ದೇವೆ. ಅದು ಕೇವಲ ಒಂದು ವೈಜ್ಞಾನಿಕ ಪದವೇ ಇರಬಹುದು ಅಥವಾ ಪ್ರಪಂಚದಾದ್ಯಂತ ಇರುವ ಕೋಟಿಗಟ್ಟಲೆ ಪ್ರಾಣಿ - ಪಕ್ಷಿ - ಗಿಡ - ಮರ - ಬಳ್ಳಿಗಳ ಹೆಸರೇ ಇರಬಹುದು.
ಪಕ್ಷಿ ಪ್ರಪಂಚದ ಬಗ್ಗೆ ಬಂದಾಗ ವಿವಿಧ ಪ್ರಾಂತ್ಯಗಳಲ್ಲಿ, ವಿವಿಧ ಆಡು ಭಾಷೆಗಳಲ್ಲಿ ಒಂದು ಹಕ್ಕಿಯನ್ನು ಬೇರೆ ಬೇರೆ ಹೆಸರುಗಳಿಂದ ಅಥವಾ ಬೇರೆ ಬೇರೆ ಹಕ್ಕಿಗಳನ್ನು ಒಂದೇ ಹೆಸರಿನಿಂದ ಕರೆಯುವುದನ್ನು ನಾವು ಕಂಡಿದ್ದೇವೆ.

ಹೀಗೆ ಆದಾಗ ಅವಗಳ ನಿಜವಾದ ಹೆಸರು ನಶಿಸಿ ಹೋಗುವ ಸಾಧ್ಯತೆಗಳೇ ಹೆಚ್ಚು. ಪ್ರಪಂಚದಾದ್ಯಂತ ನೋಡಿದಾಗ ಆಂಗ್ಲ ಭಾಷೆಯಲ್ಲಿ ಒಂದೇ ಜಾತಿಯ ಹಕ್ಕಿಗಳ ಹೆಸರನ್ನು ಏಕರೂಪವಾಗಿ ಕರೆಯುವುದನ್ನು ನೋಡಬಹುದಾಗಿದೆ.
ಆದರೆ ಕರ್ನಾಟಕದ ವಿಷಯಕ್ಕೆ ಬಂದರೆ ಇದು ಇನ್ನು ಆಗಿಲ್ಲ . ಒಂದೋ ಎಲ್ಲರಿಗೂ ಅದರ ನಿಜವಾದ ಪ್ರಬೇಧ ಗೊತ್ತಿಲ್ಲ , ಅಥವಾ ಕೆಲವನ್ದರದ್ದು ತಿಳಿದಿದ್ದು ಉಳಿದವದ್ದು ತಿಳಿದಿರಲಿಕ್ಕಿಲ್ಲ . ಎಲ್ಲರೂ ಒಂದೇ ಹೆಸರಿನಿಂದ ಕರೆಯಲು ಅದಕ್ಕೊಂದು ಮಾಹಿತಿ ಒದಗಿಸುವ ಪಟ್ಟಿಬೇಕು.

ಅದಕ್ಕೆ ಡಾ. ಎಸ್.ವಿ. ನರಸಿಂಹನ್ ಮತ್ತು ಹರೀಶ್. ಅರ್. ಭಟ್ ಈ ವಿಷಯವಾಗಿ ಅಭ್ಯಾಸ ಮಾಡಿ ಕರ್ನಾಟಕದಲ್ಲಿರುವ ಒಟ್ಟು ೫೧೨ ವಿವಿಧ ಪ್ರಬೇಧದ ಪಕ್ಷಿಗಳ ಪಟ್ಟಿ ತಯಾರಿಸಿ ಅವುಗಳ ವೈಜ್ಞಾನಿಕ , ಆಂಗ್ಲ ಮತ್ತು ಕನ್ನಡದ ಹೆಸರನ್ನು ಅಲ್ಲಿ ಸೂಚಿಸಿದ್ದಾರೆ. ಈ ಪಟ್ಟಿ ತಯಾರಿಸಲು ಅವರು ಕರ್ನಾಟಕ ಸುಪ್ರಸಿದ್ಧ ಪಕ್ಷಿ ತಜ್ಞರು ಮತ್ತು ಭಾಷಾ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದಾರೆ , ಅಲ್ಲದೆ ಡಾ. ಶಿವರಾಮ ಕಾರಂತ್ , ಕುವೆಂಪು , ತೇಜೆಸ್ವಿ , ಡಾ .ಹೆಚ್.ಆರ್. ಕೃಷ್ಣಮೂರ್ತಿ , ಡಾ. ಪ್ರಭಾಕರ್ ಆಚಾರ್ ಮತ್ತು ಗೀತಾ ನಾಯಕ್, ಡಾ . ಎನ್.ಎಸ್ .ಮಧ್ಯಸ್ಥ, ಪ್ರೊ. ಎಸ್.ಬಿ. ಸದಾನಂದ , ಪ್ರಮೋದ್ ಸುಬ್ಬರಾವ್ ಮುಂತಾದವರ ಕೃತಿಗಳಲ್ಲಿ ಉಲ್ಲೇಖಿಸಿರುವ ಪಕ್ಷಿಗಳ ಹೆಸರನ್ನು ಕೂಡ ಗಣನೆಗೆ ತೆಗೆದುಕೊಂಡಿದ್ದಾರೆ.
ಅದು ಅಲ್ಲದೆ ಆಂಗ್ಲದಲ್ಲಿ ಈ ಪಕ್ಷಿಗಳ ಪ್ರಬೇಧದ ವಿಂಗಡಣೆಗೆ ಕೆಲವು ಕ್ರಮಗಳಿವೆ. ಅವನ್ನು ಕೂಡ ಇವರು ಪರಿಗಣನೆಗೆ ತೆಗೆದುಕೊಂಡಿದ್ದಾರೆ. ಹಾಗು ಅವು ಇಂತಿವೆ :

೧) ಒಂದು ಹಕ್ಕಿಯ ಕುಟುಂಬವನ್ನು ತೆಗೆದುಕೊಂಡಲ್ಲಿ ಇಡೀ ಕುಟುಂಬದ ಹಕ್ಕಿಗಳನ್ನು ಒಂದೇ ಸಾಮನ್ಯ ಹೆಸರಿನಿಂದ ಗುರುತಿಸಿ, ನಂತರ ಆ ಕುಟುಂಬದಲ್ಲಿರುವ ವಿವಿಧ ಸದಸ್ಯರನ್ನು ಅವುಗಳ ವರ್ಣವ್ಯತ್ಯಾಸ, ದೇಹರಚನಾ ವ್ಯತ್ಯಾಸ ಹಾಗು ಸ್ವಭಾವದ ವ್ಯತ್ಯಾಸಗಳಿಗನುಗುಣವಾಗಿ ಹೆಸರಿಸಗಾಗುವುದು. ಉದಾ : ಪಿಕಳಾರಗಳ ಕುಟುಂಬದಲ್ಲಿ ಕೆಮ್ಮೀಸೆ ಪಿಕಳಾರ , ಕೆಂಪುಕಿಬ್ಬೊಟ್ಟೆಯ ಪಿಕಳಾರ, ಬಿಳಿ ಮತ್ತು ಹಳದಿ ಹುಬ್ಬಿನ ಪಿಕಳಾರ , ಬೂದು ತಲೆಯ ಪಿಕಳಾರ .. ಹೀಗೆ .

೨) ಒಂದೇ ಕುಟುಂಬದಲ್ಲಿಯೇ ಸ್ಥೂಲವ್ಯತ್ಯಾಸಗಳಿರುವ ವಿವಿಧ ಗುಂಪುಗಳನ್ನು ನಾವು ಕಾಣುತ್ತೇವೆ. ಆ ಸಂದರ್ಭದಲ್ಲಿ ಒಂದೊಂದು ಗುಂಪಿಗೆ ಒಂದು ಹೆಸರನ್ನಿರಿಸಿ ಅಲ್ಲಿಂದ ಮುಂದೆ ೧ ರಂತೆ ಮುಂದುವರೆಯುವುದು.
ಉದಾ : Ardidae ಕುಟುಂಬದಲ್ಲಿ Herons, Egrets and Bitterns ಏನು ಬೇರೆ ಬೇರೆ ಹೆಸರಿನ ಗುಂಪುಗಳಿವೆ. ಇಲ್ಲಿ Herons ಬೇರೆ, Egrets ಬೇರೆ ಮತ್ತು Bitters ಬೇರೆ.

ಕನ್ನಡದಲ್ಲಿ ಈ ಗುಂಪುಗಳನ್ನು ನಾವು ಅನುಕ್ರಮವಾಗಿ ಬಕ , ಬೆಳ್ಳಕ್ಕಿ ಮತ್ತು ಗುಪ್ಪಿಗಳೆಂದು ಕರೆಯಬಹುದು. ಬಕಗಳಲ್ಲಿ ಬೂದು ಬಕ ,ಕೆನ್ನೀಲಿ ಬಕ :ಬೆಳ್ಳಕ್ಕಿಗಳಲ್ಲಿ ,ಮಧ್ಯಮ ಬೆಳ್ಳಕ್ಕಿ , ದೊಡ್ಡ ಬೆಳ್ಳಕ್ಕಿ ;ಗುಪ್ಪಿಗಳಲ್ಲಿ ಕರಿ ಗುಪ್ಪಿ , ಕೆಸರು ಗುಪ್ಪಿ- ಹೀಗೆ .

೩) ಒಂದು ಕುಟುಂಬದ ಒಬ್ಬ ಸದಸ್ಯನಿಗೆ ಒಂದು ನಿರ್ದಿಷ್ಟವಾದ ಹಾಗು ಅದಕ್ಕೆ ತಕ್ಕದಾದ ಒಂದು ಹೆಸರಿದ್ದರೆ ಮತ್ತು ಆ ಹೆಸರು ಮತ್ಯಾವುದೇ ಹಕ್ಕಿಗೂ ಇಲ್ಲದಿದ್ದಲ್ಲಿ, ಅದನ್ನು ಮುಂದುವರೆಸಿಕೊಂಡು ಹೋಗುವುದು . ಉದಾ: ಮೇಲಿನ ಸಂದರ್ಭಗಳಲ್ಲಿ Little Egret = ಬೆಳ್ಳಕ್ಕಿ , Cattle Egret = ಗೋವಕ್ಕಿ- ಹೀಗೆ.

೪) ಒಂದೇ ಕುಟುಂಬದಲ್ಲಿ ಹತ್ತಾರು ಗುಂಪುಗಳಿದ್ದಲ್ಲಿ ಪರಿಸ್ಥಿತಿ ಬಹಳ ಸಂಕಿರ್ಣ, ಕ್ಲಿಷ್ಟ ಆಗುತ್ತದೆ. ಉದಾ : Accipitridae ಕುಟುಂಬದಲ್ಲಿ Kites, Eagles, Hawks, Buzzards, Harriers, Vultures ಅಲ್ಲದೆ Shikra, Baza, Fish-Eagle, Snake-Eagle, Serpent-Eagle, Hawk- Eagle ಮುಂತಾದ ಹೆಸರುಗಳು ನಮ್ಮನ್ನು ಗೊಂದಲಕ್ಕೆ ಈಡು ಮಾಡುತ್ತವೆ. ಈ ಹಕ್ಕಿಗಳಿಗೆ ನಮಗೆ ಕನ್ನಡದಲ್ಲಿ ಹದ್ದು , ಗಿಡುಗ , ಗರುಡ , ಬಿಜ್ಜು ,ಡೇಗೆ , ಸೆಳೆವ, ರಣ ಹದ್ದು ಮುಂತಾದ ಹೆಸರುಗಳು ದೊರಕುತ್ತವೆ.

೫) ಕೆಲವು ಕುಟುಂಬದ ಹಕ್ಕಿಗಳಿಗೆ ಕನ್ನಡದಲ್ಲಿ ಯಾವ ಹೆಸರು ಯಾವು ಇಲ್ಲ . ಉದಾ : Family: Sulidae – Boobies. ಇಂಥಹ ಸಂದರ್ಭಗಳಲ್ಲಿ ಹೊಸ ಹೆಸರನ್ನು ಸೂಚಿಸಬೇಕಾಗುತ್ತದೆ.

ಮುಖ್ಯ ಪ್ರಬೇಧಗಳು ;
೧)ಗುಳುಮುಳುಕ
೨)ಸಾಗರದಕ್ಕಿಗಳು : ಉಪಜಾತಿ - ೨
೩)ಕಡಲಪೋತ
೪)ಕಡಲ ಕಾಗೆಗಳು :ಉಪಜಾತಿ -೨
೫)ಹೆಜ್ಜಾರ್ಲೆಗಳು :ಉಪಜಾತಿ -೨
೬)ಕಡಲ ಬಾತುಗಳು :ಉಪಜಾತಿ -೨
೭)ನೀರುಕಾಗೆಗಳು :ಉಪಜಾತಿ -೩
೮)ಹಾವಕ್ಕಿ
೯)ಕಡಲ ಹದ್ದುಗಳು : ಉಪಜಾತಿ -೨
೧೦)ಬಕ , ಬೆಳ್ಳಕ್ಕಿ , ಗುಪ್ಪಿಗಳು : ಉಪಜಾತಿ -೧೬
೧೧)ಕೊಕ್ಕರೆಗಳು : ಉಪಜಾತಿ -೮
೧೨)ಕೆಂಬರಲುಗಳು :ಉಪಜಾತಿ - ೪
೧೩)ರಾಜಹಂಸ
೧೪)ಬಾತುಕೋಳಿಗಳು :ಉಪಜಾತಿ -೧೮
೧೫)ಹದ್ದು , ಗಿಡುಗ,ಸೆಳೆವ, ರಣ ಹದ್ದು : ಉಪಜಾತಿ -೩೯
೧೬)ಡೇಗೆಗಳು
೧೭)ಚಾಣಗಳು:ಉಪಜಾತಿಗಳು -೧೦
೧೮)ಕವುಜುಗ ,ಬುರ್ಲಿ,ಕೋಳಿ , ನವಿಲುಗಳು : ಉಪಜಾತಿ -೧೩
೧೯)ಗುಡುಗಾಡು ಹಕ್ಕಿಗಳು : ಉಪಜಾತಿ - ೩
೨೦)ಕ್ರೌಂಚಗಳು
೨೧) ಜೌಗು ಕೋಳಿಗಳು , ಹುಂಡು ಕೋಳಿಗಳು , ಜಂಬು ಕೋಳಿಗಳು :ಉಪಜಾತಿ -೧೨
೨೨)ಎರ್ಲಡ್ಡು ಹಕ್ಕಿಗಳು
೨೩)ದೇವನಕ್ಕಿಗಳು :ಉಪಜಾತಿ -೨
೨೪)ಸಿಂಪಿಬಾಕಗಳು
೨೫)ಟಿಟ್ಟಿಭ , ಮರಳುಗೊರವಗಳು : ಉಪಜಾತಿ -೧೦
೨೬)ಗದ್ದೆ ಗೊರವ ,ಕಡಲುಗೊರವ ,ಉಲ್ಲಂಕಿಗಳು: ಉಪಜಾತಿ -೨೮
೨೭)ಕಡಲ ಕೊಕ್ಕರೆಗಳು
೨೮)ರಂಗು ಉಲ್ಲಂಕಿಗಳು
೨೯)ಮೆಟ್ಟು ಗಾಲು ಹಕ್ಕಿಗಳು :ಉಪಜಾತಿ - ೨
೩೦)ಏಡಿಗೊರವಗಳು
೩೧)ಬಂಡೆಗೊರವಗಳು : ಉಪಜಾತಿ - ೨
೩೨)ಚಿಟವಗಳು : ಉಪಜಾತಿ - ೨
೩೩)ಕಡಲ ಗಿಡುಗಗಳು : ಉಪಜಾತಿ - ೨
೩೪)ಕಡಲಕ್ಕಿ , ರೀವಗಳು : ಉಪಜಾತಿ - ೨೧
೩೫)ಜಾಲರಿ -ರೀವಗಳು
೩೬)ಗೌಜಲಕ್ಕಿಗಳು : ಉಪಜಾತಿ - ೩
೩೭)ಪಾರಿವಾಳ , ಕಪೋತಗಳು : ಉಪಜಾತಿ - ೧೩
೩೮)ಗಿಳಿಗಳು : ಉಪಜಾತಿ -೬
೩೯)ಕೋಗಿಲೆಗಳು , ಕೆಂಬುತಗಳು : ಉಪಜಾತಿ - ೧೫
೪೦)ಕಣಜ ಗೂಬೆಗಳು : ಉಪಜಾತಿ -೩
೪೧)ಗೂಬೆಗಳು : ಉಪಜಾತಿ -೧೨
೪೨)ಕಪ್ಪೆ ಬಾಯಿಗಳು
೪೩) ನತ್ತಿಂಗಗಳು : ಉಪಜಾತಿ -೬
೪೪)ಬಾನಾಡಿ ಹಕ್ಕಿಗಳು : ಉಪಜಾತಿ - ೭
೪೫)ಮರ ಬಾನಾಡಿಗಳು
೪೬)ಕಾಕರಣೆ ಹಕ್ಕಿಗಳು
೪೭) ಮಿಂಚುಳ್ಳಿಗಳು : ಉಪಜಾತಿ - ೮
೪೮)ಪತ್ರಂಗಗಳು :ಉಪಜಾತಿ - ೫
೪೯)ನೀಲಕಂಠಗಳು : ಉಪಜಾತಿ -೩
೫೦)ಚಂದ್ರ ಮುಕುಟಗಳು
೫೧)ಮಂಗಟ್ಟೆ ಹಕ್ಕಿಗಳು : ಉಪಜಾತಿ -೪
೫೨)ಕುಟ್ರಹಕ್ಕಿಗಳು : ಉಪಜಾತಿ -೪
೫೩)ಮರಕುಟಿಗಗಳು : ಉಪಜಾತಿ - ೧೩
೫೪)ನವರಂಗಗಳು
೫೫) ನೆಲಗುಬ್ಬಿಗಳು: ಉಪಜಾತಿ -೯
೫೬)ಕವಲುತೊಕೆಗಳು : ಉಪಜಾತಿ - ೧೦
೫೭)ಕಳಿಂಗಗಳು : ಉಪಜಾತಿ -೫
೫೮)ಹೊನ್ನಕ್ಕಿಗಳು:ಉಪಜಾತಿ -೩
೫೯)ಕಾಜಾಣಗಳು: ಉಪಜಾತಿ - ೬
೬೦)ಅಂಬರ ಕಿಚುಕಗಳು:ಉಪಜಾತಿ -೧
೬೧)ಕಬ್ಬಕ್ಕಿ , ಗೊರವಂಕಗಳು :ಉಪಜಾತಿ -೯
೬೨)ಮಟ ಪಕ್ಷಿಗಳು : ಉಪಜಾತಿ -೪
೬೩)ಕೀಚುಗ , ಚಿತ್ರ ಪಕ್ಷಿಗಳು :ಉಪಜಾತಿ -೧೦
೬೪)ಎಲೆ ಹಕ್ಕಿಗಳು :ಉಪಜಾತಿ -೫
೬೫)ಪಿಕಳಾರಗಳು :ಉಪಜಾತಿ -೧೧
೬೬)ಹರಟೆ ಮಲ್ಲಗಳು , ನಗೆ ಮಲ್ಲಗಳು : ಉಪಜಾತಿ -೧೬
೬೭)ನೊಣ ಹಿಡುಕಗಳು : ಉಪಜಾತಿ -೧೩
೬೮)ಬೀಸಣಿಗೆ ನೊಣ ಹಿಡುಕಗಳು : ಉಪಜಾತಿ - ೩
೬೯)ರಾಜ ಹಕ್ಕಿಗಳು :ಉಪಜಾತಿ -೨
೭೦)ಉಲಿಯಕ್ಕಿಗಳು :ಉಪಜಾತಿ -೨೭
೭೧)ಚಟಕ , ಸಿಳ್ಳರ ಹಕ್ಕಿಗಳು : ಉಪಜಾತಿ -೨೧
೭೨)ಚೇಕಡಿ ಹಕ್ಕಿಗಳು :ಉಪಜಾತಿ - ೩
೭೩)ಮರ ಗುಬ್ಬಿಗಳು : ಉಪಜಾತಿ -೨
೭೪) ಪಿಪಿಳಿಕ , ಸಿಪಿಲೆಗಳು : ಉಪಜಾತಿ -೧೫
೭೫)ಬದನಿಕೆಗಳು : ಉಪಜಾತಿ - ೩
೭೬) ಸೂರಕ್ಕಿಗಳು : ಉಪಜಾತಿ - ೬
೭೭) ಬೆಳ್ಗಣ್ಣಗಳು
೭೮) ಗುಬ್ಬಚ್ಚಿಗಳು.

ಕೊನೆಯದಾಗಿ ಲೇಖಕರ (ಡಾ ಎಸ್.ವಿ. ನರಸಿಂಹನ್ ಮತ್ತು ಹರೀಶ್ ಆರ್. ಭಟ್) ಮಾತು : "ರಾಜ್ಯದ ಪಕ್ಷಿ ಪ್ರೇಮಿಗಳು , ಪಕ್ಷಿ ವೀಕ್ಷಕರು ಹಾಗು ವಿಜ್ಞಾನದ ವಿದ್ಯಾರ್ಥಿಗಳು ತೆರೆದ ಹೃದಯದಿಂದ ಈ ಹೆಸರುಗಳನ್ನು ಸ್ವೀಕರಿಸಿ. ಇವೇ ಹೆಸರುಗಳಿಂದ ಹಕ್ಕಿಗಳನ್ನು ಗುರುತಿಸಿ. ತಮ್ಮ ದಿನಬಳಕೆಯಲ್ಲಿ ಮತ್ತು ಲೇಖನಗಳಲ್ಲಿ ಬಳಸಿ ನಾಡಿನಾದ್ಯಂತ ಪ್ರಚುರಪಡಿಸಬೇಕೆಂದು ಕಳಕಳಯಿಂದ ಕೇಳಿಕೊಳ್ಳುತ್ತೇವೆ. ಉತ್ತಮ ಸೂಚನೆ ಸಲಹೆಗಳಿಗೆ ಅವಕಾಶವಿದೆ.

ಇಂತಿ

vinaya

ನಿಲ್ಲದ ಪಯಣ

ನಿಲ್ಲದ ಪಯಣ
ಮರ ಮಟ್ಟು ಪೊದೆ ಒಳಗೆ ಹಸಿರ ಹಾಸಿನ ಮೇಲೆ ಮೂಡುತಿದೆ ಕಣ್ಣೀರ್ ಎಂಬ ನೀರ ಹನಿಗಳು