ಮಂಗಳವಾರ, ಡಿಸೆಂಬರ್ 21, 2010

ಸುಳ್ಳು

ಅಂದೇ ನಾ 
ಗೆಳತಿ 
ನಾ ಆಡುವ 
ಪ್ರತಿ ಉಸಿರಿನಲ್ಲೂ 
ನೀನೇ ಇರುವೆ ಎಂದು 
ತಕ್ಷಣ ಅಂದಳಾಕಿ
ನುಡಿಯಬೇಡಿ ಸುಳ್ಳ 
ಮೊನ್ನೆ ತಾನೇ 
ಅಂದಿರಿ 
ಹೋಗಿತ್ತು 
ಉರಿಸಿರಿನಾಗ ಧೂಳು 
ಆಗಿತ್ತು 
ಅಲರ್ಜಿ ಎಂದು 

ಬುಧವಾರ, ಡಿಸೆಂಬರ್ 15, 2010

ಒಂಟಿ


ನಿಂತಿದ್ದೆ ನಾ ಬಸ್ ಸ್ಟ್ಯಾಂಡಿನಲಿ 
ಬಸ್ಸಿಗಾಗಿ 
ಕಾದಿದ್ದಳು ಒಬ್ಬಳಲ್ಲಿ 
ಯಾರಿಗೋ ಒಬ್ಬಂಟಿಯಾಗಿ 
ಪಕ್ಕದಲ್ಲೇ ಇತ್ತು ಒಂದು 
ಒಂಟಿ ಮರ 
ಅದರ ಮೇಲೊಂದು 
ಒಂಟಿ ಕಾಗೆ 
ಕೂಗುತ್ತಲೇ ಇತ್ತು 
ಕಾ ಕಾ ಕಾ ಎಂದು 
ಅರಿಯಲಿಲ್ಲ ಕಾಗೆಯ 
ಮಾತಾ ನಾನಂದು 
ಅದಕೆ ಆಗಿದೆ 
ನಮಗೀಗ ಒಂದು ಮಗು 
ಮತ್ತೆ ನಾ ಆಗಿದ್ದೇನೆ 
ಒಂಟಿ 
ಮತ್ತೆ ನಿಂತಿದ್ದೇನೆ ಅದೇ 
ಬಸ್ ಸ್ಟ್ಯಾಂಡಿನಲಿ 
ಅದೇ ಮರದ ಪಕ್ಕ 
ಈಗಲೂ ಅಲ್ಲಿದ್ದಾಳೆ 
ಒಂಟಿ ಹುಡುಗಿ 
ಈಗಲೂ ಇದೆ 
ಅಲ್ಲಿ 
ಆ ಒಂಟಿ ಕಾಗೆ 
ಆದರೆ ಅದು 
ಕೂಗಿದಾಗಲೆಲ್ಲ 
ಕೆಳತೊಡಗಿದೆ ನನಗೆ 
ಅಕ್ಕ,ಅಕ್ಕ ,ಅಕ್ಕ ಎಂದು .

ಶುಕ್ರವಾರ, ಡಿಸೆಂಬರ್ 3, 2010

ಅತ್ತ -ಇತ್ತ-ಎತ್ತ

ನೀ ಅತ್ತ ನಾ ಇತ್ತ 
ಕಣ್ ಬಿಟ್ಟಾಗಲೂ
ಮುಚ್ಚಿದಾಗಲು
ಈ ಚಿತ್ತ ನಿನ್ನೆಯ 
ನೆನಪುಗಳ ಸುತ್ತ 
ಎಂದಾಗುವುದೋ 
ಎಂದಾಗಿದೆ 
ನಮ್ಮೆಯ ಮಿಲನ 
ಸುತ್ತಿ ಸುತ್ತಿ
ಸಾಕಾಗಿದೆ 
ಮನಕಿಗ
ಆದರೂ
ಅನ್ನುತ್ತಾರೆಲ್ಲರೂ 
ಭೂಮಿ ಇದೆ ಸುತ್ತ 
ಬಿಡಬೇಡ ನೀ 
ನಿನ್ನ ಪ್ರಯತ್ನ ಸೋಮವಾರ, ನವೆಂಬರ್ 22, 2010

ಬಾ ನಲ್ಲೆ

ಬಾ ನಲ್ಲೆ ನನ್ನ
ಬರಡಾದ ಬಾಳಿಗೆ
ನೀಲಾಕಾಶದ ದಟ್ಟ
ಕಪ್ಪು ಮೋಡಗಳೊಂದಿಗೆ
ಬಂದು ಸಿಹಿ ನೀರ
ನೀಡುವ ಮಳೆಯಂತೆ

ಒಣ ಮರದಲ್ಲಿ
ಮೂಡುವ ಚಿಕ್ಕ
ಚಿಗುರಿನಂತೆ

ಮಗುವ ಅಳುವ
ಕೇಳಿ ತಾಯಿಯ
ಎದೆಯಲ್ಲಿ
ಜಿನುಗುವ
ಎದೆ ಹಾಲಿನಂತೆ

ಬಾ ನಲ್ಲೆ ನನ್ನ
ಬರಡಾದ ಬಾಳಿಗೆ
ತನ್ನ ಮಗುವ ನಗುವಿನಲ್ಲೇ
ತನ್ನೆಲ್ಲ ದುಃಖವ ಮರೆಯುವ
ತಾಯಿಯಂತೆ

ಸೋಮವಾರ, ಅಕ್ಟೋಬರ್ 25, 2010

ನೀ ನಿಲ್ಲದ ಮೇಲೆ

ಸಲ್ಲದ 
ಏಕಾಂತ 
ಸಲಿಗೆ 
ಬೆಳೆದ 
ಮೇಲೆ 
ನಿಲ್ಲದು
ಆಸೆ 
ಬುದ್ದಿ 
ಬೆಳೆದ 
ಮೇಲೆ 
ತೀರದು 
ದಾಹ 
ನೀ
ಸನಿಹವಾದ 
ಮೇಲೆ 
ಇದ್ದರೂ
ಇಲ್ಲವಾಗಿದೆ 
ಈ 
ಮನವು 
ಇಲ್ಲಿ 
ನೀ 
ದೂರ 
ಸರಿದ 
ಮೇಲೆ .......

ಗುರುವಾರ, ಅಕ್ಟೋಬರ್ 7, 2010

ತಲೆಕೂದಲು

ಉತ್ತಿಲ್ಲ 
ಬಿತ್ತಿಲ್ಲ
ನೀರ ಹಾಯಿಸಿಲ್ಲ 
ಆದರೂ ಬೆಳೆಯುವುದು 
ಈ ತಲೆಗೂದಲು 
ಬೆಟ್ಟದೆತ್ತರಕ್ಕೆ
ಬೆಳೆದಾಗ 
ಆಗಾಗ ತಲೆ ತುರಿಸಿದಾಗ 
ಮಾತ್ರ ಆಗುತ್ತಿತ್ತು
ಕಟಾವು 
ಗೆಳೆಯ 
ಹಿಡಿದೆಳೆದಾಗ 
ರೋಷ ಉಕ್ಕಿ 
ಹಲ್ಲು ಉದುರುವಂತೆ 
ಹೊಡೆದಾಗ 
ಖುಷಿಯಲ್ಲಿ 
ಉಬ್ಬಿ 
ಹೋಗುತ್ತಿತ್ತು
ಈ ತಲೆಕೂದಲು 
ಆದರೆ 
ಈಗೀಗ 
ಕೆರೆದಿಲ್ಲ 
ಕತ್ತರಿಸಿಲ್ಲ 
ಯಾರಿಗೂ 
ಮುಟ್ಟುಲು 
ಬಿಟ್ಟಿಲ್ಲ
ಆದರೂ
ಅದೇನು 
ಹುಸಿ ಕೋಪವೋ 
ಇಳಿಜಾರ
ಬಂಡಿಯಲ್ಲಿ 
ಜಾರುವ ಆಟವಾಡುವ 
ಮಕ್ಕಳಂತೆ 
ಹೇಳದೆ ಕೇಳದೆ 
ತಲೆ ಇಂದಿಳಿದು 
ಹೋಗುತಿರುವುದಿಂದು 

ಸೋಮವಾರ, ಅಕ್ಟೋಬರ್ 4, 2010

ಚುಟುಕಗಳು

ಮೊದಲೇ ಸಕ್ಕರೆ 
ಅದಕ್ಕೊಂದಿಷ್ಟು ಅಕ್ಕರೆ 
ಅದರೊಂದಿಗೆ ನೀ ನಕ್ಕರೆ 
ಸ್ವರ್ಗಕ್ಕೆ ಮೂರೇ ಗೇಣು 
ನಾ ಅಳೆದರೆ


************
ನನ್ನ ಪ್ರತಿ
ನಗುವಿನ
ಹಿಂದಿರುವ
ಸ್ಫೂರ್ತಿ ನೀನೆ
ಅದಕ್ಕೆ ನಾ ನಕ್ಕಾಗಲೆಲ್ಲ
ಎದುರಿಗೆ
ಬರುವುಳು
ಕೀರ್ತಿ***************ಶುಕ್ರವಾರ, ಅಕ್ಟೋಬರ್ 1, 2010

ಚುಟುಕಗಳು

ದೇವರೆಂದರೆ 
ನನಗೆ 
ಬಹಳ 
ನಂಬಿಕೆ 
ಅದಕ್ಕೆ 
ದೆವ್ವಗಳು 
ಕಂಡ ತಕ್ಷಣ 
ಮೊದಲು 
ಹೇಳಿಬಿಡುತ್ತೇನೆ 
ದೇವರು ನನ್ನ 
ಶತ್ರುವೆಂದು 

****************
ಅಂದಳು ಗೆಳತಿ
ನಾನು ನಿನಗಿಂತ
ಮುಂದೆ ಸಮಯದಲ್ಲಿ
ಅದಕೆ ನಾನೆಂದೆ
ಇರಬಹುದು
ಗೆಳತಿ
ಆದರೆ
ನಿನಗಿಂತ
ಮುಂದೆ  ನಾ
ಸಂಯಮದಲ್ಲಿ

**************

ಗೆಳತಿಯ ಆಸೆ

ಅಂದಳು ಗೆಳತಿ 
ಪ್ರಿಯ ನಿನ್ನ 
ಎದೆಯಾಳದಲ್ಲಿ 
ಆಡುವ ಬಯಕೆ 
ನನಗೆಂದು 
ಅದಕೆ ನಾನೆಂದೆ 
ಸದ್ಯಕ್ಕೆ ಬೇಡ 
ಗೆಳತಿ 
ಬರುವುದಿಲ್ಲ ಈಜು  
ಮೊದಲೇ 
ನಿನಗೆ 
ಅಲ್ಲಿ 
ತುಂಬಿರುವುದು 
ಬರಿ ನೀರೆಂದು.

ಚುಟುಕುಗಳು

ರಾತ್ರಿಯೆಲ್ಲ 
ಗೊರಕೆಯ 
ಸದ್ದು ಮಾಡುತ್ತ
ಮಲಗುತಿದ್ದ 
ನನ್ನವಳು 
ಇಂದು ಸುಮ್ಮನೆ 
ಮಲಗಿದಾಗಲೇ 
ತಿಳಿದಿದ್ದು 
ನನಗೆ 
ಸ್ಮಶಾನ ಮೌನವೆಂದರೆ 
ಏನೆಂದು.

*********************
ತುಂಟ ಕಣ್ಣಿನ 
ನಾರಿ 
ಉಟ್ಟು ಹೊರಟಿದ್ದಾಳೆ 
ಸ್ಕರ್ಟು 
ಮಾಡಬೇಡಿ
ಹುಡುಗರೇ 
ಅವಳ 
ಸುಮ್ಮ ಸುಮ್ಮನೆ 
ಫ್ಲರ್ಟು

*******************

ಶುಕ್ರವಾರ, ಸೆಪ್ಟೆಂಬರ್ 24, 2010

ಒಂದಿಷ್ಟು ಹನಿಗವನಗಳು

ನಿನ್ನ ಪ್ರತಿ ನಗುವ
ಹಿಂದೊಂದು
ಕಾರಣವಿದೆ ಎಂದು
ತಿಳಿದಿದ್ದು
ನಿನ್ನ ನೋಡುತ
ನಾ ಚರಂಡಿ ಒಳಗೆ
ಬಿದ್ದಾಗಲೇ

***************
ಈಗಿನವರು ಹೇಗೆಂದರೆ
ಕೊಳವೆ ನೀರು
ಕುಡಿದು ಅನ್ನುತ್ತಾರೆ
ಬಿಸಿ ರೀ
ಅದೇ ಅದನ್ನ ಬಾಟಲ್
ಆಲ್ಲಿ ತುಂಬಿಸಿ ಕೊಟ್ಟರೆ
ಅನ್ನುತ್ತಾರೆ
ಬಿಸ್ಲರಿ
****************
ಮೊನ್ನೆ ಮಳೆಬಂದಾಗಲೇ
ತಿಳಿದಿದ್ದು ನನ್ನವಳಿಗೆ
ನನ್ನ ಮೇಲಿನ ಪ್ರೀತಿ ಎಷ್ಟೆಂದು
ನೆನೆಯುತ್ತಿರ ನೀವೆಂದು
ಹೋಗಿಯೇ ಬಿಟ್ಟಳು
ಒಬ್ಬಳೇ
ಸಿನಿಮಾಗೆಂದು
***************
ನಾನು ದಿನವು ಕುಡಿಯುವುದಿಲ್ಲ
ನನ್ನವಳೊಂದಿಗೆ ಜಗಳವಾಡಿದ
ದಿನ ಮಾತ್ರ ಕುಡಿಯುತ್ತೇನೆ
ಆದರೂ ಜನ ನೋಡು ದಿನ 

ಕುಡಿಯುತ್ತಾನೆ ಅನ್ನುತ್ತಾರೆ
***************

ಸೋಮವಾರ, ಸೆಪ್ಟೆಂಬರ್ 20, 2010

ನಾರಿ-ಸ್ಯಾರಿ-ಸಾರೀ

ಮುದ್ದಾದ ಜರಿಯ ಸೀರೆ 
ಉಟ್ಟು ಬಂದ ನಾರಿಯ ಕಂಡು 
ಅಂದರೆಲ್ಲರೂ ಸಕತ್ ಆಗಿದೆ ಸ್ಯಾರಿ 
ಬಿಳಿಯ ಕಾಲುಂಗುರವ 
ತೋರಿಸುತ್ತ ಅಂದಳು ನಾರಿ 
ಫಿಕ್ಸ್ ಆಗಿದೆ ಸಾರೀ

ಬುಧವಾರ, ಸೆಪ್ಟೆಂಬರ್ 8, 2010

ಉಬ್ಬು

ನಲ್ಲೆ ನೀ ನಕ್ಕರೆ 
ಉಬ್ಬುವುದು ನಿನ್ನ
ಆ ಗುಲಾಬಿ ಕೆನ್ನೆ 
ಜೊತೆಗೆ 
ಹೊರಬರುವುದು
ಆ ಕೆಂದುಟಿಯು 
ಆಗಲೇ ಉಬ್ಬಿದ ಹಲ್ಲಿನೊಂದಿಗೆ  :)

ಗುರುವಾರ, ಆಗಸ್ಟ್ 26, 2010

ನೀನಿಲ್ಲದೆ

ಆಗಿದೆ ನನಗೀಗ ಸಂದೇಹ


ನನ್ನ ಮೇಲೆ ನನಗೆ

ಬಂದಿರಹುದೇ

ನನಗೇನಾದರೂ

ದೊಡ್ಡ ರೋಗ

ಕಾರಣವಿಷ್ಟೇ

ದಿನಕ್ಕೊಮ್ಮೆ

ಗುಯ್ ಎಂಬ ರಾಗದೊಡನೆ

ಮೈ ಎಲ್ಲ ಸವರಿ ಹಿರುತಿದ್ದೆ ರಕ್ತ

ಯಾಕೋ ಏನೋ ಇತ್ತೀಚಿಗೆ

ಮೊನ್ನೆ ಇಂದ ಬರೀ ಬಾರಿ ನೋಟವ

ಬೀರಿ ತಿರುಗಿ ಹೋಗುತ್ತಿರುವೆ ಹಾಗೆ ಸುಮ್ಮನೆ ;)

ಗುರುವಾರ, ಆಗಸ್ಟ್ 5, 2010

ನಾರಿ - ಮ್ಯಾರಿ

ಟೈಟು ಪ್ಯಾಂಟಿನ ನಾರಿ
ನಾ ಹೇಗೆ ಆಗಲಿ ನಿನ್ನ ಮ್ಯಾರಿ
ಕಿವಿಯ ರಿಂಗು ಹೊಕ್ಕುಳಲ್ಲಿ
ಕೈಯ ಬಳೆಗಳು ಕತ್ತಿನಲ್ಲಿ
ಹಣೆಯ ಕುಂಕುಮ ತುಟಿಗಳಲ್ಲಿ
ಕೈ ಮೇಲಿನ ಮೆಹೆಂದಿ
ತಲೆ ಕೂದಲಿನಲ್ಲಿ
..
...
....
...
ಅದೆಲ್ಲ ಹಾಳಾಗಿ ಹೋಗಲಿ
ಮನೆಯ ಅತ್ತೆ-ಮಾವ ವೃದ್ದಾಶ್ರಮದಲ್ಲಿ
ಹಾಳದೊನು ನಾನೊಬ್ಬ
ಆಫೀಸಿನಲ್ಲಿ
ಹೀಗೆಲ್ಲ ಇರುವಾಗ
ನೀನೆ ಹೇಳು ಓ ನಾರಿ
ನಾ ಹೇಗೆ ಆಗಲಿ ನಿನ್ನ ಮ್ಯಾರಿ ;)

ಗುರುವಾರ, ಜುಲೈ 29, 2010

ಚುಟುಕಗಳು -೧

ಬಾ ಮಳೆಯೇ ಬಾ
ಇನ್ನು ಜೋರಾಗಿ ಬಾ
ನನ್ನ ನಲ್ಲೆ ರಿಂಗಣಿಸಿದಾಗ
ನೆಟ್ವರ್ಕ್ ಸಿಗದಷ್ಟು ಜೋರಾಗಿ ಬಾ

**********************


ಆಫೀಸಿನಿಂದ ಮನೆಗೆ
ಹೋದ ಗಂಡನಿಗೆ
ಬಾಗಿಲ ತೆಗೆದ
ಹೆಂಡತಿ ಅಂದಳು
ಬಂದಿ'ರಾ'
ಕಿರುನಗೆಯ
ಬೀರಿ ಗಂಡನೆಂದ
"ಇದ್ದೀಯ"(ಇನ್ನು)

ಬುಧವಾರ, ಜುಲೈ 28, 2010

ಚುಟುಕು ಕವನಗಳು

ಮರುಭೂಮಿಯಂತೆ ನಾನು
ಓಯಸಿಸ್ ಆಗಿ ಬಾ
ನೀರು ತರಲಾಗದಿದ್ದರೂ
ಪರವಾಗಿಲ್ಲ
ಪಾಪಸ್ಸು ಕಳ್ಳಿಯನಾದರು ತಾ

*************

ಹುಡುಗಿ ಅಂದರೆ ಸಕ್ಕರೆ
ಅದಕೆ ಅವಳ ಸುತ್ತ
ಹುಡುಗರೆಂಬ
ಇರುವೆಗಳು
ಎಲ್ಲವಕ್ಕೂ
ಒಂದೇ ಆಸೆ
ಏನಾದರು ಮಾಡಿ
ಹೊತ್ತೈಯಲೇ ಬೇಕು
ಸಕ್ಕರೆಯ ಗೂಡಿನೊಳಗೆಂದು.

ಸೋಮವಾರ, ಜುಲೈ 26, 2010

ಮಡಿಕೇರಿಗೆ ಹೋದಾಗ ತೆಗೆದ ಕೆಲವು ಪಾಪೆಗಳು

ಇರ್ಪು ಜಲಪಾತಕ್ಕೆ ಹೋದಾಗ ಸೆರೆಹಿಡಿದ ಕೆಲವು ಚಿತ್ರಗಳು .

ಮಳೆ ನಿಂತು ಹೋದ ಮೇಲೆ ಹನಿ ಒಂದು ಮೂಡಿದೆ .......
ಜಿಗಿ ಜಿಗಿಯೊ ಜೇನಿನ ಹೊಳೆ ...........
ಚಿಕ್ಕದಾದರು ಚೊಕ್ಕದಾದ ಸೇತುವೆ
ಇರ್ಪು ಜಲಪಾತಎಲ್ಲೋ ಹುಟ್ಟಿ ,ಎಲ್ಲೋ ಬೆಳೆದು ..........ಇರ್ಪ ಜಲಪಾತಕ್ಕೆ ಹೋಗೋ ದಾರಿ
ತುಳಸಿ ಗಿಡ

ಭತ್ತದ ಸಸಿಗಳು

ಗುರುವಾರ, ಜುಲೈ 22, 2010

ನಾಗರಹೊಳೆ ಒಂದಿಷ್ಟು ಪಾಪೆಗಳು

ಕಳೆದ ವಾರಾಂತ್ಯದಲ್ಲಿ ಮಡಿಕೇರಿಗೆ ಹೋದಾಗ ನಾಗರಹೊಳೆಗೂ ಹೋಗಿದ್ವಿ .ಅಲ್ಲಿ ತೆಗೆದ ಕೆಲವು ಪಾಪೆಗಳು ,ಹಾಗೆಯೇ ಇರ್ಪು ಜಲಪಾತದಲ್ಲಿ ತೆಗೆದ ಕೆಲವು ಚಿತ್ರಗಳು ಮಳೆಗಾಲ ಶುರುವಾಗಿರೋದರಿಂದ ಹೆಚ್ಚು ಪ್ರಾಣಿಗಳು ನೋಡಲು ಸಿಗಲಿಲ್ಲ.
ರಾಜ ಗಾಂಭೀರ್ಯಹುಷಾರ್ ,ಹಾಗೆಲ್ಲ ಅಪ್ಪಣೆ ಇಲ್ಲ್ಲದೆ ಪಾಪೆ ತೆಗೆದರೆ ಜೋಕೆ :)

ಕಡವೆ

ಮತ್ತದೇ ಬೇಸರ , ಅದೇ ಏಕಾಂತ


ಚಿಗಳಿ


ಬುಧವಾರ, ಜುಲೈ 21, 2010

ಮನಸಿನ ಮಾತು

ನಗುತ್ತಿರುವುದು
ಒಳ ಮನಸು ಇಂದು
ನೀನೇ ಕಟ್ಟಿದ
ಆಶಾಗೋಪುರ ಮುರಿದು
ಬಿದ್ದಿರುವುದೆಂದು

ನಾನಿಟ್ಟ ಪ್ರತಿ ಹೆಜ್ಜೆಯ
ಹಿಂದೆ ಬಂದು
ಗಾಳಿಯ ರಭಸಕ್ಕೆ ಅಳಿಸಿ
ಹೋಗಿರುವ ಹೆಜ್ಜೆಯ ಗುರುತ
ತೋರಿ ಕೊಗಿ ಸಾರುತಿತ್ತು
ಆ ದಾರಿ ನಿನ್ನದಲ್ಲವೆಂದು

ನೀರ ಮೇಲಿನ ಗುಳ್ಳೆಯ
ಕಂಡು ನಾ ಹಿಗ್ಗಿದಾಗ
ಅದರ ಸಂತಸ
ಕೇವಲ ಕ್ಷಣಿಕವೆಂದು
ನಾಟುವಂತೆ ಹೇಳಿತ್ತು
ನೀನಾಗಬೇಡ ನೀರಿನ
ಮೇಲಿನ ಗುಳ್ಳೆಯ ಹಾಗೆಂದು

ಕೇಳಲಿಲ್ಲ ನಾ ಮನಸಿನ ಮಾತು
ನಡೆಯುತ್ತಿರುವೇನೀಗ ಮರಳುಗಾಡಿನಲ್ಲಿ
ಹೆಜ್ಜೆ ಗುರುತಿದೆ,ಹಲವಾರು ಕವಲುಗಳ
ದಾರಿಗಳಿವೆ,ಆದರೆ ಗುರಿ ಎಂಬುದೇ
ಕಣ್ಮರೆಯಾಗಿದೆ .

ಮಂಗಳವಾರ, ಜೂನ್ 22, 2010

ಬಾಳ ಪಯಣ

ಸುಖವಿದೆ ಶಾಶ್ವತವಲ್ಲ
ದುಃಖವಿದೆ ನಿರಂತರವಲ್ಲ
ಇವೆರಡುಗಳ ನಡುವೆ
ಬದುಕಿದೆ ಜೀವನಪರ್ಯಂತ

ಬದುಕಿದು ಬಲೆಯಂತೆ
ಮುಂದೆ ಸಾಗಲು ಹಣೆಯಬೇಕಿದೆ
ಬಲೆಯ,ಅಲ್ಲೇ ನಿಲ್ಲಲೂ
ಬಳಸಬೇಕಿದೆ ಅದನ್ನ

ನಾವು ಬಿಟ್ಟರೂ ಬಿಡದೀ
ಬಲೆಯೂ ನಮ್ಮ ನಂಟು
ಸಾಗಿದಂತೆ ಹಿಂಬಾಲಿಸುವ
ನೆರಳಿನಂತೆ ಬರುತಲೇ
ಇರುವುದು ನಮ್ ಹಿಂದೆ
ಎಂದೆಂದೂ

ಬದುಕ ಹೂಡಹೊರಟ ಎಲ್ಲರೂ
ಬೀಳಲೇಬೇಕಿದೆ ಈ ಜಾಲದಲೊಮ್ಮೆ
ಅರಿವಿರುವವರೂ ಹೆಣೆಯುವರು
ಸುಂದರ ಭವಿಷ್ಯದ ಬಲೆಯ
ಬದುಕ ಈ ಆಟ ಅರಿಯದವರು
ಉಳಿಯುವರು ಅಲ್ಲೇ ಕನಸುಗಳಾಗಿ.

ಶುಕ್ರವಾರ, ಮೇ 14, 2010

ಕಳೆದು ಹೋದ ಆ ದಿನಗಳು ....

ಕಳೆದು ಹೋದವು
ನೀ ನನ್ನ ಬಿಟ್ಟ ಆ
ದಿನಗಳು
ಹಸಿವಿನ ಹಂಗಿಲ್ಲದೆ
ಕಣ್ಣೀರಿನ ಕೊರತೆ ಇಲ್ಲದೆ

ಕಳೆದು ಹೋದವು
ಆ ದಿನಗಳು
ಗಾಢ ನಿದ್ದೆಯೊಳಗೆ
ನೀ ನುಸುಳಿ
ಮೈ ಮನವನೊಮ್ಮೆ
ಜುಮ್ ಎನಿಸಿ
ಮತ್ತದೇ ಏಕಾಂತವ
ಬಿಟ್ಟು ಹೋದಂತಹ
ದಿನಗಳು

ಕಳೆದು ಹೋದವು
ಆ ದಿನಗಳು
ಒಡಲ ನೋವೆಲ್ಲ
ಬಚ್ಚಿಟ್ಟು ಹುಸಿನಗೆಯ
ನಕ್ಕಂತಹ ದಿನಗಳು

ಕಳೆದು ಹೋದವು
ಆ ದಿನಗಳು
ಜನಸಾಗರದ ಮಧ್ಯೆ
ನಿನ್ನನ್ನೇ ಹುಡುಕಿದ
ಈ ಕಂಗಳ
ಯಾತನೆಯ ದಿನಗಳು

ಇಷ್ಟೆಲ್ಲ ಕಳೆದರೂ
ಉಳಿದಿದೆ ಇಂದು
ನೀ ಹೇಳಿದ ನಂಬಿಕೆಯ
ಹಿಂದಿದ್ದ ಹುಸಿಮಾತುಗಳು
ಮುಗ್ದ ಮುಖದ
ಹಿಂದಿದ್ದ
ಅವಕಾಶವಾದಿತನದ
ರೂಪಗಳು

ಶುಕ್ರವಾರ, ಜನವರಿ 29, 2010

ನಿಮಗೂ ಹೀಗೆ ಅನ್ನಿಸುತ್ತ?

" ಹಿಡ್ಕೊಂಡು ೨ ಬಾರಿಸಬೇಕು " , " ಎಷ್ಟು ಉರಿಸ್ತಾಳೆ ನೋಡು " , ಪಾಪ ಈಗ ಏನ್ ಮಾಡ್ತಾಳೋ , ......... ಹೀಗೆ ಈ ಮೆಗಾ ಧಾರವಾಹಿ ನೋಡುವವರ ಗೋಳು ನೋಡೋಕಾಗೋಲ್ಲ ಹಾಗಿರುತ್ತೆ. ಸೋಮವಾರ ರಜೆ ಇತ್ತು ಅಂತ ಅಕ್ಕನ ಮನೆಗೆ ಹೋಗಿ ಬರೋಣ ಅಂತ ಹೋದೆ.ನಾ ಎದ್ದು ಅಲ್ಲಿಗೆ ಹೋಗಿ ಮುಟ್ಟೋ ಹೊತ್ತಿಗೆ ಮಧ್ಯಾಹ್ನದ ಊಟದ ಸಮಯ.ನೋಡಿ ಈ ಮೆಗಾ ಧಾರವಾಹಿಗಳಿಗೂ ಊಟಕ್ಕೂ ಎಲ್ಲಿಲ್ಲದ ನಂಟು, ಅದನ್ನ ನೋಡ್ತಾ ಊಟ ಮಾಡೋರ ಪಜೀತಿ ಏನ್ ಕೇಳ್ತಿರ.ಅವರು ಸ್ಲೋ ಮೋಶನ್ ಅಲ್ಲಿ ಕೆನ್ನೆಗೆ ಹೊಡಿಯೋ ಸನ್ನಿವೇಶ ಇದೆ ಅನ್ಕೊಳ್ಳಿ , ಅವಾಗ ಇರೋ ಮಜಾ ಅಂತು ಹೇಳೋಕಾಗಲ್ಲ.ಅವರು ಕೆನ್ನೆಗೆ ಹೊದಿಯೋವಷ್ಟರಲ್ಲಿ ಕೈಯಲಿದ್ದ ತುತ್ತು ನಾಲ್ಕಾರು ಬಾರಿ ಬಾಯಿವರೆಗೆ ಬಂದು ಹೋಗಿರುತ್ತೆ .ಅವರು ಹೊಡೆದ ಮೇಲೆ ಇವರಿಗೆ ನಿಟ್ಟುಸಿರು. ಕೆಲವರಂತೂ ಏನು ಮೈತಾ ಇದೀವಿ ಅನ್ನೋದು ಗಮಿನಿಸದೆ ಕೈ ಮತ್ತು ಬಾಯಿಗೆ ಪುರುಸೊತ್ತೇ ಕೊಟ್ಟಿರೋಲ್ಲ,ಸಿಕ್ಕಿದ್ದೆಲ್ಲ ಒಳಗೆ ಹೋಗ್ತಾ ಇರುತ್ತೆ.

ಇನ್ನು ಇವರಿಗೆ ಅಲ್ಲಿ ಒಳ್ಳೆಯ ಅನಿಸಿದ ಪಾತ್ರದ ಮೇಲೆ ನೆಗೆಟಿವ್ ಪಾತ್ರ ಮಾಡೋರು ಸ್ವಲ್ಪ ನೋವು ಕೊಟ್ರು ಇವರ ದುಃಖ ಉಕ್ಕಿ ಬರುತ್ತೆ ಹಾಗೆ ಆ ಪಾತ್ರಕ್ಕೆ ಬಾಯಿಗೆ ಬಂದ ಹಾಗೆ ಬೈಗುಳ ಕೂಡ. ಇನ್ನು ಯಾವುದೋ ರೋಚಕ ದೃಶ್ಯವನ್ನು ಅರ್ಧಕ್ಕೆ ನಿಲ್ಲಿಸಿ ಜಾಹೀರಾತು ಅಥವಾ ಮುಂದಿನ ಭಾಗದಲ್ಲಿ ವೀಕ್ಷಿಸಿ ಅಂತ ಹಾಕಿದರೂ ಅಂತ ಅನ್ಕೊಳ್ಳಿ , ಇವರ ಕಥೆ ಅಷ್ಟೇ , ಇರುವೆ ಬಿಟ್ಟ ಹಾಗಿರುತ್ತೆ ಸ್ಥಿತಿ. ಅದು ಮುಗಿದ ಮೇಲೂ ಇವರದ್ದು ಅದರದೇ ಚರ್ಚೆ, ಹೀಗಾಗುತ್ತೇನೋ , ಹಾಗಾಗದಿದ್ದರೆ ಸಾಕಿತ್ತು , ಛೇ ಹೊಸ ಎಂಟ್ರಿ ಇದ್ದಿದ್ದರೆ ಚೆನ್ನಾಗಿತ್ತು. ಇವುಗಳಿಗೆ ಇನ್ನು ರಂಗು ಕೊಡುವವರು ನಮ್ಮ ವಿದ್ಯುಕ್ತಚಕ್ತಿ ಮಂಡಳಿಯವರು.ಇವರು ಕುರ್ಚಿಯ ತುದಿಯ ಮೇಲೆ ಕೂತು ನೋಡುತ್ತಿರುವಾಗಲೇ ಅವರ ಪವರ್ ಕಟ್ ಶುರುವಾಗಿರುತ್ತೆ.

ಅಕ್ಕನ ಮನೆಯಲ್ಲಿ ಆಗಿದ್ದು ಹಾಗೆ , ಊಟಕ್ಕಿಂತ ಹೆಚ್ಚಾಗಿ ಧಾರಾವಾಹಿಯ ಮೇಲೆ ಆಸಕ್ತಿ ಹೆಚ್ಚಿತ್ತು. ಆಗ ನನಗೆ ಒಂದು ಕಲ್ಪನೆ ಹೊಳಿತು.ನಾವಂದು ಕೊಂಡಂತೆ ನಮಗೆ ಬೇಡ ಅನ್ನಿಸಿದವರಿಗೆ ಮನಸೋ ಇಚ್ಚೆ ಹೊಡೆಯುವಂತಿದ್ದರೆ , ನಿಜವಾಗಿ ಅಲ್ಲ , ಕಾಲ್ಪನಿಕವಾಗಿ , ಕೇವಲ ಸೆನ್ಸ್ ಅಷ್ಟೇ.ಎಷ್ಟು ಮಜಾ ಇರುತ್ತೆ ಅಲ್ವಾ ಆಗ. ಬಹುಶ ಈಗ ಬಂದಿರೋ ೩ಡಿ ತಂತ್ರಜ್ಞಾನ ಉಪಯೋಗಿಸಿ ಹೀಗೆ ಮಾಡಬಹುದೇನೋ,ಇದು ನನ್ನ ಕಲ್ಪನೆ ಅಷ್ಟೇ. ಆದರೂ ನಾವು ನಿಜ ಜೀವನಕ್ಕಿಂತ ಕಾಲ್ಪನಿಕ ಬದುಕಿಗೆ ಹೆಚ್ಚು ಮಹತ್ವ ಕೊಡುತಿದ್ದೇವೆ ಅನ್ನಿಸುತ್ತೆ. ಕಾಲ್ಪನಿಕ ಜಗತ್ತಿನ ಆಗು ಹೋಗುಗಳಿಗೆ ಮರುಗುವಷ್ಟು , ನಿಜ ಜೀವನದ ಘಟನೆಗಳ ಬಗ್ಗೆ ನಾವು ಮರುಗೋದು ತುಂಬಾ ಕಡಿಮೆ ಅನ್ಸುತ್ತೆ. ದಿನ ಇದ್ದಿದ್ದೆ ಅನ್ನೋ ಅಸಡ್ಡೆ ನಮ್ಮ ಮುಂದೆ ಹೆಬ್ಬಂಡೆ ಆಗಿ ಬೆಳೆದಿದೆ.
ಮನರಂಜನೆ ಬೇಕು ನಿಜ ,ಆದರೆ ಅದು ಮನರಂಜನೆಯಾಗೆ ಇದ್ದರೆ ಚೆನ್ನ , ಅಲ್ವೇ?

ನಿಲ್ಲದ ಪಯಣ

ನಿಲ್ಲದ ಪಯಣ
ಮರ ಮಟ್ಟು ಪೊದೆ ಒಳಗೆ ಹಸಿರ ಹಾಸಿನ ಮೇಲೆ ಮೂಡುತಿದೆ ಕಣ್ಣೀರ್ ಎಂಬ ನೀರ ಹನಿಗಳು