ಶನಿವಾರ, ಫೆಬ್ರವರಿ 21, 2015

ಕಾರಣಗಳು

ಹುಟ್ಟಿಗೆ, ಸಾವಿಗೆ
ಬದುಕಿಗೆ ,ಬಡತನಕ್ಕೆ
ಅಹಂಗೆ, ಗೊಂದಲಕ್ಕೆ
ಗಲಭೆಗೆ,ಘರ್ಷಣೆಗೆ
ಪ್ರೀತಿಗೆ, ವ್ಯಾಮೋಹಕ್ಕೆ
ನಿರಂತರ ಹೋರಾಟಕ್ಕೆ
ಎಲ್ಲಕ್ಕೂ ಕಾರಣಗಳಿವೆ ಇಲ್ಲಿ

ಕಳೆದು ಹೋಗಿದ್ದಕ್ಕೂ
ಸಿಕ್ಕಿದ್ದಕ್ಕೂ, ತಪ್ಪಿಸಿಕೊಂಡಿದ್ದಕ್ಕೂ
ತಪ್ಪಿಸಿದ್ದಕ್ಕೂ , ಪರಿತವಿಸುವಿಕೆಗೂ
ಎಲ್ಲೆಲ್ಲೂ ಕಾರಣಗಳೇ
ರಾಶಿ ರಾಶಿ ಆಗಿ ಬಿದ್ದಿವೆ

ಪವಿತ್ರ- ಅಪವಿತ್ರಗಳೆಂಬ
ಪಂಗಡಗಳಿವೆ
ಅವುಗಳ ವಿಭಜನೆಗೂ
ಕಾರಣಗಳಿವೆ
ಮೇಲು-ಕೀಳುಗಳಿವೆ
ಜಾತಿ-ಪಂಥಗಳಿವೆ
ಎಲ್ಲದರ ಹಿಂದೂ
ಹಲವಾರು ಕಾರಣಗಳು
ಅವುಗಳ ಸಮರ್ಥನೆಗೆ
ಮೊಗದೊಂದಿಷ್ಟು ಕಾರಣಗಳು

ಪೃಥ್ವಿಯ ಹುಟ್ಟಿಗೂ
ದೇವರ ಸೃಷ್ಟಿಗೂ
ಸಕಲ ಚರಾಚರಗಳ
ಬದುಕಿಗೂ ಈ
ಕಾರಣಗಳೇ
ಜೀವ ಬಿಂದುವಾಗಿವೆ.

ಸೋಮವಾರ, ಮಾರ್ಚ್ 25, 2013

ಮತ್ತೆ ಉದಯಿಸಿ ಬರಬೇಕಿದೆ ನೀನಿಂದು
ಮತ್ತೆ ಉದಯಿಸಿ ಬರಬೇಕಿದೆ ನೀನಿಂದು
ಅಂದು ಕಂಡ ಕನಸ ನನಸಾಗಿಸಲು

ಹೊರ ತೋರುವ ಬಟ್ಟೆಯಲಿ
ಅಡಗಿರುವ ಬಡತನವ ನಿವಾರಿಸಲು
ಮಣ್ಣಿನ ಮಡಿಕೆಯಲಿ ಅಂಬಲಿಯ ಹೀರಿ
ಮುಸ್ಸಂಜೆ ಹೊತ್ತಿಗೆ  ಮೂಲೆ ಬೀದಿಯ
ಸರಾಯಿ ಅಂಗಡಿಯಲ್ಲಿ ಮಲಗಿರುವವನ
ಕಂಠ ದೋಷವ ಹೋಗಲಾಡಿಸಲು

ಮತ್ತೆ ಉದಯಿಸಿ ಬರಬೇಕಿದೆ ನೀನಿಂದು
ಅಂದು ಕಂಡ ಕನಸ ನನಸಾಗಿಸಲು

ಎಲ್ಲೆಲ್ಲೂ ಜನ ಜಾತ್ರೆ
ಕಂಡವರೆಲ್ಲ ಮರುಳರೂ
ನಿನ್ನೆಳೆದರೆಂಬ ಸಂತೋಷದಿ ಮರಳುತಿಹರೂ
ಮತ್ತದೇ ಮರುಳಲಿ
ನೀ ಇದ್ದರೂ , ಇರದಿರದಿದ್ದರೂ
ಭಕ್ತಿ ಒಂದಿದೆ ಎಂಬ ಕರಾಡ ನರ್ತನದಿ

ಮತ್ತೆ ಉದಯಿಸಿ ಬರಬೇಕಿದೆ ನೀನಿಂದು
ಅಂದು ಕಂಡ ಕನಸ ನನಸಾಗಿಸಲು
ಸರ್ವರಲಿ ಒಂದಾಗೂ ಎನುವರೂ
ಎಲ್ಲರಿಂದ ದೂರ ಇರಿಸಿ
ಉಣ ಬಡಿಸುವರೂ
ಕೆಲವೊಮ್ಮೆ ತಾವೇ ದೈವ ಅನ್ನುವರೂ
ಮಗದೊಮ್ಮೆ ದೈವ ಸಂಜಾತವೆನ್ನುವರೂ
ಮುರ್ಖರಿವರೂ ,  ಮುಟ್ಟಾಳರಿವರೂ
ಎಲ್ಲ ಬೈದ ಮೇಲೆ ನೀ ಇಲ್ಲೇ ಬರಬೇಕೆನ್ನುವರೂ
ದೇವನೆಂದ ಮೇಲೆ ಕಟ್ಟಳೆಯ ಮೀರಿ
ನಡೆಯಲಾಗದೆನ್ನುವರೂ

 ಮತ್ತೆ ಉದಯಿಸಿ ಬರಬೇಕಿದೆ ನೀನಿಂದು
ಅಂದು ಕಂಡ ಕನಸ ನನಸಾಗಿಸಲು
ನಾ ಭ್ರಮಿಸುವ ನಾಡ ಕಟ್ಟಲೂ
ಇವೆಲ್ಲಕ್ಕೂ ಕೊನೆ ಎಂಬ
ಪರದೆಯೇಳೆಯಲು

ಶುಕ್ರವಾರ, ಡಿಸೆಂಬರ್ 28, 2012

ದೇವರ ಹುಚ್ಚು :ಕಾದಂಬರಿ ವಿಮರ್ಶೆ


ದೇವರ  ಹುಚ್ಚು :
ಮೊಟ್ಟ ಮೊದಲಿಗೆ ಇದು ನಾನು ಜೋಗಿಯವರ ಕೃತಿಯ ಬಗ್ಗೆ ಬರೆಯುತ್ತಿರುವ ಎರಡನೆಯ ಅನಿಸಿಕೆ (ವಿಮರ್ಶೆ).
              ಇದೊಂದು ಆಸ್ತಿಕವಲ್ಲದ ನಾಸ್ತಿಕವಾಗಿರುವ ಮತ್ತು ನಾಸ್ತಿಕವಲ್ಲದ ಆಸ್ತಿಕವಾಗಿರುವ ಎರಡು ಮನಸ್ಸುಗಳ ಗೊಂದಲಗಳೊಡನೆ ಸಾಗುತ್ತದೆ. ಅದಕ್ಕೊಂದು ರೂಪ ಕೊಟ್ಟು ಆ ಮನಸ್ಸುಗಳ ನಂಬಿಕೆಗಳನ್ನ, ಗೊಂದಲಗಳನ್ನ, ಸಮಾಜದ ಭೀತಿಯನ್ನ ಎರಡು ವ್ಯಕ್ತಿತ್ವದ ನಡುವೆ ಹೆಣೆಯಲು ಜೋಗಿ ಯಶಸ್ವಿಯಾಗಿದ್ದಾರೆ.
   ರಂಗನಾಥ ಮತ್ತು ರಾಜಶೇಖರ ಈ ಕಾದಂಬರಿಯ ಎರಡು ಮುಖ್ಯ ಜೀವಾಳಗಳು.
                ರಂಗನಾಥನ ಸಾವಿನಿಂದ ಶುರುವಾಗುವ ಕಾದಂಬರಿ ಕೊನೆಗೊಳ್ಳುವುದು, ಆತನ ಆಕರ್ಷಕ ಮಾತುಗಳು, ಜೀವವಿಲ್ಲದ ದೇಹದಿಂದ ಯಾವುದೇ ಕೂಗಿಲ್ಲದೆ ಅಗ್ನಿಗೆ ಆಹುತಿಯಾದಾಗ.ಹಲವಾರು ಸೂಕ್ಷ್ಮ ವಿಷಯಗಳು ನಾವೇ ಕಂಡರೂ  ಎಂದೂ ಯೋಚಿಸದ ಏಷ್ಟೋ ಘಟನೆಗಳ ಸರಮಾಲೆ ಕಾದಂಬರಿಯ ತುಂಬಾ ಹರಿದಾಡಿದೆ.
   ಸಾವಿನಮನೆಯಲ್ಲಿ ಸದಾ ಇರುವ ಶೋಕ, ಅಳು ನೋವು ಎಲ್ಲದರ ನಡುವೆ ನುಸುಳುವ ಮತ್ತೊಂದು ಭಾಗವಾದ ಅವಸರ, ಕರ್ತವ್ಯ ಪ್ರಜ್ಞೆ ಎಲ್ಲವನ್ನ ಜೋಗಿ ಚೆನ್ನಾಗಿ ವಿವರಿಸಿದ್ದಾರೆ. ಅದರ ಒಂದು ತುಣುಕು ಹೀಗಿದೆ.
    “ ಪೊಲೀಸರು ತಮ್ಮ ಕೆಲಸ ಶುರು ಹಚ್ಚಿಕೊಂಡರು. ಒಂದೊಂದೇ ವಸ್ತುಗಳನ್ನು ಜೋಪನಾವಾಗಿ ಬೆರಳ ಗುರುತು ಮಾಸದಂತೆ ಎತ್ತಿಕೊಂಡು ಬಟ್ಟೆಯಲ್ಲಿ  ಕಟ್ಟಿಡುತ್ತಾ ಒಂದೊಂದನ್ನು ಮಾರ್ಕ್ ಮಾಡುತ್ತಾ ನಂಬರ್ ಬರೆಯುತ್ತಾ ಇದ್ದಕ್ಕಿದ್ದಂತೆ ಚಟುವಟಿಕೆ ಶುರುವಾಯ್ತು,ರಾಜೇಗೌಡ ಅತ್ಯುತ್ಸಾಹದಿಂದ ಒಳಗೇನಿದೆ ನೋಡ್ರೋ, ಯಾರಾದ್ರೂ ಹಿಂದಿನ ಡೋರಿನಿಂದ ಎಂಟರಾಗಿದ್ದಾರಾ ಚೆಕ್ ಮಾಡಿ. ನಮಗೆ ಫೋನ್ ಮಾಡಿರೋದು ಯಾರು ಅಂತ ತಿಳ್ಕೊಂಡು ಅವರ ಸ್ಟೇಟ್ಮೆಂಟ್ ತಗಳ್ಳಿ. ಬಾಡೀನ ಪೊರ್ಸ್ಟ್ ಮಾಟ್ರಮ್ಮಿಗೆ  ಕಲ್ಸಿ ಅಂತ ಎತ್ತರದ ದನಿಯಲ್ಲಿ ಹೇಳುತ್ತಾ ಓಡಾಡ ತೊಡಗಿದ.ತಾನು ಸಾವಿನ ಮನೆಯಲ್ಲಿದ್ದೇನೆ , ತನ್ನ ಮುಂದೆ ಒಂದು ಹೆಣ ಬಿದ್ದಿದೆ, ಆರೆಂಟು ಗಂಟೆಯ ಹಿಂದೆ ಅದಕ್ಕೂ ತನ್ನ ಹಾಗೆ ಜೀವ ಇತ್ತು .ತನ್ನ ಹಾಗೆ ಅದರ ಹೃದಯವೂ ಮಿಡಿಯುತ್ತಿತ್ತು .ಅದರೊಳಗೊಂದು ಮನಸ್ಸು , ಆ ಮನಸ್ಸಿನಲ್ಲಿ ವಿರಹ , ಪ್ರೇಮ , ಏಕಾಂಗಿತನ ,ಅಸಹನೆಗಳೆಲ್ಲ ತುಂಬಿದ್ದವು ಅನ್ನುವುದನ್ನೆಲ್ಲ ಮರೆತೇಬಿಟ್ಟಂತೆ ಓಡಾಡುತ್ತಿದ್ದ ರಾಜೇಗೌಡ”.
       ರಂಗನಾಥ ಪುರೋಹಿತರ ಮಗ, ರಾಜಶೇಖರ ಒಬ್ಬ ಭಂಡಾರಿಯ ಮಗ. ಇವರಿಬ್ಬರ ನಡುವೆ ಇರುವ ಜಾತಿ, ಆ ಜಾತಿ ಹುಟ್ಟಿಸಿರುವ ಸಾವಿರಾರು ಬಂಧನಗಳ ಸಮಗ್ರ ಚಿತ್ರಣವೆ ಈ ದೇವರ ಹುಚ್ಚು ಕಾದಂಬರಿ.  ಇಲ್ಲಿಬರುವ ಎಲ್ಲ ಪಾತ್ರಗಳು ತಮ್ಮದೇ ಸ್ವಂತ ನೆಲೆಗಟ್ಟಿನಲ್ಲಿ ಹುಟ್ಟಿಕೊಂಡಿದ್ದರೂ ಎಲ್ಲೋ ಒಂದು ಕಡೆ ಯಾಮಿನಿಯ ಚಿರಾಯು ಮತ್ತೆ ನೆನಪಾಗುತ್ತಾನೆ. ಇಲ್ಲಿರುವ ರಂಗನಾಥನಿಗೂ , ಯಾಮಿನಿಯಲ್ಲಿ ಬರುವ ಚಿರಾಯುವಿಗೂ ಬಹಳಷ್ಟು ಹೋಲಿಕೆ ಎದ್ದು ಕಾಣುತ್ತದೆ.ತನ್ನ ಸ್ವಂತ ನೆಲೆಗಟ್ಟಿನಲ್ಲಿ ನಿಂತು ಚಿಂತಿಸಿ ಅದಕ್ಕೆ ಬದ್ದನಾಗಿ ಇರುವ, ಯಾರ ಮಾತನ್ನು ಕೇಳದ, ಒಂಟಿತನವನ್ನ ಹೆಚ್ಚು ಇಷ್ಟಪಡುವ ಚಿರಾಯು ರಂಗನಾಥ ಮತ್ತು ರಾಜಶೇಖರ ಎಂಬ ಇಲ್ಲಿರುವ ಎರಡು ವ್ಯಕ್ತಿಗಳಲ್ಲಿ ಸಮನಾಗಿ ಹಂಚಿ ಹೋಗಿದ್ದಾನೆ ಅನಿಸುತ್ತದೆ.
     ರಾಜಶೇಖರ ಗಂಗೆಯೊಂದಿಗಿನ ತನ್ನ ಸಂಬಂಧವನ್ನ ತಾನೇ ವಿಶ್ಲೇಷಿಸಿ ಕೊಳ್ಳುವಾಗ, ಯಾಮಿನಿಯೊಂದಿಗಿನ ತನ್ನ ಸಂಬಧವನ್ನ ಹೇಳುವ ಚಿರಾಯು ಇಲ್ಲಿಯೂ ಕಾಣಸಿಗುತ್ತಾನೆ. ಹಾಗೆ ರಂಗನಾಥನ ಅಮೋಘ ವಾಕ್ಚಾತುರ್ಯ ಒಮ್ಮೆ ಚಿರಾಯುವನ್ನ ನೆನೆಯುವಂತೆ ಮಾಡುತ್ತದೆ.
          ಇನ್ನೊದು ಕಡೆ ರಂಗನಾಥ ನಡಿಯುವ ಹಲವಾರು ಕಟು ಸತ್ಯಗಳು ನಮ್ಮನ್ನು ಒಮ್ಮೆ ಆಳವಾದ ವಿಚಾರಧಾರೆಯ ಕಡೆಗೆ ಕರೆದುಕೊಂಡು ಹೋಗುತ್ತದೆ.ಉದಾಹರಣೆಗೆ :    
                      “ಪರಂಪರೆಯಲ್ಲಿ ವಿಚಾರವಾದ ಗೆಲ್ಲುವುದು ಕಷ್ಟ”.
                      “ಈ ದೇವರು ಎಂಥ ಕಿಲಾಡಿ ನೋಡೋ , ನಾಸ್ತಿಕವಾದಕ್ಕೂ ತಾನೇ ಕಾರಣ ಅಂತ ಹೇಳ್ಕೋತಾನೇ.ಹಿರಣ್ಯಕಶಿಪು ದೇವರೇ ಇಲ್ಲ ನಾನೇ ದೇವರು ಅಂತಾನಲ್ಲ. ಅದಕ್ಕೂ ಜಯವಿಜಯರ ಶಾಪವೇ ಕಾರಣವಂತೆ . ಅದರ ಅರ್ಥ ಏನು ಹೇಳು ?ನಾಸ್ತಿಕವಾದವನ್ನು ಹುಟ್ಟು ಹಾಕಿದ್ದು ದೇವರೇ.ಇಷ್ಟೊಂದು ಪ್ರಭಾವಶಾಲಿಯಾದ ಅಸ್ತಿತ್ವವೊಂದು ಇರೋದಕ್ಕೆ ಸಾಧ್ಯವಾ ? ಈ ಪರಿಸರ , ಈ ದೇವಸ್ಥಾನ , ಆ ಭಕ್ತಿ ಇದೆಲ್ಲ ಇಲ್ಲದೇನೂ ಬದುಕೊಡಕ್ಕೆ ಆಗೋಲ್ವ ? ನಾನು ಬದುಕಿ ತೋರಿಸ್ತಿನಿ ನೋಡೋ .ದೇವರನ್ನು ದಿಕ್ಕರಿಸಿ ಬದುಕ್ತಿನಿ ಅಂದಿದ್ದ ರಂಗನಾಥ”.
          “ಗಾಂಧೀಜಿನ ಕೊಂದದ್ದು ನಮ್ಮೊರು , ಬ್ರಿಟಿಷರಲ್ಲ .ಒಂದು ವೇಳೆ ಅವರೆನಾದ್ರೂ ಗಾಂಧೀನ ಹತ್ಯೆ ಮಾಡಿದ್ರೆ , ಇಂಗ್ಲೆಂಡೂ ನಮ್ಮದಾಗ್ತಿತ್ತೋ ಏನೋ” ?
              
                     “ನೀನು ಪೋಲೀಸ್ ಆಫೀಸರ್ ಆಗಬೇಕೂಂತ ನನ್ನಾಸೆ , ಆಧಿಕಾರ ಇರೋದು ಕಾನೂನಿನಲ್ಲಿ ,ಧರ್ಮದಲ್ಲಿ ಅಲ್ಲ , ಧರ್ಮ ಕೊಡೋ ಅಧಿಕಾರಕ್ಕಿಂತ ಕಾನೂನು ಕೊಡೋ ಅಧಿಕಾರ ದೊಡ್ಡದು. ಹದಿನೆಂಟು ವರ್ಷ ದೇವರ ಒಟ್ಟಿಗಿದ್ದೋನು ನಾನು , ಅವನಿಲ್ಲ ಅಂತ ನಂಗೊತ್ತು.ಕಾನೂನಿನ ಒಟ್ಟಿಗೆ ತುಂಬಾ ವರ್ಷ ಇದ್ದರೆ ನಿಂಗೆ ಕಾನೂನು ಇಲ್ಲ ಅನ್ನೋದು ಗೊತ್ತಾಗುತ್ತೆ ಹೋಗು”.
                   ಹೀಗೆ ಕಾದಂಬರಿಯ ಬಹುಭಾಗ ಓದುಗನನ್ನ ತರ್ಕದಲ್ಲೇ ಕಳೆಯುವಂತೆ ಮಾಡುತ್ತದೆ.ಕಾದಂಬರಿಯ ಕೊನೆ ಮಾತ್ರ ಅಷ್ಟೇಕೋ ಹಿಡಿದಿಡುವುದಿಲ್ಲ ಅನಿಸುತ್ತದೆ. ಅಥವಾ ಜೋಗಿ ಹೇಳ ಹೊರಟಿರುವುದನ್ನು ಅರ್ಥೈಸಿಕೊಳ್ಳಲು ನನ್ನಿಂದ ಸಾಧ್ಯವಾಗದೆ ಹೋಗಿರಬಹುದು. ಒಟ್ಟಿನಲ್ಲಿ ಒಮ್ಮೆಲೇ ಯಾವುದೇ ಅಡಚಣೆ ಇಲ್ಲದೆ ಓಡಿಸಿಕೊಂಡು ಹೋಗಬಲ್ಲ ಕಾದಂಬರಿ ಕೊಡುವಲ್ಲಿ ಜೋಗಿ ಯಶಸ್ವಿಯಾಗಿದ್ದಾರೆ.

-
ವಿನಯಬುಧವಾರ, ಸೆಪ್ಟೆಂಬರ್ 26, 2012

ಗುರುವಾಯನಕೆರೆ (ಒಂದು ಊರಿನ ಆತ್ಮಚರಿತ್ರೆ) ನಾ ಅರಿತಿದ್ದು


                                                                      ಗುರುವಾಯನಕೆರೆ (ಒಂದು ಊರಿನ ಆತ್ಮ ಚರಿತ್ರೆ) ಪುಸ್ತಕ ಓದಲು ಎರಡು ಮುಖ್ಯ ಕಾರಣಗಳಿವೆ. ಒಂದು ಜೋಗಿ ನನ್ನ ಮೆಚ್ಚಿನ ಲೇಖಕರಲ್ಲಿ ಒಬ್ಬರೂ. ಹಾಗೆ ಈ ಪುಸ್ತಕದ ಬಿಡುಗಡೆಯ ಹಿಂದಿನ ದಿನ ರಾತ್ರಿ ಹಾಗೆ ಚಾಟ್ ಮಾಡುವಾಗ, ನೀವು ತೆಗೆದ ನನ್ನ ಚಿತ್ರವನ್ನ ಈ ಬುಕ್ಕಿನ ಹಿಂಪುಟದಲ್ಲಿ  ಬಳಸಿಕೊಂಡಿದ್ದೇನೆ ಅಂತ ಹೇಳಿದ ಅವರ ಮಾತು ನನ್ನನ್ನು ಮತ್ತಷ್ಟು ಪುಳಕಿತಗೊಳಿಸಿತು. ಮತ್ತೊಂದು ಕಾರಣ ಹೊಸದೇನಲ್ಲ, ನನ್ನ ಕಾಲೇಜು ದಿನಗಳಲ್ಲಿ ತೀರ್ಥಹಳ್ಳಿ ಇಂದ ಹೊರಡುತಿದ್ದ ಒಂದು ಬಸ್ಸು  ಗುರುವಾಯನಕೆರೆ ಹಾದು  ಹೋಗುತಿತ್ತು, ದಿನ ಆ ಬೋರ್ಡ್ ನೋಡುತಿದ್ದ ನನಗೆ ಆಗಿನಿಂದಲೂ ಒಂದು ರೀತಿಯ ಕುತೂಹಲ ಆ ಊರಿನ ಮೇಲೆ ಹುಟ್ಟಿತ್ತು.ಇಷ್ಟೆಲ್ಲಾ ಹೇಳಿದ ಮೇಲೆ, ಪುಸ್ತಕದ ಬಗ್ಗೆ ನಾಲ್ಕು ಮಾತಾದರು ಹೇಳಲೇಬೇಕು.

                               ಜೋಗಿ ಅವರೇ ಹೇಳುವಂತೆ, ಇದೊಂದು ಕತೆಯಲ್ಲ, ಹಾಗಂತ ಇತಿಹಾಸ ಕೂಡ ಅಲ್ಲ, ಎಲ್ಲರೂ ಬೆಳೆದು ಬಂದ ರೀತಿ, ವ್ಯಕ್ತಿಗಳು, ಘಟನೆಗಳು, ಸ್ಥಳಗಳು ಬೇರೆಯಾಗಿರಬಹುದು ಅಷ್ಟೇ ಹೊರತು, ಮತ್ತೆಲ್ಲ ಅದೇ ಆಗಿರುತ್ತದೆ. ಪ್ರತಿಯೊಂದು ಸನ್ನಿವೇಶವು ನಮ್ಮದೇ ಬದುಕಿನ ಬೇರೊಂದು ಕುರುಹನ್ನ ಹುಡುಕುತ್ತದೆ. ಪುಸ್ತಕದ ಕೊನೆಯಲ್ಲಿ ಅವರೇ ಹೇಳುವಂತೆಎಲ್ಲ ಊರುಗಳೂ ನಾವು ಬಾಳಿದ ಕಾಲಕ್ಕೆ ತಕ್ಕಂತೆ ಒಂದಿಷ್ಟು ನೆನಪುಗಳನ್ನ, ಘಟನೆಗಳನ್ನ ಹೊತ್ತು ಕೊಂಡಿರುತ್ತದೆ. ಆಗೆಲ್ಲ ಅವು ನಮ್ಮ ಬದುಕಿನ ನಿತ್ಯಕರ್ಮದಂತೆ ಕಾಣುತ್ತವೆ.  ಒಮ್ಮೊಮ್ಮೆ ಎಲ್ಲರಿಗೂ ನಮ್ಮ ಊರಿನ ಬಗ್ಗೆಯೂ ಬರೆಯಬೇಕು ಅನ್ನಿಸಬಹುದು ಅಥವಾ ಬರೆಯಲಿಕ್ಕೆ ಏನಿದೆ ಅನ್ನೋ ಪ್ರಶ್ನೆ ಕೂಡ ಏಳಬಹುದು. ಅದರರ್ಥ ಅಲ್ಲಿ ಏನು ಇಲ್ಲ ಅಂದಲ್ಲ, ಆ ನೆನಪುಗಳು ಮಾಗಿ ಒಂದು ರೂಪ ಪಡೆಯಲು ಕೆಲವೊಂದು ಕಾಲಘಟ್ಟ ಕಳೆಯಬೇಕಾಗುತ್ತದೆ ಅಥವಾ ಯಾವುದೋ ಒಂದು ಓದು ಅದನ್ನ ಬಡಿದು ಮೇಲೆಬ್ಬಿಸಬೇಕಾಗುತ್ತದೆ. ಅಂತಹ ಎಷ್ಟೋ ಊರುಗಳ  ನೆನಪಿನ ದ್ವೀಪಕ್ಕೆ ದಾರಿ ಮಾಡಿಕೊಡಬಲ್ಲ ಪುಸ್ತಕ  ಗುರುವಾಯನಕೆರೆ (ಒಂದು ಊರಿನ ಆತ್ಮ ಚರಿತ್ರೆ).

                     ಎಲ್ಲರಿಗೂ ಒಂದು ಊರು ಬೇಕು, ಮನುಷ್ಯನ ಆಗಾಧ ಕನಸುಗಳಿಗೆ ಬಲೆ ಹೆಣೆಯುವಿಕೆ ಶುರುವಾಗುವುದೇ ಅಲ್ಲಿಂದ, ಕಾಲಕ್ಕೆ ತಕ್ಕಂತೆ ನಮ್ಮನ್ನ ನಾವು ಬದಲಾಯಿಸಿಕೊಂಡು ಬದುಕಿನ ಜಂಜಾಟಗಳಲ್ಲಿ ಎಲ್ಲೋ ಬಂದು ನಿಂತಾಗ, ಎಲ್ಲೋ ಒಮ್ಮೆ , ಎಲ್ಲವನ್ನ ಮತ್ತೊಮ್ಮೆ ದೂರದಲ್ಲಿ ನಿಂತು ನೋಡಬೇಕು ಅನಿಸುತ್ತದೆ, ಆ ಆಸೆಗೆ ಅವಕಾಶ ಮಾಡಿ ಕೊಡುವುದೇ ಈ ಊರು. ಜೋಗಿ ಹೇಳ ಹೊರಟಿರುವುದು ಅದನ್ನೇ ಅನಿಸುತ್ತದೆ, ಅದು ಯಾಕೆ ಹಾಗೆ ? ಅದು ಸರಿಯೇ ? ತಪ್ಪೇ ? ಎನ್ನೋ ಅಸಂಖ್ಯಾ ಪ್ರಶ್ನೆಗಳನ್ನ ದೂರವಿಟ್ಟು ಅದನ್ನ ನಾವು ಹೇಗೆ ಅನುಭವಿಸಿದೆವು ಅನ್ನೋದು ಮುಖ್ಯವಾಗುತ್ತದೆ .
ಹಾಗಂತ ಇದು  ಆತ್ಮ ಕಥೆಯಲ್ಲ, ವ್ಯಕ್ತಿ ಗಿಂತ ಆತನ ಸುತ್ತ ನಡೆಯುವ ಘಟನೆಗಳ ಸರಮಾಲೆ ಇದು.
                          ಎಲ್ಲೋ ಒಂದು ಕಡೆ ಊರನ್ನ ಕಾಯುವ ಭೂತ ಇಷ್ಟವಾಗಿ ಬಿಡುತ್ತದೆ, ಅಲ್ಲೆಲ್ಲೋ ಗುಡ್ಡದಲ್ಲಿ ಭೂಸ್ ಎಂದು ಎದ್ದು ನಿಂತ ಕಾಳಿಂಗ ಸರ್ಪ, ನಾವು ಚಿಕ್ಕವರಾಗಿದ್ದಾಗ ಕೇಳಿದ ಜುಟ್ಟು ಕಾಳಿಂಗದ ನೆನಪು ತರಿಸುತ್ತದೆ. ನಾರಾಯಣನ ಅಡ್ಡ ಗಟ್ಟಿದ ಕಾಳಿಂಗ, ನಾ ಚಿಕ್ಕವನಿದ್ದಾಗ ನಾಗರಬನದಲ್ಲಿ ಮೂತ್ರ ಮಾಡಿದ್ದಕ್ಕೆ ನಮ್ಮನೆ ಅಂಗಳದಲ್ಲಿ ಬಂದು ನಿಂತ ನಾಗರ ಹಾವು ನೆನಪಾಗುತ್ತದೆ. ಪಕ್ಕದ ಮನೆಗೆ ಬರುತ್ತಿದ್ದ ದಿನ ಪತ್ರಿಕೆ ಯನ್ನ ರಾತ್ರಿ ಚಿಮುಣಿ ಗುಡ್ಡೆಯ ಹೊಗೆಯಲ್ಲಿ ಓದಿದ್ದು ನೆನಪಾಗುತ್ತದೆ, ಯಾರೋ ಸತ್ತ ಅನ್ನೋ ಕಾರಣಕ್ಕೆ ಯಾರು ಕೂರದೆ ಕಾಂಗ್ರೆಸ್ ಗಿಡದ ರಾಜ್ಯವಾಗಿ ನಿಂತಿರುವ ಹಾಗೆಯೇ ಆಗೋಷಿತ ಸ್ಮಶಾನವಾಗಿರುವ ನಮ್ಮೂರಿನ ಬಸ್ಸು ನಿಲ್ದಾಣ ಎಲ್ಲ ನಮ್ಮ ಬಾಲ್ಯದ ಆಟೋಟಗಳನ್ನ ಹಾಗೆ ಕಣ್ ಮುಂದೆ ಒಮ್ಮೆ ಓಡಾಡಿಸಿಬಿಡುತ್ತದೆ.

                     ಯಾವುದೋ ಒಂದು ಕತೆಯಾಗಲಿ, ಯಾರದ್ದೋ ಬದುಕಾಗಲಿ ಈ ಪುಸ್ತಕದಲ್ಲಿ ಇಲ್ಲ, ನಮ್ಮ ನೆನಪುಗಳಿಗೆ ನಾವೇ ಇಳಿಯಲು ಬೇಕಾದ ದಾರಿ ಇದೆ, ಒಬ್ಬನೇ ಕೂತು ಓದುತ್ತಾ ಹೋದಂತೆ ನಗು ಹುಟ್ಟುತ್ತಾ ಹೋಗುತ್ತದೆ, ನಮ್ಮದೇ ಬದುಕಿನಲ್ಲಿ ನಡೆದ ಘಟನೆಗಳು ಇಲ್ಲಿ ಅಚ್ಚಾಗಿವೆಯೇನೋ ಅನ್ನುವಷ್ಟು ಹತ್ತಿರ ಇವೆ ಕೆಲವೊಂದು ಘಟನೆಗಳು. ಒಟ್ಟಿನಲ್ಲಿ ಒಂದೊಳ್ಳೆ ನೆನಪಿನ ಸರಮಾಲೆ ಹಣೆಯುವಲ್ಲಿ ಜೋಗಿ
ಯಶಸ್ವಿಯಾಗಿದ್ದಾರೆ.

ಮಂಗಳವಾರ, ಸೆಪ್ಟೆಂಬರ್ 25, 2012

ಚುಟುಕು-ಚುರುಮುರಿಸಂಕಟ:

ಮೊನ್ನೆ ಆಕೆ ಅತ್ತಾಗ 
ಕರಳು ಕಿವುಚಿ ಬಂದಿತು 
ಸಮಾಧಾನಕೆಂದು ಆಕೆ 
ಚಿನ್ನದ ಸರವ ಕೇಳಿದಾಗ 
ಕರುಳಿಗೆ ನನ್ನ ನೋವು ಮೊದಲೇ 
ಗೊತ್ತಾಯಿತೆಂದು ಆಗ ತಿಳಿಯಿತು 

ಸುಖ: 

ಒಬ್ಬೊಬ್ಬರಿಗೆ ಒಂದೊಂದರಲ್ಲಿ 
ಒಂದೊಂದು ಸುಖ 
ಹಂದಿಗೆ ಕಸದಲ್ಲಿ 
ನಾಯಿಗೆ ಬೂದಿಯಲ್ಲಿ 
ಎಮ್ಮೆಗೆ ಕೊಳಚೆ ನೀರಿನಲ್ಲಿ 
ಮನುಷ್ಯನಿಗೆ ಇವೆಲ್ಲವನ್ನ 
ಸಾಕುವುದರಲ್ಲಿ

ವೇದಾಂತ :

ಅಂದಿದ್ದರೂ ವೇದಾಂತಿಗಳು ಅಂದು 
ಕೂಡಿಟ್ಟ ಕಾಸು ಚಿತೆ ಏರುವ ತನಕವೆಂದು 
ಹೇಳುವೆನು ನಾನಿಂದು ಕೂಡಿಡಿ
ಸ್ವಲ್ಪ ಕಾಸು, ಇಲ್ಲದಿದ್ದರೆ 
ಚಿತೆ ಏರುವ ನಿಮ್ಮ ಕನಸು 
ಭಗ್ನವಾಗಬಹುದಿಂದು 

ಮಂಗಳವಾರ, ಸೆಪ್ಟೆಂಬರ್ 4, 2012

ಚುಟುಕುಗಳು :

೧.ಬಿಲ್ಲು - ಗುಂಡು:


ಕಾಮನ ಬಿಲ್ಲೆ 
ನನ್ ಎದುರುಮನೆಯ
ಚಲುವೆ 
ಬಳುಕಿದಾಗ 
ಮಾತ್ರ ಬಿಲ್ಲು 
ನೆಟ್ಟಗೆ ನಿಂತಾಗ 
ದುಂಡಾದ 
ಕಲ್ಲು ಗುಂಡು  

೨. ಅರ್ಥ :

ನಿನ್ನ ಪ್ರತಿ 
ಮಾತಲ್ಲೂ 
ನೂರೊಂದು 
ಅರ್ಥವಿದೆ 
ಅದಕೆ 
ನೀ ಅಂದು 
ನಾ ನಿನ್ನೇ
ಪ್ರೀತಿಸುವೆ 
ಅಂದಾಗ 
ನಾ ಅದ 
ಅರಿಯದೆ 
ಹೋದೆ 

೩. ದಂಡು : 


ಬದಲಾಯಿಸುತ್ತೇವೆ ನಿಮ್ಮೂರ ಎಂದು 
ಬಂತೊಂದು ನಾಯಕರ ದಂಡು 
ಸಾರಾಯಿ ಪಾಕಿಟಿನ ಬದಲಿಗೆ 
ಕ್ವಾಟರ್ ಬಾಟಲ್ ಕೈಗಿಟ್ಟು 
ಹೊಡೆಯಿರಿ ಎಲ್ಲರೂ ಅಂದರೂ 
ಈ ಗುಂಡು 

೪. ಕ್ಷಮೆ  : 

ದೇವರೇ ಕ್ಷಮೆ ಕೋರಿದ್ದನಂದು 
ನನ್ನ ಬಳಿ 
ನಾ ಬೇಡವೆಂದರೂ 
ಬಂದಿದ್ದಕ್ಕೆ ನನ್ನ ಕನಸಿನಲಿ 
ಕಾಪಾಡು ದೇವ 
ಎಂದು ಕೂಗಿದಾಗ ಇಂದು 
ಬರಲೋಲ್ಲನು 
ಕನಸಿರಬಹುದು 
ಇದು ಕೂಡವೆಂದು 

ಬುಧವಾರ, ಜೂನ್ 27, 2012

(ಸಂ)ಹಾರವೇ!(ಸಂ)ರಕ್ಷಣೆಯೇ!!

ಮರುಭೂಮಿಯಲ್ಲಿ ಹುಟ್ಟಿದರೂ
ಕಳ್ಳಿ ಮರೆಯುವುದೇ ತನ್ನ ತಾಯ 
ಮನೆಯಂಗಳದಿ ತಂದಿಟ್ಟರು
ಬೇಕೆನ್ನುವುದು ಮರಳಿನ ಛಾಯ 

ಮುಸಿಕಿನಲಿ ಅರಳುವ ಹೂವು 
ಮುಸ್ಸಂಜೆಯಲಿ ಬಾಡುವುದೇಕೆ
ರವಿ ಕಣ್ಮರೆಯಾದೊಡನೆ 
ಕಂಪ ಕರಗಿಸಿಕೊಳ್ಳುವುದೇಕೆ

ಅಮ್ಮನ ಕಾಣದ ಕರುವು 
ಗೊಗೆರೆಯುವುದೇಕೆ 
ಕರುವಿನ ಕೂಗಿಗೆ 
ಹಸುವಿನೆದೆಯಲ್ಲಿ 
ಹಾಲು ಚಿಮ್ಮುವುದೇಕೆ 

ಎಲ್ಲವೂ ಪ್ರಕೃತಿ ನಿಯಮವೇ 
ಎಲ್ಲವೂ ದೈವ ಸೃಷ್ಟಿಯೇ 
ಎಂದುಕೊಂಡರೆ 
ಮಾನವನೇಕೆ ಮರಗುವುದಿಲ್ಲ 
ಪ್ರಕೃತಿಯ ಕೂಗಿಗೆ 
ಸೃಷ್ಟಿಯ ಸಂರಕ್ಷಣೆಗೆ 

ನಿಲ್ಲದ ಪಯಣ

ನಿಲ್ಲದ ಪಯಣ
ಮರ ಮಟ್ಟು ಪೊದೆ ಒಳಗೆ ಹಸಿರ ಹಾಸಿನ ಮೇಲೆ ಮೂಡುತಿದೆ ಕಣ್ಣೀರ್ ಎಂಬ ನೀರ ಹನಿಗಳು