ಬದುಕು , ಭಾವ ಮತ್ತು ನಾನು -೨

ಯೋಚನೆಗಳಲ್ಲೇ ಮಗ್ಧನಾಗಿದ್ದ ನನಗೆ ಅಂಬಾ ಎಂಬ ಗೌರಿಯ ಕೂಗು ಕೊಟ್ಟಿಗೆಯಿಂದ ಬಂದೊಡನೆ ,ವಾಸ್ತವಕ್ಕೆ ಬಂದೆ .ಕೈಯಲ್ಲಿದ್ದ ತಟ್ಟೆ ಹಿಡಿದು ಇನ್ನೇನಾದರೂ ಉಳಿದಿದೆಯೇ ಎಂದು ನಿಧಾನವಾಗಿ ಅಡುಗೆ ಮನೆಯತ್ತ ಹೊರಟೆ . ಹಾಲು ಕರೆಯಲು ತಯಾರಾಗುತಿದ್ದ ಅಮ್ಮ ನನ್ನ ನೋಡಿದೊಡನೆಯೇ ತನಗಿಟ್ಟುಕೊಂಡಿದ್ದ ೨ ಹಪ್ಪಳದಲ್ಲಿ ನಂಗೊಂದು ಎತ್ತಿ ಕೊಟ್ಟರು .(ಅಮ್ಮನ ಮನಸೇ ಹಾಗೆ ಅಲ್ಲವೇ , ನಮ್ಮ ಮೌನವನ್ನೇ ಅರ್ಥಮಾಡಿಕೊಂಡುಬಿಡುತ್ತದೆ),ನಾನೋ ಎಣ್ಣೆ ತಿಂಡಿ ಎಂದರೆ ಸಾಕು ,ನನ್ನೊಳಗಿನ ಬಕಾಸುರ ಎಚ್ಚೆತ್ತುಕೊಳ್ಳುತ್ತಾನೆ.
ತಲೆಗೆ ಸ್ವಲ್ಪ ಕೊಬ್ಬರಿ ಎಣ್ಣೆ ಹಾಕಿಕೋ ಎಂದು ಅಲ್ಲೇ ಬೇಲಿ ಕಟ್ಟಲು ಹೊರಟಿದ್ದ ಅಪ್ಪ ಹೇಳಿದರು , ಅಬ್ಬ ಶುರುವಾಯಿತು ನೋಡಿ , ಇಷ್ಟೊತ್ತು ಶಾಂತಿಯ ಪ್ರತೀಕವಾಗಿದ್ದ ನಮ್ಮ ಅಮ್ಮ , ಕಾಳಿಯ ಅವತಾರ ಎತ್ತಿ ಬಿಟ್ಟಿದ್ದರು . ಅದೇನೋ ಸ್ಟೈಲ್ ಅಂತೆ ಇಷ್ಟುದ್ದ ಕೂದಲು , ಯಾರ ಅದ್ರು ನೋಡ್ರೆ ಏನ್ ಅನ್ಕೊಳಲ್ಲ , ಪಕ್ಕದ ಮನೆ ಪುಟ್ಟಿ ನೋಡು ವಾರ ವಾರ ಕೂದಲು ಕಟ್ ಮಡ್ಸ್ತಾರೆ,ಒಂದು ಭಯ ಇಲ್ಲ ......................................................?
ನಮ್ ಅಮ್ಮನ ವಾದಕ್ಕೆ ಮಣಿದು ಮಾರನೆದಿನ ಕೂದಲು ಕಟ್ ಮಾಡಿಸುವುದಾಗಿ ಒಪ್ಪಿಕೊಂಡ ಮೇಲಷ್ಟೇ ಕೈಯಲಿದ್ದ ಅರ್ಧ ಹಪ್ಪಳ ಬಾಯಿಗೆ ಹೋಗಿದ್ದು .ರಾತ್ರಿಯಾಗ ತೊಡಗಿತ್ತು .ಸುಯ್ ಸುಯ್ ಶಬ್ದ ಮಾಡುತಿದ್ದ ಗಾಳಿ ಪ್ರಕೃತಿಗೆ ಜೋಗುಳ ಹಾಡುತ್ತಿದೆಯೇನೋ ಎಂಬ ಭಾಸ , ಬುರ್ಎಂದು ದಾರಾಕಾರವಾಗಿ ಸುರಿಯುತ್ತಿರುವ ಮಳೆ ,ಎಷ್ಟು ಕಂಬಳಿ ಹೊದ್ದರೂ ಸಾಲದೆಂಬಂತೆ ಮಾಡುತ್ತಿದೆ .ಇಷ್ಟು ಸಾಕಲ್ಲವೇ ಈ ಭಾವುಕನಿಗೆ ಗತಕ್ಕೆ ಸಾಗಲು .
ಯಾರೋ ಹೇಳಿದ ನೆನಪು ಸೋಲೇ ಗೆಲುವಿನ ಸೋಪಾನ . ನನ್ನ ಪ್ರೌಡಶಿಕ್ಷಣದ ಮೊದಲ ದಿನವೇ ನನಗಾನುಭುವ ಆಗುತ್ತದೆ ಎಂದು ನನ್ ಅಂದುಕೊಂಡಿರಲಿಲ್ಲ .೭ ನೇತರಗತಿಯವರೆಗೂ ರಾಜನಾಗಿ ಮೆರೆದಿದ್ದ ನನಗೆ , ಅದೇ ಹುಮ್ಮಸ್ಸು ೮ ನೇ ತರಗತಿಯಲ್ಲೂ ಮುಂದುವರಿಸುವಾಸೆಯಿಂದ , ಬೇಸಿಗೆ ರಜೆಯನ್ನು ತುಂಬಾ ಕಷ್ಟವಾಗೆ ಕಳೆದೆ .ಬಂತು ನೋಡಿ ಆ ದಿನ , ಬೆಳಿಗ್ಗೆ ೬ ಕ್ಕೆ ಎದ್ದು ಅಭ್ಯಂಜನ ಮಾಡಿ ,ಬಿಸಿ ಬಿಸಿ ಕಾಫಿ ಹೀರಿ ಅಮ್ಮ ಕೊಟ್ಟ ನಿರ್ ದೋಸೆ ತಿಂದು ರೆಡಿ ಆಗಿ ಕುಳಿತಿದ್ದೆ .ಶಾಲೆ ಶುರುವಾಗೋದು ೯.೩೦ ಕ್ಕಾದರು ೫ ಕಿ ಮಿ ನಡೆಯಬೇಕಾದ್ದರಿಂದ ೧.೩೦ ತಾಸು ಮೊದಲೇ ಹೊರಡಬೇಕಿತ್ತು (ನಾನು ಬೇರೆ ಹೊಸಬ ,ಸಮಯ ಸ್ವಲ್ಪ ಜಾಸ್ತಿಯೇ ಬೇಕಾಗುತ್ತಿತ್ತು,ಬಸ್ಸಿನಲ್ಲಿ ಹೋಗುವಷ್ಟು ಸ್ಥಿತಿವಂತರಾಗಿರಲಿಲ್ಲ ಆಗ ).
ನಡಿಗೆ ಎಂದ ಮೇಲೆ ಗುಂಪು ಇದ್ದೆ ಇರುತ್ತೆ .ನಮ್ಮದು ಹಾಗೆ ,ನಮ್ಮ ಮನೆಯಿಂದ ಶುರು .ಆ ಗುಂಪಿಗೆ ನನ್ನ ಅಣ್ಣನೇ ನಾಯಕ ,ಹಿಂಬಾಲಕರು ನಾವು . ಮೊದಲು ಶುರುವಾಗೋದು ಅಡಿಕೆ ತೋಟ ನಂತರ ಸ್ವಲ್ಪ ದೂರ ಗುಡ್ಡ , ಗುಡ್ಡ ಹತ್ತಿ ಸ್ವಲ್ಪ ದೂರ ಹೋದರೆ ಒಂದು ಊರು ಸಿಗುತ್ತೆ ,ಅಲ್ಲಿ ಮತ್ತೊಂದು ತಂಡ ನಮ್ಮನ್ನು ಕೂಡಿಕೊಳ್ಳುತಿತ್ತು (ನೆನಪಿರಲಿ ಆದಿಪತಿ ನನ್ನ ಅಣ್ಣನೇ ).ನಂತರ ಶುರುವಾಗೋದೇ ಗದ್ದೆ ,ಮಧ್ಯೆ ಒಂದು ಹಳ್ಳ .ಮಳೆಗಾಲವಾದ್ದರಿಂದ ಮೊದಲು ನನ್ನ ಅಣ್ಣ ಹಾಗೂ ಇರುವವರಲ್ಲೇ ಸ್ವಲ್ಪ ದೊಡ್ಡವನು ಹಳ್ಳದ ಮಧ್ಯಕ್ಕೆ ಹೋಗಿ ನಿಧಾನವಾಗಿ ಒಬ್ಬಬ್ಬರನ್ನೇ ಆಚೆ ದಡಕ್ಕೆ ಸೇರಿಸುತ್ತಿದ್ದರು (ಅಲ್ಲಿ ಹುಡುಗ ,ಹುಡುಗಿ ಎಂಬ ಬೇಧ ಇರಲಿಲ್ಲ ) ,ನನಗೋ ನದಿಯನ್ನೇ ದಾಟಿದಷ್ಟು ಖುಶಿ .ಅಲ್ಲಿಂದ ಮುಂದೆ ಸ್ವಲ್ಪ ದೂರ ಕಾಡು ,ನಾನು ಯಾವಾಗಲು ಮಧ್ಯದಲ್ಲೇ ಇರುತಿದ್ದೆ(ಸ್ವಲ್ಪ ಪುಕ್ಕಲ ಅದಕ್ಕೆ ) .
ಆಮೇಲೆ ಸಿಗುವುದೇ ಅಲ್ಲೊಂದು ,ಇಲ್ಲೊಂದು ಮನೆಗಳು ,ಕೊನಯದಾಗಿ ಡಾಂಬರು ರಸ್ತೆ .ಈಗ ಶುರುವಾಗುತ್ತಿತ್ತು ನಮ್ಮ ನಾಯಕನ ಪಾಲಿಸಿಗಳು ,ರಸ್ತೆ ಬದಿಯಲ್ಲೇ ಹೋಗಬೇಕು ,ಒಬ್ಬರ ಹಿಂದೆ ಒಬ್ಬರು ,ಓಡುವಹಾಗಿಲ್ಲ ,ತಪ್ಪಿದರೆ ದಂಡಿಸುವ ಅಧಿಕಾರವಿತ್ತು .
ಶಿಸ್ತಿನ ಸಿಪಾಯಿಯಂತೆ ತಲುಪಿದ್ದೆ ಮೊದಲ ದಿನ ಹೈ ಸ್ಕೂಲಿಗೆ ,ಮೊದಲು ಪ್ರಾಥನೆ ,ಅನಂತರ ದಿನಪತ್ರಿಕೆಯ ಮುಖ್ಯ ಅಂಶ ಗಳನ್ನೂ ಓದುತಿದ್ದರು ,ನಂತರ ತರಗತಿಗಳಿಗೆ ಪ್ರವೇಶ .ಮೊದಲ ಬೆಂಚ್ ಅಲ್ಲೇ ಕುಳಿತಿದ್ದೆ .ಅಧ್ಯಾಪಕರು ಬಂದು ಎಲ್ಲರ ಹೆಸರು ,ಊರು ,ಹಿಂದಿನ ತರಗತಿಯಲ್ಲಿ ತೆಗೆದ ಅಂಕದ ವಿವರ ಕೇಳಿ , ಎಲ್ಲರನ್ನು ನಿಲ್ಲಿಸಿ ಎತ್ತರದ ಪ್ರಕಾರ ಕೂರಿಸುತ್ತಾ ,ನನ್ನನ್ನು ಕೊನೆ ಬೆಂಚ್ಗೆ ವರ್ಗಾಯಿಸಿದ್ದರು .
ಹೀಗೆ ಪ್ರತಿಯೊಂದು ವಿಷಯದ ಅಧ್ಯಾಪಕರು ಬಂದು ಅವರ ಪರಿಚಯ ಮತ್ತು ನಮ್ಮ ಪರಿಚಯ ಮಾಡಿಕೊಂಡು ಹೋಗುತ್ತಿದ್ದರು .ಸಂಜೆ ಮನೆಗೆ ಮರಳುವಾಗ ಬೆಳಿಗ್ಗೆ ಇದ್ದ ಯಾವ ಕಾನೂನು ಇಲ್ಲ .ಮೈನ್ ರೋಡ್ ನಿಂದ ಗದ್ದೆಯವರೆಗೂ ಓಡಿಕೊಂಡೆ ಬರುತಿದ್ದೆವು .ಗದ್ದೆಗೆ ಬಂದ ಮೇಲೆ ಶುರುವಾಗುತ್ತಿತ್ತು ನಮ್ಮ ಆಟ ,ನಿರ್ ಹಾರಿಸುವುದು,ಓಟದ ಸ್ಪರ್ದೆ .....ಹೀಗೆ ಸರಿಯಾಗಿ ಸಂಜೆಗೆ ಮನೆ ತಲುಪುತಿದ್ದೆ .ಮೊದಲ ದಿನವಾದ್ದರಿಂದ ಅಮ್ಮ ನನ್ನ ಬರುವಿಕೆಗೆ ಕಾಯುತಿದ್ದರು . ಹೀಗೆ ನಾಳೆ ಅದೇ ದಾರಿಯಲ್ಲಿ ನಡೆದು ಕೊಂಡು ಹೋಗೋಣ ಎಂದು ಯೋಚಿಸುತ್ತಾ ಗಾಢವಾದ ನಿದ್ರೆಗೆ ಯಾವಾಗ ಶರಣಾದೇನೋ ನನಗೆ ತಿಳಿದಿರಲಿಲ್ಲ .......
(ಮುಂದುವರಿಯುತ್ತದೆ )

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು