ದಡ

ಬೇಡ ಗೆಳತಿ ಈ ಸಲ್ಲದ ಸಂದೇಹ
ಕತ್ತರಿಸದಿರಲಿ ಅದು ನಮ್ಮಿಬ್ಬರ ಈ ಬಾಂಧವ್ಯ
ಸವೆಸ ಬೇಕೆಂದಿರುವೆ ಈ ಜೀವವ ನಿನ್ನ ಪ್ರೀತಿಯಲಿ
ಸಹಿಸಲಾಗದಂತೆ ಮಾಡಬೇಡ ನಿನ್ನ ಈ ಚುಚ್ಚು ನುಡಿಗಳಿಂದ

ದಡಗಳೆರಡೂ ಕಡೆಯಿಂದ ಬೆಂಕಿ ಬಿದ್ದ
ಸೇತುವೆಯ ಮದ್ಯದಲ್ಲಿರುವ
ಪಾದಚಾರಿಯಾಗಿರುವೆ ನಾನು
ಅತ್ತ ನೀರೆಡೆಗೆ ಹಾರಿ ಈಜಲು ಬಾರದೆ
ಇತ್ತ ಬೆಂಕಿಯ ಸುಳಿಯ ದಾಟಿ
ಹೊರ ಬರಲು ಆಗದೆ ನರಳುತ್ತಿರುವೆನೀಗ

ಬೇಕಾಗಿಲ್ಲ ನನಗೆ ಆಶಾಗೋಪುರಗಳ ಮಹಲು
ಸಾಕಾಗಿದೆ ನನ್ನ ಅರಿಯುವ ಒಂದು ಪುಟ್ಟ
ಗೂಡು ನಿನ್ನೆದೆಯಾಳದಲ್ಲಿ
ಮೊಟ್ಟೆಯಿಂದ ಹೊರಬಂದ ಮರಿಯಲ್ಲ
ನಮ್ಮ ಒಲವು , ಬಲಿತಾಗಿದೆ ಅದರ ರೆಕ್ಕೆಗಳು
ಇನ್ನು ಬೇಕೇ ಹಾರಲು ಭಯ

ಬದುಕ ನಾಟ್ಯದಲ್ಲಿ ಸರಸ-ವಿರಸಗಳಿವು ಸರಿಗಮಪ
ಬೇಕಿದೆ ಈ ಬದುಕಿಗೆ ಎಲ್ಲದರ ಮಿಶ್ರಣ
ತರತರದ ಭಕ್ಷ್ಯಗಳಿರುವ ಭೋಜನದಂತೆ,
ಖಾದ್ಯವಲ್ಲದಿದ್ದರೇನಂತೆ, ನಾ ಆಗಬಯಸುವೆ
ನೀ ಉಣ್ಣುವ ಆ ಭೋಜನದ ಎಲೆಯಾಗಲು

ನಿರೀಕ್ಷೆಗಳಿವು ಸಾಗರದ ಅಲೆಗಳಂತೆ
ಕೆಲವೊಂದು ಸಿಹಿ ಚುಂಬನವಿಟ್ಟು ಮರಳಿದರೆ
ಮತ್ತೆ ಕೆಲವು ಕೋಲಾಹಲವನ್ನೇ ಸೃಷ್ಟಿಸುತ್ತವೆ,
ಆಗ ಬೇಕಿದೆ ನಾವಿಂದು ಮರಳ ಕಣಗಳಂತೆ
ಅಲೆಯೊಂದಿಗೆ ಮೇಲೆ ಬಂದು , ಅದರ
ಹಿಂದಿರುಗುವಿಕೆಯೊಂದಿಗೆ ಮತ್ತೆ ಮರಳಿ
ಹೊಸ ಅಲೆಯ ಹಾಯುವಿಕೆಗೆ ಕಾಯುತ್ತ ಕೂರುವಂತೆ

ಕಾಯಬೇಕಿದೆ ನಾವಿಂದು ಆ ಒಂದು ಅಲೆಗೆ
ಸೇರಿಸಬೇಕಿದೆ ಅದಿಂದು ಆ ಎರಡು
ಕಣಗಳ ಶಾಶ್ವತವಾಗಿ ದಡದೆಡೆಗೆ
ಮತ್ತೆ ಮರಳದಂತೆ, ಗುರಿ ಇಲ್ಲದೆ ತೇಲದಂತೆ.

ಇಂತಿ
ವಿನಯ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು