ದೇವರ ಹುಚ್ಚು :ಕಾದಂಬರಿ ವಿಮರ್ಶೆ


ದೇವರ  ಹುಚ್ಚು :
ಮೊಟ್ಟ ಮೊದಲಿಗೆ ಇದು ನಾನು ಜೋಗಿಯವರ ಕೃತಿಯ ಬಗ್ಗೆ ಬರೆಯುತ್ತಿರುವ ಎರಡನೆಯ ಅನಿಸಿಕೆ (ವಿಮರ್ಶೆ).
              ಇದೊಂದು ಆಸ್ತಿಕವಲ್ಲದ ನಾಸ್ತಿಕವಾಗಿರುವ ಮತ್ತು ನಾಸ್ತಿಕವಲ್ಲದ ಆಸ್ತಿಕವಾಗಿರುವ ಎರಡು ಮನಸ್ಸುಗಳ ಗೊಂದಲಗಳೊಡನೆ ಸಾಗುತ್ತದೆ. ಅದಕ್ಕೊಂದು ರೂಪ ಕೊಟ್ಟು ಆ ಮನಸ್ಸುಗಳ ನಂಬಿಕೆಗಳನ್ನ, ಗೊಂದಲಗಳನ್ನ, ಸಮಾಜದ ಭೀತಿಯನ್ನ ಎರಡು ವ್ಯಕ್ತಿತ್ವದ ನಡುವೆ ಹೆಣೆಯಲು ಜೋಗಿ ಯಶಸ್ವಿಯಾಗಿದ್ದಾರೆ.
   ರಂಗನಾಥ ಮತ್ತು ರಾಜಶೇಖರ ಈ ಕಾದಂಬರಿಯ ಎರಡು ಮುಖ್ಯ ಜೀವಾಳಗಳು.
                ರಂಗನಾಥನ ಸಾವಿನಿಂದ ಶುರುವಾಗುವ ಕಾದಂಬರಿ ಕೊನೆಗೊಳ್ಳುವುದು, ಆತನ ಆಕರ್ಷಕ ಮಾತುಗಳು, ಜೀವವಿಲ್ಲದ ದೇಹದಿಂದ ಯಾವುದೇ ಕೂಗಿಲ್ಲದೆ ಅಗ್ನಿಗೆ ಆಹುತಿಯಾದಾಗ.ಹಲವಾರು ಸೂಕ್ಷ್ಮ ವಿಷಯಗಳು ನಾವೇ ಕಂಡರೂ  ಎಂದೂ ಯೋಚಿಸದ ಏಷ್ಟೋ ಘಟನೆಗಳ ಸರಮಾಲೆ ಕಾದಂಬರಿಯ ತುಂಬಾ ಹರಿದಾಡಿದೆ.
   ಸಾವಿನಮನೆಯಲ್ಲಿ ಸದಾ ಇರುವ ಶೋಕ, ಅಳು ನೋವು ಎಲ್ಲದರ ನಡುವೆ ನುಸುಳುವ ಮತ್ತೊಂದು ಭಾಗವಾದ ಅವಸರ, ಕರ್ತವ್ಯ ಪ್ರಜ್ಞೆ ಎಲ್ಲವನ್ನ ಜೋಗಿ ಚೆನ್ನಾಗಿ ವಿವರಿಸಿದ್ದಾರೆ. ಅದರ ಒಂದು ತುಣುಕು ಹೀಗಿದೆ.
    “ ಪೊಲೀಸರು ತಮ್ಮ ಕೆಲಸ ಶುರು ಹಚ್ಚಿಕೊಂಡರು. ಒಂದೊಂದೇ ವಸ್ತುಗಳನ್ನು ಜೋಪನಾವಾಗಿ ಬೆರಳ ಗುರುತು ಮಾಸದಂತೆ ಎತ್ತಿಕೊಂಡು ಬಟ್ಟೆಯಲ್ಲಿ  ಕಟ್ಟಿಡುತ್ತಾ ಒಂದೊಂದನ್ನು ಮಾರ್ಕ್ ಮಾಡುತ್ತಾ ನಂಬರ್ ಬರೆಯುತ್ತಾ ಇದ್ದಕ್ಕಿದ್ದಂತೆ ಚಟುವಟಿಕೆ ಶುರುವಾಯ್ತು,ರಾಜೇಗೌಡ ಅತ್ಯುತ್ಸಾಹದಿಂದ ಒಳಗೇನಿದೆ ನೋಡ್ರೋ, ಯಾರಾದ್ರೂ ಹಿಂದಿನ ಡೋರಿನಿಂದ ಎಂಟರಾಗಿದ್ದಾರಾ ಚೆಕ್ ಮಾಡಿ. ನಮಗೆ ಫೋನ್ ಮಾಡಿರೋದು ಯಾರು ಅಂತ ತಿಳ್ಕೊಂಡು ಅವರ ಸ್ಟೇಟ್ಮೆಂಟ್ ತಗಳ್ಳಿ. ಬಾಡೀನ ಪೊರ್ಸ್ಟ್ ಮಾಟ್ರಮ್ಮಿಗೆ  ಕಲ್ಸಿ ಅಂತ ಎತ್ತರದ ದನಿಯಲ್ಲಿ ಹೇಳುತ್ತಾ ಓಡಾಡ ತೊಡಗಿದ.ತಾನು ಸಾವಿನ ಮನೆಯಲ್ಲಿದ್ದೇನೆ , ತನ್ನ ಮುಂದೆ ಒಂದು ಹೆಣ ಬಿದ್ದಿದೆ, ಆರೆಂಟು ಗಂಟೆಯ ಹಿಂದೆ ಅದಕ್ಕೂ ತನ್ನ ಹಾಗೆ ಜೀವ ಇತ್ತು .ತನ್ನ ಹಾಗೆ ಅದರ ಹೃದಯವೂ ಮಿಡಿಯುತ್ತಿತ್ತು .ಅದರೊಳಗೊಂದು ಮನಸ್ಸು , ಆ ಮನಸ್ಸಿನಲ್ಲಿ ವಿರಹ , ಪ್ರೇಮ , ಏಕಾಂಗಿತನ ,ಅಸಹನೆಗಳೆಲ್ಲ ತುಂಬಿದ್ದವು ಅನ್ನುವುದನ್ನೆಲ್ಲ ಮರೆತೇಬಿಟ್ಟಂತೆ ಓಡಾಡುತ್ತಿದ್ದ ರಾಜೇಗೌಡ”.
       ರಂಗನಾಥ ಪುರೋಹಿತರ ಮಗ, ರಾಜಶೇಖರ ಒಬ್ಬ ಭಂಡಾರಿಯ ಮಗ. ಇವರಿಬ್ಬರ ನಡುವೆ ಇರುವ ಜಾತಿ, ಆ ಜಾತಿ ಹುಟ್ಟಿಸಿರುವ ಸಾವಿರಾರು ಬಂಧನಗಳ ಸಮಗ್ರ ಚಿತ್ರಣವೆ ಈ ದೇವರ ಹುಚ್ಚು ಕಾದಂಬರಿ.  ಇಲ್ಲಿಬರುವ ಎಲ್ಲ ಪಾತ್ರಗಳು ತಮ್ಮದೇ ಸ್ವಂತ ನೆಲೆಗಟ್ಟಿನಲ್ಲಿ ಹುಟ್ಟಿಕೊಂಡಿದ್ದರೂ ಎಲ್ಲೋ ಒಂದು ಕಡೆ ಯಾಮಿನಿಯ ಚಿರಾಯು ಮತ್ತೆ ನೆನಪಾಗುತ್ತಾನೆ. ಇಲ್ಲಿರುವ ರಂಗನಾಥನಿಗೂ , ಯಾಮಿನಿಯಲ್ಲಿ ಬರುವ ಚಿರಾಯುವಿಗೂ ಬಹಳಷ್ಟು ಹೋಲಿಕೆ ಎದ್ದು ಕಾಣುತ್ತದೆ.ತನ್ನ ಸ್ವಂತ ನೆಲೆಗಟ್ಟಿನಲ್ಲಿ ನಿಂತು ಚಿಂತಿಸಿ ಅದಕ್ಕೆ ಬದ್ದನಾಗಿ ಇರುವ, ಯಾರ ಮಾತನ್ನು ಕೇಳದ, ಒಂಟಿತನವನ್ನ ಹೆಚ್ಚು ಇಷ್ಟಪಡುವ ಚಿರಾಯು ರಂಗನಾಥ ಮತ್ತು ರಾಜಶೇಖರ ಎಂಬ ಇಲ್ಲಿರುವ ಎರಡು ವ್ಯಕ್ತಿಗಳಲ್ಲಿ ಸಮನಾಗಿ ಹಂಚಿ ಹೋಗಿದ್ದಾನೆ ಅನಿಸುತ್ತದೆ.
     ರಾಜಶೇಖರ ಗಂಗೆಯೊಂದಿಗಿನ ತನ್ನ ಸಂಬಂಧವನ್ನ ತಾನೇ ವಿಶ್ಲೇಷಿಸಿ ಕೊಳ್ಳುವಾಗ, ಯಾಮಿನಿಯೊಂದಿಗಿನ ತನ್ನ ಸಂಬಧವನ್ನ ಹೇಳುವ ಚಿರಾಯು ಇಲ್ಲಿಯೂ ಕಾಣಸಿಗುತ್ತಾನೆ. ಹಾಗೆ ರಂಗನಾಥನ ಅಮೋಘ ವಾಕ್ಚಾತುರ್ಯ ಒಮ್ಮೆ ಚಿರಾಯುವನ್ನ ನೆನೆಯುವಂತೆ ಮಾಡುತ್ತದೆ.
          ಇನ್ನೊದು ಕಡೆ ರಂಗನಾಥ ನಡಿಯುವ ಹಲವಾರು ಕಟು ಸತ್ಯಗಳು ನಮ್ಮನ್ನು ಒಮ್ಮೆ ಆಳವಾದ ವಿಚಾರಧಾರೆಯ ಕಡೆಗೆ ಕರೆದುಕೊಂಡು ಹೋಗುತ್ತದೆ.ಉದಾಹರಣೆಗೆ :    
                      “ಪರಂಪರೆಯಲ್ಲಿ ವಿಚಾರವಾದ ಗೆಲ್ಲುವುದು ಕಷ್ಟ”.
                      “ಈ ದೇವರು ಎಂಥ ಕಿಲಾಡಿ ನೋಡೋ , ನಾಸ್ತಿಕವಾದಕ್ಕೂ ತಾನೇ ಕಾರಣ ಅಂತ ಹೇಳ್ಕೋತಾನೇ.ಹಿರಣ್ಯಕಶಿಪು ದೇವರೇ ಇಲ್ಲ ನಾನೇ ದೇವರು ಅಂತಾನಲ್ಲ. ಅದಕ್ಕೂ ಜಯವಿಜಯರ ಶಾಪವೇ ಕಾರಣವಂತೆ . ಅದರ ಅರ್ಥ ಏನು ಹೇಳು ?ನಾಸ್ತಿಕವಾದವನ್ನು ಹುಟ್ಟು ಹಾಕಿದ್ದು ದೇವರೇ.ಇಷ್ಟೊಂದು ಪ್ರಭಾವಶಾಲಿಯಾದ ಅಸ್ತಿತ್ವವೊಂದು ಇರೋದಕ್ಕೆ ಸಾಧ್ಯವಾ ? ಈ ಪರಿಸರ , ಈ ದೇವಸ್ಥಾನ , ಆ ಭಕ್ತಿ ಇದೆಲ್ಲ ಇಲ್ಲದೇನೂ ಬದುಕೊಡಕ್ಕೆ ಆಗೋಲ್ವ ? ನಾನು ಬದುಕಿ ತೋರಿಸ್ತಿನಿ ನೋಡೋ .ದೇವರನ್ನು ದಿಕ್ಕರಿಸಿ ಬದುಕ್ತಿನಿ ಅಂದಿದ್ದ ರಂಗನಾಥ”.
          “ಗಾಂಧೀಜಿನ ಕೊಂದದ್ದು ನಮ್ಮೊರು , ಬ್ರಿಟಿಷರಲ್ಲ .ಒಂದು ವೇಳೆ ಅವರೆನಾದ್ರೂ ಗಾಂಧೀನ ಹತ್ಯೆ ಮಾಡಿದ್ರೆ , ಇಂಗ್ಲೆಂಡೂ ನಮ್ಮದಾಗ್ತಿತ್ತೋ ಏನೋ” ?
              
                     “ನೀನು ಪೋಲೀಸ್ ಆಫೀಸರ್ ಆಗಬೇಕೂಂತ ನನ್ನಾಸೆ , ಆಧಿಕಾರ ಇರೋದು ಕಾನೂನಿನಲ್ಲಿ ,ಧರ್ಮದಲ್ಲಿ ಅಲ್ಲ , ಧರ್ಮ ಕೊಡೋ ಅಧಿಕಾರಕ್ಕಿಂತ ಕಾನೂನು ಕೊಡೋ ಅಧಿಕಾರ ದೊಡ್ಡದು. ಹದಿನೆಂಟು ವರ್ಷ ದೇವರ ಒಟ್ಟಿಗಿದ್ದೋನು ನಾನು , ಅವನಿಲ್ಲ ಅಂತ ನಂಗೊತ್ತು.ಕಾನೂನಿನ ಒಟ್ಟಿಗೆ ತುಂಬಾ ವರ್ಷ ಇದ್ದರೆ ನಿಂಗೆ ಕಾನೂನು ಇಲ್ಲ ಅನ್ನೋದು ಗೊತ್ತಾಗುತ್ತೆ ಹೋಗು”.
                   ಹೀಗೆ ಕಾದಂಬರಿಯ ಬಹುಭಾಗ ಓದುಗನನ್ನ ತರ್ಕದಲ್ಲೇ ಕಳೆಯುವಂತೆ ಮಾಡುತ್ತದೆ.ಕಾದಂಬರಿಯ ಕೊನೆ ಮಾತ್ರ ಅಷ್ಟೇಕೋ ಹಿಡಿದಿಡುವುದಿಲ್ಲ ಅನಿಸುತ್ತದೆ. ಅಥವಾ ಜೋಗಿ ಹೇಳ ಹೊರಟಿರುವುದನ್ನು ಅರ್ಥೈಸಿಕೊಳ್ಳಲು ನನ್ನಿಂದ ಸಾಧ್ಯವಾಗದೆ ಹೋಗಿರಬಹುದು. ಒಟ್ಟಿನಲ್ಲಿ ಒಮ್ಮೆಲೇ ಯಾವುದೇ ಅಡಚಣೆ ಇಲ್ಲದೆ ಓಡಿಸಿಕೊಂಡು ಹೋಗಬಲ್ಲ ಕಾದಂಬರಿ ಕೊಡುವಲ್ಲಿ ಜೋಗಿ ಯಶಸ್ವಿಯಾಗಿದ್ದಾರೆ.

-
ವಿನಯ



ಕಾಮೆಂಟ್‌ಗಳು

  1. ಧನ್ಯವಾದಗಳು ವಿನಯ್...ಕಾದಂಬರಿಯ ಪರಿಚಯ ಮಾಡಿಕೊಟ್ಟಿದ್ದಕ್ಕೆ :)

    ಪ್ರತ್ಯುತ್ತರಅಳಿಸಿ
  2. ವಿನಯ್,
    ತುಂಬಾ ಚೆನ್ನಾಗಿ ನಿಮ್ಮ ಅನಿಸಿಕೆ ಹೇಳಿದ್ದೀರಾ... ಕಾದಂಬರಿ ನಾನಿನ್ನೂ ಓದಿಲ್ಲ...ಓದಬೇಕು...

    ಪ್ರತ್ಯುತ್ತರಅಳಿಸಿ
  3. ಧನ್ಯವಾದಗಳು....ಚೆನ್ನಾಗಿದೆ ನಿಮ್ಮ ವಿಮರ್ಶೆ....ನಾನೂ ಇನ್ನು ಓದಿಲ್ಲ......ಓದಿ ಅಭಿಪ್ರಾಯ ತಿಳಿಸುತ್ತೇನೆ....

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು