ಇನ್ನು ಸ್ವಲ್ಪ ಬಾಕಿ ಇದೆ

ಮತ್ತೆ ಹೊಡೆದಾಡಿ ಕೊಂಡಿದ್ದಾರೆ ಅಂದ್ರೆ matter ಸಕತ್ ಸೀರಿಯಸ್ ಆಗೇ ಇರಬೇಕು ಅಂದುಕೊಂಡು ಅದೇನು ತಿಳಿದುಕೊಳ್ಳೋಣ ಅಂತ ಅಮ್ಮನಿಗೆ ಫೋನಾಯಿಸಿದೆ. ಆದರೆ without ಆಕ್ಷನ್ ಅದನ್ನ explain ಮಾಡೋದು ಕಷ್ಟ ಅಂತ ಮತ್ತೊಮ್ಮೆ ಊರಿಗೆ ಬಂದಾಗ ಹೇಳ್ತೇನೆ ಅಂದ್ರು ಅಮ್ಮ ,ನನಗೆ ಯಾಕೋ ಸಮಾಧಾನವೇ ಆಗಲಿಲ್ಲ highlights ತರ ಸ್ವಲ್ಪನಾದ್ರೂ ಹೇಳು ಅಂತ ಹೇಳಿದೆ. ಬಡ್ಡಿಮಗನೆ ಇದೆ ಇಂಟರೆಸ್ಟ್ ಓದೋದರಲ್ಲಿ ಇದ್ದಿದ್ದರೆ ಪೇಪರ್ ಅಲ್ಲಿ ಫೋಟೋನಾದ್ರೂ ಬರ್ತಿತ್ತು ಅಂತ ಗೊಣಗಿಕೊಂಡರು (ಪೇಪರ್ ಅಲ್ಲಿ ಫೋಟೋ ಬರದೋ ಒಂದು ಸಕತ್ matter ಅದರ ಬಗ್ಗೆ ಮುಂದೆ ಬರಿತೆ). ನಮ್ಮ ಅಮ್ಮನ ಒಂದೇ ಒಂದು ಪ್ರಾಬ್ಲಮ್ ಅಂದ್ರೆ e-story ಹೇಳ್ತಾ ಕೂತರೆ ಅವರ ಸ್ವರ ಭೀಮಸೇನ ಜೋಷಿ ಅವರ ಹಾಡಿನಂತೆ ನಿಧಾನವಾಗಿ ತಾರಕಕ್ಕೆ ಏರಿ ಬಿಡುತ್ತೆ. ಒಮ್ಮೆ ಪಕ್ಕದ ಕೇರಿಯ ಕರಿಯ ಅವನ ಹೆಂಡತಿಗೆ ನಮ್ಮ ಮನೆ ಪಕ್ಕದ ತೋಟದಲ್ಲೇ ದನಕ್ಕೆ ಬಡಿಯೋ style ಅಲ್ಲಿ ಸರಿಯಾಗಿ ಬಡಿದು ಬಿಟ್ಟನಂತೆ. ಅಲ್ಲೇ ಹೊಂಬಾಳೆ ಹೆಕ್ತ ಇದ್ದ ಅಮ್ಮ ಅದನ್ನ ನೋಡಿ ಬಿಟ್ಟಿದ್ದಾರೆ,ಅದೇ ನೋಡಿ ಎಡವಟ್ಟಾಗಿದ್ದು.ಮನೆಗೆ ಬಂದೋರೆ ತಮ್ಮ ತಂಗಿಗೆ ಮಿಸ್ ಕಾಲ್ ಮಾಡಿ ಅವಳು ಕಾಲ್ ಮಾಡಿದ ಕೂಡಲೇ ಹಳೆ ಹಿಂದಿ ಫಿಲಂ ಅಲ್ಲಿ over acting ಮಾಡ್ತಾರಲ್ಲ ಆ ಸ್ಟೈಲ್ ಅಲ್ಲಿ with music ( like ಅಯ್ಯೋ , ಬೇಡ್ರಿ , ಹ್ಮಂ ಬೆನ್ನು .....etc) ಅವಳಿಗೆ ಫುಲ್ explain ಮಾಡುತ್ತಿರಬೇಕಾದರೆ ಪಕ್ಕದ ಮನೆ ಚಂದ್ರಯ್ಯ ಅಪ್ಪನೇ ಅಮ್ಮನಿಗೆ ಹೊಡೀತಾ ಇದಾರೆ ಅಂತ ತಿಳ್ಕೊಂಡು , ಹೊಡೆದಾಟ ತಪ್ಪಿಸೋಕೆ ಬಂದಿದ್ರಂತೆ.ಆಮೇಲೆ ಅವರಿಗೆ ಗೊತ್ತಾಗಿದ್ದು ಇದು ಅಮ್ಮನ ಏಕಪಾತ್ರಾಭಿನಯ ಅಂತ.

ಈಗ ಮುಖ್ಯ ವಿಷಯಕ್ಕೆ ಬರೋಣ , ನಮ್ಮೂರಿನ ಕೆಲ ಹೆಂಗಸರು ಹೇಗೆ ಅಂದ್ರೆ ತೇಜಸ್ವಿಯವರ 'ಕಿರಗೂರಿನ ಗಯ್ಯಾಳಿಗಳು' ಕಥೆಗಳಲ್ಲಿ ಬರುವ ದಾನಮ್ಮನನ್ನು ಕೂಡ ಇವರ ಮುಂದೆ ಹಾಗೆ ನಿವಾಳಿಸಿ ಬಿಸಾಡಿಬಿಡಬೇಕು ಅಷ್ಟು powerful.ಮಾತಿನಲ್ಲೂ ,ಹಾಗೆ ಕೆಲಸದಲ್ಲೂ.ಇನ್ನು ಈ ಸ್ಟೋರಿಯಾ ಮುಖ್ಯ ಪಾತ್ರ ಯಶೋಧ ಸಾಕ್ಷಾತ್ ದುರ್ಗಿ. ಜಗಳಕ್ಕೆ ಇಳಿದಲೆಂದಳೆ ಸಂಸ್ಕೃತ ಹಾಗೆ ಲೀಲಾಜಾಲವಾಗಿ ಅವಳ ಬಾಯಿಂದ ಬಂದು ಬಿಡುತ್ತದೆ.ಹಾಗಂತ ಕೆಲಸದಲ್ಲಿ ಏನು ಕಮ್ಮಿ ಇರಲಿಲ್ಲ.ಕೆಲ ಗಂಡಸರು ಎರಲಾಗದಂತ ಮರ ಏರಿ ಸೊಪ್ಪು ಕಡಿದುಕೊಂಡು ಬರುತ್ತಿದ್ದಳು. ಒಮ್ಮೆ ಹೀಗೆ ಅವಳು ಹೊನ್ನೇ ಮರ ಹತ್ತಿ ಸೊಪ್ಪು ಕಡಿತಿರಬೇಕಾದರೆ ಅಲ್ಲೇ ಪಕ್ಕದಲ್ಲಿ ಹೋಗುತಿದ್ದ ಗೆಂಡೆ ರಾಮ ಸುಮ್ಮನೆ ಇರಲಾಗದೆ ಮರದ ಕೆಳಗೆ ಬಂದು ಹಲ್ಲು ಕಿರಿಯುತ್ತಾ ಏನ್ರಿ ಸೊಪ್ಪು ಕಡಿತಾ ಇದ್ದೀರಾ ಅಂತ ಕೇಳೋದೇ.ಇವಳಿಗೋ ಮೊದಲೇ ಚಿಗುಳಿ ಬೇರೆ ಕಡಿತಿತ್ತು ಅದು ಅಲ್ದೆ ಮರದ ಮೇಲೆ ಇದ್ದಳು ಎಲ್ಲಿತ್ತೋ ಕೋಪ 'ಬೆವೆರ್ಸಿ ನನ್ ಮಗನೆ ಏನ್ ಮರದ ಅಡಿ ನಿಂತು ಹಲ್ಲು ಕಿರಿತಿದ್ದಿ , ನಿನ್ ಹೆಂಡ್ರಿಗೆನ್ ಬತ್ತಿ ಹೊಗ್ಯದ' ಅನ್ನಬೇಕೆ. ಬೋರ್ ವೆಲ್ ಕಟ್ಟೆ ಇಂದ ಹಿಡಿದು ಕಾಡಿಗೆ ಸೊಪ್ಪು ತರೋಕೆ ಹೋದಾಗಲೂ ಯಾರು ಅವಳ ಬಗ್ಗೆ ಮಾತಾಡಬಾರದು ಅಂತ ಹವಾ maintain ಮಾಡಿದ್ಲು ಅವಳು.

ಒಂದರ್ಥದಲ್ಲಿ ಊರಿನ ಎಲ್ಲರಿಗೂ ವಿಲನ್ ಆಗಿದ್ದಳು ನನ್ನ ಕಥೆಯ ಹೀರೋಯಿನ್ ಈ ಯಶೋಧ.ಇನ್ನು ಅವಳ ಗಂಡ ಮಂಜ ಇಟ್ಟಿಗೆ ಗುಡಿನಿಂದ ಬರೋ ಹೋಗೆ ತರ ಅವ ಎಚ್ಚರವಿದ್ದಾಗಲೆಲ್ಲ ಕೈ ಅಲ್ಲಿ ಇರುತ್ತಿದ್ದ ನಂ.೩ ಮುಂಡು ಬಿಡಿ ಇಂದ ಪುಸ್ ಪುಸ್ ಅಂತ ಹೋಗೆ ಬಿಡುತ್ತಲೇ ಇರುತಿದ್ದ. ಮಧ್ಯೆ ಮಧ್ಯೆ ಪೌರಾಣಿಕ ಸಿನಿಮಾದಲ್ಲಿ ಕ್ಯಾಬರೆ ಡಾನ್ಸ್ ಹಾಕಿದ ಹಾಗೆ ಉಸ್ ಉಸ್ಸ್ ಅಂತ ಕೆಮ್ಮು ಬೇರೆ.ಇನ್ನು ಇದ್ದ ೨ ಹೆಣ್ಣು ಮಕ್ಕಳು.ಅಮ್ಮನ ಪಡಿಯಚ್ಚು.ಥು ಅಂದರೆ ಥು ಥು ಅಂದರೆ ಥು ಥು ಅನ್ನೋ ಹಾಗೆ. ಮನೆಯೇ ಮೊದಲ ಪಾಠಶಾಲೆ ಅನ್ನೋ ಹಾಗೆ ಅಮ್ಮ ಹೇಳುತ್ತಿದ್ದ ಒಂದು ಪದ ಬಿಡದೆ ಅಷ್ಟನ್ನು ಕಂಠಪಾಠ ಮಾಡಿದ್ದವು. ತಾವು ಏನು ಕಡಿಮೆ ಇಲ್ಲ ಅಂತ ತೋರಿಸೋಕೆ ಏನೋ ಪಟ್ಟಣಕ್ಕೆ ಹೋಗಿ ಅಮ್ಮನ dictionary ಅಲ್ಲಿ ಇಲ್ಲದ ಒಂದಿಷ್ಟು ಹೊಸ ಪದ ಬೇರೆ ಕಲಿತಿದ್ದವು.

ಹೀಗೆ ಇದ್ದರೇ ಆಗೋಲ್ಲ ಅಂದುಕೊಂಡ ಊರಿನ ಹೆಂಗಸರೆಲ್ಲ ಸೇರಿ ಅವಳಿಗೆ ತಕ್ಕ ಶಾಸ್ತಿ ಮಾಡಬೇಕು ಅಂತ ಯೋಚಿಸುತ್ತಿರುವಾಗಲೇ ಸಿಕ್ಕಿತು ನೋಡಿ ಕಾರಣ.ಏನಪ್ಪಾ ಅಂದರೆ, ಅವಳ ಮನೆಯ ಪಕ್ಕದಲ್ಲಿರುವ ಮನೆಯ ಸವಿತಾ ಅನ್ನೋ ಹುಡುಗಿಗೆ ಮದುವೆ ನಿಶ್ಚಯವಾಗಿತ್ತು.ಆದರೆ ಯಶೋಧೆಯ ದೊಡ್ಡ ಮಗಳಿಗೆ ಅವಳನ್ನ ಕಂಡರೆ ಆಗೋಲ್ಲ.ಹಾಗಾದರೂ ಮಾಡಿ ಮದುವೆ ನಿಲ್ಲಿಸಬೇಕೆಂದು ಬೇಕೆಂದು ಯೋಚಿಸುತ್ತಿರ ಬೇಕಾದರೆ ಅವಳ ಕಣ್ಣಿಗೆ ಹೊಳೆದದ್ದು ಅವರ ಮನೆ ಎದುರಿಗಿದ್ದ ನಮ್ಮೂರಿನ ಪ್ರಾಥ'ಮಿಕ' ಶಾಲೆ.ತಮ್ಮೆಲ್ಲ criminal ತಲೆ ಉಪಯೋಗಿಸಿ ಅಂತು ಫೈನಲ್ decision ಮಾಡಿ ಶಾಲೆಯ ಗೋಡೆಯ ಮೇಲೆ ಅವಳ ಬಗ್ಗೆ ಇಲ್ಲ ಸಲ್ಲದ್ದನ್ನು ಬರೆಯೋದು ಅಂತ ಯೋಚಿಸಿ ಹಾಗೆ ಮಾಡಿದ್ದಾರೆ.

ಮರುದಿನ ಬೆಳಿಗ್ಗೆ ಇದನ್ನ ನೋಡಿದ ಸವಿತಾ ಗಾಳಿ ಮಾತು ಚಿತ್ರದ ಲಕ್ಷ್ಮಿ ಸ್ಟೈಲ್ ಅಲ್ಲಿ ಅಲ್ಲೇ ಹತ್ತಿರವಿರುವ ಕೆರೆ ಹಾರೋದಕ್ಕೆ ಹೋಗಿದ್ದಾಳೆ. ಇದನ್ನ ನೋಡಿದ ನಮ್ಮೂರ ಈರ ಅನಂತ್ ನಾಗ್ ಸ್ಟೈಲ್ ಅಲ್ಲಿ ಕೆರೆಗೆ ಹಾರಿ,ರಾಜ್ ಕುಮಾರ್ ಕೆಸರಿಗೆ ಬಿದ್ದ ಸರಿತಾಳನ್ನು ಎತ್ತಿಕೊಂಡು ಬರೋ ರೀತಿ ದಡಕ್ಕೆ ಎತ್ತಿಕೊಂಡು ಬಂದು ಹಾಕಿ ರವಿಚಂದ್ರನ್ ಸ್ಟೈಲ್ ಅಲ್ಲಿ look ಕೊಟ್ಟು , ಅಂಬರೀಶ್ ಸ್ಟೈಲ್ ಅಲ್ಲಿ ಬುದ್ದಿವಾದ ಹೇಳಿ ಮನೆಗೆ ಕರೆದುಕೊಂಡು ಬಂದಿದಾನೆ. ಬೆಕ್ಕಿಗೆ ಘಂಟೆ ಕಟ್ಟಿದವರು ಯಾರು? ಅನ್ನೋ ಹಾಗೆ ಅದನ್ನ ಬರೆದವರು ಯಾರು ಅಂತ ಊರಿನವರಿಗೆ ಅದರದ್ದೇ ಚಿಂತೆ. ನಮ್ಮ ಹೀರೋಯಿನ್ ಮೇಲೆ ಅನುಮಾನ ಇತ್ತಾದರೂ ಪ್ರೂಫ್ ಇಲ್ಲದ ಕಾರಣ ಏನು ಮಾಡುವ ಹಾಗೆ ಇರಲಿಲ್ಲ. ಅದು ಅಲ್ಲಿಗೆ ನಿಂತಿದ್ದರೆ ಎಲ್ಲರು ಸುಮ್ಮನಾಗುತಿದ್ದರೋ ಏನೋ , ಇಸ್ಕುಲ ಗೋಡೆ ಮೇಲೆ ಬರೆಯೋದು ೩-೪ ದಿನ ಸತತವಾಗಿ ನಡೆಯಿತು. ಈಗ ನೋಡಿ ಸರಾಬು ಕುಡಿದು ಊರಿನ ಮೊರಿಯನೆಲ್ಲ ಲೆಕ್ಕ ಹಾಕುತಿದ್ದ ನಮ್ಮೂರಿನ detectives ಎಲ್ಲ ಎಚ್ಚರಗೊಂಡಿದ್ದು. ಅಂತು ಇಂತೂ ೨ ರಾತ್ರಿ ಕಾವಲು ಕಾಯಿದ್ರು ಮುಂಡೆ ಮಕ್ಳು ಕಡಿದು ಗುಡ್ಡೆ ಹಾಕಿದ್ದು ಏನು ಇಲ್ಲ.ಇನ್ನು ಸುಮ್ಮನೆ ಈ ಗಂಡ್ ಸೂಳೆ ಮಕ್ಳನ್ನ ನಂಬಿಕೊಂಡರೆ ನಾಯಿ ಉಚ್ಚೇನೆ ಗತಿ ಅಂತ ಹೆಂಗಸರೇ ಎಲ್ಲ ಸೇರಿ ತಮ್ಮ ಕಡೆಯಿಂದಾನೆ ಯುದ್ಧ ಘೋಷಿಸಿಯೇ ಬಿಟ್ಟರು. e - detective ನನ್ ಮಕ್ಕಳು ಮತ್ತೆ ರತ್ನಕ್ಕನ ಹೆಂಡದಂಗಡಿ ಸೇರಿದವು.

ಅಂದು ಅಮಾವಾಸೆಯಾ ಬೆಳಿಗ್ಗೆ ಊರ ಜನ ಎಲ್ಲ ಇರುವ ಒಂದೇ ಬೋರ್ ವೆಲ್ ಇಂದ ಬರುವ ಕಂದು ಮಿಶ್ರಿತ ನೀರನ್ನೇ ಹಿಡಿದುಕೊಂಡು ಹೋಗಿ ಪವಿತ್ರ ಗಂಗೆಯಲ್ಲೇ ಸ್ನಾನ ಮಾಡುವಂತೆ ಜಳಕ ಮುಗಿಸಿ,ಯುದ್ದಕ್ಕೆ ಹೊರಟು ನಿಂತಿರುವುದರಿಂದ ಅಲ್ಲೇ ಆಗಬಹುದಾದ ಕೊಳೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಲೇ ಕಟ್ಟಿಗೆ ರಾಶಿಗೆ ನೇತು ಹಾಕಿದ್ದ ವಾರದ ಹಿಂದೆ ಒಗೆದ ಮಣ್ಣು ಬಟ್ಟೆಯನ್ನು ಮುತ್ತು ರತ್ನಗಳಂತೆ ಹೇರಿಕೊಂಡು ಉಬ್ಬಣಿ ಗುಡ್ಡದ ಬಳಿ ಎಲ್ಲ ಒಟ್ಟು ಗೂಡಿದರು.ಈಗ ಮೊದಲು ಯಾರು attack ಮಾಡಬೇಕು ಹೇಗೆ ಅನ್ನೋದರ ದೀರ್ಘ ಚರ್ಚೆ ಮಾಡಿ ಗುಂಪಿನಲ್ಲೇ ಸ್ವಲ್ಪ ಮಜುಬುತಾಗಿದ್ದ ಸುಜಾತಳನ್ನು ಗುಂಪಿನ ನಾಯಕಿಯನ್ನಾಗಿ ಮಾಡಿ ಶತ್ರು ಪಾಳಿಯತ್ತ ಹೆಜ್ಜೆ ಹಾಕತೊಡಗಿದರು.ತಾವು ಸುಮ್ಮನಿದ್ದರೆ ಇಲ್ಲೂ ಆಗೋಲ್ಲ ಅಂದು ಕೊಂಡ ಕೆಲ ಗಂಡಸರು ಸುಜಾತಳ ಗಂಡ ಭಾಸ್ಕರನ ಮುಂದಾಳತ್ವದಲ್ಲಿ ಇವರೊಡನೆ ಹೆಜ್ಜೆ ಹಾಕಿದರು. ಇದು ಒಂಥರಾ ಮದಕರಿಯ ಸೈನ್ಯದ ಮೇಲೆ ದಾಳಿ ಮಾಡಲು ಹೊರಟ ಹೈದರಾಲಿಯ ಸೈನ್ಯದಂತೆ ಕಾಣುತಿತ್ತು ಇದು.

ಇದಾವುದರ ಅರಿವು ಇಲ್ಲದಂತೆ ಹೊರ ಬಂದ ಯೋಶಧೆಗೆ ಒಮ್ಮೆ shock ಆದರೂ ಗಂಡು ಮೆಟ್ಟಿದ ನಾಡು sorry sorry ಹೆಣ್ಣು ಹುಟ್ಟಿದ ನಾಡು ಅಂತ ತೋರಿಸಬೇಕು ಅಂದು ಕೊಂಡು ಪುಟ್ಟಿ ಅಂತ ಒಂದು ದೀರ್ಘ ಕೂಗು ಹಾಕಿದಳು.ಕ್ಷಣ ಮಾತ್ರದಲ್ಲಿ ಅವಳ ಸಕಲ ಸೈನ್ಯವು ಮನೆಮುಂದೆ ಬಂದಾಗಿತ್ತು.ಇರುವ ಕ್ಷಣ ಮಾತ್ರ ಸಮಯದಲ್ಲೇ ಹೇಗೆ ಅವರನ್ನ ಎದುರಿಸಬೇಕು ಅಂತ ತನ್ನ ಮಕ್ಕಳಿಗೆ ವಿವರಿಸಿದಳು. ಜೈ ಸುಜಾತ ಅನ್ನೋ ಉದ್ಗೋಷದೊಂದಿಗೆ ಶತ್ರು ಪಾಳೆಯವರು ಇವರ ಮನೆ ಎದುರಿಗೆ ಬಂದು ಜಮಾಸಿಯೇ ಬಿಟ್ಟರು. ಅಲ್ಲಿ ಮಾತಿಗೆ ಬೆಲೆ ಇಲ್ಲ ತಿಳಿದಿದ್ದರೂ ಪ್ರಾಸ್ತಾವಿಕವಾಗಿ ಏನಾದರು ಹೇಳಲೇಬೇಕು ಅನ್ನೋ ಕಾರಣದಿಂದ ಭಭ್ರುವಾಹನ film ಸ್ಟೈಲ್ ಅಲ್ಲಿ ಎರೆಡು ಕಡೆಯವರು ಅವರ ವ್ಯಕ್ತಿತ್ವವನ್ನೇ ಪದಗಳಿಂದ ಬೈದಾಡಿಕೊಂಡರು.

ಬೈದಾಟ ಎಲ್ಲ ಆದ ಮೇಲೆ ಮಹಾಭಾರತದಲ್ಲಿ ಶತ್ರು ಪಾಳೆಯದ ಮೇಲೆ ನುಗ್ಗಿ ಎಲ್ಲರನ್ನು ಕಕ್ಕಾಬಿಕ್ಕಿ ಗೊಳಿಸೋ ಅಭಿಮನ್ಯುವಿನ ಹಾಗೆ ಯಶೋಧೆಯ ಸಣ್ಣ ಮಗಳು ಊರಿನವರ ಮೇಲೆ ಹಠಾತ್ ದಾಳಿ ಮಾಡಿ ಎಲ್ಲರನ್ನು ಒಮ್ಮೆ ವಿಚಲಿತ ಗೊಳಿಸಿ ಅವಳದೇ ಚೂಡಿದಾರ್ನ ವೇಲ್ ಕಾಲಿಗೆ ಸಿಕ್ಕಿ ಜಲ್ಲಿ ಕಲ್ಲಿನ ರಸ್ತೆಯ ಮೇಲೆ ಬಿದ್ದು ಅಮ್ಮ ಎಂಬ ಚಿತ್ಕಾರ ಮಾಡಿದಾಗ ಅವಳ ಬಾಯಿಂದ ಬಂದ ರಕ್ತದ ಹನಿಗಳು ನೆಲಕ್ಕೆ ಬೀಳಲು ಯುದ್ದಕ್ಕೆ ಅಧಿಕೃತ ಮುದ್ರೆ ಒತ್ತಿದ ಹಾಗೆ ಆಯಿತು.ಆಮೇಲೆ ನಡೆದಿದ್ದೆಲ್ಲ ಇತಿಹಾಸ. ಯಶೋಧೆ ಮತ್ತು ಅವಳ ಇನ್ನೊಬ್ಬ ಮಗಳು ಕೈ ಅಲ್ಲಿ ಹಿಡಿದಿದ್ದ ಹಿಡಿ ಇಂದ ಸಾಕಷ್ಟು ಜನರಿಗೆ ಗಾಯ ಮಾಡಿ ಕೊನೆಗು ಗುಂಪಿನ ನಾಯಕಿ ಸುಜಾತ ಯಶೋಧಳನ್ನು WWF ಸ್ಟೈಲ್ ಅಲ್ಲಿ ಮೇಲೆ ಎತ್ತಿ ನೆಲಕ್ಕೆ ಬಿಸಾಕಿದ ಹೊಡೆತಕ್ಕೆ ಅವಳು 'ಹಾದರಗಿತ್ತಿ ತೆಗೆದ್ಯೆಯಲ್ಲೇ ನನ್ನ ಸೊಂಟ'(ನೋವಿನಲ್ಲೂ ಶೌರತ್ವ ಅಂದ್ರೆ ಇದ್ ಅಲ್ಲದೆ ಮತ್ತಿನ್ನೇನು ಅಲ್ವಾ?) ಅನ್ನೋ ಮಾತ್ನೊಂದಿಗೆ ಈ ಗಲಾಟೆ ಒಂದು ಹಂತಕ್ಕೆ ಮುಗಿದ ಹಾಗೆ ಆಯಿತು(ನೆನಪಿರಲಿ ಪೂರ್ತಿ ಮುಗಿದಿಲ್ಲ). ಮೊನ್ನೆಯ ಗಲಾಟೆಗೆ ಇದು ಕೇವಲ ಪಿಠಿಕೆ ಅಷ್ಟೇ , ಮುಂದಿನ ಲೇಕನದಲ್ಲಿ ಅದನ್ನ ವಿವರಿಸುತ್ತೇನೆ.

ಇಂತಿ

ವಿನಯ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು