ಬದುಕಿದು ಬೆಚ್ಚಗಿನ ಹಾಸಿಗೆಯಲ್ಲ

ಮೂರಂತಸ್ತಿನ ಆ ಕಟ್ಟಡದ ಕೊನೆಯ ಮೂಲೆಯಲ್ಲಿ ಕುಳಿತು ಮುಳುಗುತಿದ್ದ ಆ ಸೂರ್ಯನನ್ನೇ ನೋಡುತ್ತಾ ತನ್ನ ಬದುಕು ಹೀಗೆ ಎಂದು ಮುಳುಗುವುದೋ ಎಂದು ಮನಸಿನಲ್ಲೇ ಗುನುಗಿಕೊಂಡ. ಮನೆಯಿಂದ ಹೊರಡುವಾಗ ಅಪ್ಪ ಹೇಳಿದ ಆ ಮಾತುಗಳು ಹಾಗೆ ಮನಸನ್ನು ಚುಚ್ಚಿ, ಎದೆಯಾಳದಲೆಲ್ಲೋ ಒಂದು ಭೀಕರ ಗಾಯ ಮಾಡಿದ ಹಾಗೆ ಆಗಿತ್ತು ಅವನಿಗೆ.ಎಷ್ಟು ಬೇಡ ಬೇಡ ಅಂದುಕೊಂಡರು ಅಂದೇ ವಾಕ್ಯ ಮತ್ತೆ ಮತ್ತೆ ಕಿವಿಯಲ್ಲಿ ಗುಯ್ ಗುಟ್ಟುತ್ತಿತ್ತು , "ಇನ್ನು ನನ್ನಿಂದ ಆಗುವುದಿಲ್ಲ,ಇದು ಮುಗಿದ ಮೇಲೆ ವಾಪಸ್ ಬಂದು ಬಿಡು" ಎಂದು ಹೇಳಿ ತಂದೆಯವರು ಕೈಗಿಟ್ತಿದ್ದ ೧೫೦೦ ರೂಪಾಯಿಗಳು.ಏನೆಂದು ಕೊಂಡಿದ್ದಾರೆ ಇವರು ನನ್ನನ್ನು ಮಜಾ ಮಾಡಲು ಹೋಗುತಿದ್ದಾನೆ ಎಂದೇ? ಅಥವಾ ಇವನ ಕೈ ಅಲ್ಲಿ ಏನು ಆಗುವುದಿಲ್ಲವೆಂದು? ಅಥವಾ ನೀನು ನನಗೆ ತಕ್ಕ ಮಗನಾಗಲಿಲ್ಲವೆಂದೆ?.ಕೇಳಿಬಿಟ್ಟರೆ? ಕ್ಷಣಕ್ಕೆ ಬಂದಿದ್ದ ಆ ಯೋಚನೆ ಅಮ್ಮನ ಸೇರಗಿನಂಚಿನಲ್ಲಿ ಅಡಗಿದ್ದ ಬಿಳಲೋ ಬೇಡವೋ ಅಂದು ಕಾಯುವನ್ತಿದ್ದ ಕಣ್ಣೀರು ಕಣ್ಣೆದರಿಗೆ ಬಂದು , ಬಂದಷ್ಟೇ ವೇಗದಲ್ಲಿ ಆ ಆಲೋಚನೆ ಮನಸಿನಿಂದ ಮಾಯವಾಯಿತು.

ಹೆಸರು ಆರ್ಯ, ಸಣಕಲು ದೇಹ.ಚಿಕ್ಕಂದಿನಿಂದಲೂ ಅಮ್ಮನ ಮುದ್ದಿನಿಂದ ಬೆಳೆದ ಹುಡುಗ.ಅಪ್ಪನದು ಸ್ವಲ್ಪ ಗಂಭೀರ ಸ್ವಭಾವ ,ಅಮ್ಮನೂ ಕೂಡ ಅಪ್ಪನೊಂದಿಗೆ ಮಾತಾಡಲು ಹೆದರುತಿದ್ದರು.ಸ್ವಲ್ಪ ತಪ್ಪಾದರೂ ಹೊಡೆದ ಬಿಡುವಂತ ಅಪ್ಪನ ಸ್ವಭಾವ ಸಹಜವಾಗಿ ಭಯ ಅನ್ನೋದನ್ನ ಅವನಲ್ಲಿ ಸ್ವಲ್ಪ ಜಾಸ್ತಿಯೇ ಬೆರಸಿತ್ತು.ಅಪ್ಪನ ಆಜ್ಞೆ ಇಲ್ಲದೆ ಒಂದು ಕಡ್ಡಿಯೂ ಅಲ್ಲಾಡುತ್ತಿರಲಿಲ್ಲ.ಕೋಪಕ್ಕೆ ಸಮಾನಾರ್ಥಕ ಪದ ಅಪ್ಪ ಎಂದು ಬರೆದರು ಆಶ್ಚರ್ಯ ಪಡಬೇಕಾಗಿರಲಿಲ್ಲ. ಇನ್ನು ಅಣ್ಣ,ಅಮ್ಮನಿಗೆ ಇಬ್ಬರು ಒಂದೇ.ಕದ್ದು ಮುಚ್ಚಿ ಏನೇ ತಂದರೂ ಇಬ್ಬರಿಗೂ ಸಮಪಾಲು.ಅಪ್ಪನಿಗೆ ಇವನನ್ನು ಕಂಡರೆ ಸ್ವಲ್ಪ ಇಷ್ಟ ಅಂತ ಮುಂದೆ ನೆಂಟರಿಷ್ಟರು ಇವನ ಮುಂದೆ ಆಡಿಕೊಂಡಿದ್ದು ಕೇಳಿದ್ದ.ಪೂರ ಬಡವರು ಅಲ್ಲ ಇತ್ತ ಶ್ರೀಮಂತರು ಅಲ್ಲ ಅನ್ನೋ ಪರಿಸ್ಥಿತಿ ಮನೆಯಲ್ಲಿ , ಪೈಸೆ ಪೈಸೆಗು ಬೆಲೆ ಇತ್ತು ಅಲ್ಲಿ. ಸ್ವಂತ ಜಮೀನು ಅಂತ ಏನು ಇರಲಿಲ್ಲ. ಅಪ್ಪನ ಎರೆಡು ರಟ್ಟೆಗಳೇ ಉಳಿದ ೫ ಹೊಟ್ಟೆಯನ್ನು ತುಂಬಿಸಬೇಕಿತ್ತು(ಅಜ್ಜ , ಅಜ್ಜಿ ಸೇರಿಸಿ).ಕುಟುಂಬದಲ್ಲಿ ಹಿರಿಕನಲ್ಲದಿದ್ದರೂ ಕೂಡ ತನ್ನ ೧೪ನೇ ವಯಸ್ಸಿಗೆ ಇಡೀ ಮನೆಯ ಜವಾಬ್ದಾರಿ ಹೊತ್ತು ಒಬ್ಬಳು ಅಕ್ಕ ,ಒಬ್ಬಳು ತಂಗಿ,ಅಣ್ಣ ಎಲ್ಲರ ಮದುವೆ ಮಾಡಿಸಿ ಉಳಿದ ತಮ್ಮಂದಿರ ವಿಧ್ಯಾಭ್ಯಾಸಮಾಡಿಸಿ ತಾನು ಮದುವೆ ಆಗಿ ಸಂಸಾರ ಅನ್ನೋದು ಶುರು ಮಾಡೋವಷ್ಟರಲ್ಲಿ ಸಾಕು ಸಾಕಾಗಿದ್ದರು ಅಪ್ಪ.ಅಣ್ಣ ಬೇರೆ ಮನೆ ಮಾಡಿಕೊಂಡು ಪರ ಊರು ಸೇರಿದ್ದ , ಇನ್ನು ಉಳಿದ ಇಬ್ಬರು ತಮ್ಮಂದಿರಲ್ಲಿ ಒಬ್ಬ ಯಕ್ಷಗಾನವನ್ನೇ ತನ್ನ ಬದುಕಾಗಿಸಿಕೊಂಡಿದ್ದ ,ಇನ್ನೊಬ್ಬ ಏನೋ ಮದುವೆ ಏನು ಹೇಳಿ ಪಟ್ಟಣ ಸೇರಿಕೊಂಡಿದ್ದ(ವರುಷಕ್ಕೊಮ್ಮೆ ಊರಿಗೆ ಬಂದು ಹೋಗುತಿದ್ದ).ಈಗ ಅಪ್ಪನಿಗೆ ಉಳಿದಿದ್ದು ಅವರ ಸಂಸಾರ ಮತ್ತು ಅಜ್ಜ , ಅಜ್ಜಿ. ಇನ್ನೇನು ತನ್ನ ಬದುಕು ನೋಡಿಕೊಂಡರಾಯಿತು ಅನ್ನೋವಷ್ಟರಲ್ಲಿ ಬಂದೆರಗಿತ್ತು ಕೊನೆ ತಮ್ಮನ ಆತ್ಮಹತ್ಯೆ.ಇನ್ನೇನು ಎಲ್ಲ ಸರಿಯಾಯಿತು ಅನ್ನೋವಷ್ಟರಲ್ಲಿ ಬಂದಿತ್ತು ನೋಡಿ ಮತ್ತೊಂದು ಆಘಾತ ಅದೇ ಮತ್ತೊಬ್ಬ ತಮ್ಮ ಪಟ್ಟಣದಿಂದ ಯಾರೋ ಪರ ಜಾತಿಯವಳನ್ನು ಕರೆದ್ಕೊಂಡು ಬಂದಿದ್ದು , ಅವರನ್ನು ಮನೆಗೆ ಸೇರಿಸೋಲ್ಲ ಅಂತ ಅಪ್ಪನ ಹಠಕ್ಕೆ ಅಷ್ಟು ದಿನ ಒಟ್ಟಿಗಿದ್ದ ಅಜ್ಜ , ಅಜ್ಜಿ ಇವರ ಮನಸನ್ನೇ ಅರಿಯದೆ ಅವನೊಂದಿಗೆ ಬೇರೆ ಹೊರಟಿದ್ದು. ಹೆಜ್ಜೋಗೊಂದರಂತೆ ಏಟು ತಿನ್ನುವ ಎತ್ತಾದರು ಬೇಕು , ಅದಕ್ಕಿಂತ ಕಡೆಯಾಯಿತು ಅನ್ನೋವಷ್ಟು ಹೊಡೆತಗಳು ಅವರನ್ನು ಒಂಥರಾ ಕಲ್ಲಾಗಿಸಿದ್ದವು.

ಇವೆಲ್ಲವನ್ನು ನೋಡಿಯು ,ನೋಡದಂತೆ ,ಕೆಲವೊಂದು ತಿಳಿಯದಂತೆ ಬೆಳೆದ ಹುಡುಗ ಈತ.ಅಣ್ಣನೊಡನೆ ಜಗಳವಾಡುತ್ತಾ ,ದುಡಿದು ಬಂದ ಅಪ್ಪ ಅಜ್ಜಿಯ ಬಳಿ ಇವನ ಚೇಷ್ಟೆ ಕೇಳಿ ಕೈಗೆ ಸಿಕ್ಕಿದ್ದರಲ್ಲಿ ಬಾರಿಸಿ ಆಮೇಲೆ ಅವರೇ ಉಪಚರಿಸುವ ಹಲವಾರು ಸಂದರ್ಭ ನೋಡುತ್ತಾ ,೧೦ ನೇ ತರಗತಿಯವರೆಗೂ ನೆಡೆದು ಕೊಂಡೆಹೋಗಿ ಶಿಕ್ಷಣ ಕಲಿಯುತ್ತ , ಅಪ್ಪ ಬೇರೆ ಕಡೆ ಹೋದಾಗ ಪಕ್ಕದ ಮನೆಗೆ ಹೋಗಿ ಟಿವಿ ನೋಡುತ್ತಾ ಇದ್ದಾಗ ಅವತ್ತೇ ಇವನ ಗ್ರಹಚಾರಕ್ಕೆ ಅವರು ಬೇಗ ಬಂದು ಓದುವುದು ಬಿಟ್ಟು ಅವರಿವರ ಮನೆಗೆ ಹೋಗುತ್ತಿಯ ಅಂತ ಮತ್ತೆ ಹೊಡೆದಾಗ,ಅಮ್ಮ ತನ್ನ ಬಳಿ ಇದ್ದ ಪುಡಿಗಾಸಿನಲ್ಲಿ ಊರಿನಲ್ಲಿದ್ದ ಒಂದೇ ಒಂದು ಅಂಗಡಿಯಿಂದ ಅಪ್ಪನಿಗೆ ತಿಳಿಯದ ಹಾಗೆ ತಿಂಡಿ ತಂದು ಕೊಟ್ಟಾಗ ಮತ್ತದೇ ಗ್ರಹಚಾರ ಇವನನ್ನು ವಕ್ಕರಿಸಿ ಅಪ್ಪನಿಗೆ ಅದು ತಿಳಿದು ಅಮ್ಮನನ್ನು ಸೇರಿಸಿ ಮತ್ತೆ ಹೊಡೆದಾಗ, ಹೀಗೆ ಹೊಡೆತ ಅನ್ನೋದು ಅವನ ಬದುಕಿನ ಒಂದು ಭಾಗವಾಗಿಬಿಟ್ಟಿತ್ತು.ಅಲ್ಲಿ ಅವನಿಗೆ ಸ್ವಂತ ನಿಲುವು ಅನ್ನೋ ಪದದ ಅರ್ಥವೇ ಗೊತ್ತಿರಲಿಲ್ಲ.ಆಟಕ್ಕೆ ಹೋಗಬೇಕಾದರೂ ಅಪ್ಪನ ಅಪ್ಪಣೆ ಆಗಬೇಕು, ಅದು ಇಷ್ಟು ಹೊತ್ತಿಂದ ಇಷ್ಟು ಹೊತ್ತಿನ ತನಕ ಅಂತ ಮಾತ್ರ.ಹೆಚ್ಚಾದಲ್ಲಿ ಕಾರಣ ಕೇಳದೆ ಮತ್ತದೇ ಬದುಕಿನ ಹೊಡೆತ.ಎಲ್ಲ ಒಂದು ರೀತಿಯ ಟೈಮ್ ಟೇಬಲ್ ಇದ್ದ ಹಾಗೆ , ಬೆಳಿಗ್ಗೆ ೬ ಕ್ಕೆ ಏಳಬೇಕು ನಂತರ ಹಲ್ಲುಜ್ಜಿ ಕಾಫಿ ಆಮೇಲೆ ಒಳಗೆಲ್ಲ ಒರೆಸು ನಂತರ ಬೇಸಿಗೆಯಾಗಿದ್ದರೆ ಗಿಡಗಳಿಗೆಲ್ಲ ನೀರು ಹಾಕಬೇಕು ಆಮೇಲೆ ಸ್ನಾನ ಪೂಜೆ ತಿಂಡಿ ಮಾಡಿ ೫ ಕಿ ಮಿ ದೂರದ ಶಾಲೆಗೆ ಓಡು , ಇದಿಷ್ಟು ಬೆಳಗಿನದ್ದಾದರೆ ಸಂಜೆ ಬಂದ ತಕ್ಷಣ ಕೈ ಕಾಲು ತೊಳೆದು ಬಾಯಿ ಪಾಠ ಮಾಡಿ ಆಮೇಲೆ ಸ್ವಲ್ಪ ಓದು , ಊಟ, ಮಲಗು ಇಷ್ಟೇ. ರಾತ್ರಿ ಇರುವ ಕಪ್ಪು -ಬಿಳುಪಿನ ಟಿವಿಯಲ್ಲಿ ವಾರ್ತೆ , ಆಮೇಲೆ ಬರುವ ಎರೆಡು ಧಾರವಾಹಿ ಅಷ್ಟೇ , ೮ ಕ್ಕೆ ಅದು ಸ್ತಬ್ಧ.ಆಟ ಅನ್ನೋದು ಕೇವಲ ಭಾನುವಾರಕ್ಕೆ ಮಾತ್ರ ಸೀಮಿತ ಅಂದು ಸಂಜೆ ೫ ರಿಂದ ೬.೩೦ ರವರೆಗೆ. ಭಾನುವಾರ ೪ ಕ್ಕೆ ಬರುವ ೧೦ -೧೫ ವರ್ಷ ಹಳೆಯದ ಸಿನಿಮಾವೇ ಇವನಿಗೆ ಅತಿ ದೊಡ್ಡ ಮನೋರಂಜನೆ.ಇನ್ನು ಚಿತ್ರಮಂದಿರ ಹಾಗಿರುತ್ತದೆ , ಹೀಗಿರುತ್ತದೆ ಅಂತ ಕೇಳಿದ್ದು ಬಿಟ್ಟರೆ ನೋಡುವ ಭಾಗ್ಯ ಬಂದಿರಲಿಲ್ಲ.

ಒಂಥರಾ ಬಡತನ ಅನ್ನೋದು ಇತ್ತಾದರೂ ಯಾವತ್ತು ಇವನಿಗೆ ಮಾತ್ರ ಹಾಗೆ ಅನಿಸಿದ್ದಿಲ್ಲ.ಆ ಬಡತನವನ್ನೇ ಬಣ್ಣದ ಲೋಕ ಅಂತ ತಿಳಿದು ಬೆಳಿದಿದ್ದ ಹುಡುಗ ಈತ.ಬೇರೆಲ್ಲರಿಗಿಂತ ಸ್ವಲ್ಪ ಭಿನ್ನ ಆಲೋಚನೆ ಇವನದ್ದು.ಕೆಲವೊಮ್ಮೆ ಅಪ್ಪನ ಮೇಲೆ ಕೋಪ ಬಂದರೂ ಹೇಳಿಕೊಳ್ಳಕ್ಕೆ ಯಾರು ಇಲ್ಲ.ಅಣ್ಣನದ್ದು ಅದೇ ಪರಿಸ್ಥಿತಿ,ಇನ್ನು ಅಮ್ಮನ ಹತ್ತಿರ ಅಪ್ಪನ ಬಗ್ಗೆ ದೂರಿದರೆ ಅವಳ ದೃಷ್ಟಿಯಲ್ಲಿ ಅದಕ್ಕಿಂತ ದೊಡ್ಡ ಅಪರಾಧವಿಲ್ಲ ಅನ್ನೋ ಹಾಗಾಗಿಬಿಡುತ್ತೆ.ಹಾಗೆಂದು ಅಪ್ಪ ಕೆಟ್ಟವರಲ್ಲ , ಆ ಬಡತನ ಅನ್ನೋದು ಮಕ್ಕಳ ಮೇಲೆ ಬೀಳದಿರಲಿ, ಬೇಕು ಅನ್ನುವ ಆಕರ್ಷಣೆ ಹಠವಾಗದಿರಲಿ ಅನ್ನೋ ಅನಿಸಿಕೆ ಇರಬಹುದು ಅವರದ್ದು.ಕೆಲವೊಮ್ಮೆ ಸರಿ ಎನಿಸಿದರೂ ಆ ವಯಸ್ಸಿಗೆ ಅದು ತಪ್ಪಾಗೆ ಕಾಣುತಿತ್ತು.ಅಪ್ಪನೆದುರಿಗೆ ಇವ ಮಾತಾಡುವುದೇ ಅಪರೂಪ.ಮಾತಾಡುತಿದ್ದರು ಅವರೇ ಏನಾದರು ಹೇಳಬೇಕು ,ಇವನಿಂದ ಹು , ಹುಹು ಅನ್ನೋ ಎರಡೇ ಪದಗಳು ಹೊರಬರುತಿದ್ದವು ಅಷ್ಟೇ.ಇನ್ನು ಮೆಟ್ರಿಕ್ ಮುಗಿಸಿ ಕಾಲೇಜು ಅಂತ ಸೇರಿದ ಮೇಲೆ ಇವನಿಗೆ ಹೊರ ಜಗತ್ತಿನ ಪರಿಚಯ ಸ್ವಲ್ಪ ಮಟ್ಟಿಗೆ ಆಗಿದ್ದು.ಆಂಗ್ಲ ಭಾಷೆ ಬೇರೆ , ಅದು ಇವನಿಗೆ ವಿಷವನ್ನು ಬಂಗಾರದ ಲೋಟದಲ್ಲಿ ಕೊಟ್ಟ ಹಾಗಾಗಿತ್ತು. ಕಲಿಯಲೇಬೇಕು,ಅಪ್ಪ ಸೇರಿಸುವ ಮೊದಲೇ ಹೇಳಿದ್ದರು ನೋಡು ನನ್ನ ಹತ್ತಿರ ಜಾಸ್ತಿ ಓದಿಸೋಕೆ ಆಗೋಲ್ಲ ಹೇಗೆ ಸಾಲನೋ ಸೋಲನೋ ಮಾಡಿ ಈ ತಾಂತ್ರಿಕ ಶಿಕ್ಷಣಕ್ಕೆ ಸೇರಿಸುತಿದ್ದೇನೆ,ನಿನ್ನ ಕಾಲ ಮೇಲೆ ನೀನು ನಿಂತ ಮೇಲೆ ಮುಂದೆ ಓದುವುದಾದರೆ ಓದು.ಅಲ್ಲಿಗೆ ಇವನಿಗೆ ಗೊತ್ತಾಗಿ ಹೋಗಿತ್ತು ಇವು ನನ್ನ ವಿದ್ಯಾರ್ಥಿ ಜೀವನದ ಕೊನೆ ೩ ವರ್ಷಗಳೆಂದು.ಹಾಗಂತ ಶೋಕಿಗೆ ಅಲ್ಲಿ ಅವಕಾಶವಿರಲಿಲ್ಲ.ಅಪ್ಪ ಸರಿಯಾಗಿ ಅಂದಿನ ಬಸ್ ಚಾರ್ಜ್ ಮಾಡ್ತಾ ಕೊಡುತಿದ್ದರು.ಇಸ್ತ್ರಿ ಇಲ್ಲದ ಕಳೆದ ಗೌರಿ ಹಬ್ಬಕ್ಕೆ ಹೊಲಿಸಿದ್ದ ೨ ಅಂಗಿ,ಸ್ವಲ್ಪ ಗಿಡ್ಡ ಇರುವ ೨ ಪ್ಯಾಂಟ್. ಕಾಲೇಜು ಅಂದ ಮೇಲೆ ಕೇಳಬೇಕೆ.ಇವ ಬೈಕ್ ಅಲ್ಲಿ ಬರುವವರ ಮೊದಲು ಕಂಡದ್ದು ಅಲ್ಲೇ, ಅವರನ್ನು ನೋಡಿದ ತಕ್ಷಣ ಏನೋ ಒಂಥರಾ ತಡಬಡಿಕೆ ಮನಕೆ.ಅದೆಷ್ಟು ಜನ ನಕ್ಕರೋ ಇವನ ವೇಷ ನೋಡಿ ,ಇವನಿಗೆ ಅದರ ಪರಿವಿಲ್ಲ ,ಇದ್ದರೂ ಪ್ರಯೋಜನವಿಲ್ಲ.

ಇನ್ನೇನು ಮೊದಲ ವರ್ಷ ಮುಗಿಯಿತು ಅನ್ನೋವಷ್ಟರಲ್ಲಿ ಬಂದೆರಗಿತ್ತು ಅಣ್ಣನ ಹಠಾತ್ ಸಾವು. ಈಗಂತೂ ಅಪ್ಪ ಅತ್ತ ದ್ರವವು ಅಲ್ಲದ ಇತ್ತ ಘನವು ಅಲ್ಲದ ಕಾಸಿದ ಕಬ್ಬಿಣದ ಹಾಗೆ ಆಗಿ ಹೋಗಿದ್ದರು.ಅಮ್ಮ ನನ್ನಂತೂ ಕೇಳೋದೇ ಬೇಡ.ಎಲ್ಲ ಮುಗಿದು ಒಂದು ಹಂತಕ್ಕೆ ಬಂತು ಅನ್ನೋವಷ್ಟರಲ್ಲಿ ಇವನ ಕಾಲೇಜ್ ಮತ್ತೆ ಶುರುವಾಗಿತ್ತು. ಆದರೆ ಈಗ ಪರಿಸ್ಥಿತಿ ಸ್ವಲ್ಪ ಬದಲಾಗಿತ್ತು.ಅಪ್ಪ ಮೊದಲಿನ ಸಿಟ್ಟು ತೋರುತ್ತಿರಲಿಲ್ಲ,ಹಾಗೆ ಆ ಶಿಸ್ತು ಕೂಡ.ಎಲ್ಲಿ ಇವ ಕೂಡ ನಮ್ಮಿಂದ ದುರವಾಗುತ್ತಾನೋ ಅನ್ನೋ ಭಯದಿಂದಲೋ ಅಥವಾ ನನ್ನ ಈ ಶಿಸ್ತೆ ಅವನ ಸಾವಿಗೆ ಕಾರಣವಾಗಿರಬಹುದೆಂಬ ಶಂಕೆ ಇನ್ದಲೋ. ಅದೇನೇ ಇರಲಿ ಇವನಿಗೆ ಮಾತ್ರ ಅವರ ಮನಸಿನ ಸಂಪೂರ್ಣ ಚಿತ್ರಣ ದೊರಕಿತ್ತು ಹಾಗೆಯೇ ಅವರ ಈ ಸ್ವಲ್ಪ ತುಸು ಜಾಸ್ತಿ ಕಾಳಜಿಯನ್ನು ನಾನೆಲ್ಲಿ ದುರುಪಯೋಗ ಮಾಡಿಕೊಳ್ಳುತ್ತೇನೆ ಅನ್ನೋ ಭಯ ಕೂಡ.

ಕಾಲ ಚಕ್ರ ಗತಿಸಿದ ಹಾಗೆ ಇವನ ತಾಂತ್ರಿಕ ಶಿಕ್ಷಣ ಕೂಡ ಮುಗಿಯಿತು.ಮತ್ತೊಂದು ಸಮಸ್ಯೆ ಶುರುವಾಗಿದ್ದೆ ಈಗ,ಅದೇ ಕೆಲಸ.ಎಲ್ಲೇ ಏನಾದರು ಸಣ್ಣ ಕೆಲಸ ಹುಡುಕಿಕೋ ಅಂತ ಅಪ್ಪ ಹೇಳಿದರೆ , ಆಗೋದೇ ಇಲ್ಲ ನಾನು ಪಟ್ಟಣಕ್ಕೆ ಹೋಗಿಯೇ ಸಿದ್ದ ಅಂತ ಇವನು.ಅಲ್ಲಿ ಇರುವುದೆಲ್ಲಿ ,ಹೊಸ ಜಾಗ , ಹೊಸ ಜನ ಅನ್ನೋ ಭಯ ಅವ್ರಿಗೆ.ಅಕ್ಕ ಇದ್ದಳಲ್ಲ ಅವಳ ಮನೇಲಿ ಇರುತ್ತೇನೆ ಅನ್ನೋ ಉತ್ತರ (ಅತ್ತೆ ಮಗಳು ಅಕ್ಕ ಅಂತ ಕರೆದು ಆಭ್ಯಾಸ ಇವನಿಗೆ).ಎಷ್ಟಾದ್ರೂ ಸಂಬಂಧಿಕರ ಮನೆ ಬೇಡ ಅಂತಿದ್ದ ಅಪ್ಪ ಕೊನೆಗೆ ಇವನ ಒತ್ತಾಯಕ್ಕೆ ಮಣಿದು ಅವಳಿಗೆ ಫೋನ್ ಹಾಯಿಸಿ ಹೀಗೆ ಹೀಗೆ ಕೆಲಸ ಸಿಕ್ಕಿ ಒಂದು ೩-೪ ತಿಂಗಳಿಗೆ ಬೇರೆ ಹೋಗುತ್ತಾನೆ ಅಂತ ಹೇಳಿದ್ದು ಆಯಿತು ಆ ಕಡೆ ಇಂದ ಓಕೆ ಅಂದಿದ್ದು ಆಯಿತು.ಬಾವಿಯ ಕಪ್ಪೆ ಸಮುದ್ರಕ್ಕೆ ಹೋದ ಹಾಗೆ ಆಗಿತ್ತು ಇವನ ಕತೆ.ಅದೃಷ್ಟಕ್ಕೆ ಹೋದ ೨ ನೇ ದಿನವೇ ಇವನಿಗೆ ಕೆಲಸ ದೊರೆಯಿತು ,೯೦೦೦ ಸಂಬಳ.ಕೇಳಬೇಕೆ ಮತ್ತೆ , ಜೀವಮಾನದಲ್ಲಿ ನೋಡಿರದ ಮೊತ್ತ (ಒಟ್ಟಿಗೆ).ಆದರೆ ಕೆಲಸಕ್ಕೆ ಸೇರಿ ೨ ತಿಂಗಳಿಗೆ ಇವನಿಗೆ ಕೆಲಸ ಹಳಸಿತು.ತಾನು ಅದನ್ನು ಬಿಟ್ಟು ಬೇರೆ ಕೋರ್ಸ್ ಮಾಡುವುದಾಗಿ ಮನೆಯಲ್ಲಿ ತಿಳಿಸಿದ.ಬೇಡ ಅಥವಾ ಮಾಡು ಅವರು ಏನೇ ಹೇಳಿದರೂ ಅವನು ಅದನ್ನು ಮಾಡುವವನೇ ಇದ್ದ.ಅದಾದ ಮೇಲೆ ತನಗೆ ಒಳ್ಳೆಯ ಕೆಲಸ ದೊರೆಯುವುದು ಅಂತ ಬೇರೆ ಹೇಳಿದ.ವಿಧಿ ಇಲ್ಲದೆ ಹು ಎಂದರು ಅಪ್ಪ.ಒಂದೆರಡು ಬಾರಿ ಆ ಹಬ್ಬ ಈ ಹಬ್ಬ ಅಂತ ಮನೆಗೆ ಬಂದ , ಬಂದಾಗಲೆಲ್ಲಾ ಅಷ್ಟು ಇಷ್ಟು ಹಣ ಕೊಟ್ಟು ಕಳಿಸುತಿದ್ದರು ಅಪ್ಪ.

ಆದರೆ ಇವ ಎಣಿಸಿದ್ದು ಒಂದಾದರೆ ಆ ವಿಧಿಯೇ ಬೇರೆ ರೀತಿ ಎಣೆಸಿತ್ತು.ಕೋರ್ಸ್ ಮುಗಿದು ೨ ತಿಂಗಳಾದರೂ ಕೆಲಸವಿಲ್ಲ.ಎಷ್ಟು ದಿನ ಅಂತ ಬೇರೆಯವರ ಮನೆಯಲ್ಲಿ ಇರೋದು ಸಾಧ್ಯ , ಆದರೆ ಬೇರೆ ಹೋಗೋದಾದ್ರೂ ಹೇಗೆ. ಏನೋ ಇದೆ ಎಂದು ಒಮ್ಮೆ ಬಂದು ಹೋಗು ಅಂತ ಮನೆಯಿಂದ ಬುಲಾವ್ ಬೇರೆ ಬಂತು.ಅದು ಏನು ಅಂತ ಇವನಿಗೆ ಚೆನ್ನಾಗಿ ಗೊತ್ತಿತ್ತು. ಅವಾಗಲೇ ಏನು ಹೇಳದಿದ್ದರೂ ಅಪ್ಪನ ಮೌನವೇ ಇವನಿಗೆ ಮುಂಚಿನ ಹುಣಸೆ ಬರಲಿನ ಏಟಿಗಿಂತ ಬಿರುಸಾಗಿತ್ತು. ಇನ್ನು ಅಮ್ಮ ಅವರೇನು ಹೇಳಿಯಾರು ,ಹೊರಗೆ ನಕ್ಕು ಒಳಗೆ ಅಳುತಿದ್ದ ಜೀವ ಅದು.ಹೊರಡುವವರೆಗೂ ಸುಮ್ಮನಿದ್ದು ಹೊರಟು ನಿಂತಾಗ ಕೈ ಅಲ್ಲಿ ದುಡ್ಡಿಟ್ಟು ಅಪ್ಪ ಹೇಳಿದ ಮೇಲಿನ ಮಾತುಗಳು ಅವನ ಕಿವಿಯಲ್ಲಿ ಇನ್ನು ಹಾಗೆ ಪ್ರತಿದ್ವನಿಸುತಿತ್ತು. ಹಾಗೆ ಸೂರ್ಯ ತನ್ನ ಕೊನೆ ಕಿರಣವನ್ನು ಮಾತ್ರ ತುರುತ್ತಾ ಇವನಿಗೆ ದಾರಿ ತೋರಿಸಿದ ಹಾಗೆ ಇತ್ತು.ಮನಸಿನಲ್ಲೇ ಒಂದು ಸಂಕಲ್ಪ ಮಾಡಿ ತಾನು ಬದಲಾಗಬೇಕು ಅನ್ನೋದರ ಸ್ಪಷ್ಟ ಚಿತ್ರಣ ಮೂಡಿಸಿಕೊಂಡ. ಅಲ್ಲಿಂದ ಎದ್ದು ಕೆಳಗಡೆಗೆ ಹೆಜ್ಜೆ ಹಾಕತೊಡಗಿದ, ಹಾಗೆಯೇ ಆ ಕೊನೆ ಕಿರಣವು ಕೂಡ ನಿಧಾನವಾಗಿ ಮಾಯವಾಗುತ್ತಾ ಹೋಯಿತು.

ಇಂತಿ

ವಿನಯ

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು