@# ಎಡುವಿದ ತಿರುವಿನ ಎಡವು ಭಾಗ - ೧ $#

ಪಟ್ ,ಪಟ್ ,ಪಳ್, ಆಗತಾನೆ ನಿಂತ ಮಳೆಯಿಂದಾಗಿ ಮರದೆಲೆಯ ತುದಿಯಿಂದ ಒಂದೊಂದೇ ಹನಿಯಾಗಿ ಕೆಳಗೆ ನಿಂತ ನೀರಿನ ಮೇಲೆ ಬೀಳುತಿದ್ದ ಆ ಹನಿಗಳು ಈ ಶಬ್ದವನ್ನು ಉಂಟುಮಾಡಿದ್ದವು.ರಾತ್ರಿ ಇಡೀ ಸುರಿದ ಮಳೆ ಊರ ಜನರಲ್ಲಿ ಚಳಿಯ ಬಿತ್ತಿ ಘಂಟೆ ೬.೦೦ ಆದರೂ ಯಾರು ಹೊರ ಬರದ ಹಾಗೆ ಮಾಡಿತ್ತು.ನಿಮಗೆ ಇಲ್ಲದ ಅವಸರ ನಮಗೇಕೆ ಅಂತಲೋ ಏನೋ ಕೋಳಿಗಳು ಕೂಡ ತುಟಿಕ್ ,ಪಿಟಿಕ್ ಅನ್ನದೆ ಸುಮ್ಮನೆ ಗುರು ಗುರು ಗುಟ್ಟುತ್ತ ತಮ್ಮ ಪಾಡಿಗೆ ತಾವು ಇದ್ದವು.ಮೋಡರಾಜನ ಮುನಿಸಿಗೆ ಸಿಲುಕಿದ್ದ ಸೂರ್ಯದೇವ ಕೂಡ ಮನೆಯಿಂದ ಹೊರಡಲಾಗದೆ ಮಂದ ಬೆಳಕನ್ನು ಮಾತ್ರ ಹರಡಲು ತಯಾರಿ ನಡೆಸುತಿದ್ದ. ಇವೆಲ್ಲದರ ನಡುವೆ ಒಂದು ಜೀವ ಮಾತ್ರ ತನಗೂ ಇಲ್ಲಿ ನಡೆಯುತ್ತಿರುವುದಕ್ಕು ಸಂಬಂಧವೇ ಇಲ್ಲವೇನೋ ಎನ್ನುವ ಹಾಗೆ ಭಾರವಾದ ಹೆಜ್ಜೆಗಳನ್ನು ಹಾಕುತ್ತಿತ್ತು.ಮೈ ಮೇಲೆ ಹೊದಿದ್ದ ಕಂಬಳಿ ಹೊರಗಿನ ಚಳಿಯನ್ನು ಕಡಿಮೆ ಮಾಡಿತ್ತಾದರೂ , ಒಳಗಡೆಯ ಕುದಿತದ ಕಾವು ಇದು ಬೇಕಿತ್ತೆ ಅನ್ನೋ ಹಾಗೆ ಹಂಗಿಸುವಂತ್ತಿತ್ತು.ನಿಂತ ನೀರಾಗಬಾರದು ಅನ್ನೋ ತಿಳಿದವರ ಮಾತಿಂದ ಪ್ರೇರೆಪಿತವಾಗಿಯೋ ಅಥವಾ ತಾನೇ ಹೇಳುವಂತ ಬದುಕು ಒಂದು ಓಟ ಅನ್ನೋ ಮಾತಿನಿಂದಾಗಿಯೋ ಆ ನಡಿಗೆ ಅನ್ನೋದು ಸಧ್ಯಕ್ಕೆ ನಿಲ್ಲುವಹಾಗೆ ಇರಲಿಲ್ಲ.ಇಷ್ಟೊತ್ತು ಸಾಕು ಈ ಜೀವ ಎಂದು ತುಂಗೆಯ ಮಡಿಲು ಸೇರ ಹೊರಟಿದ್ದ ಜೀವಕ್ಕೆ ,ಕಾಲಿಗೆ ಸಿಕ್ಕಿ ತನ್ನನ್ನು ಮುಕ್ಕರಿಸಿ ಬೀಳುವಂತೆ ಮಾಡಿದ ಗೋಳಿಮರದ ಬೇರು ನೋಡಿದ ಮೇಲೆಯೇ ವಾಸ್ತವದ ಅರಿವಾದದ್ದು.ಹಾಗೆ ನೋಡುತ್ತಾ ತಾನು ಬದುಕು ಎಂಬ ನಡಿಗೆಯಲ್ಲಿ ಎಡವುತ್ತಿರುವುದು ಇದು ಮೊದಲಲ್ಲ ಅಂತ ಅನ್ನಿಸಿತು.ಅದೇನು ಹೊಳೆಯಿತೋ , ಮನಸಿನಲ್ಲಿ ಅದೇನು ನಿರ್ಧರಿಸಿದರೋ ತಿಳಿಯದು ಅಲ್ಲಿಂದ ತಿರುಗಿ ಹಾಗೆ ಮನೆ ಕಡೆ ಬಂದುಬಿಟ್ಟರು ನಾರಾಯಣರಾಯರು.
ಬೆಳಗಾಗೆದ್ದು ಎಲ್ಲಿ ಹೋದರು ಅಂತ ಕಮಲಮ್ಮ ರಾಯರ ಬರುವಿಕೆಗೆ ಕಾಯುತ್ತ ಇದ್ದರು.ಬೆಳಗಿನ ಆ ಮಂಜು ತುಂಬಿದ ದಾರಿಯಿಂದ ಬರುತಿದ್ದ ರಾಯರನ್ನು ನೋಡಿ ಸಾಕ್ಷಾತ್ ಇಂದ್ರನೇ ಬರುವಹಾಗೆ ಕಾಣಿಸಿತು ಅವರಿಗೆ. ಮದುವೆ ಅಂತ ಆದಮೇಲೆ ಗಂಡನೇ ಅಲ್ಲವೇ ಇಂದ್ರ ಚಂದ್ರ ಎಲ್ಲ. ಎದುರಿಗೆ ಬಂದ ರಾಯರ ಕಂಬಳಿ ಇಸ್ದುಕೊಂಡು ಜಗಳಲಿಯ ಮೇಲಿಟ್ಟರು ಕಮಲಮ್ಮ.ಕಾಲು ತೊಳೆಯಲು ನೀರು ಕೊಡಲು ಬಾಗಿದ ಕಮಲಮ್ಮನಿಗೆ ಕಂಡಿದ್ದು ರಾಯರ ಮಂಡಿಯಿಂದ ಬಳ ಬಳ ಅಂತ ಇಳಿಯುತಿದ್ದ ರಕ್ತದ ಹನಿಗಳು.ಇನ್ರಿ ಇದು ಎಲ್ಲಿ ಬಿದ್ರಿ ಅಂದರು ಕಮಲಮ್ಮ.ಅಲ್ಲಿಯವರೆಗೂ ಊರ ಜಾತ್ರೆಯಲಿ ಬರೋ ಅಮ್ಮನವರ ಹಾಗೆ ಮಾಡಿದ್ದಲೆನ್ನವನ್ನು ನೋಡಿಯು ನೋಡದಂತೆ ತನ್ನದೇ ಲೋಕದಲ್ಲಿದ್ದ ರಾಯರ ಕಮಲಮ್ಮನ ಮಾತು ಕೇಳಿ ಒಂದು ಕ್ಷಣ ಏನು ಹೇಳಲಾಗದೆ ಸ್ವಲ್ಪ ಸುಧಾರಿಸಿ ಕೊಂಡು ಏನಿಲ್ಲ ಕಣೆ ತೋಟದ ಬದಿಗೆ ಹೋಗಿದ್ದೆ ಕಪ್ ( ಸಾಲುಗಳನ್ನು ಬೇರ್ಪಡಿಸಲು ಮಾಡಿರುವ ಸ್ವಲ್ಪ ಆಳದ ಚಾನೆಲ್) ದಾಟೋವಾಗ ಜಾರಿ ಬಿದ್ದೆ ಅಂದ್ರು.ಕಾಲು ತೊಳೆದು ಕೊಂಡು ಬನ್ನಿ ಅರಿಸಿನ ಹಚ್ಚುತ್ತಿನಿ ಅಂತ ಇವರ ಉತ್ತರಕ್ಕೂ ಕಾಯದೆ ಒಳಗೆ ಹೋದರು ಕಮಲಮ್ಮ. ನನಗೇನಾಗಿದೆ ಅಂತ ಯೋಚಿಸುತ್ತಾ ಅಲ್ಲೇ ಜಗಲಿಯ ಮೇಲೆ ಕೂರ ಹೊರಟವರನ್ನು ಏನ್ರಿ ಬಂದ್ರ ಅನ್ನೋ ಕಮಲಮ್ಮನ ಮಾತು ಒಳಹೊಗುವಂತೆ ಮಾಡಿತು.
ರಾಯರದ್ದು ಮಲೆನಾಡ ಮಡಿಲಿನ ತೀರ್ಥಹಳ್ಳಿ ತಾಲೂಕಿನ ಬೆಣ್ಣೆಬೈಲು ಅನ್ನೋ ಹಳ್ಳಿ.ಮಳೆಗಾಲದಲ್ಲಿ ಉಂಟಾಗುವ ಮಂಜು ಅಲ್ಲಿನ ಮರಗಿಡಗಳನೆಲ್ಲ ಆವರಿಸಿ ಅವು ಬೆಣ್ಣೆಯ ಮುದ್ದೆಗಳಂತೆ ಗೋಚರಿಸುವುದರಿಂದ ಆ ಊರಿಗೆ ಬೆಣ್ಣೆಬೈಲು ಅಂತ ಹೆಸರು ಬಂದಿತ್ತು.ಇನ್ನು ಪೌರಾಣಿಕವಾಗಿ ಹೋದರೆ ಅದಕ್ಕೆ ಬೇರೆ ಕಥೆ ಇತ್ತು.ಬೆಣ್ಣೆ ಕಳ್ಳ ಕೃಷ್ಣನಿಂದ ತಪ್ಪಿಸಿಕೊಳ್ಳಲು ಆಗಿನ ಜನರು ತಾವು ಸಂಗ್ರಹಿಸಿದ ಬೆಣ್ಣೆಗಳನ್ನೂ ಇಲ್ಲಿ ತಂದು ಬಚ್ಚಿಡುತ್ತಿದ್ದರೆಂದು ಕಾಲಕ್ರಮೇಣ ಆ ಬೆಣ್ಣೆ ರಾಶಿಗಳೇ ಈಗಿರುವ ಬೆಟ್ಟಗಳೆಂದು ಜನರ ನಂಬಿಕೆಯಾಗಿತ್ತು. ತಂದೆ ಶ್ರೀನಿವಾಸರಾಯರು , ಬಹಳ ಶಿಸ್ತಿನ ಮನುಷ್ಯ.ಅದೇ ಕಾರಣಕ್ಕೆ ಊರಿನಲ್ಲಿ ಏನೇ ತ್ಯಾಕೆ ತಕರಾರು ಆದರೂ ಇವರೇ ಹೋಗಿ ನ್ಯಾಯ ತೀರ್ಮಾನ ಮಾಡುತಿದ್ದಿದ್ದು.ಅವ್ರಿಗೆ ೩ ಜನ ಮಕ್ಕಳು ಮೊದನೆಯವ ಹರಿರಾಯ,ಎರಡನೆಯವಳು ಹರಿಣಾಕ್ಷಿ ಮತ್ತು ಕೊನೆಯವನು ನಾರಾಯಣರಾಯ. ಮೊದನೆಯವನಿಗೆ ೯ ವರ್ಷವಿರುವಾಗಲೇ ಬಂದ ಭಾರೀ ಪ್ರವಾಹಕ್ಕೆ ಸಿಕ್ಕಿ ತುಂಗೆಯ ಓಡಲು ಸೇರಿಬಿಟ್ಟಿದ್ದ.ಆಗಿನ್ನೂ ನಾರಾಯಣರಾಯರಿಗೆ ೩ ವರ್ಷ ಅಷ್ಟೇ.ಜಮೀನಿಗೇನು ಕೊರತೆ ಇರಲಿಲ್ಲ. ೧ ಎಕರೆ ಕಂಪದ ಗದ್ದೆ , ೨ ಎಕರೆ ಮಕ್ಕಿ , ೫ ಎಕರೆ ಹಳೆ ಮರದ ತೋಟ , ದರ್ಕಸ್ ಅಲ್ಲಿ ಹೊಸದಾಗಿ ಹಾಕಿದ್ದ ೨ ಎಕರೆ ಸಸಿತೋಟ ಇತ್ತು. ಇನ್ನು ಮನೆ ಸುತ್ತ ಮುತ್ತ ಒಂದು ೨೦ ಗುಂಟೆ ಜಾಗ ತರಕಾರಿ , ಹೂವು-ಹಣ್ಣು ಬೆಳೆಯೋಕೆ ಮೀಸಲಾಗಿತ್ತು.
ನಾರಾಯಣರಾಯರಿಗೆ ೨೦ ಆಗೋವಷ್ಟರಲ್ಲೇ ಶ್ರೀನಿವಾಸರಾಯರು ಅವರನ್ನ ಅಗಲಿ ಆಗಿತ್ತು.ಇವರ ಅದೃಷ್ಟಕ್ಕೆ ತೀರಿಕೊಳ್ಳೋ ೬ ತಿಂಗಳ ಹಿಂದೆ ಅಷ್ಟೇ ನಗರದ ಸುಬ್ಬಾರಾಯರ ಮಗನೊಂದಿಗೆ ಹರಿಣಾಕ್ಷಿಯಾ ವಿವಾಹ ನಡೆಸಿದ್ದರು.ಈಗ ಮನೆ ಜವಾಬ್ದಾರಿಯಲ್ಲ ಇವರ ಮೇಲೆ ಬಿತ್ತು. ಅದು ಇದು ಅಂತ ಎಲ್ಲವನ್ನು ತಿಳಿದುಕೊಳ್ಳೋವಷ್ಟರಲ್ಲಿ ೧ ವರುಷ ಕಳದೆ ಹೋಗಿತ್ತು.ಇನ್ನೆಷ್ಟು ದಿನ ಒಬ್ಬನೇ ಇರೋದು ಅಂತ ಹೇಳಿ ಅಕ್ಕನೆ ಮುಂದೆ ನಿಂತು ಚಿಕ್ಕಮಗಳೂರಿನ ಬಾಳೆಹೊಳೆಯ ಗೋವಿಂದಭಟ್ಟರ ಹಿರಿಯ ಮಗಳಾದ ಕಮಲೇಯೊಂದಿಗೆ ಇವರ ವಿವಾಹ ನಡೆಸಿಯೇ ಬಿಟ್ಟಳು. ವಯಸ್ಸು ಹದಿನೇಳು ಇನ್ನೇನು ಅರಳಲೋ ಬೇಡವೋ ಅಂತ ಹಾತೊರೆಯುತ್ತಿರುವ ಮೊಗ್ಗಿನತ್ತಿದ್ದಳು ಕಮಲೇ. ನೋಡಿದರೆ ಹಾಗೆ ನೋಡುತ್ತಾ ಇರಬೇಕು ಅನ್ನೋವಂತ ಅಂದ ಅವಳದು. ಅವಳ ಮೇಲಿನ ವ್ಯಾಮೋಹ ಎಷ್ಟು ಬೆಳದಿತ್ತೆಂದರೆ ಮದುವೆಯಾದ ದಿನ ಪ್ರಸ್ತ ಇಂದು ಬೇಡ ನಾಳೆ ಇಟ್ಟುಕೊಳ್ಳಿ ಅಂದ ಪುರೋಹಿತನಿಗೆ 'ಮುಂಡೆ ಮಗ, ನನ್ನ ಹೆಂಡತಿಯ ಜೊತೆ ನಾ ಮಲಗಲು ಈ ಬೇರ್ವೆಸಿನೇನು ಕೇಳೋದು' ಅಂತ ಎಲ್ಲರ ಎದುರಿಗಲ್ಲದಿದ್ದರು ಅಕ್ಕನೊಂದಿಗೆ ಹೇಳಿದ್ದರು.ಆಮೇಲೆ ಮದುವೆಯಾದ ಹೊಸತು ಬೇರೆ ಹೆಂಡತಿಯೊಂದಿಗೆ ಊರೆಲ್ಲ ಸುತ್ತಿ ,ಆ ನೆಂಟರು , ಅವಳ ಕಡೆಯವರು ಅಂತ ತಿರುಗಾಟ ಮುಗಿಸೋ ಹೊತ್ತಿಗೆ ೬ ತಿಂಗಳುಗಳೇ ಕಳೆದು ಹೋಗಿತ್ತು.ಈ ಆರುತಿಂಗಳ ಅಂತರದಲ್ಲಿ ಅವರ ವಂಶದ ಕುಡಿಯು ಕೂಡ ಕಮಲಮ್ಮನವರ ಹೊಟ್ಟೆಯಲ್ಲಿ ಚಿಗುರಿಯಾಗಿತ್ತು. ಸುಖಗಳ ಮೇಲೆ ಸುಖ ಬರುತ್ತಿದೆಯಂದರೆ ಮುಂದೆ ದೊಡ್ಡ ಆಪತ್ತೆ ಬರಲಿದೆ ಅನ್ನೋ ಮಾತು ರಾಯರ ಸ್ಪ್ರುತಿಪಟಲದಿಂದ ಮರೆಯಾದಂತಿತ್ತು.ಅದನ್ನ ನೆನಪಿಸಲೋ ಏನೋ ಎಂಬಂತೆ ಬಂದಿತ್ತು ಪಟ್ಟಣದಿಂದ ಬಂದ ಆ ಕಾಗದ.

ಮುಂದುವರೆಯುವುದು .........

ಇಂತಿ
ವಿನಯ

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು