ಕನ್ನಡ ನಾಡಿನ ಹಕ್ಕಿಗಳಿಗೆ ಪ್ರಮಾಣೀಕೃತ ಕನ್ನಡ ಹೆಸರುಗಳು

ವಿಶ್ವದಲ್ಲಿ ವೈಜ್ಞಾನಿಕ ಬೆಳವಣಿಗೆ ಮುನ್ನಡೆದಂತೆ ಆಯಾ ಕ್ಷೇತ್ರದಲ್ಲಿ ಎಲ್ಲರಿಗೂ ಅರ್ಥವಾಗಬಲ್ಲ ಪಾರಿಭಾಷಿಕ ಶಬ್ದಗಳ ಉಪಯುಕ್ತತೆ, ಅವಶ್ಯಕತೆ ಮತ್ತು ಅನಿವಾರ್ಯತೆಯನ್ನು ನಾವೆಲ್ಲಾ ಇಂದು ಕಾಣುತಿದ್ದೇವೆ. ಅದು ಕೇವಲ ಒಂದು ವೈಜ್ಞಾನಿಕ ಪದವೇ ಇರಬಹುದು ಅಥವಾ ಪ್ರಪಂಚದಾದ್ಯಂತ ಇರುವ ಕೋಟಿಗಟ್ಟಲೆ ಪ್ರಾಣಿ - ಪಕ್ಷಿ - ಗಿಡ - ಮರ - ಬಳ್ಳಿಗಳ ಹೆಸರೇ ಇರಬಹುದು.
ಪಕ್ಷಿ ಪ್ರಪಂಚದ ಬಗ್ಗೆ ಬಂದಾಗ ವಿವಿಧ ಪ್ರಾಂತ್ಯಗಳಲ್ಲಿ, ವಿವಿಧ ಆಡು ಭಾಷೆಗಳಲ್ಲಿ ಒಂದು ಹಕ್ಕಿಯನ್ನು ಬೇರೆ ಬೇರೆ ಹೆಸರುಗಳಿಂದ ಅಥವಾ ಬೇರೆ ಬೇರೆ ಹಕ್ಕಿಗಳನ್ನು ಒಂದೇ ಹೆಸರಿನಿಂದ ಕರೆಯುವುದನ್ನು ನಾವು ಕಂಡಿದ್ದೇವೆ.

ಹೀಗೆ ಆದಾಗ ಅವಗಳ ನಿಜವಾದ ಹೆಸರು ನಶಿಸಿ ಹೋಗುವ ಸಾಧ್ಯತೆಗಳೇ ಹೆಚ್ಚು. ಪ್ರಪಂಚದಾದ್ಯಂತ ನೋಡಿದಾಗ ಆಂಗ್ಲ ಭಾಷೆಯಲ್ಲಿ ಒಂದೇ ಜಾತಿಯ ಹಕ್ಕಿಗಳ ಹೆಸರನ್ನು ಏಕರೂಪವಾಗಿ ಕರೆಯುವುದನ್ನು ನೋಡಬಹುದಾಗಿದೆ.
ಆದರೆ ಕರ್ನಾಟಕದ ವಿಷಯಕ್ಕೆ ಬಂದರೆ ಇದು ಇನ್ನು ಆಗಿಲ್ಲ . ಒಂದೋ ಎಲ್ಲರಿಗೂ ಅದರ ನಿಜವಾದ ಪ್ರಬೇಧ ಗೊತ್ತಿಲ್ಲ , ಅಥವಾ ಕೆಲವನ್ದರದ್ದು ತಿಳಿದಿದ್ದು ಉಳಿದವದ್ದು ತಿಳಿದಿರಲಿಕ್ಕಿಲ್ಲ . ಎಲ್ಲರೂ ಒಂದೇ ಹೆಸರಿನಿಂದ ಕರೆಯಲು ಅದಕ್ಕೊಂದು ಮಾಹಿತಿ ಒದಗಿಸುವ ಪಟ್ಟಿಬೇಕು.

ಅದಕ್ಕೆ ಡಾ. ಎಸ್.ವಿ. ನರಸಿಂಹನ್ ಮತ್ತು ಹರೀಶ್. ಅರ್. ಭಟ್ ಈ ವಿಷಯವಾಗಿ ಅಭ್ಯಾಸ ಮಾಡಿ ಕರ್ನಾಟಕದಲ್ಲಿರುವ ಒಟ್ಟು ೫೧೨ ವಿವಿಧ ಪ್ರಬೇಧದ ಪಕ್ಷಿಗಳ ಪಟ್ಟಿ ತಯಾರಿಸಿ ಅವುಗಳ ವೈಜ್ಞಾನಿಕ , ಆಂಗ್ಲ ಮತ್ತು ಕನ್ನಡದ ಹೆಸರನ್ನು ಅಲ್ಲಿ ಸೂಚಿಸಿದ್ದಾರೆ. ಈ ಪಟ್ಟಿ ತಯಾರಿಸಲು ಅವರು ಕರ್ನಾಟಕ ಸುಪ್ರಸಿದ್ಧ ಪಕ್ಷಿ ತಜ್ಞರು ಮತ್ತು ಭಾಷಾ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದಾರೆ , ಅಲ್ಲದೆ ಡಾ. ಶಿವರಾಮ ಕಾರಂತ್ , ಕುವೆಂಪು , ತೇಜೆಸ್ವಿ , ಡಾ .ಹೆಚ್.ಆರ್. ಕೃಷ್ಣಮೂರ್ತಿ , ಡಾ. ಪ್ರಭಾಕರ್ ಆಚಾರ್ ಮತ್ತು ಗೀತಾ ನಾಯಕ್, ಡಾ . ಎನ್.ಎಸ್ .ಮಧ್ಯಸ್ಥ, ಪ್ರೊ. ಎಸ್.ಬಿ. ಸದಾನಂದ , ಪ್ರಮೋದ್ ಸುಬ್ಬರಾವ್ ಮುಂತಾದವರ ಕೃತಿಗಳಲ್ಲಿ ಉಲ್ಲೇಖಿಸಿರುವ ಪಕ್ಷಿಗಳ ಹೆಸರನ್ನು ಕೂಡ ಗಣನೆಗೆ ತೆಗೆದುಕೊಂಡಿದ್ದಾರೆ.
ಅದು ಅಲ್ಲದೆ ಆಂಗ್ಲದಲ್ಲಿ ಈ ಪಕ್ಷಿಗಳ ಪ್ರಬೇಧದ ವಿಂಗಡಣೆಗೆ ಕೆಲವು ಕ್ರಮಗಳಿವೆ. ಅವನ್ನು ಕೂಡ ಇವರು ಪರಿಗಣನೆಗೆ ತೆಗೆದುಕೊಂಡಿದ್ದಾರೆ. ಹಾಗು ಅವು ಇಂತಿವೆ :

೧) ಒಂದು ಹಕ್ಕಿಯ ಕುಟುಂಬವನ್ನು ತೆಗೆದುಕೊಂಡಲ್ಲಿ ಇಡೀ ಕುಟುಂಬದ ಹಕ್ಕಿಗಳನ್ನು ಒಂದೇ ಸಾಮನ್ಯ ಹೆಸರಿನಿಂದ ಗುರುತಿಸಿ, ನಂತರ ಆ ಕುಟುಂಬದಲ್ಲಿರುವ ವಿವಿಧ ಸದಸ್ಯರನ್ನು ಅವುಗಳ ವರ್ಣವ್ಯತ್ಯಾಸ, ದೇಹರಚನಾ ವ್ಯತ್ಯಾಸ ಹಾಗು ಸ್ವಭಾವದ ವ್ಯತ್ಯಾಸಗಳಿಗನುಗುಣವಾಗಿ ಹೆಸರಿಸಗಾಗುವುದು. ಉದಾ : ಪಿಕಳಾರಗಳ ಕುಟುಂಬದಲ್ಲಿ ಕೆಮ್ಮೀಸೆ ಪಿಕಳಾರ , ಕೆಂಪುಕಿಬ್ಬೊಟ್ಟೆಯ ಪಿಕಳಾರ, ಬಿಳಿ ಮತ್ತು ಹಳದಿ ಹುಬ್ಬಿನ ಪಿಕಳಾರ , ಬೂದು ತಲೆಯ ಪಿಕಳಾರ .. ಹೀಗೆ .

೨) ಒಂದೇ ಕುಟುಂಬದಲ್ಲಿಯೇ ಸ್ಥೂಲವ್ಯತ್ಯಾಸಗಳಿರುವ ವಿವಿಧ ಗುಂಪುಗಳನ್ನು ನಾವು ಕಾಣುತ್ತೇವೆ. ಆ ಸಂದರ್ಭದಲ್ಲಿ ಒಂದೊಂದು ಗುಂಪಿಗೆ ಒಂದು ಹೆಸರನ್ನಿರಿಸಿ ಅಲ್ಲಿಂದ ಮುಂದೆ ೧ ರಂತೆ ಮುಂದುವರೆಯುವುದು.
ಉದಾ : Ardidae ಕುಟುಂಬದಲ್ಲಿ Herons, Egrets and Bitterns ಏನು ಬೇರೆ ಬೇರೆ ಹೆಸರಿನ ಗುಂಪುಗಳಿವೆ. ಇಲ್ಲಿ Herons ಬೇರೆ, Egrets ಬೇರೆ ಮತ್ತು Bitters ಬೇರೆ.

ಕನ್ನಡದಲ್ಲಿ ಈ ಗುಂಪುಗಳನ್ನು ನಾವು ಅನುಕ್ರಮವಾಗಿ ಬಕ , ಬೆಳ್ಳಕ್ಕಿ ಮತ್ತು ಗುಪ್ಪಿಗಳೆಂದು ಕರೆಯಬಹುದು. ಬಕಗಳಲ್ಲಿ ಬೂದು ಬಕ ,ಕೆನ್ನೀಲಿ ಬಕ :ಬೆಳ್ಳಕ್ಕಿಗಳಲ್ಲಿ ,ಮಧ್ಯಮ ಬೆಳ್ಳಕ್ಕಿ , ದೊಡ್ಡ ಬೆಳ್ಳಕ್ಕಿ ;ಗುಪ್ಪಿಗಳಲ್ಲಿ ಕರಿ ಗುಪ್ಪಿ , ಕೆಸರು ಗುಪ್ಪಿ- ಹೀಗೆ .

೩) ಒಂದು ಕುಟುಂಬದ ಒಬ್ಬ ಸದಸ್ಯನಿಗೆ ಒಂದು ನಿರ್ದಿಷ್ಟವಾದ ಹಾಗು ಅದಕ್ಕೆ ತಕ್ಕದಾದ ಒಂದು ಹೆಸರಿದ್ದರೆ ಮತ್ತು ಆ ಹೆಸರು ಮತ್ಯಾವುದೇ ಹಕ್ಕಿಗೂ ಇಲ್ಲದಿದ್ದಲ್ಲಿ, ಅದನ್ನು ಮುಂದುವರೆಸಿಕೊಂಡು ಹೋಗುವುದು . ಉದಾ: ಮೇಲಿನ ಸಂದರ್ಭಗಳಲ್ಲಿ Little Egret = ಬೆಳ್ಳಕ್ಕಿ , Cattle Egret = ಗೋವಕ್ಕಿ- ಹೀಗೆ.

೪) ಒಂದೇ ಕುಟುಂಬದಲ್ಲಿ ಹತ್ತಾರು ಗುಂಪುಗಳಿದ್ದಲ್ಲಿ ಪರಿಸ್ಥಿತಿ ಬಹಳ ಸಂಕಿರ್ಣ, ಕ್ಲಿಷ್ಟ ಆಗುತ್ತದೆ. ಉದಾ : Accipitridae ಕುಟುಂಬದಲ್ಲಿ Kites, Eagles, Hawks, Buzzards, Harriers, Vultures ಅಲ್ಲದೆ Shikra, Baza, Fish-Eagle, Snake-Eagle, Serpent-Eagle, Hawk- Eagle ಮುಂತಾದ ಹೆಸರುಗಳು ನಮ್ಮನ್ನು ಗೊಂದಲಕ್ಕೆ ಈಡು ಮಾಡುತ್ತವೆ. ಈ ಹಕ್ಕಿಗಳಿಗೆ ನಮಗೆ ಕನ್ನಡದಲ್ಲಿ ಹದ್ದು , ಗಿಡುಗ , ಗರುಡ , ಬಿಜ್ಜು ,ಡೇಗೆ , ಸೆಳೆವ, ರಣ ಹದ್ದು ಮುಂತಾದ ಹೆಸರುಗಳು ದೊರಕುತ್ತವೆ.

೫) ಕೆಲವು ಕುಟುಂಬದ ಹಕ್ಕಿಗಳಿಗೆ ಕನ್ನಡದಲ್ಲಿ ಯಾವ ಹೆಸರು ಯಾವು ಇಲ್ಲ . ಉದಾ : Family: Sulidae – Boobies. ಇಂಥಹ ಸಂದರ್ಭಗಳಲ್ಲಿ ಹೊಸ ಹೆಸರನ್ನು ಸೂಚಿಸಬೇಕಾಗುತ್ತದೆ.

ಮುಖ್ಯ ಪ್ರಬೇಧಗಳು ;
೧)ಗುಳುಮುಳುಕ
೨)ಸಾಗರದಕ್ಕಿಗಳು : ಉಪಜಾತಿ - ೨
೩)ಕಡಲಪೋತ
೪)ಕಡಲ ಕಾಗೆಗಳು :ಉಪಜಾತಿ -೨
೫)ಹೆಜ್ಜಾರ್ಲೆಗಳು :ಉಪಜಾತಿ -೨
೬)ಕಡಲ ಬಾತುಗಳು :ಉಪಜಾತಿ -೨
೭)ನೀರುಕಾಗೆಗಳು :ಉಪಜಾತಿ -೩
೮)ಹಾವಕ್ಕಿ
೯)ಕಡಲ ಹದ್ದುಗಳು : ಉಪಜಾತಿ -೨
೧೦)ಬಕ , ಬೆಳ್ಳಕ್ಕಿ , ಗುಪ್ಪಿಗಳು : ಉಪಜಾತಿ -೧೬
೧೧)ಕೊಕ್ಕರೆಗಳು : ಉಪಜಾತಿ -೮
೧೨)ಕೆಂಬರಲುಗಳು :ಉಪಜಾತಿ - ೪
೧೩)ರಾಜಹಂಸ
೧೪)ಬಾತುಕೋಳಿಗಳು :ಉಪಜಾತಿ -೧೮
೧೫)ಹದ್ದು , ಗಿಡುಗ,ಸೆಳೆವ, ರಣ ಹದ್ದು : ಉಪಜಾತಿ -೩೯
೧೬)ಡೇಗೆಗಳು
೧೭)ಚಾಣಗಳು:ಉಪಜಾತಿಗಳು -೧೦
೧೮)ಕವುಜುಗ ,ಬುರ್ಲಿ,ಕೋಳಿ , ನವಿಲುಗಳು : ಉಪಜಾತಿ -೧೩
೧೯)ಗುಡುಗಾಡು ಹಕ್ಕಿಗಳು : ಉಪಜಾತಿ - ೩
೨೦)ಕ್ರೌಂಚಗಳು
೨೧) ಜೌಗು ಕೋಳಿಗಳು , ಹುಂಡು ಕೋಳಿಗಳು , ಜಂಬು ಕೋಳಿಗಳು :ಉಪಜಾತಿ -೧೨
೨೨)ಎರ್ಲಡ್ಡು ಹಕ್ಕಿಗಳು
೨೩)ದೇವನಕ್ಕಿಗಳು :ಉಪಜಾತಿ -೨
೨೪)ಸಿಂಪಿಬಾಕಗಳು
೨೫)ಟಿಟ್ಟಿಭ , ಮರಳುಗೊರವಗಳು : ಉಪಜಾತಿ -೧೦
೨೬)ಗದ್ದೆ ಗೊರವ ,ಕಡಲುಗೊರವ ,ಉಲ್ಲಂಕಿಗಳು: ಉಪಜಾತಿ -೨೮
೨೭)ಕಡಲ ಕೊಕ್ಕರೆಗಳು
೨೮)ರಂಗು ಉಲ್ಲಂಕಿಗಳು
೨೯)ಮೆಟ್ಟು ಗಾಲು ಹಕ್ಕಿಗಳು :ಉಪಜಾತಿ - ೨
೩೦)ಏಡಿಗೊರವಗಳು
೩೧)ಬಂಡೆಗೊರವಗಳು : ಉಪಜಾತಿ - ೨
೩೨)ಚಿಟವಗಳು : ಉಪಜಾತಿ - ೨
೩೩)ಕಡಲ ಗಿಡುಗಗಳು : ಉಪಜಾತಿ - ೨
೩೪)ಕಡಲಕ್ಕಿ , ರೀವಗಳು : ಉಪಜಾತಿ - ೨೧
೩೫)ಜಾಲರಿ -ರೀವಗಳು
೩೬)ಗೌಜಲಕ್ಕಿಗಳು : ಉಪಜಾತಿ - ೩
೩೭)ಪಾರಿವಾಳ , ಕಪೋತಗಳು : ಉಪಜಾತಿ - ೧೩
೩೮)ಗಿಳಿಗಳು : ಉಪಜಾತಿ -೬
೩೯)ಕೋಗಿಲೆಗಳು , ಕೆಂಬುತಗಳು : ಉಪಜಾತಿ - ೧೫
೪೦)ಕಣಜ ಗೂಬೆಗಳು : ಉಪಜಾತಿ -೩
೪೧)ಗೂಬೆಗಳು : ಉಪಜಾತಿ -೧೨
೪೨)ಕಪ್ಪೆ ಬಾಯಿಗಳು
೪೩) ನತ್ತಿಂಗಗಳು : ಉಪಜಾತಿ -೬
೪೪)ಬಾನಾಡಿ ಹಕ್ಕಿಗಳು : ಉಪಜಾತಿ - ೭
೪೫)ಮರ ಬಾನಾಡಿಗಳು
೪೬)ಕಾಕರಣೆ ಹಕ್ಕಿಗಳು
೪೭) ಮಿಂಚುಳ್ಳಿಗಳು : ಉಪಜಾತಿ - ೮
೪೮)ಪತ್ರಂಗಗಳು :ಉಪಜಾತಿ - ೫
೪೯)ನೀಲಕಂಠಗಳು : ಉಪಜಾತಿ -೩
೫೦)ಚಂದ್ರ ಮುಕುಟಗಳು
೫೧)ಮಂಗಟ್ಟೆ ಹಕ್ಕಿಗಳು : ಉಪಜಾತಿ -೪
೫೨)ಕುಟ್ರಹಕ್ಕಿಗಳು : ಉಪಜಾತಿ -೪
೫೩)ಮರಕುಟಿಗಗಳು : ಉಪಜಾತಿ - ೧೩
೫೪)ನವರಂಗಗಳು
೫೫) ನೆಲಗುಬ್ಬಿಗಳು: ಉಪಜಾತಿ -೯
೫೬)ಕವಲುತೊಕೆಗಳು : ಉಪಜಾತಿ - ೧೦
೫೭)ಕಳಿಂಗಗಳು : ಉಪಜಾತಿ -೫
೫೮)ಹೊನ್ನಕ್ಕಿಗಳು:ಉಪಜಾತಿ -೩
೫೯)ಕಾಜಾಣಗಳು: ಉಪಜಾತಿ - ೬
೬೦)ಅಂಬರ ಕಿಚುಕಗಳು:ಉಪಜಾತಿ -೧
೬೧)ಕಬ್ಬಕ್ಕಿ , ಗೊರವಂಕಗಳು :ಉಪಜಾತಿ -೯
೬೨)ಮಟ ಪಕ್ಷಿಗಳು : ಉಪಜಾತಿ -೪
೬೩)ಕೀಚುಗ , ಚಿತ್ರ ಪಕ್ಷಿಗಳು :ಉಪಜಾತಿ -೧೦
೬೪)ಎಲೆ ಹಕ್ಕಿಗಳು :ಉಪಜಾತಿ -೫
೬೫)ಪಿಕಳಾರಗಳು :ಉಪಜಾತಿ -೧೧
೬೬)ಹರಟೆ ಮಲ್ಲಗಳು , ನಗೆ ಮಲ್ಲಗಳು : ಉಪಜಾತಿ -೧೬
೬೭)ನೊಣ ಹಿಡುಕಗಳು : ಉಪಜಾತಿ -೧೩
೬೮)ಬೀಸಣಿಗೆ ನೊಣ ಹಿಡುಕಗಳು : ಉಪಜಾತಿ - ೩
೬೯)ರಾಜ ಹಕ್ಕಿಗಳು :ಉಪಜಾತಿ -೨
೭೦)ಉಲಿಯಕ್ಕಿಗಳು :ಉಪಜಾತಿ -೨೭
೭೧)ಚಟಕ , ಸಿಳ್ಳರ ಹಕ್ಕಿಗಳು : ಉಪಜಾತಿ -೨೧
೭೨)ಚೇಕಡಿ ಹಕ್ಕಿಗಳು :ಉಪಜಾತಿ - ೩
೭೩)ಮರ ಗುಬ್ಬಿಗಳು : ಉಪಜಾತಿ -೨
೭೪) ಪಿಪಿಳಿಕ , ಸಿಪಿಲೆಗಳು : ಉಪಜಾತಿ -೧೫
೭೫)ಬದನಿಕೆಗಳು : ಉಪಜಾತಿ - ೩
೭೬) ಸೂರಕ್ಕಿಗಳು : ಉಪಜಾತಿ - ೬
೭೭) ಬೆಳ್ಗಣ್ಣಗಳು
೭೮) ಗುಬ್ಬಚ್ಚಿಗಳು.

ಕೊನೆಯದಾಗಿ ಲೇಖಕರ (ಡಾ ಎಸ್.ವಿ. ನರಸಿಂಹನ್ ಮತ್ತು ಹರೀಶ್ ಆರ್. ಭಟ್) ಮಾತು : "ರಾಜ್ಯದ ಪಕ್ಷಿ ಪ್ರೇಮಿಗಳು , ಪಕ್ಷಿ ವೀಕ್ಷಕರು ಹಾಗು ವಿಜ್ಞಾನದ ವಿದ್ಯಾರ್ಥಿಗಳು ತೆರೆದ ಹೃದಯದಿಂದ ಈ ಹೆಸರುಗಳನ್ನು ಸ್ವೀಕರಿಸಿ. ಇವೇ ಹೆಸರುಗಳಿಂದ ಹಕ್ಕಿಗಳನ್ನು ಗುರುತಿಸಿ. ತಮ್ಮ ದಿನಬಳಕೆಯಲ್ಲಿ ಮತ್ತು ಲೇಖನಗಳಲ್ಲಿ ಬಳಸಿ ನಾಡಿನಾದ್ಯಂತ ಪ್ರಚುರಪಡಿಸಬೇಕೆಂದು ಕಳಕಳಯಿಂದ ಕೇಳಿಕೊಳ್ಳುತ್ತೇವೆ. ಉತ್ತಮ ಸೂಚನೆ ಸಲಹೆಗಳಿಗೆ ಅವಕಾಶವಿದೆ.

ಇಂತಿ

vinaya

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು