ಗುರುವಾಯನಕೆರೆ (ಒಂದು ಊರಿನ ಆತ್ಮಚರಿತ್ರೆ) ನಾ ಅರಿತಿದ್ದು


                                                                      ಗುರುವಾಯನಕೆರೆ (ಒಂದು ಊರಿನ ಆತ್ಮ ಚರಿತ್ರೆ) ಪುಸ್ತಕ ಓದಲು ಎರಡು ಮುಖ್ಯ ಕಾರಣಗಳಿವೆ. ಒಂದು ಜೋಗಿ ನನ್ನ ಮೆಚ್ಚಿನ ಲೇಖಕರಲ್ಲಿ ಒಬ್ಬರೂ. ಹಾಗೆ ಈ ಪುಸ್ತಕದ ಬಿಡುಗಡೆಯ ಹಿಂದಿನ ದಿನ ರಾತ್ರಿ ಹಾಗೆ ಚಾಟ್ ಮಾಡುವಾಗ, ನೀವು ತೆಗೆದ ನನ್ನ ಚಿತ್ರವನ್ನ ಈ ಬುಕ್ಕಿನ ಹಿಂಪುಟದಲ್ಲಿ  ಬಳಸಿಕೊಂಡಿದ್ದೇನೆ ಅಂತ ಹೇಳಿದ ಅವರ ಮಾತು ನನ್ನನ್ನು ಮತ್ತಷ್ಟು ಪುಳಕಿತಗೊಳಿಸಿತು. ಮತ್ತೊಂದು ಕಾರಣ ಹೊಸದೇನಲ್ಲ, ನನ್ನ ಕಾಲೇಜು ದಿನಗಳಲ್ಲಿ ತೀರ್ಥಹಳ್ಳಿ ಇಂದ ಹೊರಡುತಿದ್ದ ಒಂದು ಬಸ್ಸು  ಗುರುವಾಯನಕೆರೆ ಹಾದು  ಹೋಗುತಿತ್ತು, ದಿನ ಆ ಬೋರ್ಡ್ ನೋಡುತಿದ್ದ ನನಗೆ ಆಗಿನಿಂದಲೂ ಒಂದು ರೀತಿಯ ಕುತೂಹಲ ಆ ಊರಿನ ಮೇಲೆ ಹುಟ್ಟಿತ್ತು.ಇಷ್ಟೆಲ್ಲಾ ಹೇಳಿದ ಮೇಲೆ, ಪುಸ್ತಕದ ಬಗ್ಗೆ ನಾಲ್ಕು ಮಾತಾದರು ಹೇಳಲೇಬೇಕು.

                               ಜೋಗಿ ಅವರೇ ಹೇಳುವಂತೆ, ಇದೊಂದು ಕತೆಯಲ್ಲ, ಹಾಗಂತ ಇತಿಹಾಸ ಕೂಡ ಅಲ್ಲ, ಎಲ್ಲರೂ ಬೆಳೆದು ಬಂದ ರೀತಿ, ವ್ಯಕ್ತಿಗಳು, ಘಟನೆಗಳು, ಸ್ಥಳಗಳು ಬೇರೆಯಾಗಿರಬಹುದು ಅಷ್ಟೇ ಹೊರತು, ಮತ್ತೆಲ್ಲ ಅದೇ ಆಗಿರುತ್ತದೆ. ಪ್ರತಿಯೊಂದು ಸನ್ನಿವೇಶವು ನಮ್ಮದೇ ಬದುಕಿನ ಬೇರೊಂದು ಕುರುಹನ್ನ ಹುಡುಕುತ್ತದೆ. ಪುಸ್ತಕದ ಕೊನೆಯಲ್ಲಿ ಅವರೇ ಹೇಳುವಂತೆಎಲ್ಲ ಊರುಗಳೂ ನಾವು ಬಾಳಿದ ಕಾಲಕ್ಕೆ ತಕ್ಕಂತೆ ಒಂದಿಷ್ಟು ನೆನಪುಗಳನ್ನ, ಘಟನೆಗಳನ್ನ ಹೊತ್ತು ಕೊಂಡಿರುತ್ತದೆ. ಆಗೆಲ್ಲ ಅವು ನಮ್ಮ ಬದುಕಿನ ನಿತ್ಯಕರ್ಮದಂತೆ ಕಾಣುತ್ತವೆ.  ಒಮ್ಮೊಮ್ಮೆ ಎಲ್ಲರಿಗೂ ನಮ್ಮ ಊರಿನ ಬಗ್ಗೆಯೂ ಬರೆಯಬೇಕು ಅನ್ನಿಸಬಹುದು ಅಥವಾ ಬರೆಯಲಿಕ್ಕೆ ಏನಿದೆ ಅನ್ನೋ ಪ್ರಶ್ನೆ ಕೂಡ ಏಳಬಹುದು. ಅದರರ್ಥ ಅಲ್ಲಿ ಏನು ಇಲ್ಲ ಅಂದಲ್ಲ, ಆ ನೆನಪುಗಳು ಮಾಗಿ ಒಂದು ರೂಪ ಪಡೆಯಲು ಕೆಲವೊಂದು ಕಾಲಘಟ್ಟ ಕಳೆಯಬೇಕಾಗುತ್ತದೆ ಅಥವಾ ಯಾವುದೋ ಒಂದು ಓದು ಅದನ್ನ ಬಡಿದು ಮೇಲೆಬ್ಬಿಸಬೇಕಾಗುತ್ತದೆ. ಅಂತಹ ಎಷ್ಟೋ ಊರುಗಳ  ನೆನಪಿನ ದ್ವೀಪಕ್ಕೆ ದಾರಿ ಮಾಡಿಕೊಡಬಲ್ಲ ಪುಸ್ತಕ  ಗುರುವಾಯನಕೆರೆ (ಒಂದು ಊರಿನ ಆತ್ಮ ಚರಿತ್ರೆ).

                     ಎಲ್ಲರಿಗೂ ಒಂದು ಊರು ಬೇಕು, ಮನುಷ್ಯನ ಆಗಾಧ ಕನಸುಗಳಿಗೆ ಬಲೆ ಹೆಣೆಯುವಿಕೆ ಶುರುವಾಗುವುದೇ ಅಲ್ಲಿಂದ, ಕಾಲಕ್ಕೆ ತಕ್ಕಂತೆ ನಮ್ಮನ್ನ ನಾವು ಬದಲಾಯಿಸಿಕೊಂಡು ಬದುಕಿನ ಜಂಜಾಟಗಳಲ್ಲಿ ಎಲ್ಲೋ ಬಂದು ನಿಂತಾಗ, ಎಲ್ಲೋ ಒಮ್ಮೆ , ಎಲ್ಲವನ್ನ ಮತ್ತೊಮ್ಮೆ ದೂರದಲ್ಲಿ ನಿಂತು ನೋಡಬೇಕು ಅನಿಸುತ್ತದೆ, ಆ ಆಸೆಗೆ ಅವಕಾಶ ಮಾಡಿ ಕೊಡುವುದೇ ಈ ಊರು. ಜೋಗಿ ಹೇಳ ಹೊರಟಿರುವುದು ಅದನ್ನೇ ಅನಿಸುತ್ತದೆ, ಅದು ಯಾಕೆ ಹಾಗೆ ? ಅದು ಸರಿಯೇ ? ತಪ್ಪೇ ? ಎನ್ನೋ ಅಸಂಖ್ಯಾ ಪ್ರಶ್ನೆಗಳನ್ನ ದೂರವಿಟ್ಟು ಅದನ್ನ ನಾವು ಹೇಗೆ ಅನುಭವಿಸಿದೆವು ಅನ್ನೋದು ಮುಖ್ಯವಾಗುತ್ತದೆ .
ಹಾಗಂತ ಇದು  ಆತ್ಮ ಕಥೆಯಲ್ಲ, ವ್ಯಕ್ತಿ ಗಿಂತ ಆತನ ಸುತ್ತ ನಡೆಯುವ ಘಟನೆಗಳ ಸರಮಾಲೆ ಇದು.
                          ಎಲ್ಲೋ ಒಂದು ಕಡೆ ಊರನ್ನ ಕಾಯುವ ಭೂತ ಇಷ್ಟವಾಗಿ ಬಿಡುತ್ತದೆ, ಅಲ್ಲೆಲ್ಲೋ ಗುಡ್ಡದಲ್ಲಿ ಭೂಸ್ ಎಂದು ಎದ್ದು ನಿಂತ ಕಾಳಿಂಗ ಸರ್ಪ, ನಾವು ಚಿಕ್ಕವರಾಗಿದ್ದಾಗ ಕೇಳಿದ ಜುಟ್ಟು ಕಾಳಿಂಗದ ನೆನಪು ತರಿಸುತ್ತದೆ. ನಾರಾಯಣನ ಅಡ್ಡ ಗಟ್ಟಿದ ಕಾಳಿಂಗ, ನಾ ಚಿಕ್ಕವನಿದ್ದಾಗ ನಾಗರಬನದಲ್ಲಿ ಮೂತ್ರ ಮಾಡಿದ್ದಕ್ಕೆ ನಮ್ಮನೆ ಅಂಗಳದಲ್ಲಿ ಬಂದು ನಿಂತ ನಾಗರ ಹಾವು ನೆನಪಾಗುತ್ತದೆ. ಪಕ್ಕದ ಮನೆಗೆ ಬರುತ್ತಿದ್ದ ದಿನ ಪತ್ರಿಕೆ ಯನ್ನ ರಾತ್ರಿ ಚಿಮುಣಿ ಗುಡ್ಡೆಯ ಹೊಗೆಯಲ್ಲಿ ಓದಿದ್ದು ನೆನಪಾಗುತ್ತದೆ, ಯಾರೋ ಸತ್ತ ಅನ್ನೋ ಕಾರಣಕ್ಕೆ ಯಾರು ಕೂರದೆ ಕಾಂಗ್ರೆಸ್ ಗಿಡದ ರಾಜ್ಯವಾಗಿ ನಿಂತಿರುವ ಹಾಗೆಯೇ ಆಗೋಷಿತ ಸ್ಮಶಾನವಾಗಿರುವ ನಮ್ಮೂರಿನ ಬಸ್ಸು ನಿಲ್ದಾಣ ಎಲ್ಲ ನಮ್ಮ ಬಾಲ್ಯದ ಆಟೋಟಗಳನ್ನ ಹಾಗೆ ಕಣ್ ಮುಂದೆ ಒಮ್ಮೆ ಓಡಾಡಿಸಿಬಿಡುತ್ತದೆ.

                     ಯಾವುದೋ ಒಂದು ಕತೆಯಾಗಲಿ, ಯಾರದ್ದೋ ಬದುಕಾಗಲಿ ಈ ಪುಸ್ತಕದಲ್ಲಿ ಇಲ್ಲ, ನಮ್ಮ ನೆನಪುಗಳಿಗೆ ನಾವೇ ಇಳಿಯಲು ಬೇಕಾದ ದಾರಿ ಇದೆ, ಒಬ್ಬನೇ ಕೂತು ಓದುತ್ತಾ ಹೋದಂತೆ ನಗು ಹುಟ್ಟುತ್ತಾ ಹೋಗುತ್ತದೆ, ನಮ್ಮದೇ ಬದುಕಿನಲ್ಲಿ ನಡೆದ ಘಟನೆಗಳು ಇಲ್ಲಿ ಅಚ್ಚಾಗಿವೆಯೇನೋ ಅನ್ನುವಷ್ಟು ಹತ್ತಿರ ಇವೆ ಕೆಲವೊಂದು ಘಟನೆಗಳು. ಒಟ್ಟಿನಲ್ಲಿ ಒಂದೊಳ್ಳೆ ನೆನಪಿನ ಸರಮಾಲೆ ಹಣೆಯುವಲ್ಲಿ ಜೋಗಿ
ಯಶಸ್ವಿಯಾಗಿದ್ದಾರೆ.

ಕಾಮೆಂಟ್‌ಗಳು

 1. ಗುರುವಾಯನಕೆರೆ ಓದಿಲ್ಲ
  ಓದ ಬೇಕೆಂಬ ಕುತೂಹಲ ಹುಟ್ಟುವ ಹಾಗೆ ಬರೆಯುದರಲ್ಲಿ
  ನೀವು ಯಶಸ್ವಿಯಾಗಿದ್ದಿರಿ. ವಂದನೆಗಳು
  ಸ್ವರ್ಣಾ

  ಪ್ರತ್ಯುತ್ತರಅಳಿಸಿ
 2. ವಿನಯ್,
  ಜೋಗಿಯವರ ಈ ಲೇಖನ ಸರಮಾಲೆಯನ್ನು ಆಗಾಗ ಹಾಯ್ ಬೆಂಗಳೂರಿನಲ್ಲಿ ಓದುತ್ತಿದ್ದೆನಾದರೂ...ನಡುವೆ ಬಿಟ್ಟಿದ್ದೆ. ನಿಮ್ಮ ವಸ್ತುನಿಷ್ಟ ವಿಮರ್ಶೆಯನ್ನು ಓದಿ ಪುಸ್ತಕರೂಪದಲ್ಲಿ ಓದಬೇಕೆನಿಸುತ್ತಿದೆ...ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು