ಕೋಟಿ ಮಾತಾಡುವ "Quote"ಗಳು ಮತ್ತು ಅವು ತಂದೊಡ್ಡುವ ಆಭಾಸಗಳು

ಮನುಷ್ಯನಲ್ಲಿ ಧನಾತ್ಮಕ ಚಿಂತನೆಗಳನ್ನ ತುಂಬಲು ಹಾಗೂ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಿ ಇಟ್ಟುಕೊಳ್ಳಲು ಸಮಾಜದಲ್ಲಿ ನಮಗಿಂತ ಮೊದಲು ಇಂತದೇ ಸನ್ನಿವೇಶ ಎದುರಿಸಿ ಅದನ್ನ ಯಶಸ್ವಿಗಾಗಿ ನಿಭಾಯಿಸಿದವರ ಮಾತುಗಳನ್ನು ಸ್ಪೂರ್ತಿಗಾಗಿ ಅಲ್ಲಲ್ಲಿ ಬಳಸುವುದುಂಟು ಅದನ್ನೇ ಆಂಗ್ಲದ Quote ಅಥವಾ ಉಲ್ಲೇಖಗಳು ಅನ್ನುತ್ತೇವೆ. ಇದು ಅನುಭವದ ಮಾತಾಗಿರಬೇಕೇ ಹೊರತು ನಾಲ್ಕು ಗೋಡೆಗಳ ನಡುವೆ ಕೂತು ಕುಟ್ಟಿ ಬಿಸಾಕಿರುವುದು ಆಗಿರಬಾರದು. ನಮ್ಮಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಮತ್ತು ಚಾಲ್ತಿಯಲ್ಲಿರುವ ಉಲ್ಲೇಖಗಳಲ್ಲಿ ಮುಂಚೂಣಿಯಲ್ಲಿರುವುದು ಚಾಣಕ್ಯನ ನೀತಿಗಳು.


ಈ ನೀತಿಗಳು ಬದುಕಿನ ಸಾರವನ್ನು ಕೆಲವು ಉಪಮೇಗಳ ಮೂಲಕ ಸ್ಥೂಲವಾಗಿ ಜನರಿಗೆ ಅರ್ಥಮಾಡಿಸಲು ಬಳಸಿದ್ದಾಗಿದೆ. ಉದಾಹರಣೆಗೆ "ದೊಡ್ಡ ಆನೆಯನ್ನು ನಿಯಂತ್ರಿಸಲು ಒಂದು ಅಂಕುಶ ಸಾಕು. ದೊಡ್ಡ ಪರ್ವತವನ್ನು ಉರುಳಿಸಲು ಒಂದು ಸಿಡಿಲ ಬಡಿತ ಸಾಕು. ನಿಮ್ಮ ದೇಹ, ಆಕಾರ,ಗಾತ್ರ, ಸೌಂದರ್ಯ ಮುಖ್ಯವಲ್ಲ, ನಿಮ್ಮಲ್ಲಿರುವ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಮುಖ್ಯ ". ಬದುಕಿನಲ್ಲಿ ಹತಾಶರಾಗಿರುವ ಮತ್ತು ತಾನು ಕೀಳು ಎನ್ನುವ ಭಾವನೆ ಹೊಂದಿರುವ ವ್ಯಕ್ತಿಗಳ ಮನೋಸ್ಥೈರ್ಯ ಹೆಚ್ಚಿಸಲು ಕೆಲವು ಪ್ರಾಕೃತಿಕ ಘಟನೆಗಳ ಉದಾಹರಣೆಯೊಂದಿಗೆ ಬದುಕು ನಮ್ಮ ಸ್ವಸಾಮರ್ಥ್ಯದಲ್ಲಿ ನಂಬಿಕೆ ಇಟ್ಟಾಗಲೇ ಗಟ್ಟಿಗೊಳ್ಳುತ್ತದೆ ಅನ್ನುವುದನ್ನು ವಿವರಿಸಲಾಗಿದೆ. ಅದೇ ರೀತಿ " ಯೌವನ ಮತ್ತು ಸ್ತ್ರೀಯ ಸೌಂದರ್ಯ ಜಗತ್ತಿನ ಶಕ್ತಿಶಾಲಿ ಅಸ್ತ್ರಗಳಾಗಿವೆ". ಇಲ್ಲಿ ಪ್ರಾಯಕ್ಕೆ ಬಂದ ಮನುಷ್ಯನ ತೋಳ್ಬಲ ಮತ್ತು ಹೆಣ್ಣಿನ ಸೌಂದರ್ಯ ಹೇಗೆ ಕೆಲಸಮಾಡುತ್ತದೆ ಮತ್ತು ಅದೆಷ್ಟು ಬಲಶಾಲಿ ಅನ್ನುವುದನ್ನು ಕೆಲವೇ ಪದಗಳಲ್ಲಿ ತಿಳಿಸಲಾಗಿದೆ.ಇತಿಹಾಸ ಕೆದಕಿದರೆ ಇದಕ್ಕೆ ಸಾಕ್ಷೀಭೂತವಾಗಬಲ್ಲ ಸಾಕಷ್ಟು ಸತ್ಯ ಘಟನೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.
ಹಲವಾರು ಜನರ ಬದುಕಿನ ಪಾಠಗಳು ಈ ರೀತಿಯ quote ಗಳಾಗಿ ನಮ್ಮ ದಿನನಿತ್ಯದ ಬದುಕಿಗೆ ದಾರಿ ದೀಪಗಳಾಗಿವೆ. ಮೊದಮೊದಲು ಇವು ಋಷಿ ಮುನಿಗಳು, ಇತಿಹಾಸಕಾರರು, ಸಮಾಜ ಸುಧಾರಕರು, ಸಾಹಿತಿಗಳು ಇವರ ಹೆಸರಿನೊಂದಿಗೆ ಮಾತ್ರ ತಳುಕು ಹಾಕಿಕೊಳ್ಳುತ್ತಿತ್ತು. ಕೆಲವೊಮ್ಮೆ ಅದು ಅವಶ್ಯಕ ಕೂಡ ಹೌದು. ಹೇಳುವ ಮಾತಿಗೆ ತೂಕ ಬರಬೇಕಾದರೆ ಹೇಳಿರುವ ವ್ಯಕ್ತಿ ಆ ಮಾತಿಗೆ ತಕ್ಕಂತೆ ನಡೆದುಕೊಂಡಿರಬೇಕು ಅನ್ನುವುದನ್ನ ಸಮಾಜ ಬಯಸುತ್ತದೆ ಕೂಡ. ಒಬ್ಬ ಯೋಗಿ "ಆಸೆಯೇ ದುಃಖಕ್ಕೆ ಮೂಲ" ಅನ್ನುವುದಕ್ಕೂ ಹಾಗೂ ಅದೇ ಮಾತನ್ನು ನೂರಾರು ಕುಟುಂಬಗಳ ನಾಶಕ್ಕೆ ಕಾರಣವಾದ ಒಬ್ಬ ದುರುಳ ಹೇಳುವುದಕ್ಕೂ ಬಹಳ ವ್ಯತ್ಯಾಸವಿದೆ. ಸಾಮಾಜಿಕ ಜಾಲತಾಣ ತೆರೆದುಕೊಳ್ಳುತ್ತಾ ಹೋದಂತೆ ಜನ ಸಾಮಾನ್ಯ ಕೂಡ ತಮ್ಮ ಬದುಕಿನ ಸಾರವನ್ನು ಕೆಲವು ಪದಗಳಲ್ಲಿ ಅಲ್ಲಲ್ಲಿ ನಮೂದಿಸುತ್ತ ಇರುವುದು ಹೌದು. ಇದರ ಆಳ ಮತ್ತು ಉದ್ದ ಸಂಕೀರ್ಣವಾದರೂ ತಮ್ಮದೇ ಪರಿಚಯದ ಒಂದು ಸಮೂಹಕ್ಕೇ ಅದು ತಲುಪುವುದಕ್ಕೆ ಅಡ್ಡಿ ಇಲ್ಲ.

ಒಂದು ಕಾಲಕ್ಕೆ ಗದ್ಯ, ಪದ್ಯಕ್ಕೆ ಹಾಗೂ ಭಾಷಣಗಳೊಂದಿಗೆ ಸೇರಿ ಜನರ ಮೇಲೆ ಪ್ರಭಾವ ಬೀರುತ್ತಿದ್ದ ಮತ್ತು ಅಸ್ಥಿರ ಮನಸ್ಸುಗಳಿಗೆ ಸ್ಥಿರತೆ ತರಲು ನೆರವಾಗುತ್ತಿದ್ದ ಈ ಉಲ್ಲೇಖಗಳು ಯಾವಾಗ ಜನರ ಛಾಯ ಚಿತ್ರದೊಂದಿಗೆ ತಳುಕು ಹಾಕಿಕೊಳ್ಳೋಕೆ ಶುರುವಾಯಿತೋ ಅಲ್ಲಿಗೆ ಅವುಗಳ ಪ್ರಭಾವ ಎಲ್ಲಿ ಇರಬೇಕಿತ್ತೋ ಅಲ್ಲಿ ಇಲ್ಲದೇ ಕೇವಲ ಪದಪುಂಜಗಳಾಗಿ ಬಳಕೆ ಆಗೋಕೆ ಶುರುವಾಯಿತು. ಸರಿಯಾದ ಚಿತ್ರದೊಂದಿಗೆ ಬಳಸಿದ ಹೇಳಿಕೆ ಎಷ್ಟು ಪರಿಣಾಮಕಾರಿಯೋ ಅದೇ ರೀತಿ ಕೆಲವೊಂದು ಅಭಾಸ ತರುವ ಉಲ್ಲೇಖಗಳು ಸಿಗುತ್ತವೆ.
ಸ್ಕರ್ಟ್ ತೊಟ್ಟು ಎಡಗಾಲನ್ನು ೪೫ ಡಿಗ್ರಿ ಕೋನದಲ್ಲಿ ನೈಋತ್ಯ ದಿಕ್ಕಿಗೆ ತಿರುಗಿಸಿ ಇರುವ ತನ್ನ ಒಂದು ಚಿತ್ರಕ್ಕೆ ನಟಿ ಮಣಿಯೊಬ್ಬಳು ಉಪಯೋಗಿಸಿರುವ quote ಹೀಗಿದೆ, " “If you find yourself in a hole, the first thing to do is stop digging.” - Will Rogers. ಅವಳ ಭಾವ ಚಿತ್ರಕ್ಕೂ ಹಾಗೂ ಅವಳು ಬಳಸಿರುವ ಪದ ಪುಂಜಕ್ಕೂ ಅರ್ಥ ಕಲ್ಪಿಸ ಹೋದರೆ ದ್ವಂದಾರ್ಥ ಬರದೇ ಇರಲು ಹೇಗೆ ಸಾಧ್ಯ. ಹಾಗೆ ಇನ್ನೊಬ್ಬಳು ನಟಿಮಣಿ ತನ್ನ ನೀಳವಾದ ಬೆನ್ನಿನ ಚಿತ್ರ ಹಾಕಿ "you can change haters mind with your smile" ಅಂತ ಹಾಕಿ ಕೊಂಡಿದ್ದಾಳೆ. ಈಗ ಆ ಬೆನ್ನಿನಲ್ಲಿ ನಗು ಹುಡುಕುವ ಕೆಲಸ ನಿಮ್ಮದು. ಇಲ್ಲೊಬ್ಬ ತನ್ನ ೮ ಪ್ಯಾಕ್ಸ್ ತೋರಿಸುತ್ತ ಹಾಕಿಕೊಂಡ quote ಹೀಗಿದೆ "ದೇವರು ಕಲ್ಲು, ಕಟ್ಟಿಗೆ, ಮಣ್ಣಿನ ಮೂರ್ತಿಗಳಲ್ಲಿ ಇಲ್ಲ. ಅವನು ನಮ್ಮ ಭಾವನೆ, ಯೋಚನೆಗಳಲ್ಲಿ ಇದ್ದಾನೆ".ಅವನನ್ನ ಅರೆ ನಗ್ನನನ್ನಾಗಿ ನೋಡಿದ ಮೇಲೆ ಯಾವ ಭಾವನೆ ಬರುತ್ತದೆ ಅನ್ನುವುದು ನೋಡುಗರಿಗೆ ಬಿಟ್ಟಿದ್ದು.
ಕೊನೆಯದಾಗಿ ನನ್ನನ್ನ ಹೆಚ್ಚು ಚಿಂತೆಗೀಡು ಮಾಡಿದ್ದು ಈ ಕೆಳಗಿನ ನಟಿ-ನಟರ ಇವೆರಡು quote ಗಳು:
ಬೇಲಿ ಗೂಟಕ್ಕೆ ಬಟ್ಟೆ ಸಿಕ್ಕಿಸಿದ ಹಾಗೆ ಇರುವ ನಟಿಯೊಬ್ಬಳು ಬಿಕಿನಿ ಅಲ್ಲಿ ಇರುವ ತನ್ನ ಫೋಟೋವೊಂದಕ್ಕೆ ನೀಡಿದ ಒಕ್ಕಣಿಕೆ ಹೀಗಿತ್ತು " ಹಿಂದೆ ಕಳೆದು ಹೋಗಿರುವುದಕ್ಕೆ ಕೊರಗಬಾರದು, ಮುಂದೆ ಬರುವುದಕ್ಕೆ ಬಾಯ್ತೆರೆದು ಕೂರಬಾರದು, ಸಧ್ಯಕ್ಕೆ ಇರುವುದನ್ನು ಸರಿಯಾಗಿ ಮಾಡಬೇಕು"
ಕೊರೊನ ಪಾಸಿಟಿವ್ ಬಂದಿರುವ ನಟನೊಬ್ಬ ಹಾಕಿಕೊಂಡಿರುವ ಉಲ್ಲೇಖ "I am corona positive, be strong spread positivity".
- ವಿನಯ ಎ ಡಿ

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು