ಟೀಕಾ ಲಗಾವೋ!!

 ಪಂಚವಳ್ಳಿ, ಮಲೆನಾಡ ಸಾವಿರಾರು ಪುಟ್ಟ ಹಳ್ಳಿಗಳ ಪೈಕಿ ಇದೂ ಕೂಡ ಒಂದು. ಬ್ರಹ್ಮಗಿರಿ ಮತ್ತು ವಿಷ್ಣು ತೀರ್ಥ ಬೆಟ್ಟದ ನಡುವೆ ಇರುವ ಕಿರಿದಾದ ಜೌಗಿನಲ್ಲಿ ಇರುವ ಹಳ್ಳಿ ಇದು. ಸಹಜವಾಗಿ ಕಾಲು ರಸ್ತೆಗಳೇ ತುಂಬಿರುವ ಊರು. ಬೆಟ್ಟದ ಬುಡದಲ್ಲಿ ಒಂದೈದು ಬ್ರಾಹ್ಮಣರ ಮನೆಗಳು ಹಾಗೂ ಅಡಿಕೆ ತೋಟ ದಾಟಿ ಗದ್ದೆಯ ಆಚೆ ಕಡೆ ಅಂಚಿನಲ್ಲಿ ಒಂದು ಹತ್ತು ಇತರರ ಮನೆಗಳು ಬಿಟ್ಟು ಬೇರ್ಯಾರು ಇಲ್ಲಿ ನೆಲೆಸಿಲ್ಲ.ಮಲೆನಾಡು ಅಂದ ಮೇಲೆ ಅಡಿಕೆ ಮತ್ತು ವೀಳ್ಯದೆಲೆಗೆ ಅವಿನಾಭಾವ ಸಂಬಂಧ. ಹೀಗೆ ಒಂದಾನೊಂದು ಕಾಲದಲ್ಲಿ ವೀಳ್ಯದೆಲೆಯಲ್ಲಿಯೇ ಉತ್ತಮವಾದ ಪಂಚವಳ್ಳಿ ಬಳ್ಳಿಗಳು ಇಲ್ಲಿನ ತೋಟಗಳಲ್ಲಿ ಹೇರಳವಾಗಿ ಸಿಗುತ್ತಿದ್ದವೂ ಅನ್ನುವ ಕಾರಣಕ್ಕೆ ಈ ಊರಿಗೆ ಪಂಚವಳ್ಳಿ ಅನ್ನುವ ಹೆಸರು ಬಂತೆಂದು ಕೆಲವರು ಹೇಳಿದರೆ, ಕಾಡಿಗೂ ಮತ್ತು ತೋಟದ ಮೇಲೆ ಅನಾದಿ ಕಾಲದಿಂದಲೂ ಇರುವ ಪಂಜುರ್ಲಿಯ ಹೆಸರಿಂದ ಇದು ಪಂಚವಳ್ಳಿ ಆಯಿತೆಂದು ಕೆಲವರು ವಾದಿಸುವುದುಂಟು. ಇವೆಲ್ಲಕ್ಕೂ ಉತ್ತರಿಸಬಹುದಾದ ಮೂಲ ನೆಲಸಿಗರೂ ಅದೇ ದರ್ಕಾಸಿನ ಕೆಳಗೆ ಹರಿಯುವ ಹಳ್ಳದ ನೀರಿನಲ್ಲಿ ಬೂದಿ ಯಾಗಿ ಎಂದೋ ಹರಿದು ಹೋಗಿದ್ದಾರೆ. ಇದೇನಿದ್ದರೂ ಅಂತೇ ಕಂತೆಗಳ ಕಥೆಯಷ್ಟೇ.

 

ಗುಡ್ಡದ ತಪ್ಪಲಿನ ಕೊನೆ ಮನೆ ವಿಷ್ಣುಶರ್ಮಾರದ್ದು,  ತಕ್ಕಮಟ್ಟಿಗೆ ಸ್ಥಿತಿವಂತರಾಗಿರುವ ಕುಟುಂಬದಿಂದ ಬಂದವರು. ಹೆಸರಿಗೆ ತಕ್ಕ ಹಾಗೆ ದೈವೀ ಭಕ್ತರೂ ಕೂಡ. ಅದರಲ್ಲೂ ವಿಷ್ಣುವಿನ ಅಪಾರ ಆರಾಧಕರೂ. ಹಾಗೆ ಊರಿಗೆ ಹಿರಿ ಜೀವ ಕೂಡ ಜೊತೆಗೆ ತಮ್ಮ ಕಾಲದಲ್ಲಿ ಮೆಟ್ರಿಕ್ ಮುಗಿಸಿದ ಕೆಲವರ ಪೈಕಿ ಇವರೂ ಒಬ್ಬರೂ. ಹೆಂಡತಿ ತೀರಿಕೊಂಡು ೨ ವರ್ಷವಾಗಿದೆ ಅಷ್ಟೇ. ಇಲ್ಲಿ ಬಂದವರು ಒಂದಲ್ಲ ಒಂದು ದಿನ ಬಂದಲ್ಲಿಗೆ ಮರಳಬೇಕು ಅನ್ನುವುದನ್ನು ಮನಗಂಡಿರುವ ಗಟ್ಟಿ ಜೀವ ಅವರದ್ದು. ವಯಸ್ಸು ೮೦ ದಾಟಿದ್ದರೂ ಮನೆಯ ಜವಾಬ್ದಾರಿ ತಾವೇ ನೋಡಿಕೊಂಡು ಹೋಗುತಿದ್ದರು ಇರುವ ಇಬ್ಬರೂ ಮಕ್ಕಳು ಪೇಟೆಯಲ್ಲಿ ಉತ್ತಮ ಕೆಲಸದಲ್ಲಿ ಇದ್ದು ಅಪ್ಪ ಕಾಲವಾದ ಮೇಲೆ ಊರಿಗೆ ಬಂದು ನೆಲೆಸುವ ಯೋಚನೆ ಇದ್ದವರು. ವಿಷ್ಣುಶರ್ಮರು ಶಿಸ್ತಿನ ಮನುಷ್ಯ ಕೂಡ ಪ್ರಾತಃ ಕಾಲ ೪. ೩೦ ಕ್ಕೆ ಎದ್ದು ತಮ್ಮ ಬಹಿರ್ದೆಸೆ ಮುಗಿಸಿ ಬಚ್ಚಲಿನ ಒಳಗೆ ಉರಿ ಹಚ್ಚಿ ಬಂದು ಇತ್ತೀಚಿಗಷ್ಟೇ ತರಿಸಿದ್ದ ಉಂಡೆ ಬೆಲ್ಲ ಹಾಕಿ ಬಿಸಿ ಬಿಸಿ ಕಾಫಿ ಕುಡಿದು ಹೊರಟರೆಂದರೆ ಇನ್ನೂ ಅವರು ಸಿಗುತ್ತಿದ್ದಿದ್ದು ೯ ರ ನಂತರವೇ. ಕಾಫಿ ಹೀರಿ ಹೂವು ಕುಯ್ಯುವ ಬುಟ್ಟಿ ಜೊತೆಗೆ ಕಾಫಿ ಗಿಡದ ಅಡ್ಡ ಹರೇ ಇಂದ ಮಾಡಿದ ಒಂದು ದೋಟಿ ಹಿಡಿದು ಮನೆಯ ಸುತ್ತ ಇರುವ ದಾಸವಾಳ, ಮಲ್ಲಿಗೆ , ಗುಲಾಬಿ , ತುಂಬೆ, ದೂರ್ವೆ, ತುಳಸಿ , ಗಂಟೆ ದಾಸವಾಳ ಎಲ್ಲವನ್ನ ಒಟ್ಟು ಮಾಡುವಷ್ಟರಲ್ಲಿ ಘಂಟೆ ೬. ೩೦ ಕ್ಕೆ ಬಂದು ನಿಲ್ಲುತ್ತಿತ್ತು. ಅದಾದ ಮೇಲೆ ಕೊದಿಯುತ್ತಿರುವ ಹಂಡೆ ನೀರಿನಲ್ಲಿ ೪೫ ನಿಮಿಷಗಳ ಮಂತ್ರಘೋಷವಿರುವ ಮಹಾ ಜಳಕ.  ಅದಾದ ಬಳಿಕ ಹಿಂದೆ ಗುಡ್ಡದ ಪಸರಿನಿಂದ ಬರುವ ಶುದ್ಧ ನೀರನ್ನು ಹಿಡಿದು ದೇವರ ಮುಂದೆ ಕುಳಿತರೆಂದರೆ ಒಂದೂವರೆ ಘಂಟೆಗಳ ದೀರ್ಘ ಪೂಜೆ. ತಿಂಡಿ ಮುಗಿಸಿ ಬಂದಮೇಲೆ ಅದಾಗಲೇ ಬಂದು ತಮ್ಮ ಕೆಲಸ ತಾವು ಮಾಡುತ್ತಿರುವ ಮನೆ ಕೆಲಸದವರ ಜೊತೆ ತೋಟಕ್ಕೆ ಸುತ್ತು.

 

ಇತ್ತೀಚಿಗೆ ರಾಜಕೀಯ ಪ್ರಭಾವ ಮತ್ತು ತಮ್ಮನ್ನ ತಾವು ತೊಡಗಿಸಿಕೊಂಡಿರುವ ವಿಷ್ಣುಶರ್ಮರು ತಮ್ಮ ಸುತ್ತ ನಡೆಯುವ ಆಗು ಹೋಗುಗಳ ಬಗ್ಗೆ ಸದಾ ಒಂದು ಕಣ್ಣಿಟ್ಟಿರುವ ಮನುಷ್ಯ. ಊರಿನ ಸಣ್ಣ ಪುಟ್ಟ ವ್ಯಾಜ್ಯಗಳು , ಕಲಹಗಳು, ಕೈಸಾಲಗಳು ಎಲ್ಲಕ್ಕೂ ಪರಿಹಾರ ಇವರ ಬಳಿ ಇತ್ತು. ತಮ್ಮ ಮನೆಗೆ ಬರುವ ಕೆಲಸದವರು ಎಲ್ಲಾ ವಯೋಮಿತಿಯವರಾಗಿದ್ದರು. ಅದರಲ್ಲಿ ವಿಷ್ಣು ಶರ್ಮಾರೊಂದಿಗೆ ಸ್ವಲ್ಪ ಸಲಿಗೆ ಇರುವವ ಅಂದರೆ ವೆಂಕ್ಟ. ಆತನಿಗೆ ವಯಸ್ಸು ೬೫ ದಾಟಿತ್ತು, ಆತನಿಂದ ಹೆಚ್ಚಿನ ಕೆಲಸದ ನಿರೀಕ್ಷೆ ಇಲ್ಲದೆ ಇದ್ದರೂ ತನ್ನ ಅಪ್ಪಯ್ಯನ ಕಾಲದಿಂದಲೂ ನಮ್ಮನೆಗೆ ಕೆಲಸಕ್ಕೆ ಬರುತ್ತಾನೆ ಅನ್ನುವ ಮೃದುಭಾವ ಅವನನ್ನ ಕೆಲಸದಿಂದ ತೆಗೆಯಲು ವಿಷ್ಣುಶರ್ಮಾರನ್ನು ತಡೆದಿತ್ತು. ವೆಕ್ಟ ಕುಡುಬೆ ಸಮಾಜಕ್ಕೆ ಸೇರಿದವ ಹಾಗೂ ಜೀವನದಲ್ಲಿ ನೀರಿಗಿಂತ ಹೆಚ್ಚು ಸಾರಾಯಿ ಕುಡಿದ ಅಭ್ಯಾಸ ಇರುವ ಮನುಷ್ಯ. ಬೆಳ್ಳಂಬೆಳಿಗ್ಗೆ ಒಂದು ಕ್ವಾರ್ಟರ್ ಏರಿಸದೆ ಹೋದರೆ ಕೈಕಾಲೇ ಆಡದಷ್ಟು ಸಾರಾಯಿಯೊಂದಿಗೆ ಜೀವ ಹಂಚಿಕೊಂಡವ. ಕೆಲಸದಲ್ಲೂ ಅಷ್ಟೇ ವಯೋಸಹಜ ಸೋಮಾರಿತನಕ್ಕೆ ಬಲಿಯಾದವ. ಆತನನ್ನೂ ಉದುರು ಹೆಕ್ಕೋಕೆ ಬಿಟ್ಟರೆ ಉದುರಿಗಿಂತ ಹೆಚ್ಚು ಏಡಿಗಳನ್ನ ಹಾಳೆ ಕೊಟ್ಟೆಯಲ್ಲಿ ಹಿಡಿದು ಇಟ್ಟಿರುತ್ತಿದ್ದ. ಸಾರಾಯಿಯ ನಶೆಗೋ ಏನೋ ಮಾತು ಕೂಡ ತುಸು ಹೆಚ್ಚೇ. ಈ ಕೊರೊನ ಶುರುವಾದ ಮೇಲೆ ಹೆಚ್ಚು ಮಾನಸಿಕವಾಗಿ ಜರ್ಜರಿತವಾದರಲ್ಲಿ ಇವನು ಕೂಡ ಒಬ್ಬ. ಸಮಯಕ್ಕೆ ಸರಿಯಾಗಿ ಸಾರಾಯಿ ಸಿಗದೇ ಜೀವಾಮೃತದ ಕೊರತೆ ಇಂದ ಸ್ವಲ್ಪ ಸೊರಗಿದ್ದ ಕೂಡ.ಕಿವಿ ಕೂಡ ಸ್ವಲ್ಪ ದೂರವಾಗಿತ್ತು.  ಅದೇ ಹೆಳೆಯಲ್ಲಿ ಕೆಲಸಕ್ಕೆ ಕೂಡ ಸರಿಯಾಗಿ ಬರುತ್ತಿರಲಿಲ್ಲ. ಏಡಿಯ ಅವಶ್ಯಕತೆ ಇಲ್ಲದ ಶರ್ಮರೂ ಕೂಡ ಅವನನ್ನ ಕೆಲಸಕ್ಕೆ ಬರುವಂತೆ ಒತ್ತಾಯಿಸಿಯೂ ಇರಲಿಲ್ಲ.

 

ಹೀಗಿರುವಾಗ ಮಾಘ ಮಾಸದ ಒಂದು ಮುಂಜಾನೆ ಎಂದಿನಂತೆಯೇ ಶರ್ಮರು ದೂರ್ವೆ ಕುಯ್ಯುತ್ತಾ ಇರುವಾಗ ವೆಂಕ್ಟನ ಆಗಮನವಾಯಿತು. ಅನಿರೀಕ್ಷಿತವಾದ ವೆಂಕ್ಟನ ಆಗಮನ ಕಂಡು ಶರ್ಮರು ಕೇಳಿದರು

"ಏನೋ ವೆಂಕ್ಟ ಸವಾರಿ ಬೆಳ್ಳಂಬೆಳಿಗ್ಗೆ ಈ ಕಡೆ ಬಂದಿದೆ"

'ಹಾಗೇನಿಲ್ಲ ಭಟ್ರೇ ಸುಮ್ನೆ ಇಲ್ಲೇ ತೋಟಕ್ಕೆ ಏಡಿ ಹಿಡಿಯುವ ಅಂತ ಬಂದಿದ್ದೆ ಹಾಗೆ ನಿಮ್ನ ಕಂಡು ಹೋಪುವ ಅಂತ ಮೇಲೆ ಬಂದೆ ಎಂದ'

"ಸರಿ ಇರು ಕಾಫಿ ತರುತ್ತೇನೆ ಎಂದು ಶರ್ಮರು ಒಳ ನೆಡೆದರು"

ವೆಂಕ್ಟ ಏನೋ ಒಂದು ಚಡಪಡಿಕೆಯಲ್ಲೇ ಇದ್ದ. ಶರ್ಮರು ಕೊಟ್ಟ ಕಾಫಿ ಕುಡಿದು ಅಲ್ಲೇ ಇದ್ದ ಚೊಂಬಿನಿಂದ ಲೋಟ ತೊಳೆದಿಟ್ಟು ಮತ್ತೆ ಅಂಡು ಸುಟ್ಟ ಬೆಕ್ಕಿನ ಹಾಗೆ ಅಲ್ಲೇ ಏನೋ ಗುನುಗುತಿದ್ದ. ಇವನ ಚಡಪಡಿಕೆ ಕಂಡ ಶರ್ಮರು ಕೇಳಿದರು "ಏನೋ ಬೆಳಗ್ಗಿನ ತೀರ್ಥ ಸಿಕ್ಕ ಹಾಗೆ ಇಲ್ಲ ಅನ್ಸುತ್ತೆ"

ಬಿಳಿ ಎನ್ನುವುದರ ಕುರುಹೇ ಇಲ್ಲದ ಜೀವಂತ ಇರುವ ತನ್ನೆಲ್ಲ ಹಲ್ಲು ಬಿಡುತ್ತ "ಹಾಗೇನಿಲ್ಲ ಅಯ್ಯ , ಇವತ್ತು ಅದೇನೋ ಕೊರೋನಾಗೆ ಲಸಿಕೆ ಕೊಡ್ತಾರೆ ಅಂತೇ ಪೇಟೆ ಬದಿ, ಅದೇ ನಮ್ಮ ಸುರೇಶನ ಹೆಂಡತಿ ಆಶಾ ಕಾರ್ಯಕರ್ತೆ ಅಲಾ ಹಾಗಾಗಿ ಬೆಳಿಗ್ಗೆಯೇ ಕುಡಿಬೇಡಿ ಅಂತ ರಾತ್ರಿ ಮನೆ ತಂಕ ಬಂದು ಹೇಳಿ ಹೋಗಿದ್ದಾಳೆ ಅಂದ.

ಇವನ ಪೇಟೆ ವರಾತ ಕೇಳಿದ ಶರ್ಮರು ಹೇಳಿದರು ಎಷ್ಟು ಬೇಕಿತ್ತೋ ?? ಅಯ್ಯೋ ಅಯ್ಯ ದುಡ್ಡೆಲ್ಲ ಬೇಡಿತ್ತು ಅಂತ ವೆಂಕ್ಟ.

ದುಡ್ಡು ಬೇಡವೆಂದ ಮೇಲೆ ಈ ಬೆಳಿಗ್ಗೆ ಅವನು ಇಲ್ಲಿಗೆ ಏನಕ್ಕೆ ಬಂದಿದ್ದಾನೆ ಅನ್ನೋದು ತಿಳಿಯದೆ ಶರ್ಮರು ಹೇಳಿದರು " ನನಗೆ ಸ್ನಾನಕ್ಕೆ ಹೋಗ್ಲಿಕ್ಕೆ ಇತ್ತು, ನಿನಗೆ ಏನಾದ್ರೂ ಬೇಕಿತ್ತಾ?"

ಈಗ ನಿಧಾನಕ್ಕೆ ವೆಂಕ್ಟನ ಸ್ವರ ಹೊರಟಿತು. ಅಲ್ಲಾ ಸ್ವಾಮ್ಯರ ನೀವೇ ಹೇಳಿ ನಾನು ಮಾತಲ್ಲಿ ಸ್ವಲ್ಪ ಗಲೀಜು ಬಿಟ್ರೆ ನನ್ನ ಲಚ್ಚಿ ಬಿಟ್ಟು ಬೇರೆಯವರ ಸೀರೆ ಮುಟ್ಟಿದ್ದು ನೀವೆಲ್ಲಾದರೂ ಕೇಳಿದ್ದೀರಾ?

ಅಲ್ವಾ ಈ ಬೆಳಿಗ್ಗೆ ಅದನ್ನ ಕೇಳಲಿಕ್ಕೆ ಇಲ್ಲಿಗೆ ಬಂದಿದ್ದಾನಾ ಅಂದ್ರು ಶರ್ಮರು ಜೋರಾಗಿ. ತಮ್ಮ ನಿತ್ಯಕರ್ಮಗಳಿಗೆ ತಡವಾಗುತ್ತಿದ್ದಿದ್ದು ಅವರಿಗೆ ಸಿಟ್ಟು  ತರಿಸುತ್ತಿತ್ತು.

ಹಾಗಲ್ಲ ಮಾರ್ರೆ, ಬೆಳಿಗ್ಗೆ ರೇಡಿಯೋ ಕೇಳ್ತಾ ಇದ್ದೆ ಅದೇನೋ ಕೊರೊನ ಲಸಿಕೆ ಬಂದಿದೆ ಅಂತಲಾ , "ಹೌದು ಅದಕ್ಕೆ ಏನೀಗ " ವೆಂಕ್ಟನ ಮಾತನ್ನು ಅರ್ಧಕ್ಕೆ ತುಂಡರಿಸಿ ಕೇಳಿದರು ಶರ್ಮರು.

ಪ್ರದೇಶ ಸಮಾಚಾರದಲ್ಲಿ ಹೇಳ್ತ ಇದ್ರೂ ಮೋದಿ ಹೇಳಿದ್ದಾರೆ ಅಂತೇ ಎಲ್ಲರೂ ಲಸಿಕೆಯನ್ನ ತಿಕಕ್ಕೆ ತೆಗೆದು ಕೊಳ್ಳಬೇಕು ಅಂತ. ನೀವೇ ಹೇಳಿ ಭಟ್ರೇ ನಾನು ಲಚ್ಚಿ ಎದುರು ಲುಂಗಿ ಬಿಚ್ಚಿದ್ದು ಬಿಟ್ಟು ಬೇರೆಲ್ಲೂ ತೆಗೆದಿಲ್ಲ. ಈಗ ಆ ಆಸ್ಪತ್ರೆ ನರ್ಸಮ್ಮನ್ನ ಎದುರು ಅಂಡು ಕೊಟ್ಟು ಸೂಜಿ ಚುಚ್ಹಿಸಿಕೊಳ್ಳಬೇಕಾ ?

ಇವನ ಮಾತನ್ನು ಕೇಳಿ ಶರ್ಮಾರಿಗೆ ನಗು ಬಂತಾದರೂ, ಸಣ್ಣಗೆ ನಗುತ್ತಲೇ ಹೇಳಿದರು ಅಲ್ವೋ ವೆಂಕ್ಟ ಮೊದಲು ನೀನು ಕಿವಿಗೆ ಮಷೀನ್ ತಕ್ಕೋ ಆಮೇಲೆ ಲಸಿಕೆ ತಕ್ಕೋ ಎಂದು.

ಕಣ್ಣು ಬಾಯಿ ಬಿಟ್ಟು ಇವರ ಮಾತು ಅರ್ಥ ಆಗದ ವೆಂಕ್ಟನ ನೋಡಿ  ಶರ್ಮರೇ ಹೇಳಿದರೂ, ಮೋದಿ ಹೇಳಿದ್ದು ಟೀಕಾ ಲಗಾವೋ ಅಂತ. ಅದು ಹಿಂದಿ ಭಾಷೆ, ಕನ್ನಡದಲ್ಲಿ ಅದನ್ನು ಲಸಿಕೆ ಹಾಕಿಸಿಕೊಳ್ಳಿ ಅಂತಾರೆ.

ಭಟ್ರ ಮಾತು ಕೇಳಿ ಒಮ್ಮೆ ಖುಷಿಯಾದ ವೆಂಕ್ಟ ತನ್ನ ಹಲಬುತನಕ್ಕೆ ತನ್ನನ್ನೇ ಬೈದು ಕೊಳ್ಳುತ್ತಾ , ಮುಂಡು ಟವಲ್ ಅಲ್ಲಿ ಕಟ್ಟಿದ್ದ ಕಾಲು ಮುರಿದ ಏಡಿ ರಾಶಿ ಹೆಗಲ ಮೇಲೆ ಹಾಕಿಕೊಂಡು ಮನೆ ಕಡೆಗೆ ಹೊರಟ.   

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು