63 ನಾಟ್ ಔಟ್ ಫಾರೆವರ್

 

ಕ್ರಿಕೆಟ್ ಒಂದು ಅದ್ಭುತ ಲೋಕ. ಭಾರತೀಯರಿಗಂತೂ ಅದು ಒಂಥರಾ ನಾಡಿ ಮಿಡಿತವಾಗಿದೆ. ಎಲ್ಲೆಂದರಲ್ಲಿ ಕ್ರಿಕೆಟ್ ಆಟಗಾರರು , ಪ್ರೇಮಿಗಳು , ವಿಶ್ಲೇಷಕರು ಸಿಗುತ್ತಾರೆ. ಭಾರತದ ಹಳ್ಳಿ ಹಳ್ಳಿಗಳಲ್ಲಿ ಕ್ರಿಕೆಟ್ ಬೇರು ಬಿಟ್ಟಿದೆ.ಜಾತಿ ಮತ ಪಂಥ ಬೇಧವಿಲ್ಲದೆ ಜನ ಒಂದಾಗುತ್ತಾರೆ ತಮ್ಮ ನೆಚ್ಚಿನ ತಂಡಗಳಿಗೆ , ಆಟಗಾರರಿಗೆ ಪ್ರೋತ್ಸಾಹ ಕೊಡುತ್ತಾರೆ. ಇಲ್ಲಿ ರಾತ್ರೋರಾತ್ರಿ ಹೀರೋಗಳಾಗಿದ್ದಾರೆ , ವಿಲನ್ ಗಳಾಗಿದ್ದಾರೆ, ಫಿಕ್ಸಿಂಗ್ ಮಾಫಿಯಾದ ಬಲಿಪಶುವಾಗಿದ್ದಾರೆ. ಇದೆಲ್ಲವನ್ನ ಮೀರಿ ಕ್ರಿಕೆಟ್ ಇನ್ನೂ ಬದುಕಿದೆ. ಕಾಲಕ್ಕೆ ತಕ್ಕಂತೆ ತನ್ನ ಸ್ವರೂಪವನ್ನ, ತಂತ್ರಜ್ಞಾನದ ಜೊತೆ ಹೊಂದಿಕೆಯನ್ನ , ಮಾದರಿಗಳಲ್ಲಿ ಮಾರ್ಪಾಡುಗಳನ್ನ ತನ್ನದಾಗಿಸಿಕೊಂಡಿದೆ. ಇನ್ನೂ ಗಲ್ಲಿ ಕ್ರಿಕೆಟ್ ತನ್ನದೇ ಆದ ವಿಶಿಷ್ಟ ನಿಯಮಗಳನ್ನ ಹೊಂದಿದೆ.ಅದರಲ್ಲೂ ಟೆಸ್ಟ್ ಕ್ರಿಕೆಟ್ ಆಟದ ರುಚಿ ಬಲ್ಲವರಿಗಷ್ಟೇ ಹಿಡಿಸೋಕೆ ಸಾಧ್ಯ. ಭಾರತ ಕಳೆದ ೩೦ ವರ್ಷಗಳಿಂದೀಚೆಗೆ ಎಲ್ಲಾ ಮಾದರಿಯ (ಟಿ-ಟ್ವೆಂಟಿ , ಏಕದಿನ ಹಾಗೂ ಟೆಸ್ಟ್ ) ಕ್ರಿಕೆಟ್ ನಲ್ಲೂ ಗುರುತಿಸಬಹುದಾದ ಸಾಧನೆ ಮಾಡಿದೆ. ಇಷ್ಟೆಲ್ಲಾ ಇದ್ದರೂ ಕೂಡ SENA (ಸೌತ್ ಆಫ್ರಿಕಾ, ಇಂಗ್ಲೆಂಡ್ , ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ) ದೇಶಗಳಲ್ಲಿ ಭಾರತದ ಟೆಸ್ಟ್ ಕ್ರಿಕೆಟ್ ಸಾಧನೆ ತೃಪ್ತಿಕರ ಅನ್ನಬಹುದು ಅಷ್ಟೇ ಹೊರತು ಅಸಾಧಾರಣವಾಗಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ಆದರೂ ಪ್ರತಿಸಾರಿ ಈ ದೇಶಗಳಿಗೆ ಟೆಸ್ಟ್ ಸರಣಿ ಆಡಲೂ ಹೋರಾಟಗಲೂ ಹೊಸದೊಂದು ನಿರೀಕ್ಷೆ ಇರುವುದು ಸುಳ್ಳಲ್ಲ. ಇಂಥಾ ಒಂದು ಮಹಾನ್ ನಿರೀಕ್ಷೆ ಇಟ್ಟುಕೊಂಡ ವರುಷ ೨೦೧೪. ಇದಿಷ್ಟೂ ನಾ ಈಗ ಹೇಳ ಹೊರಟಿರುವ ಘಟನೆಗೆ ಪೀಠಿಕೆ ಅಷ್ಟೇ. ಕ್ರಿಕೆಟ್ ಲೋಕ ಎಂದು ಮರೆಯದ ಘಟನೆಯೊಂದು ಆ ವರ್ಷ ಘಟಿಸಿತು. ಅದುವೇ " 63 ನಾಟ್ ಔಟ್ ಫಾರೆವರ್".

 

೨೦೧೪ ಜೂನ್ - ಸೆಪ್ಟೆಂಬರ್ ಇಂಗ್ಲೆಂಡ್ ಪ್ರಯಾಣ ಬೆಳೆಸಿದ್ದ ಭಾರತ 3-1 ಅಂತರದಿಂದ ೫ ಪಂದ್ಯಗಳ ಟೆಸ್ಟ್ ಸರಣಿ ಕಳೆದುಕೊಂಡು ತವರಿಗೆ ವಾಪಸ್ಸಾಗಿತ್ತು. ಭಾರತ ತಂಡದ ಮುಂದಿನ ವಾರಸುದಾರ ಅಂತ ಬಿಂಬಿಸಲ್ಪಟ್ಟಿದ್ದ ವಿರಾಟ್ ಕೊಹ್ಲಿ ಒಂದರ ಮೇಲೊಂದರಂತೆ ಎಲ್ಲಾ ೫ ಪಂದ್ಯಗಳಲ್ಲೂ ವೈಫಲ್ಯ ಅನುಭವಿಸಿದ್ದ. ಭಾರತದ ಮುಂದಿನ ಅದೇ ವರ್ಷದ ಅಂತ್ಯದಲ್ಲಿ ಇದ್ದ ಆಸ್ಟ್ರೇಲಿಯಾ ಸರಣಿ ಆಗಿತ್ತು. ಇಂಗ್ಲೆಂಡ್ ಪ್ರದರ್ಶನದ ನಂತರ ತಂಡದ ಮೇಲೆ ಅಂತ ಹೇಳಿಕೊಳ್ಳುವ ನಿರೀಕ್ಷೆಗಳು ಇರಲಿಲ್ಲ. ನವೆಂಬರ್ ೨೦೧೪ ಅಲ್ಲಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದ ಪ್ರಯಾಣ ಬೆಳೆಸಿದ ಭಾರತ ತಂಡ ಡಿಸೆಂಬರ್ ೪ಕ್ಕೆ ಬ್ರಿಸ್ಬನ್ ಅಲ್ಲಿ ನಡೆಯಬೇಕಿದ್ದ ಮೊದಲ ಟೆಸ್ಟ್ ಪಂದಕ್ಕೆ ಪೂರ್ವತಯಾರಿಯಾಗಿ ಅಭ್ಯಾಸ ಪಂದ್ಯಗಳಲ್ಲಿ ಪಾಲ್ಗೊಂಡಿತ್ತು .

 

೨೫ ನವೆಂಬರ್ ೨೦೧೪ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್ ಟೂರ್ನಮೆಂಟ್ ಆದ Sheffield Shieldನ ಭಾಗವಾಗಿ ಸೌತ್ ಆಸ್ಟ್ರೇಲಿಯಾ ಮತ್ತು ನ್ಯೂ ಸೌತ್ ವೇಲ್ಸ್ ತಂಡಗಳ ನಡುವೆ ೪ ದಿನಗಳ ಪಂದ್ಯದ ಮೊದಲ ದಿನದ ಪಂದ್ಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶುರುವಾಗಿತ್ತು. ಮೊದಲು ಬ್ಯಾಟಿಂಗ್ ಆಯ್ದು ಕೊಂಡಿದ್ದ ಸೌತ್ ಆಸ್ಟ್ರೇಲಿಯಾ ನಿಧಾನ ಗತಿಯಲ್ಲಿ ತನ್ನ ಇನ್ನಿಂಗ್ಸ್ ಮುಂದುವರೆಸುತಿತ್ತು. ಸೌತ್ ಆಸ್ಟ್ರೇಲಿಯಾ ಪರವಾಗಿ Phil Hughes ಮತ್ತು Tom Cooper ಅಂಕಣದಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದರು.ಆಸ್ಟ್ರೇಲಿಯಾ ಕಾಲಮಾನ ೨. ೨೩ ರ ಸುಮಾರಿಗೆ ನ್ಯೂ ಸೌತ್ ವೇಲ್ಸ್ ನ ವೇಗಿ Sean Abbott ಎಸೆದ ಬೌನ್ಸರ್ Phil Hughesನ ಶಿರಸ್ತ್ರಾಣದ ಗ್ರಿಲ್ ನ ಕೇಳಬದಿಯಿಂದ ನುಸುಳಿ ಅವನ ಕತ್ತಿನ ಭಾಗಕ್ಕೆ ಹೋಗಿ ಹೊಡೆದಿತ್ತು. ಕೆಲ ಕ್ಷಣ ವಿಚಲಿತನಾದಂತೆ ಕಂಡು ಬಂದ Hughes ತನ್ನ ಕಾಲುಗಳ ಮೇಲೆ ಕೈ ಊರಿದವನು ನೋಡ ನೋಡುತ್ತಿದ್ದಂತೆ ಹಾಗೆಯೇ ಕುಸಿದು ಬೀಳುತ್ತಾನೆ. ತಕ್ಷಣವೇ ಅದೇ ಪಂದ್ಯದಲ್ಲಿ ನ್ಯೂ ಸೌತ್ ವೇಲ್ಸ್ ಪರವಾಗಿ ಆಡುತಿದ್ದ ಡೇವಿಡ್ ವಾರ್ನರ್ , ಸ್ಟೀವ್ ಸ್ಮಿಥ್ , ಹ್ಯಾಡಿನ್ ಇನ್ನುಳಿದ ಎಲ್ಲಾ ಆಟಗಾರರು ಅವನ ಸಹಾಯಕ್ಕೆ ಧಾವಿಸುತ್ತಾರೆ. ಎಮರ್ಜೆನ್ಸಿ ವಾಹನ ಅವನನ್ನ ಮೈದಾನದಿಂದ ಸಾಗಿಸಲು ಪಿಚ್ ಬಳಿ ತೆರಳುತ್ತದೆ. ಆಟವಾಡುತಿದ್ದ ಎಲ್ಲರಿಗೂ ಗಾಭರಿ ಒಂದು ಬಿಟ್ಟರೆ ಏನು ಆಗುತ್ತಿದೆ ಎಂದು ತಿಳಿಯುವುದಿಲ್ಲ. ಹೆಲಿಕ್ಯಾಪ್ಟಾರ್ ಆಂಬುಲೆನ್ಸ್ ಮೈದಾನದೊಳಗೆ ಬಂದು ಅವನನ್ನ ಏರ್ ಲಿಫ್ಟ್ ಮಾಡಿ ಆಸ್ಪತ್ರೆಗೆ ಸಾಗಿಸಲಾಗುತ್ತದೆ ಅಲ್ಲಿಯವರೆಗೆ ಎರಡೂ ತಂಡಗಳ ವೈದ್ಯರು ಪ್ರಾಥಮಿಕ ಚಿಕಿತ್ಸೆ ಕೊಟ್ಟಿರುತ್ತಾರೆ. ವಿಧಿ ಆಟ ಬೌನ್ಸರ್ ಹೊಡೆತಕ್ಕೆ ಕುಸಿದು ಬಿದ್ದಿದ್ದ Phil Hughes ಕೆಲವೇ ಕ್ಷಣಗಳಲ್ಲಿ ಪ್ರಜ್ಞೆ ಕಳೆದು ಕೊಂಡಿರುತ್ತಾನೆ. ಸತತ ಎರಡು ದಿನಗಳ ವೈದ್ಯಕೀಯ ನೆರವಿನ ನಂತರವೂ ಆತನನ್ನು ಉಳಿಸಿಕೊಳ್ಳಲಾಗುವುದಿಲ್ಲ . ನವೆಂಬರ್ ೨೭ ೨೦೧೪ ಅಧಿಕೃತವಾಗಿ ಆತನ ನಿಧನವನ್ನ ಘೋಷಿಸಲಾಗುತ್ತದೆ.

 

ಅಲ್ಲಿಯವರೆಗೂ ಅಷ್ಟೇನೂ ಚಿರಪರಿಚಿತವಲ್ಲದ ವ್ಯಕ್ತಿ , ಆ ಒಂದು ಘಟನೆಯಿಂದ ಕ್ರೀಡಾ ಲೋಕವೇ ಮರಗುವಂತೆ ಮಾಡುತ್ತಾನೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ನಡೆಯಬೇಕಾಗಿದ್ದ ಮೊದಲ ಪಂದ್ಯ ಮುಂದೂಡಲ್ಪಡುತ್ತದೆ. ಅವನ ಹುಟ್ಟೂರಾದ ಮ್ಯಾಕ್ಸ್ವಿಲ್ಲೆ (Macksville) ಅಲ್ಲಿ ದುಃಖ ಮಡುಗಟ್ಟುತ್ತದೆ UAE  ಅಲ್ಲಿ ನಡೆಯುತಿದ್ದ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮೂರನೇ ಮತ್ತು ಕೊನೆಯ ಟೆಸ್ಟ್ ಪಂದ್ಯದ ಎರಡನೇಯ ದಿನದ ಆಟವನ್ನ ಸ್ಥಗಿತಗೊಳಿಸಲಾಗುತ್ತದೆ ಮತ್ತು ನಂತರದ ದಿನದ ಆ ಪಂದ್ಯದಲ್ಲಿ ಬೌನ್ಸರ್ ಬಳಸಲಾಗುವುದಿಲ್ಲ ಕೂಡ. ಪ್ರಪಂಚದಾದ್ಯಂತ Phillip Hughes ಸ್ಮರಣಾರ್ಥ #PutOutYourBats ಅಭಿಯಾನ ಮಾಡಲಾಗುತ್ತದೆ. Phillip Hughesನ ಅಕಾಲಿಕ ಮರಣ ಕ್ರಿಕೆಟ್ ಲೋಕವನ್ನ ಸ್ವಲ್ಪ ದಿನಗಳ ಮಟ್ಟಿಗೆ ಸ್ತಬ್ಧ ಮಾಡುತ್ತದೆ. ಆಸ್ಟ್ರೇಲಿಯಾದ ಅಂದಿನ ನಾಯಕ ಮೈಕಲ್ ಕ್ಲಾರ್ಕ್ ದೇಶಿಯ ಕ್ರಿಕೆಟ್ ಅಲ್ಲಿ Phillip Hughesನ ಸಹ ಆಟಗಾರ ಕೂಡ ಆಗಿದ್ದ. ಮೈಕಲ್ ಕ್ಲಾರ್ಕ್ ಈ ಘಟನೆಯ ನಂತರ ಸಂಪೂರ್ಣವಾಗಿ ಕುಸಿದು ಹೋಗಿದ್ದ. ೨೦೦೯ ರಲ್ಲಿ matthew hayden ನಿವೃತ್ತಿ ಹೊಂದಿದ ನಂತರ ಖಾಲಿ ಆದ ಆರಂಭಿಕನ ಜಾಗಕ್ಕೆ Phillip Hughes ಒಬ್ಬ ಉತ್ತಮ ಅಭ್ಯರ್ಥಿ ಅನ್ನುವುದು ಕ್ಲಾರ್ಕ್ನ ಅಭಿಪ್ರಾಯ ಆಗಿತ್ತು ಕೂಡ.

 

Phillip Hughes ಹುಟ್ಟಿದ್ದು ೩೦ ನವೆಂಬರ್ ೧೯೮೮, ಸ್ಥಳ ನ್ಯೂ ಸೌತ್ ವೇಲ್ಸ್ ನ ಮ್ಯಾಕ್ಸ್ವಿಲ್ಲೆ (Macksville) ಅನ್ನುವ ಊರು. ತಂದೆ ಬಾಳೆಹಣ್ಣಿನ ವ್ಯಾಪಾರಿ . ಜೂನಿಯರ್ ಹಂತದ ಕ್ರಿಕೆಟ್ ಅನ್ನು ಮ್ಯಾಕ್ಸ್ವಿಲ್ಲೆ ಅಲ್ಲೇ ಮುಗಿಸಿದ ಆತ ತನ್ನ ಹದಿನೇಳನೆಯ ವಯಸ್ಸಿಗೆ ಸಿಡ್ನಿಗೆ ಸ್ಥಳಾಂತರ ಗೊಳ್ಳುತ್ತಾನೆ. ತನ್ನ ಅವಿರತ ಪರಿಶ್ರಮದಿಂದ  ೨೦೦೯ರ ಆಸ್ಟ್ರೇಲಿಯಾದ ಸೌತ್ ಆಫ್ರಿಕಾ ಸರಣಿಗೆ ಮೊದಲ ಬಾರಿಗೆ ಆಯ್ಕೆ ಆಗುತ್ತಾನೆ. ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ ಅಲ್ಲಿ ೦ ಸುತ್ತುತ್ತಾನೆ ಕೂಡ , ಆದರೆ ಎರಡನೇ ಪಾಳಿಯಲ್ಲಿ ೭೫ ರನ್ಸ್ ಕೂಡುವ ಮೂಲಕ ನಿರೀಕ್ಷೆ ಹುಟ್ಟಿಸುತ್ತಾನೆ. ಆ ನಿರೀಕ್ಷೆ ಸುಳ್ಳಾಗುವುದಿಲ್ಲ ಕೂಡ, ಎರಡನೇ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ಗಳಲ್ಲಿ ಸೆಂಚುರಿ ಬಾರಿಸುತ್ತಾನೆ ಕೂಡ. ಇದು ಅತಿ ಕಡಿಮೆ ವಯಸ್ಸಿಗೆ ಒಂದೇ ಪಂದ್ಯದ ಎರಡೂ ಪಾಳಿಯಲ್ಲಿ ಶತಕ ಬಾರಿಸಿದ ಆಸ್ಟ್ರೇಲಿಯನ್ ಅನ್ನುವ ಕೀರ್ತಿ ಅವನಿಗೆ ತಂದು ಕೊಡುತ್ತದೆ. ಹಾಗೆಂದ ಮಾತ್ರಕ್ಕೆ ಅವನ ಮುಂದೆ ಬರಿ ಸಕ್ಸಸ್ ಮಾತ್ರ ಕಂಡ ಅಂತಿಲ್ಲ, ನೀರಿಕ್ಷೆಗಳು ಹೆಚ್ಚಾದಾಗ ಆಗುವ ಸಹಜವಾದ ಏಳು ಬೀಳುಗಳು ಅವನಿಗೂ ಆಗಿತ್ತು ಕೂಡ. ಅವನ ಟೆಸ್ಟ್ ಜೀವನದ ಇನ್ನೊಂದು ಅವಿಸ್ಮರಣೀಯ ಘಟನೆ ೨೦೧೩ರ ಆಶಸ್ ಪಂದ್ಯ.

೨೦೧೩ ರಲ್ಲಿ ಟ್ರೆಂಟ್ ಬ್ರಿಡ್ಜ್ ಅಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ೨೧೫ ರನ್ಗಳ ಸಾಧಾರಣ ಮೊತ್ತಕ್ಕೆ ತನ್ನ ಪಾಳಿ ಮುಗಿಸಿತ್ತು. ಇದನ್ನ ಬೆನ್ಹತ್ತಿದ ಆಸ್ಟ್ರೇಲಿಯಾ ಜೇಮ್ಸ್ ಆಂಡರ್ಸನ್ ಮಾರಕ ದಾಳಿಗೆ ಸಿಲುಕಿ ೧೧೭-೯ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಒಂದಾಗಿದ್ದೇ ತನ್ನ ಮೊದಲ ಪಂದ್ಯ ಆಡುತಿದ್ದ ಆಫ್ ಸ್ಪಿನರ್ ಆಷ್ಟನ್ ಅಗರ್ ಮತ್ತು Phillip Hughes. ಆಂಗ್ಲ ಬೌಲರ್ ಗಳನ್ನ ದಿಟ್ಟೆದೆಯಿಂದ ಎದುರಿಸಿದ ಈ ಜೋಡಿ ೧೬೩ ರನ್ ಗಳ ಬೃಹತ್ ಜೊತೆಯಾಟ ನೀಡಿತು. Phillip Hughes ೮೧* ಮತ್ತು ಆಷ್ಟನ್ ಅಗರ್ ೯೮ ರನ್ ಗಳನ್ನ ಪೇರಿಸಿದ್ದರು. ಎರಡನೇ ಇನ್ನಿಂಗ್ಸ್ ಅಲ್ಲಿ ಇತ್ತಂಡಗಳು ಉತ್ತಮ ಹೋರಾಟ ನೀಡಿದವು  ಹಾಗೂ ಇಂಗ್ಲೆಂಡ್ ೧೪ ರನ್ ಗಳ ಅಂತರದಲ್ಲಿ ಗೆಲುವಿನ ನಗೆ ಬೀರಿತು.

 

ಉತ್ತಮ ತಾಂತ್ರಿಕತೆ ಇದ್ದರೂ ಕೂಡ ಎಲ್ಲ ಆಟಗಾರರಿಗೆ ಇರುವಂತೆ Phillip Hughesಗೆ ಕೂಡ ಕೆಲವೊಂದು ನ್ಯೂನ್ಯತೆಗಳು ಇದ್ದವು. ಅದರಲ್ಲಿ ಒಂದು ಶಾರ್ಟ್ ಪಿಚ್ ಎಸೆತಗಳನ್ನು ಎದುರಿಸುವುದು. ನಿರಂತರ ಅಭ್ಯಾಸದ ನಂತರವೂ ಬೌನ್ಸರ್ಸ್ ಎದುರಿಸಿ ಆಟುವುದು ಅವನಿಗೆ ಒಲಿದಿರಲಿಲ್ಲ. ಆಶ್ಚರ್ಯ ಎಂದರೆ ಆಸ್ಟ್ರೇಲಿಯಾ ಆಟಗಾರರಿಗೆ ಸಹಜವಾಗಿ ಬರಬೇಕಾಗಿದ್ದ ಕಲೆ ಆದಾಗಿತ್ತು (ಅಲ್ಲಿನ ಬೌನ್ಸಿ ಪಿಚ್ಗಳೇ ಅದಕ್ಕೆ ಕಾರಣ). ದುರಾದೃಷ್ಟವೆಂದರೆ ಅದೇ ಅವನ ಜೀವನವನ್ನ ಬಲಿ ತೆಗೆದುಕೊಂಡಿತು ಕೂಡ. ಆತನ ಕೆಲವೊಂದು ಹೊಡೆತಗಳಲ್ಲಿ ವೆಸ್ಟ್ ಇಂಡೀಸ್ ನ ದಿಗ್ಗಜ ಲಾರಾ ಅವರ ಶೈಲಿಗೆ ಹೋಲಿಕೆ ಆಗುತಿತ್ತು ಕೂಡ.

 

ತನ್ನ ಕೊನೆಯ ಇನ್ನಿಂಗ್ಸ್ ಅಲ್ಲಿ ಪ್ರಜ್ಞೆ ಕಳೆದುಕೊಳ್ಳುವ ಮೊದಲು Phillip Hughes ಹೊಡೆದಿದ್ದ ಒಟ್ಟು ರನ್ 63. ಹಾಗಾಗಿ ಅದನ್ನ "#63 ನಾಟ್ ಔಟ್ ಫಾರೆವರ್ " ಎಂದು ಆಸ್ಟ್ರೇಲಿಯನ್ ಕ್ರಿಕೆಟ್ ಮಂಡಳಿ ಘೋಷಿಸಿತು. ಹಾಗೆ ಆತನಿಗೆ ಗೌರವ ಸೂಚಕವಾಗಿ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ( ಡಿಸೆಂಬರ್ ೯, ೨೦೧೪) ಆತನ ಟೆಸ್ಟ್ ಕ್ಯಾಪ್ No.408 ಅನ್ನು ಎಲ್ಲ ಆಸ್ಟ್ರೇಲಿಯಾದ ಆಟಗಾರರೂ ಧರಿಸಿದ್ದರು. ಕ್ರಿಕೆಟ್ ಇತಿಹಾಸದಲ್ಲಿ ಈ ತರಹದ ಅವಘಡಗಳು ಇದೆ ಮೊದಲು ಅಲ್ಲದಿದ್ದರೂ ಈ ಘಟನೆ ಕೆಲವೊಂದು ಮಹತ್ತರ ಬದಲಾವಣೆಗಳನ್ನ ತಂದಿದಂತೂ ಹೌದು. ವಿಷಾದನೀಯ ಅಂದರೆ ಆ ಬದಲಾವಣೆಗಳಿಗೆ ೨೬  ತುಂಬಲು ೩ ದಿನ ಬಾಕಿ ಇದ್ದ ಒಬ್ಬ ಯುವ ಆಟಗಾರನ ಜೀವ ಬಲಿಯಾಗಬೇಕಾಯಿತು.

 ಮಾಹಿತಿ ಕೃಪೆ: ಅಂತರ್ಜಾಲ ಮತ್ತು ESPN Cricinfo

 

 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು